Light
Dark

ಕೇಂದ್ರದ ಅಸಹಕಾರ ಧೋರಣೆಯು ಪರೋಕ್ಷ ತಪ್ಪೊಪ್ಪಿಗೆಯೇ ಅಲ್ಲವೇ?

ವಿವಾದಾತ್ಮಕ ಪೆಗಾಸಸ್ ತಂತ್ರಾಂಶವನ್ನು ಕಾನೂನು ಮೀರಿ ಬಳಸಿ ಬೇಹುಗಾರಿಕೆ ಮಾಡಿರುವ ಆರೋಪಗಳ ಸತ್ಯಾಸತ್ಯತೆ ಪತ್ತೆ ಹಚ್ಚಲು ಸುಪ್ರೀಂ ಕೋರ್ಟ್ ರಚಿಸಿದ್ದ ತಾಂತ್ರಿಕ ಸಮಿತಿಗೆ ಆರೋಪಿ ಸ್ಥಾನದಲ್ಲಿರುವ ಕೇಂದ್ರ ಸರ್ಕಾರ ಸಹಕಾರ ನೀಡದೇ ಇರು ವುದು ಅಚ್ಚರಿಯಷ್ಟೇ ಅಲ್ಲ ಆಘಾತಕಾರಿ ಬೆಳವಣಿಗೆ ಕೂಡ ಹೌದು ಈ ಮಾಹಿತಿಯನ್ನು ಖುದ್ದು ತಾಂತ್ರಿಕ ಸಮಿತಿಯೇ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲಿ ಬಹಿರಂಗಪಡಿಸಿದೆ. ಕೇಂದ್ರ ಸರ್ಕಾರವೇ ಆರೋಪಿ ಸ್ಥಾನದಲ್ಲಿ ಇದ್ದ ಕಾರಣ ಸುಪ್ರೀಂ ಕೋರ್ಟ್, ಸೈಬರ್ ಭದ್ರತೆ, ಡಿಜಿಟಲ್ ವಿಧಿವಿಜ್ಞಾನ, ನೆಟ್‌ವರ್ಕ್ ಮತ್ತು ಹಾರ್ಡ್‌ವೇರ್ ಪರಿಣತರಾದ ನವೀನ್ ಕುಮಾರ್ ಚೌಧರಿ, ಪಿ. ಪ್ರಬಹರನ್ ಮತ್ತು ಅಶ್ವಿನ್ ಅನಿಲ್ ಗುಮಾಸ್ತೆ ಅವರನ್ನೊಳಗೊಂಡ ಸಮಿತಿ ರಚಿಸಿತ್ತು. ಸಮಿತಿ ಈಗ ತಾಂತ್ರಿಕ ತನಿಖೆ ಪೂರೈಸಿ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

