Light
Dark

ಜಾಗೇರಿ ಭೂ ಒತ್ತುವರಿ ವಿವಾದ ; ರೈತರಿಗೆ ಅನ್ಯಾಯವಾಗದಂತೆ ಪರಿಹರಿಸಲಿ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಮೀಸಲು ಅರಣ್ಯ ಪ್ರದೇಶದ ಸುತ್ತಲಿನ ಗ್ರಾಮಗಳ ಜನರು ಮತ್ತು ಅರಣ್ಯ ಇಲಾಖೆಯ ನಡುವೆ ಭೂಮಿಗಾಗಿ ನಡೆಯುತ್ತಿದ್ದ ಜಟಾಪಟಿ ಕಳೆದ ೧೫ ದಿನಗಳಿಂದ ತಾರಕಕ್ಕೆ ಏರಿದೆ. ರೈತಸಂಘದ ಜೊತೆಗೂಡಿ ಬೂದಗಟ್ಟದೊಡ್ಡಿ ಗ್ರಾಮದ ಜನರು ಭೂಮಿಗಾಗಿ ಹೋರಾಟ ಶುರು ಮಾಡಿದ್ದಾರೆ. ನಾವು ವ್ಯವಸಾಯ ಮಾಡುತ್ತಿದ್ದ ಭೂಮಿಯನ್ನು ನಮ್ಮದೇ ಎಂದು ಪಟ್ಟು ಹಿಡಿದ್ದಾರೆ. ರೈತರು ಒತ್ತುವರಿ ಮಾಡಿದ್ದ ಜಾಗೇರಿ ಮೀಸಲು ಅರಣ್ಯ ಭೂಮಿಯನ್ನು ನಾವು ವಶಪಡಿಸಿಕೊಂಡಿದ್ದೇವೆ ಭೂಮಿ ನಮ್ಮದು ಎಂದು ಅರಣ್ಯ ಇಲಾಖೆಯು ಹಠಕ್ಕೆ ಬಿದ್ದಿದೆ. ನಾವು ೬೦ ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬಂದಿರುವ ಭೂಮಿಯನ್ನು ಈಗ ಮೀಸಲು ಅರಣ್ಯ ಭೂಮಿ ಎಂದರೆ ನಾವು ಎಲ್ಲಿಗೆ ಹೋಗಬೇಕು. ಬದುಕು ನಡೆಸುವುದಾದರೂ ಹೇಗೆಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕೊಳ್ಳೇಗಾಲ ಪಟ್ಟಣದ ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಬೂದಗಟ್ಟದೊಡ್ಡಿ ಗ್ರಾಮದ ವೆಂಕಟರಾಮಬೋವಿ, ಚಂದ್ರಬೋವಿ, ಬಸವರಾಜು ಸೇರಿದಂತೆ ನಾಲ್ವರು ರೈತರ ೧೭ ಎಕರೆ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದ ಕಾರಣ ೨ ವಾರದಿಂದ ಹೋರಾಟ ನಡೆಯುತ್ತಿದೆ. ಕಾವೇರಿ ನದಿಯು ಭರಚುಕ್ಕಿಯಲ್ಲಿ ಧುಮ್ಮಿಕ್ಕಿ ಹರಿದು ಮುಂದೆ ಸಾಗುತ್ತದೆ. ಇದರ ಹಿಂಭಾಗದ ಸರ್ವೆ ಸಂಖ್ಯೆ ೧೭೪ ರಲ್ಲಿರುವ ೧೨೭೬೦ ಎಕರೆ ಪ್ರದೇಶವನ್ನು ಜಾಗೇರಿ ಪ್ರದೇಶ ಎನ್ನಲಾಗುತ್ತಿದೆ. ಇದರಲ್ಲಿ ೯೪೧೫ ಎಕರೆ ಭೂಮಿಯನ್ನು ಮೀಸಲು ಅರಣ್ಯ ಪ್ರದೇಶವೆಂದು ಗುರುತಿಸಲಾಗಿದೆ. ಇದರ ಸುತ್ತಮುತ್ತ ಸಿಲ್ವೈಪುರ, ಸಿ.ರ್ಆ.ನಗರ, ಪಾಸ್ಕಲ್ ನಗರ, ರಾಶಿಬೋಳಿತಾಂಡಾ, ಟಿ.ಜಿ.ದೊಡ್ಡಿ, ಶಾಂತಿನಗರ, ಕಾರಚಿಕಟ್ಟೆ, ಪುಟ್ಟರಸದೊಡ್ಡಿ, ಬೂದಗಟ್ಟದೊಡ್ಡಿ ಗ್ರಾಮಗಳಿವೆ. ಇಲ್ಲಿ ಅಂದಾಜು ೫ ಸಾವಿರ ಕುಟುಂಬಗಳಿದ್ದು ೧೩ ಸಾವಿರ ಜನಸಂಖ್ಯೆಯಿದೆ.

