Mysore
31
clear sky

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಎನ್‌ಡಿಟೀವಿ ಅದಾಣಿ ಕೈವಶ- ಬಹುತ್ವದ ಮೇಲೆರಗಿದ ಆಘಾತ

ಡಿ.ಉಮಾಪತಿ 

ಕಟ್ಟರ್ ಹಿಂದುತ್ವ, ಅಲ್ಪಸಂಖ್ಯಾತರ ವಿರುದ್ಧ ದ್ವೇಷ, ಸುಳ್ಳು ಸುದ್ದಿಯ ಬಾಲಬಡುಕ ಮಾಧ್ಯಮಗಳ ನಡುವೆ ಎನ್‌ಡಿಟೀವಿಯದು ಒಂಟಿದನಿಯಾಗಿತ್ತು!

ಮೂರೂ ಬಿಟ್ಟ ಸಮೂಹ ಮಾಧ್ಯಮಗಳ ನಡುವೆ ಅಷ್ಟಿಷ್ಟು ಮಾನ ಉಳಿಸಿಕೊಂಡಿರುವ ಎನ್‌ಡಿಟೀವಿಗೆ ಆಪತ್ತು ಎದುರಾಗಿದೆ. ಏಷ್ಯಾ ಖಂಡದ ಅತಿದೊಡ್ಡ ಶ್ರೀಮಂತ ಮತ್ತು ಜಗತ್ತಿನ ನಾಲ್ಕನೆಯ ಅತಿ ದೊಡ್ಡ ಐಶ್ವರ್ಯವಂತ ಗೌತಮ್ ಅದಾಣಿ ಈ ಚಾನೆಲ್ ಖರೀದಿಗೆ ಮುಂದಾಗಿದ್ದಾರೆ.

ನರೇಂದ್ರ ಮೋದಿ ಆಡಳಿತವನ್ನು ನಿಷ್ಠುರ ವಿಮರ್ಶೆಗೆ ಒಳಪಡಿಸುತ್ತಿದ್ದ ಕಟ್ಟಕಡೆಯ ಕೊರಳನ್ನು ಅದುಮಲೆಂದೇ ಜರುಗಿರುವ ಲೆಕ್ಕಾಚಾರದ ಹುನ್ನಾರವಿದು ಎಂದು ಸ್ವತಂತ್ರ ಮಾಧ್ಯಮ ತಜ್ಞರು ಈ ವಿದ್ಯಮಾನ ಕುರಿತು ಕಳವಳ ಪ್ರಕಟಿಸಿದ್ದಾರೆ.

ಕೋಮುವಾದ, ಕಟ್ಟರ್ ಹಿಂದುತ್ವ, ಅಲ್ಪಸಂಖ್ಯಾತರ ವಿರುದ್ಧ ದ್ವೇಷ, ಸುಳ್ಳು ಸುದ್ದಿಯ ಪಿಡುಗಿಗೆ ನೀರೆರೆದು ಪೋಷಿಸುತ್ತಿರುವ ಬಾಲಬಡುಕ ಮಾಧ್ಯಮಗಳ ನಡುವೆ ಎನ್‌ಡಿಟೀವಿಯದು ಒಂಟಿದನಿಯಾಗಿತ್ತು. ಜನತಾಂತ್ರಿಕ ಮತ್ತು ಬಹುತ್ವದ ಮೌಲ್ಯಗಳ ತೊತ್ತಳದುಳಿತದ ವಿರುದ್ಧ ಶಕ್ತ್ಯಾನುಸಾರ ಸೆಣೆಸಿತ್ತು. ಆಳುವವರ ಕೆಂಗಣ್ಣಿಗೆ ಗುರಿಯಾಗಿತ್ತು. ಎನ್‌ಡಿಟೀವಿ ಇಂಡಿಯಾ ಹೆಸರಿನಲ್ಲಿ ಬಿತ್ತರವಾಗುತ್ತಿದ್ದ ಹಿಂದೀ ಚಾನೆಲ್ಲಿನ ಅತ್ಯಂತ ನಿರ್ಭೀತ ನಿಷ್ಠುರವಾದಿ ದನಿ ರವೀಶ್ ಕುಮಾರ್ ಅವರಂತೂ ಆಳುವ ಪಕ್ಷ-ಪರಿವಾರಕ್ಕೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದರು.
