ಅಧ್ಯಕ್ಷರನ್ನೇ ಮನೆಗಟ್ಟಿದ ಶ್ರೀಲಂಕಾ ಜನತೆ
ಆರ್ಥಿಕವಾಗಿ ದಿವಾಳಿಯಾಗಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಜನ ದಂಗೆ ಎದ್ದಿದ್ದಾರೆ. ಇದುವರೆಗೆ ಸಂಯಮದ ಹೋರಾಟ ನಡೆಸುತ್ತಿದ್ದ ಜನರೀಗ ರಾಷ್ಟ್ರಾಧ್ಯಕ್ಷ ಗೊಟಬಯ ರಾಜಪಕ್ಷೆ ನಿವಾಸಕ್ಕೆ ದಾಳಿ ಇಟ್ಟಿದ್ದಾರೆ. ಪ್ರಧಾನಿ ರೆನಿಲ್ ವಿಕ್ರಮಸಿಂಘೆ ವಿದೇಶಗಳಿಂದ ನೆರವಿಗಾಗಿ ಶ್ರಮಿಸುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ನೆರವುಸಿಕ್ಕಿಲ್ಲ. ನಾಗರಿಕರ ಆಕ್ರೋಶ ಎಷ್ಟು ತೀವ್ರವಾಗಿದೆಯೆಂದರೆ ಅಧ್ಯಕ್ಷ ರಾಜಪಕ್ಷೆ ನಿವಾಸಕ್ಕೆ ಮುತ್ತಿಗೆ ಹಾಕಿ ಸಿಕ್ಕಸಿಕ್ಕದ್ದನ್ನು ದೋಚಿದ್ದಾರೆ. ಜುಲೈ ೧೩ರಂದು ರಾಜಿನಾಮೆ ನೀಡುವುದಾಗಿ ರಾಜಪಕ್ಷೆ ಘೋಷಿಸಿದ್ದಾರೆ. ಅವರೀಗ ಸೇನಾ ಕೇಂದ್ರಕಚೇರಿಯಲ್ಲಿ ರಕ್ಷಣೆ ಪಡೆದಿದ್ದಾರೆ. ಪ್ರಧಾನಿ ರೆನಿಲ್ ವಿಕ್ರಮಸಿಂಘೆ ಸಹ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಆ ನಂತರ ಅಲ್ಲಿ ಸರ್ವಪಕ್ಷಗಳನ್ನೊಳಗೊಂಡ ರಾಷ್ಟ್ರೀಯ ಸರ್ಕಾರ ರಚನೆಯಾಗಲಿದೆ. ಪರಿಸ್ಥಿತಿ ಸುಧಾರಣೆಯಾದ ನಂತರ ಚುನಾವಣೆಗಳು ನಡೆದು ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ. ಈಗಿರುವ ದೊಡ್ಡಸವಾಲು ಎಂದರೆ ಬಂಡಾಯ ಎದ್ದಿರುವ ನಾಗರಿಕರನ್ನು ಶಾಂತಗೊಳಿಸುವುದು. ಸೇನೆ ಕೂಡ ಶಾಂತಿಯಿಂದಲೇ ಪರಿಸ್ಥಿತಿ ನಿಭಾಯಿಸುತ್ತಿದೆ. ಶಾಂತಿಕಾಪಾಡುವಂತೆ ಸೇನೆ ಜತೆ ಸಹಕರಿಸುವಂತೆ ಸೇನಾ ಮುಖ್ಯಸ್ಥ ಶವೇಂದ್ರ ಸಿಲ್ವಾ ಮನವಿ ಮಾಡಿದ್ದಾರೆ.
ಪ್ರತಿಭಟನೆಗಿದು ಕಾಲವಲ್ಲವಯ್ಯ!!!
