Mysore
23
scattered clouds
Light
Dark

 ಕೊಡಗಿನ ಶಿಥಿಲಾವಸ್ಥೆಯಲ್ಲಿರುವ ಎಲ್ಲಾ ತೂಗು ಸೇತುವೆಗಳು ದುರಸ್ತಿಯಾಗಲಿ

ಇತ್ತೀಚಿಗೆ ನಡೆದ ಗುಜರಾತ್‌ನ ಮೊರ್ಬಿ ಸೇತುವೆ ಅವಘಡದಿಂದ ೧೩೫ ಮಂದಿ ಮೃತಪಟ್ಟು, ಹಲವರು ಗಾಯಗೊಂಡ ದುರಂತದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ರುವ ತೂಗು ಸೇತುವೆಗಳು ಬಳಕೆಗೆ ಅರ್ಹವಾಗಿವೆಯೇ ಎಂಬುದನ್ನು ಪರಿಶೀಲನೆ ನಡೆಸಿ ವರದಿ ನೀಡಲು ಆದೇಶ ನೀಡಿದೆ. ಈ ಹಿನ್ನಲೆ ಪರಿಶೀಲನೆ ವೇಳೆ ಕುಶಾಲನಗರದ ಕಾವೇರಿ ನಿಸರ್ಗಧಾಮದ ತೂಗು ಸೇತುವೆಯು ಬಳಕೆಗೆ ಯೋಗ್ಯವಿಲ್ಲ ಎಂದು ತಂತ್ರಜ್ಞರು ವರದಿ ನೀಡಿದ್ದಾರೆ. ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ನಿಸರ್ಗಧಾಮದ ಒಳ ಪ್ರವೇಶಿಸಿಸಲು ತೂಗು ಸೇತುವೆ ಮೂಲಕವೇ ತೆರಳಬೇಕಾಗಿರುವುದರಿಂದ ಸದ್ಯ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

ಕಾವೇರಿ ನಿಸರ್ಗಧಾಮದ ಸೇತುವೆ ೧೯೯೫ರಲ್ಲಿ ನಿರ್ಮಾಣವಾಗಿದ್ದು, ೨೭ ವರ್ಷ ಹಳೆಯ ಸೇತುವೆಯಾಗಿದೆ. ಪ್ರವಾಹದಿಂದ ತೂಗು ಸೇತುವೆ ಶಿಥಿಲವಾಗಿದೆ ಎಂದು ತಂತ್ರಜ್ಞರು ಮಾಹಿತಿ ನೀಡಿದ್ದು, ಸೇತುವೆಯ ರೋಬ್ ಹಾಗೂ ಕಬ್ಬಿಣದ ಸಲಕರಣೆಗಳನ್ನು ಬದಲಾಯಿಸುವಂತೆ ತಿಳಿಸಿದ್ದಾರೆ. ತೂಗು ಸೇತುವೆಯ ದುರಸ್ತಿಗೆ ೩೫ ರಿಂದ ೪೦ ಲಕ್ಷ ರೂ ಗಳ ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದೆ. ತೂಗು ಸೇತುವೆಯ ರೋಬನ್ನು ಕೊರಿಯಾದಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ದುರಸ್ತಿ ಕಾರ್ಯಕ್ಕೆ ಎರಡು ತಿಂಗಳು ಕಾಲಾವಕಾಶ ಬೇಕಾಗಿದೆ ಎಂದು ಹೇಳಲಾಗಿದೆ.

ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕಾವೇರಿ ನಿಸರ್ಗಧಾಮದ ತೂಗು ಸೇತುವೆ ದುರಸ್ಥಿ ಕಾರ್ಯ ಸ್ವಾಗತಾರ್ಹವಾಗಿದೆ. ಆದರೆ, ಶಿಥಿಲಾವಸ್ಥೆಯಲ್ಲಿರುವ ಹಲವು ತೂಗು ಸೇತುವೆಗಳು ಜಿಲ್ಲೆಯಲ್ಲಿವೆ. ಆದಾಯದ ದೃಷ್ಟಿಯನ್ನಿಟ್ಟುಕೊಂಡು ನಿಸರ್ಗಧಾಮ ಸೇತುವೆಯೊಂದರ ದುರಸ್ಥಿಗೆ ಮಾತ್ರ ಸೀಮಿತಗೊಳಿಸದೆ, ಸ್ಥಳೀಯರ ಅನುಕೂಲಕ್ಕಾಗಿ ನಿರ್ಮಾಣಗೊಂಡಿರುವ ತೂಗು ಸೇತುವೆಗಳ ದುರಸ್ಥಿಯೂ ಆಗಬೇಕಿದೆ.

ಪ್ರಮುಖವಾಗಿ ಪ್ರವಾಸಿ ತಾಣದಲ್ಲೇ ಇರುವ ಅಬ್ಬಿ ಜಲಪಾತದ ತೂಗು ಸೇತುವೆ ಶಿಥಿಲಗೊಂಡು ೫-೬ ವರ್ಷ ಕಳೆದರೂ ದುರಸ್ತಿಗೊಳಿಸಿಲ್ಲ. ಬದಲಾಗಿ ಪ್ರವಾಸಿಗರಿಗೆ ಸೇತುವೆ ಮೇಲೆ ತೆರಳದಂತೆ ತಂತಿ ಬೇಲಿಯನ್ನು ನಿರ್ಮಿಸಿ ಪ್ರವೇಶ ನಿರ್ಬಂಧಿಸಲಾಗಿದೆ. ಆದರೂ ಪ್ರವಾಸಿಗರು ಶಿಥಿಲಗೊಂಡಿರುವ ತೂಗು ಸೇತುವೆ ಮೇಲೆ ತೆರಳುತ್ತಿದ್ದು, ಅಪಾಯ ಸಂಭವಿಸುವ ಭೀತಿಯೂ ಎದುರಾಗಿದೆ.

