Mysore
26
overcast clouds

Social Media

ಗುರುವಾರ, 16 ಜನವರಿ 2025
Light
Dark

ಕರೊನಾ ಹೋಗುವ ಮುನ್ನವೇ ಬಂದ ಮಂಕಿಫಾಕ್ಸ್

-ಕಾರ್ತಿಕ್ ಕೃಷ್ಣ

ಕೊರೊನಾದ ಕಾಟ ಮುಗಿಯುವ ಹೊತ್ತಿಗೆ ಮತ್ತೊಂದು ವೈರಾಣು ತನ್ನ ಆಟವನ್ನು ಶುರು ಮಾಡಿದೆ. ಅರೆ! ಕೊರೋನ ವೈರಸ್ ಮತ್ತೊಮ್ಮೆ ರೂಪಾಂತರಗೊಂಡು ಜನರನ್ನು ಕಾಡಲು ಬರುತ್ತಿದೆಯೇ ಎಂದು ಭಾವಿಸಬೇಡಿ. ಸದ್ಯಕ್ಕೆ ರೆಕ್ಕೆ ಬಿಚ್ಚಿಕೊಂಡು ಜನರ ಮನಸಲ್ಲಿ ಭೀತಿ ಹುಟ್ಟಿಸುತ್ತಿರುವ ಸೋಂಕಿನ ಹೆಸರು ‘ಮಂಕಿಫಾಕ್ಸ್’. ವೇಗವಾಗಿ ಹರಡುತ್ತಿರುವ ಮಂಕಿಫಾಕ್ಸ್ ರೋಗವು ಜಾಗತಿಕ ಆರೋಗ್ಯ ತುರ್ತುಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಘೋಷಿಸಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಮಂಕಿಫಾಕ್ಸ್ ಸ್ಥಿತಿಯನ್ನು ಚರ್ಚಿಸಲು ತಜ್ಞರ ಆಯೋಗವನ್ನು ನೇಮಿಸಿದ್ದ ಥೆಡ್ರಾಸ್, ಆಗ ಸುಮಾರು ೪೭ ದೇಶಗಳಲ್ಲಿ ೩,೦೪೦ ಮಂಕಿಫಾಕ್ಸ್ ಪ್ರಕರಣಗಳು ದಾಖಲಾಗಿದ್ದುದರಿಂದ ಅದೊಂದು ಜಾಗತಿಕ ಅರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿರಲಿಲ್ಲ. ಆದರೆ ಒಂದೇ ತಿಂಗಳಿನಲ್ಲಿ ೭೫ ದೇಶಗಳಿಗೆ ಹಬ್ಬಿದ ಈ ವ್ಯಾಧಿ ಸುಮಾರು ೧೬,೦೦೦ಕ್ಕೂ ಅಧಿಕ ಜನರನ್ನು ಬಾಧಿಸಿ ಐವರ ಸಾವಿಗೆ ಕಾರಣವಾದದ್ದನ್ನು ಗಮನದಲ್ಲಿಟ್ಟುಕೊಂಡು ಮಂಕಿಪಾಕ್ಸ್ ಒಂದು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವ ಅರೋಗ್ಯ ಸಂಸ್ಥೆ ಘೋಷಿಸಲೇ ಬೇಕಾಯ್ತು.

ಈ ಹಿಂದೆ ಎಬೋಲಾ, H1N1, ಸ್ವೇಯ್ನ್ ಫ್ಲೂ, ಪೋಲಿಯೊ, ಕೋವಿಡ್ ಹಾಗು ಝಿಕಾ ವೈರಸ್ ಜಗತ್ತನ್ನು ವ್ಯಾಪಿಸಿದಾಗ ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ಘೋಷಣೆಯಾಗಿತ್ತು.

ಪ್ರಾಥಮಿಕವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಕಂಡುಬರುವ ಮಂಕಿಫಾಕ್ಸ್ ಒಂದು ವೈರಲ್ ಝೂನೋಸಿಸ್. ಝೂನೋಸಿಸ್ ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆ ಎಂದರ್ಥ. ಸಿಡುಬು ರೋಗದ ಮಾರನಿಸಿಕೆಗಳನ್ನು (symptoms) ಹೋಲುವ ಮಂಕಿಫಾಕ್ಸ್ ಉಷ್ಣವಲಯದ ಮಳೆಕಾಡುಗಳ ಸಮೀಪದಲ್ಲಿ ಪ್ರದೇಶಗಳಲ್ಲಿ ಆಗಿಂದಾಗ್ಗೆ ಕಾಣಿಸಿಕೊಂಡು ಈಗೀಗ ನಗರ ಪ್ರದೇಶಗಳ ಜನರನ್ನು ಹೆಚ್ಚಾಗಿ ಕಾಡುತ್ತಿದೆ. ಮೂಲತಃ ಪೋಕ್ಸ್ವಿರಿಡೆ ವರ್ಗದ ಆರ್ಥೋಪಾಕ್ಸ್ ವೈರಸ್ ಬಣಕ್ಕೆ ಸೇರಿದ double stranded ಡಿಎನ್‌ಎ ಆಗಿರುವ ಮಂಕಿಪಾಕ್ಸ್ ವೈರಾಣುವನ್ನು, ವ್ಯಾಪಿಸಿರುವ ಪ್ರದೇಶಗಳಿಗೆ ಅನುಗುಣವಾಗಿ ಮಧ್ಯ ಆಫ್ರಿಕಾ ಕ್ಲೇಡ್ ಹಾಗು ಪಶ್ಚಿಮ ಆಫ್ರಿಕಾ ಕ್ಲೇಡ್ ಎಂದು ವಿಭಜಿಸಬಹುದು. ಕ್ಲೇಡ್ ಎಂದರೆ ಏಕಮೂಲ ಎಂದರ್ಥ. ಸಮಾನ ಪೂರ್ವಜರಿಂದ ವಿಕಸನ ಹೊಂದಿದ ಯಾವುದೇ ಜೀವಿಗಳ ಗುಂಪನ್ನು ಕ್ಲೇಡ್ ಎನ್ನಬಹುದು. ಹೀಗೆ ಪ್ರಾದೇಶಿಕವಾಗಿ ವಿಭಜನೆಗೊಂಡ ಮಂಕಿಪಾಕ್ಸಿನ ಎರಡು ಕ್ಲೇಡ್ ಗಳು ಆಫ್ರಿಕಾದ ಕ್ಯಾಮರೂನ್ ದೇಶದಲ್ಲಿ ಸಂಧಿಸುತ್ತದೆ. ಅರ್ಥಾತ್ ಆ ದೇಶದಲ್ಲಿ ಮಾತ್ರ ಎರಡು ಕ್ಲೇಡಿನ ವೈರಸ್ ಗೋಚರಿಸುತ್ತದೆ.

ಮಂಕಿಪಾಕ್ಸ್ ೧೯೭೦ರಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ೯ ತಿಂಗಳ ಗಂಡು ಮಗುವಿನಲ್ಲಿ ಮೊದಲ ಬಾರಿಗೆ ಕಂಡುಬಂತು. ಅದು ಮನುಷ್ಯನಲ್ಲಿ ಗೋಚರಿಸಿದ್ದು ಅದೇ ಮೊದಲು. ಅದಕ್ಕೂ ಮುಂಚೆ ಅಂದರೆ ೧೯೫೮ರಲ್ಲಿ ಕೋಪನ್ಹೇಗನ್ ನಲ್ಲಿ ಸಂಶೋಧನೆಗೆ ಒಳಪಟ್ಟಿದ್ದ ಮಂಗಗಳ ವಸಾಹತುವಿನಲ್ಲಿ ಕಾಣಿಸಿತ್ತು.ಇನ್ನೊಂದು ವಿಚಾರ ಏನಂದ್ರೆ, ಮಂಕಿಪಾಕ್ಸಿನ ಸುತ್ತ ಹಲವಾರು ತಪ್ಪು ಕಲ್ಪನೆಗಳಿವೆಯಂತೆ. ವೈರಾಣುವಿನ ಹೆಸರು ಕೇಳಿದಾಗ ಅದು ಮಂಗನಿಂದ ಹರಡುವ ಖಾಯಿಲೆ ಎಂದು ತಪ್ಪು ತಿಳುಯುವವರೇ ಹೆಚ್ಚು. ಆದರೆ ಮಂಗಗಳು ಅಥವಾ ಮನುಷ್ಯರು ಅದರ ಅತಿಥೇಯರಷ್ಟೇ! ಈ ವೈರಾಣು ಕಂಡುಬರುವುದು ‘ದಂಶಕ’ಗಳಲ್ಲಿ (ಬಾಚಿಹಲ್ಲುಗಳುಳ್ಳ ಪ್ರಾಣಿಗಳು). ಹಾಗಾಗಿ ಇದರ ಹೆಸರನ್ನು ಮರುಪರಿಶೀಲಿಸಿ ಮರುನಾಮಕರಣ ಮಾಡುವ ಮಾತು ವೈದ್ಯಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇನ್ನೊಂದು ತಪ್ಪು ಕಲ್ಪನೆಯೇನೆಂದರೆ, ಅದು ಆಫ್ರೀಕಾ ದೇಶಕ್ಕೆ ಮಾತ್ರ ಸೀಮಿತ ಎಂಬುದು. ಆದರೆ ಹಲವಾರು ಸಲ ಇದು ಅಲ್ಲಿಂದ ಹೊರ ಬಂದು ಯೂರೋಪಿಯನ್ ಹಾಗು ಅಮೆರಿಕಾವನ್ನು ಕಾಡಿದ್ದೂ ಉಂಟು. ಎರಡು ವರುಷದ ಹಿಂದೆ ಕೊರೋನಾ ವೈರಾಣುವನ್ನು ಚೀನೀ ವೈರಾಣು ಎಂದು ಕರೆಯುತ್ತಿದ್ದದ್ದು ನಿಮಗೆ ನೆನಪಿರಬಹದು. ಹಾಗೆಯೇ ಮಂಕಿಪಾಕ್ಸ್ ವೈರಾಣುವನ್ನು ಆಫ್ರೀಕಾ ವೈರಾಣು ಎಂದು ಕರೆಯುದನ್ನು ತಪ್ಪಿಸಲು ಅದಕ್ಕೆ ಕಳಂಕ ರಹಿತವಾದ ಹಾಗೂ ತಾರತಮ್ಯವಿಲ್ಲದ ಹೆಸರಿನ ಅವಶ್ಯಕತೆಯಿದೆಯೆಂಬುದನ್ನು ಪ್ರತಿಪಾದಿಸಿ, ಸವಿವಿರವಾದ ಸಂಶೊಧನಾ ಲೆಖನವನ್ನು ೨೦ ವಿಜ್ಞಾನಿಗಳ ತಂಡವೊಂದು ಮಂಡಿಸಿದೆ.

