Light
Dark

ಕಡಲೂರ ಕತ್ತಲೆಯ ಸರಿಸಲು ಮಾನವತೆಯ ಬೆಳ್ಳಿ ಮಿಂಚು ಹರಿಯಲಿ

ಶಿವಪ್ರಸಾದ್ ಜಿ

‘ಅಲ್ಲಲ್ಲೇ ಇರುವ ವಿವೇಕ, ವಿವೇಚನಾಶಾಲಿಗಳು ಈಗಲಾದರೂ ಸರಿತಪ್ಪುಗಳನ್ನು ಮಾತಾಡಬೇಕಾಗಿದೆ. ಪ್ರೀತಿ, ಸಹನೆ, ನ್ಯಾಯ ಇತ್ಯಾದಿ ಮಾತುಗಳು ಸಮಾಜದ ಒಳಗಿಂದಲೇ ಕೇಳಬೇಕಾಗಿದೆ…’ ಈ ಸಾಲುಗಳು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಬರೆದಿರುವ ಆರ್‌ಎಸ್‌ಎಸ್ ಆಳ ಮತ್ತು ಅಗಲ ಕೃತಿಯವು. ಈಗ ರಾಜ್ಯದಲ್ಲಿ ನಡೆಯುತ್ತಿರುವ ಕೊಲೆಗಳ ಹಿನ್ನೆಲೆಯ ಬಗ್ಗೆ ಚಿಂತಿಸುವಾಗ, ದೇವನೂರರ ಆಶಯದ ಮಾತುಗಳು, ಮಾನವತೆಯ ಸಮಾಜದ ಸ್ಥಾಪನೆಗೆ ಅಕ್ಷರಶಃ ಅತ್ಯಗತ್ಯವಾಗಿವೆ.

ಇಲ್ಲಿ ಗೆಳೆಯನೊಬ್ಬ ನನ್ನೊಂದಿಗೆ ಹಂಚಿಕೊಂಡ ಪ್ರಸಂಗವೊಂದನ್ನು ಪ್ರಸ್ತಾಪಿಸಲು ಬಯಸುತ್ತೇನೆ. ಶನಿವಾರ (ಜು.೩೦) ಬೆಳಿಗ್ಗೆ ಹೋಟೆಲ್‌ವೊಂದರಲ್ಲಿ ವ್ಯಕ್ತಿಯೊಬ್ಬರು ಎರಡು ಬಗೆಯ ತಿಂಡಿಗಳನ್ನು ಪಾರ್ಸೆಲ್ ಕೊಡಲು ಹೇಳಿದ್ದರು. ಹೋಟೆಲಿನ ಸಿಬ್ಬಂದಿ ಆ ತಿಂಡಿಗಳನ್ನು ಪಾರ್ಸೆಲ್ ಮಾಡಿದ ೨ ಪೊಟ್ಟಣಗಳನ್ನು ಸಮೀಪದಲ್ಲೇ ಇದ್ದ ಟೇಬಲ್ ಮೇಲಿಟ್ಟು ತೆಗೆದುಕೊಳ್ಳಿ ಎಂದು ಆ ಗ್ರಾಹಕರಿಗೆ ಹೇಳಿ, ತಮ್ಮ ಕೆಲಸದಲ್ಲಿ ನಿರತರಾದರು.
ಆದರೆ, ಗ್ರಾಹಕ ಒಂದೇ ಕೈಯಲ್ಲಿ ಆ ಎರಡೂ ಪೊಟ್ಟಣಗಳನ್ನು ಅದೇ ಕೈಯಲ್ಲಿ ಹಿಡಿದಿದ್ದ ಬ್ಯಾಗ್ಗೆ ಹಾಕಲು ಪ್ರಯತ್ನಿಸುತ್ತಿದ್ದರು. ಇನ್ನೊಂದು ಕೈಗೆ ಬ್ಯಾಂಡೇಜ್ ಕಟ್ಟಲಾಗಿತ್ತು. ಅದನ್ನು ನೋಡಿದ ಸಮೀಪದಲ್ಲೇ ನಿಂತಿದ್ದ ಮತ್ತೊಬ್ಬ ಗ್ರಾಹಕ, ಇರಿ ಸರ್, ನಾನು ತಿಂಡಿಯನ್ನು ಬ್ಯಾಗ್ಗೆ ಹಾಕುತ್ತೇನೆ ಎಂದು ಕೈಗೆ ಬ್ಯಾಂಡೇಜ್ ಹಾಕಿಕೊಂಡಿದ್ದ ವ್ಯಕ್ತಿಯ ಬ್ಯಾಗ್ಗೆ ಹಾಕಿದನು. ಸಹಾಯ ಪಡೆದ ವ್ಯಕ್ತಿ ಥ್ಯಾಂಕ್ಸ್ ಎಂದರು. ಸಹಾಯ ಮಾಡಿದವನೂ ಪರವಾಗಿಲ್ಲ ಎಂದನು. ಇಲ್ಲಿ ಸಹಾಯ ಮಾಡಿದವನು ನನ್ನ ಗೆಳೆಯ.