ಪ್ರಧಾನಮಂತ್ರಿಯವರು ಮತ್ತು ಆಳುವ ಪಕ್ಷದ ಪರಮಾಪ್ತರು ಅದಾಣಿ. ಎನ್‌ಡಿಟೀವಿಯನ್ನು ವಶಪಡಿಸಿಕೊಳ್ಳುವ ಅವರ ನಡೆ ಅನಿರೀಕ್ಷಿತ ಮತ್ತು ಆಘಾತಕಾರಿ.
ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಪ್ರಸಿದ್ಧ ಪತ್ರಕರ್ತ ದಂಪತಿಗಳು. ಎನ್‌ಡಿಟೀವಿ ಸುದ್ದಿ ಸಂಸ್ಥೆಯ ಸ್ಥಾಪಕರು. ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಎಂಬುದು ೨೦೦೮ರಲ್ಲಿ ಹುಟ್ಟಿಕೊಂಡ ಕಂಪನಿ. ಹತ್ತು ವರ್ಷಗಳ ಹಿಂದೆ ಈ ಸಂಸ್ಥೆಯಿಂದ ೪೦೩.೮೫ ಕೋಟಿ ರೂಪಾಯಿಗಳ ಸಾಲವನ್ನು ಪಡೆಯಿತು ಎನ್‌ಡಿಟೀವಿ. ಈ ಸಾಲ ನೀಡಿಕೆಗೆ ಬೇಕಾದ ಹಣವನ್ನು ಮುಖೇಶ್ ಅಂಬಾನಿಯವರ ರಿಲಯನ್ಸ್ ನಿಂದ ಪಡೆದಿತ್ತು ವಿಸಿಪಿಎಲ್.
ಸಾಲಕ್ಕೆ ಬದಲಾಗಿ ಎನ್‌ಡಿಟೀವಿಯ ಶೇ.೨೯.೧೮ರಷ್ಟು ಪಾಲುದಾರಿಕೆ ಪಡೆಯಬಹುದಾದ ವಾರಂಟ್‌ಗಳನ್ನು ವಿಸಿಪಿಎಲ್‌ಗೆ ನೀಡಲಾಯಿತು. ಈ ವಾರಂಟುಗಳನ್ನು ವಿಸಿಪಿಎಲ್ ತನಗೆ ಬೇಕಾದಾಗ ಪರಿವರ್ತಿಸಿಕೊಳ್ಳಬಹುದಿತ್ತು. ಈ ನಡುವೆ ಅದಾಣಿ ಉದ್ಯಮ ಸಮೂಹ ವಿಸಿಪಿಎಲ್‌ಅನ್ನು ಖರೀದಿಸಿತು.
ಹಕ್ಕುಗಳನ್ನು ಚಲಾಯಿಸಿ ವಿಸಿಪಿಎಲ್‌ಗೆ ನೀಡಲಾಗಿದ್ದ ವಾರಂಟುಗಳನ್ನು ಶೇ.೨೯.೧೮ರ ಪಾಲುದಾರಿಕೆಯಾಗಿ ಪರಿವರ್ತಿಸಿಕೊಂಡಿತು. ಎನ್‌ಡಿಟೀವಿಯ ಶೇ.೫೦ಕ್ಕಿಂತ ಹೆಚ್ಚು ಷೇರುಗಳನ್ನು ಖರೀದಿಸಿ ಸಂಸ್ಥೆಯ ಪೂರ್ಣ ನಿಯಂತ್ರಣ ಪಡೆಯುವುದು ಅದಾಣಿ ಸಮೂಹದ ಮುಂದಿನ ನಡೆ. ಇನ್ನೂ ಶೇ.೨೬ರಷ್ಟು ಈಕ್ವಿಟಿ ಖರೀದಿಸುವುದಾಗಿ ಈಗಾಗಲೆ ಘೋಷಿಸಿದೆ ಕೂಡ. ಈ ನಡೆಯಲ್ಲಿ ಯಶಸ್ವಿಯಾದರೆ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಕೈಯಲ್ಲಿ ಶೇ.೩೨.೨೬ರಷ್ಟು ಈಕ್ವಿಟಿ ಉಳಿಯುತ್ತದೆ. ಅರ್ಥಾತ್ ಎನ್‌ಡಿಟೀವಿಯ ನಿಯಂತ್ರಣ ಅವರ ಕೈ ತಪ್ಪುತ್ತದೆ.
