ಟಿ ಎಸ್ ವೇಣುಗೋಪಾಲ್
ಗಾಂಧಿಯನ್ನು ಹಲವು ಜನ ಹಲವು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಅದು ಸಹಜ ಕೂಡ. ಗಾಂಧಿ ಮಾತುಗಳು ಎಷ್ಟೋ ಬಾರಿ ಗೋಜಲುಗೋಜಲಾಗಿ ಕಾಣುತ್ತದೆ. ಇಂದು ಮಾತನಾಡಿದ್ದಕ್ಕಿಂತ ನಾಳೆ ಭಿನ್ನವಾಗಿ ಮಾತನಾಡಿರುತ್ತಾರೆ. ಅಥವಾ ಹಾಗೆ ತೋರುತ್ತದೆ. ಅಂದಿನ ಸಂದರ್ಭ ಬೇರೆಯಿತ್ತು ಅದಕ್ಕೆ ಹಾಗೆ ಮಾತನಾಡಿದ್ದಾರಾ, ಇರಬಹುದು. ಅಥವಾ ಅವರ ಅಭಿಪ್ರಾಯ ಬದಲಾಗಿದ್ದಿರಬಹುದೇ ಅದೂ ಇರಬಹುದು. ಹಾಗಾಗಿ ಗಾಂಧಿ ಒಂದು ವಿಷಯದ ಬಗ್ಗೆ ಹೀಗೆ ಹೇಳಿದ್ದಾರೆ ಅಂತ ಹೇಳಿದರೆ ಇನ್ನೊಬ್ಬರು ಬೇರೆ ಉಲ್ಲೇಖಗಳನ್ನು ನೀಡಿ ಗಾಂಧಿಯನ್ನು ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸಬಹುದು.
ಇನ್ನೂ ಒಂದು ವಿಷಯ. ಗಾಂಧಿ ಎಷ್ಟೋ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ನಾವು ಗಾಂಧಿಯ ಚಿಂತನೆಯನ್ನು ಎಲ್ಲ ವಿಷಯಗಳಿಗೂ ಆಶ್ರಯಿಸುವ ಅವಶ್ಯಕತೆಯಿಲ್ಲ. ಯಾವುದಕ್ಕೆ ಗಾಂಧಿ ಚಿಂತನೆ ಪ್ರಸ್ತುತವಾಗಿ ತೋರುತ್ತದೊ ಅದಕ್ಕೆ ಗಾಂಧಿಯನ್ನು ಗಮನಿಸಿದರೆ ಸಾಕು. ಉಳಿದಂತೆ ಅವರನ್ನು ಅವರ ಪಾಡಿಗೆ ಬಿಡುವುದು ಒಳ್ಳೆಯದು. ಇದು ಕೇವಲ ಗಾಂಧಿ ವಿಷಯದಲ್ಲಿ ಮಾತ್ರವಲ್ಲ, ಅಂತಹ ಎಷ್ಟೋ ಜನರ ವಿಷಯದಲ್ಲಿ ನಿಜ ಅಂತ ನನಗೆ ತೋರುತ್ತದೆ. ನಮಗೆ ಒಪ್ಪಿಗೆಯಾಗದ ವಿಷಯದಲ್ಲಿ ಟೀಕಿಸುವುದಕ್ಕೆ ಅರ್ಥವಿಲ್ಲ. ಅದರಿಂದ ಪ್ರಯೋಜನವೂ ಇಲ್ಲ.
ಗಾಂಧಿ ಎಷ್ಟೋ ವಿಷಯಗಳ ಬಗ್ಗೆ ತೀರಾ ಮೂಲಭೂತವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ಆಳವಾದ ಹೊಳಹುಗಳನ್ನು ನೀಡಿದ್ದಾರೆ. ಇಂದಿಗೂ ಅವರ ಹಲವು ಚಿಂತನೆಗಳು ತುಂಬಾ ಪ್ರಸ್ತುತ. ಉದಾಹರಣೆಗೆ ತಂತ್ರಜ್ಞಾನವನ್ನು ಕುರಿತಂತೆ ಅವರ ಯೋಚನೆಗಳನ್ನು ಇಂದಿನ ಸಂದರ್ಭದಲ್ಲಿ ಗಮನಿಸುವುದು ಮುಖ್ಯವೆನಿಸುತ್ತದೆ.