ಮುಂದುವರಿದು ಆ ಗೆಳೆಯ ಹೇಳಿದ, ನಾನು ಸಹಾಯ ಮಾಡಿದ್ದು ಮುಸ್ಲಿಮ್ ಸಮುದಾಯದ ವ್ಯಕ್ತಿಗೆ. ಕೊನೆಯಲ್ಲಿ ಆತನ ಮುಖನೋಡಿದಾಗ ಅದು ಗೊತ್ತಾಯಿತು. ಮರುಕ್ಷಣದಲ್ಲೇ ನನ್ನೊಳಗೊಂದು ಆತಂಕದ ಗೆರೆ ಮೂಡಿ ಮರೆಯಾಯಿತು. ಒಂದು ವೇಳೆ ಈ ಪ್ರಸಂಗವನ್ನು ಹಿಂದೂ ಅಥವಾ ಇಸ್ಲಾಂ ಮತಾಂಧ ವ್ಯಕ್ತಿ ಗಮನಿಸಿದ್ದರೆ, ರಕ್ತಪಾತವಾಗುತ್ತಿತ್ತೇನೋ ಅಂತ ಎಂದನು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ೧೦ ದಿನಗಳ ಅವಧಿಯಲ್ಲಿ ಮೂವರು ಯುವಕರ ಕೊಲೆಯಾಗಿದೆ. ಕಡಲೂರಿನಲ್ಲಿ ರಕ್ತಚರಿತ್ರೆಯ ಅಟಾಟೋಪ ಮೆರೆದಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಧರ್ಮ, ಜಾತಿ, ಮತಗಳನ್ನು ಮೀರಿ ಪರಸ್ಪರ ಸಹಾಯ ಮಾಡುವುದು ಅಪಾಯಕ್ಕೆ ಆಹ್ವಾನ ನೀಡುತ್ತದೆಯೇ ಎಂಬ ಭಯ ಮೂಡಿರುವುದು ಸಹಜ ಅನಿಸುತ್ತದೆ. ಆದರೆ, ಮೇಲಿನ ಘಟನೆಯಿಂದ ಒಂದು ಖಚಿತವಾಗಿದೆ. ಅದೆಂದರೆ ‘ಮನುಷ್ಯತ್ವ ಸತ್ತಿಲ್ಲ’.
ಸಂವಿಧಾನದ ‘ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ’ದ ಪ್ರಸ್ತಾವನೆ ಸಾರ್ವಕಾಲಿಕ ಸತ್ಯ ಎಂಬುದು ಸಾಬೀತಾಗಿದೆ.

ಕಳೆದ ಫೆಬ್ರವರಿಯಲ್ಲಿ ಶಿವಮೊಗ್ಗದಲ್ಲಿ ಬಜರಂಗದಳದ ಹರ್ಷನ ಕೊಲೆ ನಡೆದಾಗ ತಲೆಯೆತ್ತಿದ ಕೋಮು ದಳ್ಳುರಿ, ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಟ್ಟಹಾಸ ಮಾಡಿದಂತಿದೆ. ಇದನ್ನು ‘ಯಾರ ಕ್ರಿಯೆಗೆ ಯಾರ ಪ್ರತಿಕ್ರಿಯೆ’ ಎಂದು ವರ್ಣಿಸಬೇಕು? ಬಲ್ಲವರೇ ಹೇಳಬೇಕು.