ಅದಾಣಿ ಉದ್ಯಮ ಸಮೂಹದ ಈ ಅನಿರೀಕ್ಷಿತ ನಡೆಗಳಿಗೆ ತನ್ನ ಒಪ್ಪಿಗೆ ಇಲ್ಲವೆಂದು ಎನ್‌ಡಿಟೀವಿಯ ಸ್ಥಾಪಕರು ಪ್ರತಿಭಟಿಸಿದ್ದಾರೆ. ಕಾನೂನುತಜ್ಞರ ಪ್ರಕಾರ ಅದಾಣಿ ನಡೆಗೆ ಯಾವುದೇ ಅಡ್ಡಿಯಿಲ್ಲ. ಎನ್‌ಡಿಟೀವಿ ಅಸಹಾಯಕ. ತನ್ನದೇ ಷೇರುಗಳನ್ನು ಹೆಚ್ಚು ದರ ತೆತ್ತು ಮಾರುಕಟ್ಟೆಯಿಂದ ಖರೀದಿಸುವ ಆಯ್ಕೆಯೇನೋ ಇದೆ. ಆದರೆ ಎನ್‌ಡಿಟೀವಿ ಕೊಡುವುದಕ್ಕಿಂತ ಹೆಚ್ಚು ದರ ಪಾವತಿ ಮಾಡುವ ಪೈಪೋಟಿಗೆ ಅದಾಣಿ ಇಳಿಯುವುದಿಲ್ಲ ಎಂಬ ಖಾತರಿ ಏನು? ಅಂತಹ ಸನ್ನಿವೇಶದಲ್ಲಿ ಅದಾಣಿ ಜೊತೆ ಸ್ಪರ್ಧೆಗೆ ಇಳಿಯುವಷ್ಟು ಹಣಬಲ ಎನ್‌ಡಿಟೀವಿಗೆ ಉಂಟೇ? ತಾನು ಪಡೆದಿದ್ದ ೪೦೩.೮೫ ಕೋಟಿ ರೂಪಾಯಿಗಳ ಸಾಲವನ್ನು ವಾಪಸು ಕೊಟ್ಟು ಅದಾಣಿ ಆಪತ್ತನ್ನು ದೂರ ಮಾಡಿಕೊಳ್ಳಬಹುದೇ? ಸಾಲವನ್ನು ವಾಪಸು ಕೊಡುವ ಅವಕಾಶವೇನೋ ಉಂಟು. ಆದರೆ ಸಾಲದ ಹಣವನ್ನು ವಾಪಸು ಪಡೆದು ಹಿಂದೆ ಸರಿಯಬೇಕೇ ಅಥವಾ ಈಕ್ವಿಟಿಯನ್ನು ಉಳಿಸಿಕೊಳ್ಳಬೇಕೇ ಎಂಬುದು ಅದಾಣಿಯವರ ವಿವೇಚನೆಗೆ ಬಿಟ್ಟ ವಿಷಯ. ಎನ್‌ಡಿಟೀವಿಯ ಉಸಿರು ಕಟ್ಟಿಸುವುದೇ ಅದಾಣಿಯವರ ಉದ್ದೇಶ ಎಂಬುದು ಮೇಲ್ನೋಟಕ್ಕೆ ನಿಚ್ಚಳ. ಹೀಗಿದ್ದಾಗ ಸಾಲದ ಹಣ ಪಡೆದು ಎನ್‌ಡಿಟೀವಿಯನ್ನು ಅದರ ಪಾಡಿಗೆ ಬಿಟ್ಟುಬಿಡಲು ಅದಾಣಿ ಒಪ್ಪುವುದು ಅಸಾಧ್ಯ. ಅವರಿಗೆ ಕಂಪನಿ ಬೇಕೇ ವಿನಾ ಹಣ ಅಲ್ಲ.
