
‘ಚಿಮ್ಮುತ ಓಡಿವೆ ಜಿಂಕೆಗಳು, ಕುಣಿದಾಡುತ ನಲಿದಿವೆ ನವಿಲುಗಳು .. ಇದು ವನ್ಯಮೃಗಗಳ ಲೋಕವೋ, ಈ ಭೂಮಿಗೆ ಇಳಿದ ನಾಕವೋ’
ಕನ್ನಡದ ವರನಟ ಡಾ.ರಾಜಕುಮಾರ್ ಅವರು ಸಲಗದ ಮೇಲೆ ಕುಳಿತು ಕರುನಾಡಿನ ವನ್ಯಲೋಕವನ್ನು ಹೀಗೆ ಬಣ್ಣಿಸುತ್ತಿದ್ದರೆ ಎಂಥವರ ಕಿವಿಗೂ ಆನಂದ. ಕಣ್ಣ ಮುಂದೆಯೇ ಅರಣ್ಯ ಹಾದು ಹೋದಂಥ ಅನುಭವ. ಐದು ದಶಕದ ಹಿಂದೆ( ೧೯೭೩) ಗಂಧದಗುಡಿ ಚಿತ್ರದ ಈ ಹಾಡನ್ನು ಈಗಿನ ಸನ್ನಿವೇಶಕ್ಕೆ ಅನ್ವಯಿಸಿದರೆ ಸನ್ನಿವೇಶ ಖಂಡಿತಾ ಬದಲಾವಣೆಯಾದಂತೆ ಕಾಣುತ್ತದೆ. ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳುವುದು ಒಂದು ಕಡೆಯಾದರೆ, ಅರಣ್ಯದಂಚಿನ ಗ್ರಾಮಸ್ಥರು ಮಾತ್ರವಲ್ಲದೇ ಬೇರೆಯವರೂ ಕಾಡಿನ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವಂತೆ ಮಾಡಿರುವುದು ಇನ್ನೊಂದೆಡೆ. ಇವರೆಡರ ನಡುವೆ ಆಗುತ್ತಿರುವ ವ್ಯತ್ಯಾಸಗಳು ಸಂಘರ್ಷದ ಹಾದಿಯನ್ನು ಸೃಷ್ಟಿಸುತ್ತಿವೆ. ಹಾಗಾದರೆ ಮಾನವ- ವನ್ಯಜೀವಿ ಸಂಘರ್ಷಕ್ಕೆ ಕಾರಣವಾದರೂ ಏನು?. ಈ ಪ್ರಶ್ನೆ ಸರಳವಾದರೂ ಉತ್ತರ ಮಾತ್ರ ಕಠಿಣವೇ.
ದಶಕದ ಹಿಂದೆ ಕಾಡಾನೆಗಳು ಮೈಸೂರು ನಗರಕ್ಕೆ ಲಗ್ಗೆ ಇಟ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸಿದವು. ಕೊಡಗಿನಲ್ಲಿ ಇತ್ತೀಚಿನ ವರ್ಷದಲ್ಲಿ ತಿಂಗಳಲ್ಲಿ ನಾಲ್ಕರಿಂದ ಐದು ಆನೆ ದಾಳಿ ಪ್ರಕರಣಗಳಾದರೂ ದಾಖಲಾಗುತ್ತಿವೆ. ಹುಲಿ, ಚಿರತೆ ದಾಳಿಯಿಂದಲೂ ಜನ ತತ್ತರಿಸಿದ್ದಾರೆ. ಅದರಲ್ಲೂ ಜನ ಸಾಮಾನ್ಯರ ಬದುಕಿಗಂತೂ ಇನ್ನಿಲ್ಲದ ತೊಂದರೆಯಾಗಿರುವುದಂತೂ ಕಂಡು ಬರುತ್ತಿವೆ. ಕೊಡಗು, ಹಾಸನ ಜಿಲ್ಲೆಯಲ್ಲಿ ಉಪಟಳ ನೀಡುವ ಕಾಡಾನೆಗಳನ್ನು ಸೆರೆ ಹಿಡಿಯುವ ಕೆಲಸವಾದರೂ ಅದು ಸಮಸ್ಯೆಗೆ ಪರಿಹಾರದಂತೆ ಕಾಣುತ್ತಿಲ್ಲ.