ಈ ಗ್ರಾಮಗಳ ಜನರು ೫೦-೬೦ ವರ್ಷಗಳಿಂದ ಈ ಪ್ರದೇಶದಲ್ಲಿ ವಾಸವಿದ್ದು ನೂರಾರು ಎಕರೆ ಜಾಗೇರಿ ಪ್ರದೇಶದಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ೨೦೦೬ರಲ್ಲಿ ಅರಣ್ಯ ಇಲಾಖೆಯು ಅಧಿಸೂಚನೆ ಹೊರಡಿಸಿ ಬೂದಗಟ್ಟದೊಡ್ಡಿಯ ೧೭ ಎಕರೆ ಪ್ರದೇಶದಲ್ಲಿ ವ್ಯವಸಾಯ ಮಾಡಬೇಡಿ ನೀವು ಒತ್ತುವರಿ ಮಾಡಿದ್ದು ಬಿಟ್ಟುಕೊಡಿ. ಏನಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸಿ ಎಂದು ನೋಟಿಸ್ ನೀಡಿತ್ತು. ಇದರಿಂದ ಬೆಚ್ಚಿಬಿದ್ದ ನಾಲ್ವರು ರೈತರು ೬೦ ವರ್ಷಗಳಿಂದ ನಮ್ಮ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದೇವೆ ಈಗ ಬಿಟ್ಟುಕೊಡಿ ಎಂದರೆ ಹೇಗೆಂದು ತಕರಾರು ತೆಗೆದು ಭೂಮಿ ನೀಡಲು ಸಾಧ್ಯವಿಲ್ಲ ಎಂದು ರೈತಸಂಘದ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದಾರೆ.

ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಪರ್ಯಾಯವಾಗಿ ಚಿಕ್ಕಲ್ಲೂರು ಬಳಿ ಭೂಮಿ ನೀಡಿ ಪುನರ್ವಸತಿ ಕಲ್ಪಿಸುವುದಾಗಿ ಅರಣ್ಯ ಇಲಾಖೆ ಭರವಸೆ ನೀಡಿದರೂ ರೈತರು ಒಪ್ಪುತ್ತಿಲ್ಲ. ನಮ್ಮ ಪೂರ್ವಿಕರ ಕಾಲದಿಂದಲೂ ಇಲ್ಲಿಯೇ ಇದ್ದೇವೆ ನಾವು ಹೊರಗೆ ಹೋಗುವುದಿಲ್ಲ ಎಂದು ಚಳವಳಿ ಹಾದಿ ಹಿಡಿದಿದ್ದಾರೆ. ಇದು ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಈಚೆಗೆ ಕಾವೇರಿ ವನ್ಯಜೀವಿಧಾಮಕ್ಕೆ ಆಗಮಿಸಿದ್ದ ಅರಣ್ಯ ಸಚಿವರಾದ ಉಮೇಶಕತ್ತಿ ಮತ್ತು ಸ್ಥಳೀಯ ಶಾಸಕ ಎನ್.ಮಹೇಶ್ ಅವರು ಸಹ ಪ್ರತಿಭಟನಾನಿರತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಶಾಸಕರು ಇದು ವ್ಯವಸಾಯ ಭೂಮಿ ಎಂದು ವಾದಿಸಿದರೆ ಅರಣ್ಯ ಅಧಿಕಾರಿಗಳು ಇದು ಅರಣ್ಯಕ್ಕೆ ಸೇರಿದ್ದು ಒತ್ತುವರಿಯಾಗಿದೆ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು ಮತ್ತು ಜನರು ಅವರವರ ನಿಲುವಿಗೆ ಅಂಟಿಕೊಂಡಿದ್ದರಿಂದ ಭೂವಿವಾದ ಭುಗಿಲೆದ್ದಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ನಮ್ಮ ಸಮಸ್ಯೆಯನ್ನು ಆಲಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ. ೧೫ ದಿನಗಳು ಕಳೆದರೂ ಜಿಲ್ಲಾಧಿಕಾರಿ ಭೇಟಿ ನೀಡಿಲ್ಲ.