ಗಾಂಧಿ ಅರ್ಥಶಾಸ್ತ್ರಜ್ಞರಲ್ಲ. ಅವರು ಅರ್ಥಶಾಸ್ತ್ರಜ್ಞರು ಮಾತನಾಡುವ ಭಾಷೆಯಲ್ಲಿ ಮಾತನಾಡುವುದಿಲ್ಲ. ಕೆಲವೊಮ್ಮೆ ಅವರ ಮಾತು ಸ್ವಲ್ಪ ಅತಿಯಾಗಿ ತೋರುತ್ತದೆ. ಇವೆಲ್ಲದರ ನಡುವೆಯೂ ಅವರ ಚಿಂತನೆ ತುಂಬಾ ಉಪಯುಕ್ತವಾಗಿದೆ. ಅಷ್ಟೇ ಘನವಾಗಿದೆ. ಹಲವರು ಆರೋಪಿಸುವಂತೆ ಅವರು ತಂತ್ರಜ್ಞಾನವನ್ನು ಸಾರಾಸಗಟಾಗಿ ವಿರೋಧಿಸುವುದಿಲ್ಲ. ಯಂತ್ರಗಳು ಬೇಡ ಎಂದು ಅವರು ಹೇಳುತ್ತಿಲ್ಲ. ‘ನಮ್ಮ ಮೈಯೇ ಒಂದು ಕುಶಲವಾದ ಯಂತ್ರವಲ್ಲವೇ? ರಾಟೆಯೇ ಒಂದು ಯಂತ್ರ. ಯಂತ್ರವನಲ್ಲ ನಾನು ಬೇಡ ಅನ್ನುವುದು; ಯಂತ್ರ ಯಂತ್ರ ಎಂಬ ಭ್ರಾಂತಿಯನ್ನು, ಶರೀರ ಶ್ರಮವನ್ನು ಕಡಿಮೆ ಮಾಡುವ ಯಂತ್ರ ಬೇಕೆಂಬ ಭ್ರಾಂತಿ ಈಗ ಬೆಳೆಯುತ್ತಿದೆ. ‘ದುಡಿತ ಕಡಿಮೆ’ಯಾಗಿ ಸಾವಿರಾರು ಜನ ಹಸಿವಿನಿಂದ ಸಾಲಾಗಿ ಬೀದಿಯಲ್ಲಿ ಬಿದ್ದಾರು. ಹತ್ತು ಜನಕ್ಕೆ ದುಡಿತ ಕಡಿಮೆ ಮಾಡುವ ಉದ್ದೇಶವಲ್ಲ ನನ್ನದು; ಇಡೀ ಮಾನವಕೋಟಿಗೇ ದುಡಿಮೆ ಬೇಕೆನ್ನುತ್ತೇನೆ. ಹತ್ತು ಜನರ ಕೈಯಲ್ಲಿ ಧನ ಸಂಗ್ರಹವಾಗಲೆಂದಲ್ಲ, ಎಲ್ಲರ ಕೈಯಲ್ಲೂ ಹಣ ಸೇರಲಿ ಎಂದು ನನ್ನ ಬಯಕೆ. ಇಂದು ಯಂತ್ರದಿಂದಾಗಿ ಒಂದು ಹಿಡಿ ಜನ ಸಾವಿರಾರು ಜನರ ಬೆನ್ನ ಮೇಲೆ ಸವಾರಿ ಮಾಡುವ ಹಾಗಾಗಿದೆ.ಇದೆಲ್ಲದರ ಹಿಂದಿನ ಉದ್ದೇಶ ದುಡಿಮೆ ಕಡಿಮೆ ಮಾಡು ಔದಾರ್ಯವಲ್ಲ; ಲೋಭ, ಇದನ್ನು ನಾನು ಸಹಿಸಲಾರೆ’. ಗಾಂಧಿ ತಂತ್ರಜ್ಞಾನಕ್ಕೂ ಉದ್ಯೋಗಕ್ಕೂ, ಸಂಪತ್ತಿಗೂ ಇರುವ ಸಂಬಂಧವನ್ನು ಗುರುತಿಸಿದ್ದಾರೆ. ಅದು ಎಷ್ಟೊ ಅರ್ಥಶಾಸ್ತ್ರಜ್ಞರಿಗೆ ಸಾಧ್ಯವಾಗಿಲ್ಲ. ಅದು ತುಂಬಾ ಮುಖ್ಯ. ಬಂಡವಾಳಶಾಹಿ ವ್ಯವಸ್ಥೆಗೂ, ನಿರುದ್ಯೋಗಕ್ಕೂ, ಬಡತನಕ್ಕೂ ಇರುವ ಸಂಬಂಧವನ್ನು ಕುರಿತು ಅವರು ಮಾತನಾಡುತ್ತಾರೆ. ಗಾಂಧಿ ಬಂಡವಾಳಶಾಹಿ ವ್ಯವಸ್ಥೆ ಅನ್ನುವ ಪದ ಬಳಸುವುದಿಲ್ಲ, ಇಂಗ್ಲಿಷ್ ವ್ಯವಸ್ಥೆ ಅಂತ ಕೆಲವು ಕಡೆ ಕರೀತಾರೆ.
ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಮಾಡುವಂತೆ ಒಂದು ಸ್ವಾವಲಂಬಿ ಯಾದ ಸಣ್ಣ ಗ್ರಾಮೀಣ ಸಮುದಾಯದ ಉದಾಹರಣೆಯ ಮೂಲಕ ಈ ಬಗ್ಗೆ ಗಾಂಧಿಯವರ ವಿಚಾರವನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತ ಅನಿಸುತ್ತದೆ. ಅಂತಹ ಒಂದು ಸಣ್ಣ ವ್ಯವಸ್ಥೆಯಲ್ಲಿ ರೈತರು, ಕುಶಲಕರ್ಮಿಗಳು, ಹೀಗೆ ಹಲವು ಸಣ್ಣ ಉದ್ದಿಮೆದಾರರು ಉತ್ಪಾದನೆಯಲ್ಲಿ ತೊಡಗಿರುತ್ತಾರೆ. ಅವರ ಒಟ್ಟಾರೆ ಉತ್ಪಾದನೆ ಸಮುದಾಯದ ಒಟ್ಟು ಉತ್ಪಾದನೆಯಾಗಿರುತ್ತದೆ. ಅದೇ ಸಮುದಾಯದ ಒಟ್ಟಾರೆ ಆದಾಯ. ತಮ್ಮ ದುಡಿಮೆಯಿಂದ ಬಂದದ್ದನ್ನು ಇನ್ನೊಬ್ಬರ ಉತ್ಪಾದನೆಯನ್ನು ಕೊಳ್ಳಲು ಬಳಸುತ್ತಾರೆ. ಆ ಸಮುದಾಯದಲ್ಲಿ ಉತ್ಪಾದನೆಯಾಗುವುದೆಲ್ಲಾ ಪರಸ್ಪರ ವಿನಿಮಯವಾಗುವುದರಿಂದ ನಿರುದ್ಯೋಗ ಅನ್ನುವುದು ಇರುವುದಿಲ್ಲ.
ಹೊರಗಡೆ ಉತ್ಪಾದನೆಯಾದ ಸರಕೊಂದು ಅಂತಹ ಆರ್ಥಿಕತೆಯನ್ನು ಪ್ರವೇಶಿಸಿತು ಅಂತ ಭಾವಿಸಿಕೊಳ್ಳಿ. ಅದನ್ನು ಈ ಸಮುದಾಯದ ಒಂದಿಷ್ಟು ಜನ ಕೊಳ್ಳುತ್ತಾರೆ ಅಂತ ಭಾವಿಸಿಕೊಳ್ಳಿ. ಆಗ ಸಮುದಾಯದೊಳಗೆ ತಯಾರಾದ ಒಂದಿಷ್ಟು ವಸ್ತುಗಳು ಮಾರಾಟವಾಗದೆ ಉಳಿಯುತ್ತವೆ. ಅದನ್ನು ಉತ್ಪಾದಿಸುವ ಜನರಿಗೆ ಕೆಲಸವಿರುವುದಿಲ್ಲ. ಅಂದರೆ, ಅವರಿಗೆ ತಮ್ಮ ಉತ್ಪನ್ನವನ್ನು ಬೇರೆಯವರೊಂದಿಗೆ ವಿನಿಮಯ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆಗ ಅವರ ಉತ್ಪಾದನೆ ನಿಲ್ಲುತ್ತದೆ. ನಿರುದ್ಯೋಗ ಸೃಷ್ಟಿಯಾಗುತ್ತದೆ.