ವರದಿಯಲ್ಲಿ ಪೆಗಾಸಸ್ ಸ್ಪೈವೇರ್ ಬಳಸಿರುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲವಾದರೂ, ತನಿಖೆಗೆ ಒಳಪಡಿಸಿದ ೨೯ ಮೊಬೈಲ್‌ಗಳ ಪೈಕಿ ಐದು ಮೊಬೈಲ್‌ಗಳಲ್ಲಿ ಮಾತ್ರ ಮಾಲ್‌ವೇರ್ ಕಂಡು ಬಂದಿದೆ ಎಂದು ವಿವರಿಸಿದೆ. ಆದರೆ, ಈ ಮಾಲ್‌ವೇರ್ ಪೆಗಾಸಸ್ ಹೌದೋ ಅಲ್ಲವೋ ಎಂಬುದು ಇನ್ನೂ ನಿರ್ಧಾರವಾಗಿಲ್ಲವಾದ್ದರಿಂದ ಕೇಂದ್ರ ಸರ್ಕಾರ ತಾನು ಆಯ್ದ ಕೆಲವರ ವಿರುದ್ಧ ಬೇಹುಗಾರಿಕೆ ನಡೆಸಿದ ಆರೋಪದಿಂದ ಮುಕ್ತವಾಗಿಲ್ಲ ಎಂದೇ ಹೇಳಬೇಕು. ಈ ಕುರಿತಂತೆ ಮತ್ತಷ್ಟು ತನಿಖೆ ನಡೆಯಬೇಕಿದೆ ಮತ್ತು ಈಗಾಗಲೇ ನಡೆದಿರುವ ತನಿಖೆಯ ವಿಸ್ತೃತ ವರದಿಗಳು ಬಹಿರಂಗವಾಗಬೇಕಿದೆ. ತಾಂತ್ರಿಕ ಸಮಿತಿಯು ವರದಿಯ ಕೆಲವು ಅಂಶಗಳನ್ನು ಗೌಪ್ಯವಾಗಿಡುವಂತೆಯೂ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ತಂತ್ರಜ್ಞರ ಸಮಿತಿಗೆ ಕೇಂದ್ರ ಸರ್ಕಾರ ಸಹಕಾರ ನೀಡಿಲ್ಲದಿರುವುದು ಪರೋಕ್ಷವಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೇ ಇರುವ ನಿಲುವನ್ನು ತೆಗೆದುಕೊಂಡಂತಾಗಿದೆ. ಕೇಂದ್ರ ಸರ್ಕಾರವೇ ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯೊಂದಿಗೆ ಅಸಹಕಾರ ಧೋರಣೆ ತಳೆಯುವುದೆಂದರೆ ಪರೋಕ್ಷವಾಗಿ ಆರೋಪದಲ್ಲಿ ಹುರುಳಿದೆ ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ. ಈ ವಿಷಯದಲ್ಲಿ ಕೇಂದ್ರದ ನಿಲುವು ಮೆಚ್ಚತಕ್ಕದ್ದಲ್ಲ. ಇದು ಸಾರ್ವಜನಿಕವಾಗಿ ತಪ್ಪು ಸಂದೇಶವನ್ನು ರವಾನಿಸಿದಂತಾಗುತ್ತದೆ. ನಾಲ್ಕು ವಾರಗಳ ನಂತರ ನಡೆಯುವ ವಿಚಾರಣೆಯೊಳಗಾದರೂ ಕೇಂದ್ರ ಸರ್ಕಾರವು ತಾಂತ್ರಿಕ ಸಮಿತಿ ಕೋರಿದ್ದ ಮಾಹಿತಿಗಳನ್ನು ನೀಡಿ ಸಹಕಾರ ನೀಡಬೇಕು, ಆ ಮೂಲಕ ಅತ್ಯುಚ್ಛ ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು. ಕೇಂದ್ರ ಸರ್ಕಾರದಿಂದ ಇಂತಹದ್ದೊಂದು ಸಜ್ಜನಿಕೆ ನಿರೀಕ್ಷಿಸುವುದು ತಪ್ಪೇನೂ ಅಲ್ಲ.

ಹಲವು ಸಚಿವರು, ವಿಜ್ಞಾನಿಗಳು, ಪತ್ರಕರ್ತರು, ಉದ್ಯಮಿಗಳು ಸೇರಿದಂತೆ ಸುಮಾರು ೫೦,೦೦೦ ಜನರ ಮೇಲೆ ಕೇಂದ್ರ ಸರ್ಕಾರವು ಪೆಗಾಸಸ್ ತಂತ್ರಾಂಶ ಬಳಸಿ ನಿಗಾ ಇರಿಸಿತ್ತು ಎಂಬ ಸ್ಫೋಟಕ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಇಸ್ರೇಲ್ ದೇಶದಿಂದ ೨ ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಸುವಾಗ ಪೆಗಾಸಸ್ ಸ್ಪೈವೇರ್‌ಅನ್ನೂ ಖರೀದಿಸಲಾಗಿತ್ತು ಎಂದು ವರದಿಯಲ್ಲಿ ಆರೋಪಿಸಲಾಗಿತ್ತು. ಈ ವರದಿಯಿಂದ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ನಂತರ ದೇಶೀಯ ಪತ್ರಿಕೆಗಳು, ಮಾಧ್ಯಮ ಸಂಸ್ಥೆಗಳು ತನಿಖೆ ನಡೆಸಿ ಮತ್ತಷ್ಟು ಬೆಳಕು ಚೆಲ್ಲಿದ್ದವು. ತಮ್ಮ ಸಂವಿಧಾನದತ್ತ ವೈಯಕ್ತಿಕ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂದು ಆರೋಪಿಸಿ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ತಾಂತ್ರಿಕ ಸಮಿತಿ ರಚಿಸಿತ್ತು.