ಮೊದಲು ಅರಣ್ಯ, ವನ್ಯಜೀವಿ, ಪ್ರವಾಸ ಎನ್ನುವುದು ಒಂದು ಚೌಕಟ್ಟಿನೊಳಗೆ ಇತ್ತು. ಅರಣ್ಯ ಅವಲಂಬಿತರ ಸಂಖ್ಯೆಯೂ ಕಡಿಮೆಯಿತ್ತು. ಇವೆಲ್ಲದಕ್ಕಿಂತ ಹೆಚ್ಚು ಅರಣ್ಯ, ವನ್ಯಜೀವಿಗಳ ಮೇಲೆ ಇದ್ದ ಒತ್ತಡದ ಪ್ರಮಾಣವಂತೂ ಅತ್ಯಲ್ಪ. ಇದು ದಶಕಗಳ ಹಿಂದಿನ ಮಾತು. ಈಗ ಕಾಡು ನೋಡಲು ಬರುವವರ ಸಂಖ್ಯೆಯೇನೋ ಹೆಚ್ಚಾಗಿ ಕೋಟಿ ಗಟ್ಟಲೇ ಆದಾಯ ಬರುತ್ತಿದೆ. ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನಡುವೆಯೂ ಪ್ರವಾಸೋದ್ಯಮಕ್ಕೆ ಮಿತಿ ಹೇರುವ ಪ್ರಯತ್ನಗಳು ಆದರೂ ಇದು ಪರೋಕ್ಷವಾಗಿ ಮಾನವ-ವನ್ಯಜೀವಿ ಸಂಘರ್ಷ ಪ್ರಮಾಣದಲ್ಲೂ ಗಣನೀಯ ಬದಲಾವಣೆಯಾಗಲು ಕಾರಣವಾಗಿರುವುದಂತೂ ಸ್ಪಷ್ಟ.
ಹತ್ತಾರು ಕಾರಣಗಳು…
ದೇಶದಲ್ಲೇ ಅತಿ ಹೆಚ್ಚು ವನ್ಯಜೀವಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡ ಕರುನಾಡು ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದ್ದರೂ ವನ್ಯಜೀವಿ- ಮಾನವ ಸಂಘರ್ಷ ಹೆಚ್ಚುತ್ತಿದ್ದರೂ ಅದನ್ನು ತಗ್ಗಿಸಲು ಅರಣ್ಯ ಇಲಾಖೆಯೂ ಸಮುದಾಯದ ಸಹಕಾರದೊಂದಿಗೆ ನಿರಂತರ ಪ್ರಯತ್ನ ಮಾಡುತ್ತಲೇ ಇದೆ. ಸಂಘರ್ಷದಿಂದ ಮಾನವ ಜೀವ ಹಾನಿ ಪ್ರಮಾಣ ಹೆಚ್ಚುತ್ತಿರುವ ನಡುವೆ ವನ್ಯಜೀವಿಗಳ ಸಾವಿನ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಿದೆ. ಹಾಗಾದರೆ ಸಂಘರ್ಷ ಹೆಚ್ಚಲು ಕಾರಣ ಹುಡುಕಿದರೆ ಹತ್ತಾರು ಅಂಶಗಳು ಬಯಲಿಗೆ ಬರುತ್ತವೆ. ಇದರಲ್ಲಿ ಹತ್ತಕ್ಕೂ ಹೆಚ್ಚು ಆನೆಗಳ ಕಾರಿರ್ಡಾ ಒತ್ತುವರಿ, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಕಡೆ ಹೆಚ್ಚಿದ ಪ್ರವಾಸೋದ್ಯಮ, ಪ್ರಾಣಿ ಆಕರ್ಷಿಸುವ ಬೆಳೆಗಳ ಪ್ರಮಾಣದಲ್ಲಿ ಹೆಚ್ಚಳ, ಬೆಳೆ ಹಾನಿ ಪರಿಹಾರ ವಿಳಂಬ ಹಾಗೂ ಕಡಿಮೆ ಎನ್ನುವ ಬೇಸರ, ಪರಿಸರ ಸೂಕ್ಷ್ಮವಲಯಗಳ ಸ್ಥಾಪಿಸಿ ನಿಯಂತ್ರಣ ಹೇಳಲು ವಿಳಂಬವಾಗಿರುವುದನ್ನು ಪಟ್ಟಿ ಮಾಡಬಹುದು.
ಅರಣ್ಯ ಇಲಾಖೆ ಪ್ರಯತ್ನ ನಿರಂತರ…
ಹಾಗೆಂದು ಅರಣ್ಯ ಇಲಾಖೆ, ಸ್ವಯಂ ಸೇವಾ ಸಂಘಟನೆಗಳು, ಅರಣ್ಯದ ಮೇಲೆ ಪ್ರೀತಿ ಇರುವವರು ಸುಮ್ಮನೆ ಕುಳಿತಿಕೊಂಡಿದ್ದಾರೆ ಎಂದು ಹೇಳಲು ಬರುವುದಿಲ್ಲ. ಸಾಕಷ್ಟು ಸುಧಾರಣೆಗಳು ಕಾಲಕಾಲಕ್ಕೆ ಅಗುತ್ತಲೇ ಇವೆ.