ಗಾಂಧಿ ಇಲ್ಲಿ ಉಲ್ಲೇಖಿಸುತ್ತಿರುವುದು ವಿದೇಶಿ ವಸ್ತುಗಳನ್ನು. ವಿದೇಶಿ ವಸ್ತುಗಳು ಇಲ್ಲಿಯ ಗ್ರಾಮೀಣ ಮಾರುಕಟ್ಟೆಗೆ ಬರುವುದರಿಂದ ಇಲ್ಲಿಯ ರೈತರು ಹಾಗೂ ಇತರರು ಆ ವಸ್ತುಗಳನ್ನು ಕೊಳ್ಳುತ್ತಾರೆ. ಅವು ಸಾಮಾನ್ಯವಾಗಿ ಯಂತ್ರಗಳಿಂದ ತಯಾರಿಸಿದ ವಸ್ತುಗಳಾಗಿರುತ್ತವೆ. ಅದರಿಂದ ಸ್ಥಳೀಯ ಉದ್ದಿಮೆಗೆ ಪೆಟ್ಟು ಬೀಳುತ್ತದೆ. ಸ್ವಾಭಾವಿಕವಾಗಿಯೇ ಸ್ಥಳೀಯ ಸಮುದಾಯದವರು ನಿರುದ್ಯೋಗಿಗಳಾಗುತ್ತಾರೆ. ಇನ್ನೊಂದು ಸಾಧ್ಯತೆಯೂ ಇದೆ. ಆ ವಸ್ತುಗಳನ್ನು ಸ್ಥಳೀಯರು ಯಂತ್ರಗಳನ್ನು ಬಳಸಿ ತಯಾರಿಸಬಹುದು. ಆಗಲೂ ಇದೇ ಸಮಸ್ಯೆ. ಉತ್ಪಾದನೆಗೆ ಯಂತ್ರಗಳನ್ನು ಬಳಸುವುದರಿಂದ ಅಷ್ಟೇ ವಸ್ತುಗಳನ್ನು ತಯಾರಿಸುವುದಕ್ಕೆ ಅದರಲ್ಲಿ ಅರ್ಧದಷ್ಟು ಜನ ಸಾಕಾಗಬಹುದು. ಹಾಗಾಗಿ ಉಳಿದವರಿಗೆ ಅಲ್ಲಿ ಕೆಲಸ ಇರೋದಿಲ್ಲ. ನಿರುದ್ಯೋಗ ಸೃಷ್ಟಿಯಾಗುತ್ತದೆ. ತಂತ್ರಜ್ಞಾನ ನಿರುದ್ಯೋಗವನ್ನು ಸೃಷ್ಟಿಸುತ್ತದೆ ಅನ್ನುವುದರ ಬಗ್ಗೆ ಗಾಂಧಿಯವರಿಗೆ ಸ್ಪಷ್ಟತೆ ಇತ್ತು. ಆದರೆ ಈ ಬಗ್ಗೆ ಅರ್ಥಶಾಸ್ತ್ರದ ಕ್ಷೇತ್ರದಲ್ಲಿ ಅಷ್ಟಾಗಿ ಚರ್ಚೆ ನಡೆದಿಲ್ಲ.
ರಿಕಾರ್ಡೋ ಯಂತ್ರಗಳಿಂದ ಪ್ರಾರಂಭದಲ್ಲಿ ಒಂದಿಷ್ಟು ಜನ ಕೆಲಸ ಕಳೆದುಕೊಳ್ಳಬಹುದು. ಆದರೆ ಕ್ರಮೇಣ ಒಟ್ಟಾರೆ ಬೆಳವಣಿಗೆಯಿಂದಾಗಿ ಅನುಕೂಲವೇ ಆಗುತ್ತದೆ ಎನ್ನುತ್ತಾನೆ. ಮಾರ್ಕ್ಸ್ ರಿಕಾರ್ಡೋನ ವಾದವನ್ನು ಒಪ್ಪುವುದಿಲ್ಲ. ತಂತ್ರಜ್ಞಾನ ಅನ್ನುವುದು ಒಮ್ಮೆ ಘಟಿಸಿ ಹೋಗಿ ಬಿಡುವ ಘಟನೆಯಾದರೆ ರಿಕಾರ್ಡೋ ಹೇಳುವುದು ಸರಿ ಇರಬಹುದು. ಆದರೆ ಅದೊಂದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾದಾಗ ನಿರುದ್ಯೋಗ ಒಂದು ತಾತ್ಕಾಲಿಕ ಸಮಸ್ಯೆಯಾಗಿ ಉಳಿಯುವುದಿಲ್ಲ. ಆರ್ಥಿಕತೆಯನ್ನು ನಿರಂತರವಾಗಿ ಬಾಧಿಸುವ ಬಿಕ್ಕಟ್ಟಾಗುತ್ತೆ ಎನ್ನುತ್ತಾನೆ. ಜೊತೆಗೆ ರಿಕಾರ್ಡೋ ವಾದ ವಸಾಹತುಗಳ ವಿಷಯಕ್ಕೆ ನಿಜವಲ್ಲ. ನಿರುದ್ಯೋಗ ಸೃಷ್ಟಿಯಾಗೋದು ಭಾರತದಂತಹ ವಸಾಹತುಗಳಲ್ಲಿ, ಆರ್ಥಿಕ ಬೆಳವಣಿಗೆಯಾ–ಗುವುದು ಇಂಗ್ಲೆಂಡಿನಲ್ಲಿ. ಇಂಗ್ಲೆಂಡಿನಲ್ಲಿ ಉದ್ಯೋಗ ಸೃಷ್ಟಿಯಾ–ದರೂ ಭಾರತೀಯರು ಅಲ್ಲಿಗೆ ಹೋಗಿ ದುಡಿಯುವುದಕ್ಕೆ ಆಗುವುದಿಲ್ಲ. ಹಾಗಾಗಿ ಇಲ್ಲಿ ನಿರುದ್ಯೋಗ ಸೃಷ್ಟಿಯಾಗಿರುತ್ತದೆ. ಹೀಗೆ ಅರ್ಥಶಾಸ್ತ್ರಜ್ಞರು ಚರ್ಚಿಸಲು ಹಿಂದೇಟು ಹಾಕುವ ಎಷ್ಟೋ ವಿಷಯಗಳು ಗಾಂಧಿಯಂತಹವರ ಚಿಂತನೆಯಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿವೆ. ಅವುಗಳನ್ನು ಇಂದು ಗಂಭೀರವಾಗಿ ಗಮನಿಸಬೇಕಾದ ಅವಶ್ಯಕತೆಯಿದೆ.