ವರದಿ ಸಲ್ಲಿಸಿರುವ ತಾಂತ್ರಿಕ ಸಮಿತಿಯು, ನಾಗರಿಕರ ಗೋಪ್ಯತೆಯ ಹಕ್ಕು ರಕ್ಷಿಸಲು ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಕ್ರಮ ಹಾಗೂ ಹೊಣೆಗಾರಿಕೆ ಕುರಿತಂತೆ ಸಲಹೆಗಳನ್ನು ನೀಡಿದೆ. ಗೋಪ್ಯತೆಯ ರಕ್ಷಣೆ ಹಾಗೂ ಕುಂದು ಕೊರತೆ ಪರಿಹಾರ ಕಾರ್ಯವಿಧಾನವನ್ನು ಸುಧಾರಿಸಲು ಕಾನೂನಿನಲ್ಲಿ ಅಗತ್ಯ ತಿದ್ದುಪಡಿ ಮಾಡುವಂತೆಯೂ ಶಿಫಾರಸು ಮಾಡಿದೆ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿ ಇದೆ. ಈ ತೀರ್ಪು ಕೊಡುವ ಮುನ್ನವೇ ೨೯ ಮೊಬೈಲ್‌ಗಳ ಪೈಕಿ ಐದರಲ್ಲಿ ಮಾತ್ರ ಮಾಲ್‌ವೇರ್ ಕಂಡು ಬಂದಿದೆ ಎಂದು ತಾಂತ್ರಿಕ ಸಮಿತಿ ಹೇಳಿರುವುದರಿಂದ ಪೆಗಾಸಸ್ ಸ್ಪೈವೇರ್ ಬಳಸಿದ್ದಾಗಿ ಆರೋಪ ಮಾಡಿದ್ದ ಕಾಂಗ್ರೆಸ್ ಕ್ಷಮೆ ಕೋರಬೇಕು ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಆಗ್ರಹಿಸಿದ್ದಾರೆ. ಆದರೆ, ಈ ಕುರಿತಾಗಿ ಇನ್ನೂ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿಲ್ಲ ಎಂಬುದನ್ನು ಅವರು ಗಮನಿಸಬೇಕು. ಪ್ರಸ್ತುತ ಗಂಭೀರ ವಿಷಯವೆಂದರೆ ಕೇಂದ್ರ ಸರ್ಕಾರವು ತಾಂತ್ರಿಕ ಸಮಿತಿಗೆ ಸಹಕಾರ ನೀಡಿಲ್ಲ ಎಂಬುದು. ಈ ಲೋಪವನ್ನು ಕೇಂದ್ರ ಸರ್ಕಾರ ಸರಿಪಡಿಸಿಕೊಳ್ಳಬೇಕಿದೆ. ವಿಚಾರಣೆ ಪೂರ್ಣಗೊಂಡ ನಂತರ ಸುಪ್ರೀಂ ಕೋರ್ಟ್ ಈ ಕುರಿತಂತೆ ನೀಡುವ ಸೂಚನೆಗಳನ್ನು ಕೇಂದ್ರ ಸರ್ಕಾರ ಪಾಲಿಸಲೇಬೇಕಾಗುತ್ತದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