ಸಿಡುಬಿನ ಹತ್ತಿರದ ಸಂಬಂಧಿಯಾದ ಮಂಕಿಪಾಕ್ಸಿನ ಐತಿಹ್ಯವನ್ನು ಸಿಡುಬಿನಿಂದ ಬೇರ್ಪಡಿಸುವುದು ಕಷ್ಟಸಾಧ್ಯ. ೧೦,೦೦೦ಆ.ಇ.ಉ ಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಸಿಡುಬು ೨೦ನೇ ಶತಮಾನದಲ್ಲಿಯೇ ಪ್ರಪಂಚದಾದ್ಯಂತ ಸುಮಾರು ೩೦೦ ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿಪಡೆದುಕೊಂಡಿದೆ! ಸಿಡುಬನ್ನು ನಿಗ್ರಹಿಸಲು ಶತಮಾನಗಳ ಹಿಂದೆ ಏಷ್ಯಾ ಹಾಗು ಆಫ್ರಿಕಾದ ಜನರಿಗಷ್ಟೇ ಗೊತ್ತಿದ್ದ ಕೆಲ ಚಿಕಿತ್ಸಾ ವಿಧಾನಗಳಿದ್ದವು. ವೇರಿಯೊಲೇಷನ್ ಎನ್ನುವ ಒಂದು ವಿಧಾನದಲ್ಲಿ ಸಿಡುಬಿನಿಂದ ಉಂಟಾದ ಗಾಯವು ಒಣಗಿದ ನಂತರ ಅದರ ಒಣ ಪದರವನ್ನು ಪುಡಿ ಮಾಡಿ ಉದ್ದೇಶಪೂರ್ವಕವಾಗಿ ರೋಗಿಯ ಮೂಗಿನಿಂದ ಸೇದಿಸುತ್ತಿದ್ದರಂತೆ. ಕೆಲ ಕಾಲದ ನಂತರ ಗುಣಮುಖನಾದ ರೋಗಿಯು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದನಂತೆ. ಇನಾಕ್ಯುಲೇಷನ್ ಎಂಬ ಇನ್ನೊಂದು ವಿಧಾನದಲ್ಲಿ ಸಿಡುಬಿನಿಂದ ಉಂಟಾದ ಬೊಕ್ಕೆಯೊಳಗೆ ಸೂಜಿಯನ್ನು ಅದ್ದಿ ಅದನ್ನು ರೋಗಿಗೆ ಚುಚ್ಚುತ್ತಿದ್ದರಂತೆ. ರೋಗಿಗೆ ಸೌಮ್ಯ ರೂಪದ ವೈರಸ್ನಿಂದ ಸೋಂಕು ತಗುಲಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದೇ ಇನಾಕ್ಯುಲೇಷನ್ ಅಥವಾ ವೇರಿಯೊಲೇಷನ್ ಚಿಕಿತ್ಸೆಯ ಮೂಲ ಮಂತ್ರ!