ತಂತ್ರಜ್ಞಾನದಿಂದ ನಿರುದ್ಯೋಗ ಸೃಷ್ಟಿಯಾಗುತ್ತದೆ ಅನ್ನುವುದರ ಬಗ್ಗೆ ಗಾಂಧಿಗೆ ಅನುಮಾನವೇ ಇರಲಿಲ್ಲ. ನಿರುದ್ಯೋಗದೊಂದಿಗೆ ಬಡತನವು ತೆಕ್ಕೆ ಹಾಕಿಕೊಂಡಿರುತ್ತದೆ ಅನ್ನುವುದರ ಬಗ್ಗೆಯೂ ಗಾಂಧಿಗೆ ಸ್ಪಷ್ಟತೆಯಿತ್ತು. ಜನರ ನಿರುದ್ಯೋಗಕ್ಕೆ, ಬಡತನಕ್ಕೆ ನೈಪುಣ್ಯತೆಯ ಕೊರತೆ ಕಾರಣ ಅನ್ನುವ ತರ್ಕ ಗಾಂಧಿಗೆ ಒಪ್ಪಿತವಾಗಿರಲಿಲ್ಲ.
ಇಂದು ಭಾರತ ಉರಿಯುತ್ತಿದೆ. ಇಲ್ಲಿಯ ಜನತೆ ಹಸಿವಿನಿಂದ ಸಾಯುತ್ತಿದ್ದಾರೆ. ಅವರಿಗೆ ಕೆಲಸವಿಲ್ಲ. ಹಾಗಾಗಿ ಆಹಾರ ಕೊಳ್ಳಲು ಅವರಲ್ಲಿ ಹಣವಿಲ್ಲ. ಇದು ನನ್ನ ನಂಬಿಕೆ. ಇಂದು ಕುಲ್ನಾ ಜಿಲ್ಲೆಯಲ್ಲಿ ಜನ ಸಾಯುತ್ತಿದ್ದಾರೆ. ಅವರು ಕೆಲಸ ಮಾಡುತ್ತಿಲ್ಲ ಅನ್ನುವ ಕಾರಣಕ್ಕೆ ಅಲ್ಲ. ಅವರಿಗೆ ಉದ್ಯೋಗ ಇಲ್ಲ ಅನ್ನುವ ಕಾರಣಕ್ಕೆ. ಇಂದು ಒಡಿಶಾ ತೀವ್ರ ಕ್ಷಾಮದಿಂದ ನರಳುತ್ತಿದೆ.
ಗಾಂಧಿಯವರ ದೃಷ್ಟಿಯಲ್ಲಿ, ಕ್ಷಾಮ, ಹಸಿವು, ನಿರುದ್ಯೋಗ, ಹಾಗೂ ತಂತ್ರಜ್ಞಾನ ಇವೆಲ್ಲಕ್ಕೆ ಪರಸ್ಪರ ಸಂಬಂಧವಿದೆ. ನಾವು ಯಂತ್ರಗಳಿಂದ ತಯಾರಾದ ವಿದೇಶಿ ಸರಕುಗಳನ್ನು ಕೊಂಡಿದ್ದರಿಂದ, ಅವುಗಳನ್ನು ನಮ್ಮಲ್ಲೇ ಉತ್ಪಾದಿಸುವವರ ಸರಕುಗಳು ಮಾರಾಟವಾಗುತ್ತಿಲ್ಲ. ಅವರಿಗೆ ತಮಗೆ ಬೇಕಾದ್ದನ್ನು ಬೇರೆಯವರೊಂದಿಗೆ ವಿನಿಮಯ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರು ಕೆಲಸವಿಲ್ಲದ ನಿರುದ್ಯೋಗಿಗಳಾಗಿದ್ದಾರೆ. ನಿರುದ್ಯೋಗ ಬಡತನಕ್ಕೆ ಕಾರಣವಾಗಿದೆ. ಅದಕ್ಕೆ ಪರಿಹಾರವೆಂದರೆ ಗ್ರಾಮೀಣ ಸಮುದಾಯ ಮಟ್ಟದಲ್ಲಿ ಮತ್ತೆ ವಿನಿಮಯ ಪ್ರಾರಂಭವಾಗಬೇಕು.