ಪ್ರಧಾನಿ ನರೇಂದ್ರಮೋದಿ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಪ್ರತಿಭಟನೆ ವೇಳೆ ಬಿರಿಂಚಿ ಬೋರಾ ಎಂಬವರು ಶಿವನವೇಷ ಧರಿಸಿ ಪಾರ್ವತಿ ವೇಷದಲ್ಲಿದ್ದ ಸಹ ನಟಿಯೊಂದಿಗೆ ಬೀದಿ ನಾಟಕವೊಂದನ್ನು ಪ್ರದರ್ಶಿಸಿದ್ದರು. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ಮೋದಿ ವಿರುದ್ದ ಪ್ರತಿಭಟನೆ ನಡೆಸಲು ಸಾಧ್ಯವೇ? ಪ್ರತಿಭಟನೆ ನಡೆಸಿದ ವಿರಿಂಚಿ ಬೋರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೆ ನೀಡಿರುವ ಕಾರಣ ಏನೆಂದರೆ ಅವರು ಶಿವನ ವೇಷ ತೊಟ್ಟದ್ದರು. ಆ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬುದು. ವಿಶ್ವ ಹಿಂದೂಪರಿಷತ್, ಬಜರಂಗದಳ ಮತ್ತಿತರ ಗುಂಪುಗಳು ಅವರ ಕೃತ್ಯವನ್ನು ಟೀಕಿಸಿದ್ದವು. ಜತೆಗೆ ರಾಜಕೀಯ ಉದ್ದೇಶಗಳಿಗೆ ಧರ್ಮವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದೂ ದೂರಿದ್ದರು. ಪಿಕೆ ಸಿನಿಮಾದಲ್ಲಿ ಶಿವನ ವೇಷ ತೊಟ್ಟ ವ್ಯಕ್ತಿ ಏನೆಲ್ಲಾ ಮಾಡುತ್ತಾನೆ. ಆದರೂ ಅದು ವಿವಾದಕ್ಕೀಡಗದು. ಈಗ ಏಕೆ ವಿವಾದಕ್ಕೀಡಾಗುತ್ತಿದೆ? ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದರಿಂದ!
ಟ್ವಿಟ್ಟರ್ ಕೈಬಿಟ್ಟ ಎಲಾನ್ ಮಸ್ಕ್
೩.೪೮ ಲಕ್ಷ ಕೋಟಿ ರೂಪಾಯಿ ಮೌಲ್ಯದ ಟ್ವಿಟ್ಟರ್ ಖರೀದಿ ಒಪ್ಪಂದವನ್ನು ಕೈಬಿಡಲು ಟೆಸ್ಲಾ ಮುಖ್ಯಸ್ಥ ಇಲಾನ್ ಮಸ್ಕ್ ನಿರ್ಧರಿಸಿದ್ದಾರೆ. ಟ್ವಿಟ್ಟರ್ ಸಂಸ್ಥೆಯು ನಕಲಿ ಖಾತೆಗಳ ನಿಖರ ವಿವರ ನೀಡುತ್ತಿಲ್ಲ ಎಂಬುದು ಎಲಾನ್ ಮಸ್ಕ್ ಅವರ ತಕರಾರು. ಎಲಾನ್ ಟ್ವಿಟ್ಟರ್ ಖರೀದಿಗೆ ಪ್ರಸ್ತಾಪ ಮಾಡಿದ ನಂತರ ಟೆಸ್ಲಾ ಮತ್ತು ಟ್ವಿಟ್ಟರ್ ಉಭಯ ಕಂಪನಿಗಳು ಷೇರುಗಳು ಕುಸಿದಿವೆ. ಟ್ವಿಟ್ಟರ್ ಆಡಳಿತ ಮಂಡಳಿ ೪೪ ಬಿಲಿಯನ್ ಡಾಲರ್‌ಗಳ ಡೀಲಿಗೆ ಒಪ್ಪಿಗೆ ನೀಡಿದೆ. ಈ ನಡುವೆ ಅಂತಿಮ ಒಪ್ಪಂದವಾಗುವ ಮುನ್ನ ಎಲಾನ್ ಮಸ್ಕ್ ನಕಲಿ ಖಾತೆಗಳ ಬಗ್ಗೆ ತಕರಾರು ತೆಗೆದಿದ್ದಾರೆ. ನಕಲಿ ಖಾತೆಗಳ ನಿಖರ ವಿವರ ನೀಡಲು ಟ್ವಿಟ್ಟರ್ ಆಡಳಿತ ಮಂಡಳಿ ನಿರಾಕರಿಸಿದೆ. ನಿಖರ ಮಾಹಿತಿ ನೀಡದಿದ್ದರೆ ಒಪ್ಪಂದದಿಂದ ಹಿಂದೆ ಸರಿಯುವೆ ಎಂದು ಈ ಹಿಂದೆಯೇ ಎಲಾನ್ ಎಚ್ಚರಿಸಿದ್ದರು. ಸಾಮಾನ್ಯ ಸಂದರ್ಭಗಳಲ್ಲಿ ಒಪ್ಪಂದ ಮಾಡಿಕೊಂಡು ಹಿಂದೆ ಸರಿದಾಗ ದಂಡ ರೂಪದ ಪರಿಹಾರ ನೀಡಬೇಕಾಗುತ್ತದೆ. ಒಪ್ಪಂದದ ಪ್ರಕಾರ ಎಲಾನ್ ಟ್ವಿಟ್ಟರ್ ಕಂಪನಿಗೆ ೭,೯೨೫ ಕೋಟಿ ರೂಪಾಯಿ ನೀಡಬೇಕು. ಆದರೆ, ಟ್ವಿಟ್ಟರ್ ಕಂಪನಿ ದಾವೆ ಹೂಡಲು ನಿರ್ಧರಿಸಿದೆ. ಒಪ್ಪಂದದಂತೆ ೩.೪೮ ಲಕ್ಷ ಕೋಟಿ ನೀಡಿ ಖರೀದಿಸಿ ಎಂಬುದು ಟ್ವಿಟ್ಟರ್ ಬೇಡಿಕೆ.
ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಲಕ್ಷ ರೂ. ದಂಡ
ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜುಲೈ ೧ರಿಂದ ಜಾರಿ ಬಂದಿದೆ. ಕೆಲವು ರಾಜ್ಯಗಳಲ್ಲಿ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಿದ್ದರೆ ಕೆಲವು ರಾಜ್ಯಗಳು ನಿಧಾನಗತಿಯಲ್ಲಿ ಜಾರಿ ಮಾಡುತ್ತಿವೆ. ದೆಹಲಿ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ. ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿಯು (ಡಿಪಿಸಿಸಿ) ಗುರುತಿಸಲಾದ ೧೯ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮೇಲಿನ ನಿಷೇಧದ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಅವುಗಳ ಉತ್ಪಾದನಾ ಘಟಕಗಳನ್ನು ಬಂದ್ ಮಾಡಿಸಲು ಮುಂದಾಗಿದೆ.
ನಿಯಂತ್ರಣ ಕೊಠಡಿಯು ನಿಷೇಧಿತ ಪ್ಲಾಸ್ಟಿಕ್ ಬಳಕೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಸ್ವೀಕರಿಸುತ್ತದೆ ಮತ್ತು ತ್ವರಿತ ಕ್ರಮ ತೆಗೆದುಕೊಳ್ಳಲು ಜಾರಿ ತಂಡಗಳನ್ನು ರಚಿಸಿದೆ.
ಎಲ್ಲಕ್ಕೂ ಮಿಗಿಲಾಗಿ ತಪ್ಪಿತಸ್ಥರ ವಿರುದ್ಧ ೧೯೮೬ರ ಪರಿಸರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ೧ ಲಕ್ಷ ರೂಪಾಯಿವರೆಗೆ ದಂಡ ಮತ್ತು ಐದು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ, ಕೆಲವು ಸಂದರ್ಭಗಳಲ್ಲಿ ಉಭಯ ಶಿಕ್ಷೆಗಳನ್ನೂ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಆರಂಭದಲ್ಲಿ ತಿಳುವಳಿಕೆ, ಜಾಗೃತಿ ಮೂಡಿಸಲಾಗುತ್ತದೆ. ನಂತರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.