ಏಷ್ಯಾ ಹಾಗು ಆಫ್ರಿಕಾದಲ್ಲಿ ಇನೊಕ್ಯುಲೇಷನ್ ರೂಡಿಯಲ್ಲಿದ್ದರೂ ಇಂಗ್ಲೆಂಡ್ ಮತ್ತು ವಸಾಹತುಶಾಹಿ ಅಮೆರಿಕದಲ್ಲಿ ಅದರ ಬಳಕೆಯಿರಲಿಲ್ಲ. ಅದನ್ನು೧೮ನೇ ಶತಮಾನದ ಆದಿಯಲ್ಲಿ ಯೂರೋಪಿಗೆ ಪರಿಚಯಿಸಿದ್ದು ಆಗಿನ ಒಟ್ಟೋಮನ್ ಸಾಮ್ರಾಜ್ಯದ ಬ್ರಿಟಿಷ್ ರಾಯಭಾರಿಯ ಮಡದಿಯಾದ ‘ಲೇಡಿ ಮೇರಿ ವರ್ಟ್ಲೆಯ್ ಮೊಂಟಾಗು’. ಹೀಗೆ ಪಾಶ್ಚಿಮಾತ್ಯ ದೇಶಗಳಿಗೆ ಎಂಟ್ರಿ ಕೊಟ್ಟ ಇನೊಕ್ಯುಲೇಷನ್ ಗೆ ತೀವ್ರ ಮಟ್ಟದ ಪ್ರಚಾರ ದೊರೆತಿದ್ದು ೧೭೨೧ರ ಬಾಸ್ಟನ್ ಸಿಡುಬು ಸಾಂಕ್ರಾಮಿಕದ ಸಮಯದಲ್ಲಿ. ಆಗ ‘ಕಾಟನ್ ಮ್ಯಾಥರ್’ ಎನ್ನುವವರು ಇನಾಕ್ಯುಲೇಷನ್ ಕುರಿತಾಗಿ ಸಾಕಷ್ಟು ಪ್ರಚಾರ ಮಾಡಿ, ಕೆಲವರಿಂದ ತೀವ್ರ ವಿರೋಧವನ್ನೂ ಎದುರಿಸಿದ್ದರು. ಏಕೆಂದರೆ, ಮ್ಯಾಥರ್ ಇನೊಕ್ಯುಲೇಷನನ್ನು ತನ್ನ ಪಶ್ಚಿಮ ಆಫ್ರಿಕಾದ ಗುಲಾಮ ‘ಒನೆಸಿಮಸ್’ ನಿಂದ ಕಲಿತಿದ್ದನಂತೆ! ಬೋಸ್ಟನ್ನಲ್ಲಿದ್ದ ಒಬ್ಬ ವೈದ್ಯ ಅದು ಗುಲಾಮರಾದ ಆಫ್ರಿಕನ್ನರು ತಮ್ಮ ಒಡೆಯರಿಗೆ ಸೋಂಕು ತಗುಲಿಸುವ ಸಂಚು ಎಂದು ಖಂಡಿಸಿದ್ದರಿಂದ ಪ್ರತಿಭಟನೆಯ ಕಾವು ಸಾಕಷ್ಟು ಏರಿ ಕೆಲವರು ಸಣ್ಣ ಬಾಂಬೊಂದಕ್ಕೆ ಚೀಟಿಯೊಂದನ್ನು ಸಿಕ್ಕಿಸಿ ಅದರಲ್ಲಿ Cotton Mather, you dog, dam you! I’ll inoculate you with this; with a pox to you. ಎಂದು ಬರೆದು ಮ್ಯಾರ್ಥ ನ ಮನೆಯೊಳಗೇ ಎಸೆದಿದ್ದರಂತೆ!