ಆದರೆ ಗಾಂಧಿಯವರು ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲು ಒತ್ತಾಯಿಸುವುದಿಲ್ಲ. ಅದು ಭಾರತಕ್ಕೆ ಬಾರದಂತೆ ನಿಲ್ಲಿಸಲು ಹೇಳುವುದಿಲ್ಲ. ಬದಲಿಗೆ ಜನ ಸ್ವಯಂಪ್ರೇರಣೆಯಿಂದ ಅವುಗಳನ್ನು ಬಳಸುವುದನ್ನು ನಿಲ್ಲಿಸಬೇಕೆನ್ನುತ್ತಾರೆ. ಜನ ಒಮ್ಮೆ ವಿದೇಶಿ ವಸ್ತುಗಳನ್ನು ಕೊಳ್ಳುವುದನ್ನು ನಿಲ್ಲಿಸಿದರೆ ಸ್ಥಳೀಯ ಉತ್ಪನ್ನಗಳಿಗೆ ಮತ್ತೆ ಬೇಡಿಕೆ ಬರುತ್ತದೆ. ಮತ್ತೆ ಉದ್ಯೋಗ ಸೃಷ್ಟಿಯಾಗುತ್ತದೆ.
ಬಹುಶಃ ಗಾಂಧಿಯವರು ವಿದೇಶಿ ಸರಕನ್ನು ಕೊಳ್ಳದಿರುವುದನ್ನು, ನೆರೆಯವನಿಗೆ ಒಳ್ಳೆಯದನ್ನು ಬಯಸುವ ಒಂದು ನೈತಿಕ ಕ್ರಿಯೆಯಾಗಿ ಮಾತ್ರ ನೋಡುತ್ತಿಲ್ಲ. ಅವರ ದೃಷ್ಟಿಯಲ್ಲಿ ಸ್ಥಳೀಯ ಉತ್ಪನ್ನವನ್ನು ಕೊಳ್ಳುವುದು, ಸಾಮುದಾಯಿಕ ಬದುಕನ್ನು ಪುನರಾರಂಭಿಸುವ ಪ್ರಕ್ರಿಯೆ. ನಮ್ಮ ಮನಸ್ಸನ್ನು ಆಳವಾಗಿ ಆವರಿಸಿರುವ ವಸಾಹತೀಕರಣವನ್ನು ಅದರಿಂದ ಮೀರಿಕೊಳ್ಳಬಹುದು.
ಗಾಂಧಿ ಸ್ವದೇಶಿ ವಸ್ತುಗಳನ್ನು ಕೊಳ್ಳುವುದನ್ನು ಪರ್ಯಾಯ ಆರ್ಥಿಕ ಪ್ರಗತಿಯ ಕ್ರಮವಾಗಿ ಮಾತ್ರ ಸೂಚಿಸುತ್ತಿಲ್ಲ. ಅವರಿಗೆ ಅದು ಮನಸ್ಸನ್ನು ಆಕ್ರಮಿಸಿಕೊಂಡಿರುವ ವಸಾಹತೀಕರಣದ ಮನಸ್ಥಿತಿಯನ್ನು ತೆರವುಗೊಳಿಸುವ ಕ್ರಮವೂ ಆಗಿದೆ. ಸ್ಥಳೀಯ ಪದಾರ್ಥಗಳನ್ನು ಕೊಳ್ಳುವಾಗ ನೀವು ಕೇವಲ ಸರಕುಗಳನ್ನು ವಿನಿಮಯ ಮಾಡಿಕೊಳ್ಳುತ್ತಿಲ್ಲ. ಪ್ರೀತಿಯನ್ನು ವಿನಿಮಯ ಮಾಡಿಕೊಳ್ಳುತ್ತಾ ಇರುತ್ತೀರಿ. ಅಂತಹ ಅಂತಃಕರಣ ಗ್ರಾಮೀಣ ಸಮುದಾಯದ ಸೃಷ್ಟಿಗೆ ತುಂಬಾ ಆವಶ್ಯಕ.
ಕೆಳಗಿನ ಉಲ್ಲೇಖ ಅದನ್ನು ಸ್ಪಷ್ಟಪಡಿಸುತ್ತದೆ.