ಕೊಡಗಿನಲ್ಲಿರುವ ಬಹುತೇಕ ತೂಗು ಸೇತುವೆಗಳು ಎರಡು ದಶಕಗಳಿಂದ ನಿರ್ವಹಣೆ ಕಾಣದೆ ಜೀರ್ಣಾವಸ್ಥೆಯಲ್ಲಿವೆ. ಗುಜರಾತಿನ ಮಾರ್ಬಿಯಲ್ಲಿ ತೂಗು ಸೇತುವೆ ಕುಸಿದು ಭೀಕರ ದುರಂತ ಸಂಭವಿಸಿದ ಬೆನ್ನಲ್ಲೇ, ಕೊಡಗಿ ಸೇತುವೆಗಳ ಸ್ಥಿತಿ ಗತಿಯ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ. ತೂಗು ಸೇತುವೆಗಳನ್ನು ೨೦ ವರ್ಷಗಳ ಹಿಂದೆ ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಮತ್ತು ಕೊಡಗು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ವಿಭಾಗ, ನಿರ್ಮಿತಿ ಕೇಂದ್ರ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ನಿರ್ಮಿಸಲಾಗಿದೆ.

ಗ್ರಾಮೀಣ ಭಾಗದ ಜನರ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಪರಿಹಾರ ಎಂದು ಯೋಜನೆ ರೂಪಿಸಲಾಯಿತು. ಆದರೆ, ನಿರ್ವಹಣೆಯನ್ನು ಸರಕಾರವೇ ಮಾಡಬೇಕು ಎಂದು ಆಯಾ ಗ್ರಾ.ಪಂ.ಗಳಿಗೆ ಜವಾಬ್ದಾರಿ ಹಸ್ತಾಂತರಿಸಲಾಗಿದೆ. ಇದುವರೆಗೂ ಸೇತುವೆ ನಿರ್ವಹಣೆ ಮಾಡದ್ದರಿಂದ ಸದ್ಯ ಇರುವ ಸೇತುವೆಗಳು ಶಿಥಿಲಾವಸ್ಥೆಗೆ ತಲುಪಿವೆ. ತೂಗು ಸೇತುವೆಯ ತಳಗಳು ತುಕ್ಕು ಹಿಡಿದಿದ್ದು, ಲಿಂಕ್‌ಗಳು ಅಲ್ಲಲ್ಲಿ ಮುರಿದಿವೆ. ಇದರಿಂದ ಪ್ರತಿ ದಿನ ಸೇತುವೆ ಮೇಲೆ ಓಡಾಡುವ ಜನ ಜೀವ ಭಯದಲ್ಲೇ ಸಂಚರಿಸಬೇಕಿದೆ.

ಭಾಗಮಂಡಲ ತಾವೂರು ಗ್ರಾಮದಲ್ಲಿ ೧೯೯೭ರಲ್ಲಿ ತೂಗು ಸೇತುವೆ ನಿರ್ಮಿಸಿ ೨೫ ವರ್ಷಗಳು ಸಂದಿದೆ. ನಿರ್ವಹಣೆ ಮಾತ್ರ ಇಲ್ಲ. ಇಂದಿಗೂ ಜನರು ತಾವೂರು ಭಾಗದಿಂದ ಕೋರಂಗಾಲಕ್ಕೆ ತೆರಳಲು ಈ ಸೇತುವೆ ಬಳಸುತ್ತಾರೆ. ಐಟಿಐ ಕಾಲೇಜು, ಕಾವೇರಿ ಕಾಲೇಜು, ವಾಜಪೇಯಿ ವಸತಿ ಶಾಲೆ, ಅಂಬೇಡ್ಕರ್ ವಸತಿ ಶಾಲೆ, ಕಾವೇರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸೇತುವ ಮೇಲೆ ಸಂಚರಿಸುತ್ತಾರೆ.

೨೦೦೮ರಲ್ಲಿ ಕದನೂರು ಪಂಚಾಯಿತಿ ವ್ಯಾಪ್ತಿಯ ಮೈತಾಡಿ ಗ್ರಾಮದಲ್ಲಿ ತೂಗು ಸೇತುವೆ ನಿರ್ಮಾಣವಾಗಿದೆ. ೨೦೧೧ರಲ್ಲಿ ಕಣಿವೆ ರಾಮಲಿಂಗೇಶ್ವರ ಸನ್ನಿಧಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಲಾಗಿದೆ. ಮಕ್ಕಂದೂರು ವ್ಯಾಪ್ತಿಯಲ್ಲಿ ನಾಲ್ಕು ತೂಗು ಸೇತುವೆಗಳಿವೆ. ಶಿವನಕಟ್ಟೆ, ಟಿ. ಶೆಟ್ಟಿಗೇರಿಯ ವೆಸ್ಟ್ ನಮ್ಮಲೆ, ಕೊಯನಾಡು, ಕಣಿವೆ, ಕರಿಕೆಯ ಪರಂಗಾಯ ಮತ್ತಿತರ ಭಾಗಗಳಲ್ಲಿ ತೂಗು ಸೇತುವೆಗಳು ನಿರ್ಮಾಣವಾಗಿವೆ.

ಬಹುತೇಕ ತೂಗು ಸೇತುವೆಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಎಲ್ಲಾ ತೂಗು ಸೇತುವೆಗಳ ದುರಸ್ತಿ ಕಾರ್ಯವನ್ನು ಸರ್ಕಾರ ಮಾಡಬೇಕಿದೆ. ಆ ಮೂಲಕ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಬೇಕಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