ಮುಖ್ಯಧಾರೆಯ ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಲು ಬಯಸಿದ್ದಾರೆ ಗೌತಮ್ ಅದಾಣಿ. ಅದಾಣಿ ಮೀಡಿಯಾ ವೆಂಚರ್ಸ್ ಎಂಬ ಕಂಪನಿಯನ್ನು ವರ್ಷದ ಹಿಂದೆಯೇ ಹುಟ್ಟಿ ಹಾಕಿದ್ದರು. ಕ್ವಿಂಟ್ ಡಿಜಿಟಲ್ ಮೀಡಿಯಾ ಕಂಪನಿಯ ಅಧ್ಯಕ್ಷರಾಗಿದ್ದ ಸಂಜಯ ಪುಗಲಿಯಾ ಎಂಬ ಪತ್ರಕರ್ತರೊಬ್ಬರನ್ನು ಅದಾಣಿ ನೇಮಕ ಮಾಡಿಕೊಂಡಿದ್ದರು. ಎನ್‌ಡಿಟೀವಿಯ ಈಕ್ವಿಟಿಗಳ ಖರೀದಿಯ ನಂತರ ಪುಗಲಿಯಾ ನೀಡಿರುವ ಈ ಹೇಳಿಕೆಯನ್ನು ಗಮನಿಸಿ- ಭಾರತೀಯ ನಾಗರಿಕರು, ಗ್ರಾಹಕರು ಹಾಗೂ ಭಾರತದಲ್ಲಿ ಆಸಕ್ತಿ ಹೊಂದಿರುವವರನ್ನು ಜ್ಞಾನ- ಮಾಹಿತಿ ನೀಡಿ ಸಬಲಗೊಳಿಸುವ ಉದ್ದೇಶ ಅದಾಣಿ ಮೀಡಿಯಾ ಕಂಪನಿಯದು. ನಮ್ಮ ಈ ಮುನ್ನೋಟವನ್ನು ಜಾರಿಗೆ ತರಲು ಎನ್‌ಡಿಟೀವಿ ಅತ್ಯಂತ ಸೂಕ್ತ ಮಾಧ್ಯಮ ವೇದಿಕೆ. ಸುದ್ದಿ ಬಟವಾಡೆಯಲ್ಲಿ ಎನ್‌ಡಿಟೀವಿಯ ನಾಯಕತ್ವವನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ನಮ್ಮ ಉದ್ದೇಶ.
ಸರ್ಕಾರ ನಡೆಸುವವರನ್ನು ಪ್ರಶ್ನಿಸುವುದ ಬಿಟ್ಟು ವಿರೋಧಪಕ್ಷಗಳನ್ನು ಬೇಟೆಯಾಡುತ್ತಿರುವ ವಿಚಿತ್ರ ಮತ್ತು ಜನದ್ರೋಹದ ವಿದ್ಯಮಾನ ದೇಶದಲ್ಲಿ ಜರುಗಿರುವ ಪರ್ವವಿದು. ಪತ್ರಿಕಾ ಸ್ವಾತಂತ್ರ್ಯವನ್ನು ಪತ್ರಿಕಾಂಗವೇ ಖುದ್ದಾಗಿ ಆಳುವವರ ಪದತಲದಲ್ಲಿ ಇರಿಸಿ ನಡು ಬಗ್ಗಿಸಿ ಸಲಾಮು ಮಾಡುತ್ತಿರುವ ದುಸ್ಥಿತಿ.
ಉದ್ಯಮ ಸದನಗಳ ಏಕೈಕ ಗುರಿ ಲಾಭಗಳಿಕೆ. ಅದಾಣಿ ಉದ್ಯಮ ಸಮೂಹಕ್ಕೂ ಲಾಭ ಗಳಿಕೆಯ ಹಲವು ಹಿತಾಸಕ್ತಿಗಳಿವೆ. ಈ ಹಿತಾಸಕ್ತಿಗಳು ಸರ್ಕಾರದ ನೀತಿ ನಿರ್ಧಾರಗಳನ್ನೇ ಅವಲಂಬಿಸಿರುತ್ತವೆ. ಇಂತಹ ಉದ್ಯಮ ಸಂಸ್ಥೆಗಳು ಪತ್ರಿಕಾ ಕ್ಷೇತ್ರಕ್ಕೆ ಕಾಲಿರಿಸಿದರೆ ಸರ್ಕಾರವನ್ನು ಟೀಕಿಸುವುದು ಅಸಾಧ್ಯ. ಈ ಮಾತು ಅದಾಣಿ ಉದ್ಯಮ ಸಮೂಹಕ್ಕೂ ಅನ್ವಯಿಸುತ್ತದೆ.