ಅಮೆರಿಕೆಯ ಗೋಧಿಯನ್ನು ಕೊಳ್ಳುವ ಪ್ರಕ್ರಿಯೆಯಲ್ಲಿ ನಮ್ಮ ನೆರೆಯ ಗೋಧಿ ಮಾರಾಟಗಾರನನ್ನು ಉಪವಾಸ ಬೀಳುವಂತೆ ಮಾಡುತ್ತಿರುತ್ತೇವೆ. ಅದು ಪಾಪ. ಹಾಗೆಯೇ ನನ್ನ ಪಕ್ಕದವನು ನೇಯ್ದ ಬಟ್ಟೆಯನ್ನು ಬಿಟ್ಟು ವಿದೇಶದ ರೀಜೆಂಟ್ ರಸ್ತೆಯಲ್ಲಿ ತಯಾರಾದ ನವಿರಾದ ಬಟ್ಟೆಯನ್ನು ಕೊಳ್ಳುವುದು ಮಹಾ ಪಾಪ. ನಾನು ನನ್ನ ನೆರೆಯವನು ತಯಾರಿಸಿದ ಬಟ್ಟೆಯನ್ನೇ ಧರಿಸಬಹುದಿತ್ತು. ಅದರಿಂದ ಅವನ ಹೊಟ್ಟೆ ತುಂಬುತ್ತಿತ್ತು. ನನ್ನ ಪಾಪದ ಅರಿವು ಆದ ಮೇಲೆ ನಾನು ವಿದೇಶಿ ಬಟ್ಟೆಯನ್ನು ಸುಟ್ಟು ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಮತ್ತು ಮುಂದೆ ನನ್ನ ನೆರೆಯವನು ತಯಾರಿಸಿದ ಖಾದಿಯಿಂದ ತೃಪ್ತನಾಗಬೇಕು.
ಗಾಂಧಿಯವರ ದೃಷ್ಟಿಯಲ್ಲಿ ಒಬ್ಬನ ಒಳಿತು ಅವನ ನೆರೆಯವನ ಒಳಿತಿನೊಂದಿಗೆ ತೆಕ್ಕೆ ಹಾಕಿಕೊಂಡಿರುತ್ತದೆ. ಜನರ ಒಳಿತು ಪರಸ್ಪರ ಅವಲಂಬಿತವಾಗಿದ್ದರೆ ಮಾತ್ರ ಜನರಲ್ಲಿ ಸಾಮುದಾಯಿಕ ಭಾವನೆ ಮೂಡುವುದಕ್ಕೆ ಸಾಧ್ಯ. ಹಾಗಾಗಿ ನೆರೆಯವರನ್ನು ಕುರಿತ ಅನುಕಂಪ ಸಾಮುದಾಯಿಕ ಭಾವನೆಯ ಭಾಗವಾಗಬೇಕು. ರವೀಂದ್ರನಾಥ ಟ್ಯಾಗೋರ್ ಹಾಗೂ ಗಾಂಧಿ ನಡುವಿನ ಚರ್ಚೆ ಈ ಬಗ್ಗೆ ಇನ್ನಷ್ಟು ಸ್ಪಷ್ಟತೆಯನ್ನು ನೀಡಬಹುದು. ಟ್ಯಾಗೋರ್ ಪ್ರಕಾರ ವಿದೇಶಿ ಬಟ್ಟೆಗಳು ಭಾರತದಲ್ಲಿ ನೇಯ್ದ ಬಟ್ಟೆಗಳಿಗಿಂತ ಉತ್ತಮ ಗುಣಮಟ್ಟದ ಬಟ್ಟೆಗಳು. ಹಾಗಾಗಿ ವಿದೇಶಿ ಬಟ್ಟೆಯನ್ನು ಕೊಳ್ಳುವುದು ಎಂದರೆ ರೈತರ ಜೀವನಮಟ್ಟ ಸುಧಾರಿಸಿದೆ ಎಂದರ್ಥ. ಜನರಿಗೆ ಸ್ಥಳೀಯರೇ ತಯಾರಿಸಿದ ಬಟ್ಟೆಗಳನ್ನೇ ಕೊಳ್ಳಿ ಅಂದರೆ ಅವರ ಒಳಿತನ್ನು ಕಡಿಮೆ ಮಾಡಿದಂತೆ. ಆದರೆ ಗಾಂಧೀಜಿಯ ಚಿಂತನಾ ಕ್ರಮವೇ ಬೇರೆ. ಅವರು ಟ್ಯಾಗೋರರ ಒಳಿತಿನ ಪರಿಕಲ್ಪನೆಯನ್ನೇ ತಿರಸ್ಕರಿಸುತ್ತಾರೆ. ಅವರ ದೃಷ್ಟಿಯಲ್ಲಿ ನೆರೆಯವನ ಒಳಿತನ್ನು ಗೌರವಿಸಿದಾಗ ಮಾತ್ರ ನನ್ನ ಒಳಿತಿಗೆ ಅರ್ಥ ಬರುತ್ತದೆ. ಹಾಗಾಗಿ ನನ್ನ ನೆರೆಯವನನ್ನು ಕಡೆಗಣಿಸಿ ನನ್ನ ಒಳಿತನ್ನು ಸುಧಾರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ವಿದೇಶದಲ್ಲಿ ತಯಾರಾದ ಬಟ್ಟೆ ಒಳ್ಳೆಯ ಗುಣಮಟ್ಟದ್ದೇ ಆಗಿದ್ದರೂ ನಾನು ಅದನ್ನು ಕೊಳ್ಳಬಾರದು. ಯಾಕೆಂದರೆ ಅದರಿಂದ ನೆರೆಯವನಿಗೆ ತೊಂದರೆಯಾಗುತ್ತದೆ.