೨೦೧೭ ಮತ್ತು ೨೦೧೯ರಲ್ಲಿ ನಡೆದ ಸಂಪುಟ ಅಧಿವೇಶದಲ್ಲಿ ಈ ಕುರಿತು ಶಾಸಕ ಆರ್.ನರೇಂದ್ರ ಕೇಳಿದ್ದ ಪ್ರಶ್ನೆಗೆ ಅಂದಿನ ಕಂದಾಯ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು ಈ ಕುರಿತು ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ಮಾಡಿಸುವ ಭರವಸೆ ನೀಡಿದ್ದರು. ಆದರೆ, ಕಾರ್ಯರೂಪಕ್ಕೆ ಬರಲಿಲ್ಲ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳದೆ ಸಮಸ್ಯೆ ಜಟಿಲವಾಗಿದೆ.

ಪ್ರತಿಭಟನಾನಿರತ ರೈತಸಂಘದ ಮುಖಂಡರು ಹಾಲಿ ರೈತರು ವ್ಯವಸಾಯ ಮಾಡುತ್ತಿರುವ ಭೂಮಿಯನ್ನು ಅವರಿಗೆ ಬಿಟ್ಟುಕೊಟ್ಟು ಉಳಿದ ಭೂಮಿಯನ್ನು ಮೀಸಲು ಅರಣ್ಯಕ್ಕೆ ಸೇರಿಸಿಕೊಳ್ಳಿ. ೬೦ ವರ್ಷಗಳ ಕಾಲದಿಂದಲೂ ವ್ಯವಸಾಯ ಮಾಡುತ್ತಿರುವವರನ್ನು ಒಕ್ಕಲು ಎಬ್ಬಿಸುವುದು ಬೇಡ ಎಂದು ಅರಣ್ಯ ಇಲಾಖೆ ಮತ್ತು ಜನಪ್ರತಿನಿಧಿಗಳನು ಆಗ್ರಹಿಸುತ್ತಿದ್ದಾರೆ. ಅರಣ್ಯ ಇಲಾಖೆ, ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತವು ಧರಣಿನಿರತ ರೈತರು ಹಾಗೂ ಮುಖಂಡರ ಜೊತೆ ಸಭೆ ನಡೆಸಿ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡಬೇಕು. ರೈತರು ಒಪ್ಪಿಕೊಳ್ಳದಿದ್ದರೆ ಅವರನ್ನು ಬಲವಂತವಾಗಿ ಒಕ್ಕಲೆಬ್ಬಿಸಬಾರದು. ಸಮಸ್ಯೆ ಬಿಗಡಾಯಿಸುವ ಮೊದಲು ಎಚ್ಚೆತ್ತುಕೊಂಡು ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕ ಎನ್.ಮಹೇಶ್ ಅವರು ಸಮನ್ವಯತೆ ಸಾಧಿಸಿ ರೈತರಿಗೆ ಅನ್ಯಾಯವಾಗದಂತೆ ಭೂವಿವಾದವನು ಬಗೆಹರಿಸಬೇಕು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