ಯಾವ ಧರ್ಮವೂ ರಕ್ತಪಾತವನ್ನು ಬಯಸುವುದಿಲ್ಲ. ಹಾಗೊಂದು ವೇಳೆ ರಕ್ತ ಅಥವಾ ಪ್ರಾಣವನ್ನು ಕೇಳುವುದಾದರೆ ಅದು ಧರ್ಮವೆನಿಸಿಕೊಳ್ಳುವುದು ಅಸಾಧ್ಯ. ಪ್ರತಿಷ್ಠೆ, ಪದವಿ, ಸ್ವೇಚ್ಛೆಗಾಗಿ ಹಪಹಪಿಸುವ ಅಮಾನುಷರು ಮಾತ್ರವೇ ಧರ್ಮಕ್ಕೆ ಅಪಮಾನವಾಗಿದೆ ಎಂಬ ನೆಪದಲ್ಲಿ ಮನುಷ್ಯರ ಜೀವಗಳನ್ನೇ ತೆಗೆಯಲು ಮುಂದಾಗುತ್ತಾರೆ. ಇಂತಹವನ್ನು ‘ಧರ್ಮಗೇಡು’ ಕೊಲೆಗಳು ಎನ್ನಬಹುದು. ನಿಜವಾಗಿ ಇಂತಹ ಮಾರಣಹೋಮವೇ ಧರ್ಮಗಳನ್ನು ಅವಹೇಳನೆಗೆ ಗುರಿಯಾಗಿಸುತ್ತದೆ ಎಂಬುದನ್ನು ಎಲ್ಲ ಧರ್ಮೀಯರೂ ಅರಿಯಬೇಕು.

ಜು.೧೯ರಂದು ಮಸೂದ್, ೨೬ರಂದು ಪ್ರವೀಣ್ ನೆಟ್ಟಾರು ಮತ್ತು ೨೮ರಂದು ಫಾಜಿಲ್ ಕೊಲೆಯಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಪ್ರವೀಣ್ ಅವರ ಕುಟುಂಬವನ್ನು ಭೇಟಿಯಾಗಿ, ಪರಿಹಾರವನ್ನೂ ನೀಡಿದ್ದಾರೆ. ಹಿಂದೆ ಹರ್ಷ ಕೊಲೆಯಾದಾಗಲೂ ರಾಜ್ಯ ಸರ್ಕಾರ ಇದೇ ರೀತಿ ನಡೆದುಕೊಂಡಿತ್ತು. ಆ ಮಾನವೀಯ ಕಾಳಜಿಯನ್ನು ಯಾರೂ ಪ್ರಶ್ನಿಸಬಾರದು. ಆದರೆ, ಪ್ರವೀಣ್ಗಿಂತ ಮುಂಚೆ ಕೊಲೆಯಾದ ಮಸೂದ್ ಮತ್ತು ನಂತರ ಹಂತಕರಿಂದ ಪ್ರಾಣಕಳೆದುಕೊಂಡ ಫಾಜಿಲ್ ಕುಟುಂಬದವರನ್ನು ಏಕೆ ಭೇಟಿಯಾಗಲಿಲ್ಲ ಎಂಬುದಕ್ಕೆ ವಿಪಕ್ಷಗಳು ಕಾರಣ ಕೇಳುತ್ತಿವೆ. ಮುಖ್ಯಮಂತ್ರಿಗಳ ನಡೆ ‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’ ಎಂಬ ಗಾದೆಯನ್ನು ನೆನಪು ಮಾಡುತ್ತದೆ.

ಹಿಂದೂಗಳಲ್ಲದ ಮಸೂದ್ ಮತ್ತು ಫಾಜಿಲ್ ಕೊಲೆಯಾದಾಗ, ಅವರ ದೇಹದಿಂದ ಹರಿದ ರಕ್ತವು ಕೆಂಪುಬಣ್ಣವೇ ಆಗಿತ್ತು. ಹಿಂದೂವೇ ಆದ ಪ್ರವೀಣ್ ಕೊಲೆಯಾದಾಗಲೂ ಅದೇ ಬಣ್ಣದ ರಕ್ತದ ಚೆಲ್ಲಿತ್ತು. ಯಾರದೋ ಮತಾಂಧತೆಗೋ, ದ್ವೇಷಕ್ಕೋ ಜೀವ ಕಳೆದುಕೊಂಡ ಈ ಮೂವರು ಯುವಕರ ಕುಟುಂಬಗಳವರಿಗೆ ಮಾತ್ರ ಒಂದೇ ರೀತಿಯ ನೋವು, ಹತಾಶೆ ಆಗಿರುವುದರಲ್ಲಿ ಸಂಶಯ ಇಲ್ಲ. ಏಕೆಂದರೆ ಎಲ್ಲರೂ ಮನುಷ್ಯರೇ, ಶರೀರಗಳ ಆಕಾರ, ಬಣ್ಣ, ಭಾವನೆಗಳೂ ಬೇರೆ ಬೇರೆ ಇರಬಹುದು ಅಷ್ಟೆ. ಆದರೆ, ಭಾರತದ ವೈಶಿಷ್ಟ್ಯವಾದ ಬಹುತ್ವವನ್ನು ಸಾರಬೇಕಾದ ಸರ್ಕಾರದ ಹುರಿಯಾಳುಗಳು ಒತ್ತಡಗಳಿಗೆ ಸೋತು, ಸಮಾಜದಲ್ಲಿ ವಿಕ್ಷಿಪ್ತತೆಯ ಬಿತ್ತನೆಗೆ ಹೊರಟಂತಿದೆ.

ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ವಿರೋಧಪಕ್ಷಗಳ ಜವಾಬ್ದಾರಿಯೂ ಗುರುತರವಾಗಿದೆ. ಮುಖ್ಯಮಂತ್ರಿ, ಸಚಿವರನ್ನು ಟೀಕಿಸುವುದು ಮಾತ್ರವೇ ಆ ಪಕ್ಷಗಳ ನಾಯಕರ ಕೆಲಸವಲ್ಲ ಎಂಬುದನ್ನು ನೆನಪಿಸುವುದು ಅನಿವಾರ್ಯವಾಗಿದೆ. ಇವರು ಸತ್ತ ಯುವಕರ ಕುಟುಂಬಗಳಿಗೆ ಸಾಂತ್ವನ ಹೇಳಬೇಕಾಗಿದೆ. ಉಭಯ ಸಮುದಾಯಗಳ ಕುಟುಂಬಗಳನ್ನೂ ಭೇಟಿ ಮಾಡಿ, ನೈತಿಕ ಸ್ಥೈರ್ಯ ತುಂಬಬೇಕಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಅದಕ್ಕೆ ಕಾನೂನು ಸುವ್ಯವಸ್ಥೆಯ ಅಡ್ಡಿ ಬರಬಹುದು. ಆದರೆ, ಎಲ್ಲವೂ ಶಾಂತವಾದಾಗ ಪ್ರತಿಪಕ್ಷಗಳ ನಾಯಕರು ಮರೆಯದೆ ಕೊಲೆಯಾದ ಯುವಕರ ಮನೆಗೆ ಭೇಟಿ ನೀಡಬೇಕಾಗುತ್ತದೆ. ಅಷ್ಟಲ್ಲದೆ, ಇಂತಹ ಅಮಾನವೀಯ ಸನ್ನಿವೇಶವನ್ನು ರಾಜಕೀಯ ಲಾಭಕ್ಕಾಗಿ ಯಾರೂ ಬಳಸಬಾರದು.

ರಾಜ್ಯದ ಅನೇಕ ಕಡೆಗಳಲ್ಲಿ ಹಿಂದೂ, ಮುಸ್ಲಿಮ್ ಸಮುದಾಯಗಳು ಸೌಹಾರ್ದತೆಯಿಂದ, ಪರಸ್ಪರ ಸಹಕಾರದಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ, ಎಲ್ಲೋ ಬೆರಳೆಣಿಕೆಯ ಮತಾಂಧತೆ ಕಾರಣದ ಕರಾಳ ಕೃತ್ಯಗಳು ಎರಡೂ ಸಮುದಾಯಗಳ ಜನರ ಜೀವ- ಜೀವನವನ್ನು ನಾಶ ಮಾಡುತ್ತದೆ. ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು ಜನಪ್ರತಿನಿಧಿಗಳು ಆಡಳಿತದಲ್ಲಿ, ಸಾರ್ವಜನಿಕರು ಬದುಕಿನಲ್ಲಿ ಅಳವಡಿಸಿಕೊಳ್ಳುವ ತುರ್ತು ಹೆಚ್ಚಾಗಿದೆ. ಇಲ್ಲಿ ಯಾರನ್ನೂ ಯಾರೂ ಕಾಪಾಡುವುದಿಲ್ಲ. ನಮ್ಮ ಬದುಕಿಗೆ ನಾವೇ ಬೆಳಕಾಗಬೇಕು. ಅದರ ಜೊತೆಗೆ ಮಾನವೀಯ ಮನಸ್ಸುಗಳು ನಾಡಿನ ಕೋಮುವಾದ, ಮತಾಂಧತೆ, ಭ್ರಷ್ಟಾಚಾರದಂತಹ ವಿನಾಶಕಾರಿ ಶಕ್ತಿಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪ್ರಜ್ವಲಿಸುವ ಜ್ವಾಲೆಗಳಾಗಬೇಕು.

ರಾಜ್ಯ ಅಥವಾ ದೇಶದಲ್ಲಿ ಇರುವುದು ಹಿಂದೂ ಮತ್ತು ಇಸ್ಲಾಂ ಧರ್ಮಗಳಷ್ಟೇ ಅಲ್ಲ. ಬೌದ್ಧ, ಜೈನ, ಕ್ರಿಶ್ಚಿಯನ್, ವೀರಶೈವ, ಸಿಖ್ ಇತ್ಯಾದಿ ಧಮರ್ಗಳೂ ಇವೆ. ಆದರೆ, ಹಿಂದೂ, ಮುಸ್ಲಿಮ್ ಧರ್ಮಗಳ ನಡುವೆಯೇ ಇಂತಹ ಅನುಮಾನ, ಸಂಘರ್ಷ ಏಕೆ ಎಂಬುದು ಅರ್ಥವಾಗದು. ಎಲ್ಲ ಧರ್ಮಗಳವರೂ ಅವರವರ ನಂಬಿಕೆಯಂತೆ ಬದುಕಲು ಬಿಟ್ಟರೆ ತೊಂದರೆ ಯಾರಿಗೆ? ಸ್ವೇಚ್ಛಾಚಾರ, ಎಲ್ಲೆ ಮೀರಿದ ಸ್ವಾತಂತ್ರ್ಯಗಳಿಗೆ ಕಡಿವಾಣ ಹಾಕುವುದಕ್ಕೆ ಸಂವಿಧಾನ ಇದೆ. ಅದರಲ್ಲಿರುವ ಕಾನೂನುಗಳನ್ನು ಸರ್ಕಾರಗಳು ಸಮರ್ಪಕವಾಗಿ ಜಾರಿಗೆ ತಂದರೆ ಸಾಕು.
ಪ್ರಸ್ತುತ ರಾಜ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಬ್ಯಾಬಿಲೋನಿಯಾದ ರಾಜ ಹಮ್ಮುರಬಿ ಆಡಳಿತ ಕಾಲದಲ್ಲಿದ್ದೇವೆಯೇ ಎಂಬ ಆತಂಕ ಮೂಡುತ್ತದೆ. ಹಮ್ಮುರಬಿ ಆಡಳಿತವೆಂದರೆ, ‘ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ, ಪ್ರಾಣಕ್ಕೆ ಪ್ರಾಣ’ ಎಂಬ ಕಾನೂನು ಜಾರಿಯಲ್ಲಿತ್ತು ಎಂದು ಇತಿಹಾಸ ಹೇಳುತ್ತದೆ. ಆದರೆ, ನಮ್ಮದು ಸರ್ವಾಧಿಕಾರದ ಆಡಳಿತ ಅಲ್ಲ. ಪ್ರಜಾಪ್ರಭುತ್ವ ಆಡಳಿತ ಎಂಬುದನ್ನು ಯಾರೂ ಮರೆಯಬಾರದು.

ದೇವನೂರರು, ಆರ್‌ಎಸ್‌ಎಸ್ ಆಳ ಮತ್ತು ಅಗಲ ಕೃತಿಯಲ್ಲಿ ಹೇಳಿರುವ ಮತ್ತೊಂದು ಮಾತನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಅದೆಂದರೆ, ಆದಿವಾಸಿಗಳಾದಿಯಾಗಿ ಬ್ರಾಹ್ಮಣ ಸಮುದಾಯವನ್ನೂ ಒಳಗೊಂಡಂತೆ ಮಾನವೀಯ ಹಿಂದೂ ಸಮಾಜ ಕ್ರಿಯಾಶೀಲವಾಗಬೇಕಿದೆ. ಏಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆಗಳು ಮತ್ತು ಅವನ್ನು ನಿಯಂತ್ರಿಸಲು ಇರುವ ದಾರಿಗಳ ಪೈಕಿ ಇದೂ ಒಂದಾಗಿದೆ ಅನಿಸುತ್ತದೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