ಹಾಗಾಗಿ ವಿದೇಶಿ ವಸ್ತುಗಳನ್ನು ಬಳಸಬೇಡಿ ಅನ್ನುವುದು ಕೇವಲ ಉದ್ಯೋಗಾವಕಾಶಕ್ಕಾಗಲಿ, ಬಡತನ ನಿರ್ಮೂಲನಕ್ಕಾಗಲಿ, ನೆರೆಯವನ ಬಗ್ಗೆ ಕರುಣೆಯಿಂದಾಗಲಿ ಮೂಡಿದ ಕಾರ್ಯಕ್ರಮವಲ್ಲ. ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರಲ್ಲಿ ಸಾಮುದಾಯಿಕ ಪ್ರಜ್ಞೆಯನ್ನು ಮೂಡಿಸುವ ಉದ್ದೇಶವೂ ಇದೆ. ಜನರ ವಸಾಹತೀಕರಣಗೊಂಡ ಮನಸ್ಸನ್ನು ಸ್ವತಂತ್ರಗೊಳಿಸುವುದು ಗಾಂಧೀಜಿಯವರ ಬಹುಮುಖ್ಯ ಉದ್ದೇಶ.
ಗ್ರಾಮ ಸ್ವರಾಜ್ಯ ಎನ್ನುವಾಗ ಗಾಂಧಿ ಹಿಂದಿನ ಯಾವುದೋ ಕಲ್ಪನೆಯ ಬಗ್ಗೆ ಮಾತನಾಡುತ್ತಿಲ್ಲ. ಅದು ರಾಷ್ಟ್ರ ನಿರ್ಮಾಣದ ಭಾಗವಾಗಿ ನಾವು ಕಟ್ಬಬೇಕಾದ ಕನಸಿನ ಗ್ರಾಮ. ಅದೊಂದು ಅಂತರಾಳಾವಲಂಬಿಯಾದ ಸಾಮುದಾಯಿಕ ಬದುಕು.
ತಂತ್ರಜ್ಞಾನ ಅನ್ನುವುದು ಅಂತಹ ಸಾಮುದಾಯಿಕ ಬದುಕಿಗೆ ಪೂರಕವಾಗಿ ಕೆಲಸ ಮಾಡಬೇಕು. ಮನುಷ್ಯ ಯಂತ್ರಗಳಿಗೆ ಅಡಿಯಾಳಾಗಿ ಕೆಲಸ ಮಾಡುವ ಪರಿಸ್ಥಿತಿ ಬರಬಾರದು. ತಂತ್ರಜ್ಞಾನ ನಮ್ಮನ್ನು ಆಳುವಂತಾಗಿಬಿಟ್ಟರೆ ನಿರುದ್ಯೋಗ ಹಾಗೂ ಬಡತನವನ್ನು ನಿವಾರಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ತಂತ್ರಜ್ಞಾನಕ್ಕೆ ಒಂದು ಮಿತಿ ಇರಬೇಕೆಂಬ ಗಾಂಧಿಯ ಹೇಳಿಕೆ ವಿವೇಕಯುತವಾದ ಸಲಹೆ.
ಒಂದು ಮಾತು ನೆನಪಿಡಿ, ವಿಜ್ಞಾನದ ಸತ್ಯಸೂತ್ರಗಳು, ಶೋಧನೆಗಳು ಲೋಭದ ಸಾಧನೆಗಳಾಗಬಾರದು. ಇದು ನಿಲ್ಲಬೇಕು. ಆಗ ಕೂಲಿಗಾರರಿಗೆ ಈ ಅತಿ ದುಡಿ ತಪ್ಪೀತು; ಯಂತ್ರ ಪ್ರತಿಕೂಲವಾಗುವ ಬದಲು ಅನುಕೂಲವಾದೀತು. ಯಂತ್ರವೆಂಬುದೇ ಹಾಳಾಗಲಿ ಎಂಬುದಲ್ಲ ನನ್ನ ಗುರಿ, ಅದಕ್ಕೊಂದು ಪರಿಮಿತಿಯಿರಲಿ ಎಂಬುದು.
ಅದು ಇಂದಿಗೂ ನಮಗೆ ಅತ್ಯಂತ ಪ್ರಸ್ತುತವಾದ ವಿಚಾರ.