ಜನತಂತ್ರ ವ್ಯವಸ್ಥೆಯಲ್ಲಿ ಜನಸಮೂಹಗಳಿಗೆ ಆಗುವ ನಷ್ಟವಿದು. ಉದ್ಯಮ ಸಂಸ್ಥೆಗಳು ಮತ್ತು ಸರ್ಕಾರಕ್ಕೆ ಆಗುವ ಲಾಭ.
ಶತಮಾನದ ಅಂತ್ಯದ ವೇಳೆಗೆ ಜಗತ್ತಿನ ಮೂರನೆಯ ಒಂದರಷ್ಟು ಹೊಲಗದ್ದೆಗಳು, ತೋಟತುಡಿಕೆಗಳು, ಗೋಮಾಳಗಳು ಸಾರಾಸಗಟು ಬಂಜರು ಬೀಳಲಿವೆ. ಅರ್ಥಾತ್ ಅವುಗಳಲ್ಲಿ ಆಹಾರ ಉತ್ಪಾದನೆ ಅಸಾಧ್ಯವೆನಿಸಲಿದೆ. ಮುಂದಿನ ಇಪ್ಪತ್ತೆಂಟು ವರ್ಷಗಳಲ್ಲಿ ಜಗತ್ತಿನ ಅನ್ನದ ಕಣಜಗಳು ಬೆಳೆ ವೈಫಲ್ಯ ಎದುರಿಸಲಿದ್ದು, ತೀವ್ರ ತಾಪಮಾನದಿಂದಾಗಿ ಜಾನುವಾರುಗಳು ಸಾಯಲಿವೆ. ಆಹಾರದ ಬೆಲೆಗಳು ಆಗಸಕ್ಕೆ ಜಿಗಿದು ಈಗಾಗಲೇ ಹಸಿವನ್ನೇ ಹೊದ್ದು ಮಲಗುತ್ತಿರುವ ಜನಕೋಟಿಯೊಂದಿಗೆ ಮುಂದಿನ ಎಂಟು ವರ್ಷಗಳಲ್ಲಿ ೧೨ ಕೋಟಿ ತುತ್ತಿನ ಚೀಲಗಳು ಹೊಸದಾಗಿ ಸೇರಿಕೊಳ್ಳಲಿವೆ. ಜಾಗತಿಕ ತಾಪಮಾನ ಏರಿಕೆಯು ಜಗತ್ತನ್ನು ಹೆಚ್ಚು ಹೆಚ್ಚು ಬರಗಾಲ, ಜಲಕ್ಷಾಮ, ಕಾಳ್ಗಿಚ್ಚು, ಉಷ್ಣೋಗ್ರತೆಯ ಗಾಳಿ ಗುಮ್ಮಟಗಳು, ಬಿಸಿಮಾರುತಗಳು, ಯರ್ರಾಬಿರ್ರಿ ಮಳೆ-ಬೆಳೆಯ ಏರುಪೇರುಗಳು, ಹಸಿವೆ, ರೋಗರುಜಿನ, ದಾರಿದ್ರ್ಯ ಅಂಧಕಾರ ಅಪಾಯಗಳತ್ತ ಒಯ್ಯಲಿದೆ. ಸಾಮಾಜಿಕ-ಆರ್ಥಿಕ ಅಸಮಾನತೆಯ ಕಂದಕಗಳು ಇನ್ನಷ್ಟು ಹಿರಿದಾಗಲಿವೆ. ಸಾಗರ ಸಮುದ್ರಗಳು ಉಕ್ಕಿ ಹರಿದು ಹೆಚ್ಚು ಹೆಚ್ಚು ನೆಲವನ್ನು ನುಂಗಲಿವೆ. ಮೂರನೆಯ ಒಂದರಷ್ಟು ಮನುಕುಲ ಅಸಹನೀಯ ಉಷ್ಣೋಗ್ರತೆಯಲ್ಲಿ ಬದುಕಿ ಬಾಳುವ ಆಪತ್ತು ಎದುರಾಗಲಿದೆ. ಪ್ರತಿಕೂಲ ಪರಿಸರದ ಕಾರಣ ಮನುಕುಲವು ಮಹಾವಲಸೆಗಳಿಗೆ ಸಾಕ್ಷಿಯಾಗಲಿದೆ. ವಲಸೆಯ ಶಕ್ತಿ ಸಂಪನ್ಮೂಲಗಳಿಲ್ಲದ ಸಮುದಾಯಗಳು ಇದ್ದಲ್ಲಿಯೇ ನವೆದು ಸಾಯಲಿವೆ.