೧೭೯೬ರಲ್ಲಿ ಎಡ್ವರ್ಡ್ ಜೆನ್ನರ್ ಸಿಡುಬು ರೋಗಕ್ಕೆ ಮದ್ದು ಕಂಡು ಹಿಡಿದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಜೆನ್ನರ್‌ಗಿಂತಲೂ ಮುಂಚೆ ‘ಜಾನ್ ಫ್ಯೂಸ್ಟರ್’ ಎನ್ನುವ ವೈದ್ಯರೊಬ್ಬರು ಸಿಡುಬಿಗೆ ಮದ್ದು ಕಂಡುಹಿಡಿದಿದ್ದರೆಂದು ಖ್ಯಾತ ರೋಗಶಾಸ್ತ್ರಜ್ಞರಾದ ಆರ್ಥರ್‌ಬಾಯ್ಲ್ ಸ್ಟಾನ್ ಅಭಿಪ್ರಾಯಪಡುತ್ತಾರೆ. ಈ ಹಿಂದೆ ಕೌಪಾಕ್ಸ್‌ಗೆ ತುತ್ತಾಗಿದ್ದ ಹಾಲು ಮಾರುವವರಿಗೆ ಸಿಡುಬು ರೋಗ ಸೋಕಿರಲಿಲ್ಲ ಎಂಬುದನ್ನು ಗಮನಿಸಿದ ಜೆನ್ನರ್ ಮುಂದೆ ಸಿಡುಬು ರೋಗಕ್ಕೆ ಚುಚ್ಚು ಮದ್ದು ಕಂಡುಹಿಡಿದ ಎಂಬುದು ಪ್ರತೀತಿ. ಆದರೆ ಆರ್ಥರ್‌ಅವರ ಪ್ರಕಾರ ಈ ಅಂಶವನ್ನು ಜಾನ್ ಫ್ಯೂಸ್ಟರ್ ೧೭೬೦ರಲ್ಲೇ ಗಮನಿಸಿದ್ದರು. ಹಾಲು ಮಾರುವವರ ಕಥೆಯನ್ನು ಸೃಷ್ಟಿಸಿದ್ದು ಜೆನ್ನರ್ ಅವರ ಜೀವನ ಚರಿತ್ರೆಯನ್ನು ಬರೆಯುತಿದ್ದವನು ಎಂದೂ ಆರ್ಥರ್ ವಾದಿಸುತ್ತಾರೆ!

ವ್ಯಾಪಕವಾಗಿ ಹರಡುತ್ತಿರುವ ಮಂಕಿಪಾಕ್ಸಿಗೆ ಯಾವುದೇ ಲಸಿಕೆ ಲಭ್ಯವಿರದ ಕಾರಣ ಸಿಡುಬು ರೋಗದ ಲಸಿಕೆಯಾದ ACAM2000 ಹಾಗು Jynneos ಲಸಿಕೆಯನ್ನು ಬಳಸಲಾಗುತ್ತಿದೆ ಎಂದು ಟೈಮ್ಸ್ ವರದಿ ಮಾಡಿದೆ. Jynneos ಲಸಿಕೆ ಕಡಿಮೆ ಅಡ್ಡಪರಿಣಾಮಗಳನ್ನು ಉಂಟುಮಾಡುವ ಕಾರಣ ಅದಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆಯಂತೆ. ನೇರ ಸಂಪರ್ಕದಿಂದ ಮಾತ್ರ ಹರಡುವ ಮಂಕಿಪಾಕ್ಸ್ ಕೊರೋನಾದಂತೆ ಮಾರಣಾಂತಿಕವಲ್ಲ ಎಂಬುದನ್ನೂ ವಿಶ್ವ ಅರೋಗ್ಯ ಸಂಸ್ಥೆ ದೃಢಪಡಿಸಿದೆ. ಬಪ್ಪದು ತಪ್ಪದು ಎಂಬಂತೆ ಕಲಿಯುಗದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಮನುಕುಲಕ್ಕೆ ಎದುರಾಗುತ್ತಲೇ ಇದೆ. ಮುನ್ನೆಚ್ಚರಿಕೆಯಿಂದ ಇದ್ದರೆ ಕಷ್ಟ ಕಾಲವನ್ನು ಕೊಂಚವಾದರೂ ಮುಂದೂಡಬಹುದು ಅಲ್ಲವೇ? ಮಂಕಿಪಾಕ್ಸ್ ಅದಾಗಲೇ ದೇಶಕ್ಕೆ ಕಾಲಿಟ್ಟಾಗಿದೆ. ಎಚ್ಚರಿಕೆಯಿಂದಿದ್ದು ಇದನ್ನೂ ಜಯಿಸೋಣ!

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