ಬಂಡೀಪುರ ಹಾಗೂ ನಾಗರಹೊಳೆ ಭಾಗದಲ್ಲಿ ಹಿಂದೆ ಅಳವಡಿಸಲಾಗಿದ್ದ ಸೋಲಾರ್ ಬೇಲಿ, ಆಳ ಕಂದಕಗಳು ಅಷ್ಟಾಗಿ ಪರಿಣಾಮ ಬೀರಿಲ್ಲ. ಇದರಿಂದಲೇ ಸುಮಾರು ೬೦೦ ಕಿ.ಮಿ ವ್ಯಾಪ್ತಿಯಲ್ಲಿ ರೈಲು ಕಂಬಿ ಅಳವಡಿಸಲು ಯೋಜಿಸಿ ಈಗಾಗಲೇ ೨೦೦ ಕಿ.ಮಿ ಕೆಲಸ ಮುಗಿಸಿದೆ. ಇದರಿಂದ ಪರಿಣಾಮ ಕಾಣುತ್ತಿದೆ.
ಬಹಳಷ್ಟು ಕಡೆ ಕಬ್ಬು, ಭತ್ತವನ್ನು ಬೆಳೆಯಲಾಗುತ್ತದೆ. ಆನೆಗಳಿಗೆ ಪ್ರಿಯವಾದ ಕಬ್ಬು ಸುಲಭವಾಗಿ ಸಿಗುವುದರಿಂದ ಅವುಗಳು ಆಕರ್ಷಿತವಾಗಿ ಬರುವುದು ಸಹಜ. ಇದರ ಜತೆಗೆ ಈಗ ಬೆಳೆ ಉತ್ಪಾದನಾ ವೆಚ್ಚವೂ ಹೆಚ್ಚಿದೆ. ದರದ ವ್ಯತ್ಯಾಸಗಳು ಆಗಿರುವುದು ನಿಜ. ಇದಕ್ಕಾಗಿಯೇ ಅರಣ್ಯ ಇಲಾಖೆಯು ಬೆಳೆ ಪರಿಹಾರದ ಮೊತ್ತವನ್ನು ಪರಿಷ್ಕರಣೆ ಮಾಡಿದೆ.
ವನ್ಯಜೀವಿ ಹಾಗೂ ಮಾನವ ಸಂಘರ್ಷ ತಗ್ಗಿಸಲು ಬೇಕಾದ ಸುಧಾರಣಾ ಕ್ರಮಗಳನ್ನು ೫ ವರ್ಷದ ಕಾಲಮಿತಿಯೊಳಗೆ ಕೈಗೊಂಡರೆ ಮುಂದಿನ ೨೦ ವರ್ಷ ಸಮಸ್ಯೆ ತಗ್ಗಲಿದೆ ಎನ್ನುವ ಆಶಯದೊಂದಿಗೆ ಅರಣ್ಯ ಇಲಾಖೆಯೂ ಕೆಲಸ ಮಾಡುತ್ತಿದೆ. ಅರಣ್ಯದಂಚಿನ ಹಾಗೂ ವನ್ಯಜೀವಿ ಕಾರಿಡಾರ್ಗಳನ್ನು ಸರಿಪಡಿಸಲು ನಮಗೆ ಬೇಕಾಗಿರುವುದು ೬೦೦ರಿಂದ ೭೦೦ ಕೋಟಿ ರೂ. ಒಂದು ಬಾರಿಗೆ ಮಾನವ ವನ್ಯಜೀವಿ ಸಂಘರ್ಷ ತಡೆಗಟ್ಟಲು ಬೇಕಾದ ಕ್ರಮಗಳನ್ನು ಕೈಗೊಂಡರೆ ಪರಿಹಾರ ಕಂಡುಕೊಳ್ಳಬಹುದು. ವರ್ಷಕ್ಕೆ ೩೦ ರಿಂದ ೫೦ ಕೋಟಿ ರೂ. ದೊರೆತರೆ ಏನು ಮಾಡುವುದು ಹೇಳಿ?. ಈಗ ಜೀವನ ಶೈಲಿ ಮಾತ್ರವಲ್ಲದೇ ಬೆಳೆ ಶೈಲಿಯೂ ಬದಲಾಗಿದೆ. ಇದಕ್ಕೆ ಪೂರಕವಾಗಿ ವನ್ಯಜೀವಿಗಳ ನಡೆಯಲ್ಲೂ ಸಾಕಷ್ಟು ವ್ಯತ್ಯಾಸ ಆಗುತ್ತಿದೆ. ನಿರಂತರ ಪ್ರಯತ್ನವನ್ನು ಮಾಡುತ್ತಿರುವ ಅರಣ್ಯ ಇಲಾಖೆ ಕೈ ಚೆಲ್ಲಿಲ್ಲ ಎಂದು ಸ್ಪಷ್ಟ ದನಿಯಲ್ಲೇ ರಾಜ್ಯದ ಮುಖ್ಯ ವನ್ಯಜೀವಿ ಪಾಲಕ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ( ವನ್ಯಜೀವಿ) ವಿಜಯಕುರ್ಮಾ ಗೋಗಿ ಅವರು ಹೇಳುತ್ತಾರೆ.