ಈ ಸಂಕಟವು ಈಗಾಗಲೆ ಜಗತ್ತಿನ ೩೩೦ ಕೋಟಿ ಜನರ ಮೇಲೆ ಎರಗಿದೆ. ಅವರ ದೈನಂದಿನ ಬದುಕು ದುರ್ಭರವಾಗಿದೆ. ಉಷ್ಣಮಾರುತಗಳು, ಹವಾಮಾಲಿನ್ಯ, ಹವಾಮಾನ ಅತಿರೇಕಗಳು, ರೋಗರುಜಿನಗಳಿಂದ ಸಾಯುವ ಜನರ ಸಂಖ್ಯೆ ಗಣನೀಯವಾಗಿ ಏರಲಿದೆ. ಹಸಿವಿನೊಂದಿಗೆ ಉಷ್ಣೋಗ್ರತೆಯ ಒತ್ತಡ, ಶ್ವಾಸಕೋಶದ ಸಮಸ್ಯೆಗಳು, ಸಾಂಕ್ರಾಮಿಕ ಕಾಯಿಲೆಗಳು ಮನುಷ್ಯ ಕುಲವನ್ನು ಮುತ್ತಲಿವೆ.
ಕೈಗಾರಿಕೆಯುಗ ಆರಂಭವಾಗುವ ಮುನ್ನ ನೆಲೆಸಿದ್ದ ತಾಪಮಾನ ಒಂದೂವರೆ ಡಿಗ್ರಿಯಷ್ಟು ಹೆಚ್ಚಿತೆಂದರೆ ಬಿಸಿಪ್ರಳಯದ ಘನಘೋರ ದುಃಸ್ವಪ್ನ ನಿಜರೂಪ ತಳೆದು ಇಳೆಯನ್ನು ಆವರಿಸಲಿದೆ. ಒಂದೂವರೆ ಡಿಗ್ರಿಯ ಪೈಕಿ ೧.೧ರಷ್ಟು ಡಿಗ್ರಿ ಈಗಾಗಲೆ ಹೆಚ್ಚಿಬಿಟ್ಟಿದೆ. ಕೇವಲ ಇಪ್ಪತ್ತೇ ವರ್ಷಗಳಲ್ಲಿ ೧.೫ ಡಿಗ್ರಿಯನ್ನು ಮುಟ್ಟುವ ನಿರೀಕ್ಷೆ ಇದೆ. ತಾಪಮಾನ ಹೆಚ್ಚಳ ಎರಡು ಡಿಗ್ರಿ ಮುಟ್ಟಿದರೆ ಕಾಳ್ಗಿಚ್ಚಿಗೆ ಸಿಗುವ ಭೂಪ್ರದೇಶ ಮೂರನೆಯ ಒಂದರಷ್ಟು ಪ್ರಮಾಣವನ್ನು ಮುಟ್ಟಿ ಮುನ್ನಡೆಯಲಿದೆ.
ನಗರ-ಮಹಾನಗರಗಳ ಬದುಕು ಅಸಾಧ್ಯವೆನಿಸಲಿದೆ. ಅರ್ಥವ್ಯವಸ್ಥೆಗಳು ಮುಳುಗಿ ತಳ ಸೇರಲಿವೆ. ಆಹಾರ ಪೂರೈಕೆಯ ಸ್ಥಿತಿ ತೀರಾ ಗಂಭೀರವೆನಿಸಲಿದೆ.
ಇಂತಹ ಎಲ್ಲ ಜ್ವಲಂತ ಸಮಸ್ಯೆಗಳ ಮೇಲೆ ಪರದೆ ಸರಿಸಿ ಆಳುವವರ ಭಜನೆಯಲ್ಲಿ ಮುಳುಗುವ ಸಮೂಹ ಮಾಧ್ಯಮಗಳ ಸಾಲಿಗೆ ಎನ್‌ಡಿಟೀವಿ ಕೂಡ ಸೇರಿಬಿಡಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