ಇಎಸ್‌ಝಡ್ ಕಡ್ಡಾಯ
ವನ್ಯಸಂಪತ್ತು, ಅರಣ್ಯ ರಕ್ಷಣೆಗೆ ಹೋರಾಟ ನಿರಂತರವಾಗಿದೆ. ಸುಪ್ರೀಂಕೋರ್ಟ್ ಕೆಲ ದಿನಗಳ ಹಿಂದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಆಧರಿಸಿ ಸ್ಪಷ್ಟ ಆದೇಶವೊಂದನ್ನು ಹೊರಡಿಸಿದೆ. ಅದರಂತೆ ಎಲ್ಲಾ ಅಭಯಾರಣ್ಯ ಹಾಗೂ ವನ್ಯಜೀವಿಧಾಮದ ಒಂದು ಕಿ.ಮಿ.ವಿಸ್ತೀರ್ಣದಲ್ಲಿ ಪರಿಸರ ಸೂಕ್ಷ್ಮ ವಲಯ( ಇಎಸ್‌ಝಡ್) ರೂಪಿಸುವುದು ಕಡ್ಡಾಯ. ಶಾಶ್ವತ ಕಟ್ಟಡ, ಗಣಿಗಾರಿಕೆಗೆ ಅವಕಾಶ ನೀಡಬಾರದು. ಈಗ ಇರುವ ಸ್ಥಿತಿಗತಿ ಕುರಿತು ೩ ತಿಂಗಳಲ್ಲಿ ವರದಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಇದು ಜಾರಿಯಾದರೆ ಒತ್ತಡ ತಗ್ಗಿ ಸಂಘರ್ಷವೂ ಕಡಿಮೆಯಾಗಬಹುದು.
ಸ್ವಯಂ ನಿಯಂತ್ರಣ
ಸಂಘರ್ಷ ಕಡಿಮೆ ಮಾಡಲು ಸ್ವಯಂ ನಿಯಂತ್ರಣ ಸಾಧ್ಯವೇ ಎನ್ನುವ ಪ್ರಶ್ನೆ ನಮಗೆ ಎದುರಾಗಬಹುದು. ಖಂಡಿತಾ ಸಾಧ್ಯವಿದೆ. ವನ್ಯಜೀವಿಗಳ ಪ್ರದೇಶವನ್ನು ನಾವು ಒತ್ತುವರಿ ಮಾಡಿಕೊಂಡು ಅಲ್ಲಿ ಪ್ರವಾಸೋದ್ಯಮ ನೆಪದಲ್ಲಿ ತೊಂದರೆ ಮಾಡುವುದನ್ನು ತಪ್ಪಿಸಲು ಅವಕಾಶವಿದೆ. ಅವುಗಳ ಸ್ಥಳವನ್ನು ನಾವು ಅತಿಕ್ರಮಿಸಿದ್ದೇವೆ. ಅವುಗಳಿಗೂ ಬದುಕು ಎನ್ನುವುದು ಇದೇ ಎನ್ನುವುದು ಅರಿತುಕೊಂಡರೆ ಸಂಘರ್ಷದ ಪ್ರಮಾಣವನ್ನು ಸಹಜವಾಗಿಯೇ ತಗ್ಗಿಸಬಹುದು.
ಮಾನವರ ಸಾವು ಸಂಖ್ಯೆ 481
ವರ್ಷವಾರು ಆನೆ ಇತರೆ
2010&11 33 08
8 ವರ್ಷದಲ್ಲಿ ಸತ್ತ ಪ್ರಾಣಿಗಳು- 1935
ಆನೆ- 762
ಹುಲಿ-102
ಚಿರತೆ-230
ಕರಡಿ- 67
ಕಾಡೆಮ್ಮೆ-326
ಜಿಂಕೆ- 348
ಕಡವೆ-200
6 ವರ್ಷದಲ್ಲಿ ಇಲಾಖೆ ನೀಡಿದ ಪರಿಹಾರ
(ಕೋಟಿ ರೂ.)
ಒಟ್ಟು134. 95