ಪ್ರಜಾಪ್ರತಿನಿಧಿಗಳಿಗೆ ‘ಪದ ಸಂಸ್ಕೃತಿ’ ಮುಖ್ಯ
ಆರ್.ರಘು ಕೌಟಿಲ್ಯ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಅದರಲ್ಲಿಯೂ ಜನಪ್ರತಿನಿಧಿಗಳು ತಮ್ಮ ನಾಲಿಗೆಯ ಮೇಲೆ ಹಿಡಿತ ಹಾಗೂ ನಡೆ–ನುಡಿಯಲ್ಲಿ ಪಾದರದರ್ಶಕತೆ ಹೊಂದಿರಬೇಕು. ಸುಳ್ಳನ್ನು ವೈಭವೀಕರಿಸಲು ಮುಂದಾದರೆ ಅದರ ಚಕ್ರವ್ಯೂಹದಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ ಎಂಬುದಕ್ಕೆ ರಾಹುಲ್ ಗಾಂಧಿಯವರೇ ಉತ್ತಮ ಉದಾಹರಣೆ.
‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು’ ಎಂಬ ದಾಸಶ್ರೇಷ್ಠರ ಮಾತೊಂದಿದೆ. ಅದರಂತೆ ನಾವು ನಮ್ಮ ‘ಪದ ಸಂಸ್ಕೃತಿ’ಯನ್ನು ಬೆಳಸಿಕೊಳ್ಳದೇ ಹೋದರೆ ನಾವು ಬಳಸುವ ಪದದಿಂದ ನಮ್ಮ ವ್ಯಕ್ತಿತ್ವ ಇಳಿಮುಖ–ವಾಗುತ್ತದೆ ಹಾಗೂ ಜನರೂ ಕೂಡ ಅದನ್ನು ಅಪಹಾಸ್ಯ ಮಾಡುತ್ತಾರೆ. ಪ್ರಸ್ತುತ ಜನರು ಪ್ರಬುದ್ಧರಿದ್ದಾರೆ. ಆಧಾರವಿಲ್ಲದ ಆರೋಪಗಳನ್ನು ಅವರು ಸ್ವೀಕಾರ ಮಾಡುವುದಿಲ್ಲ. ಆದ್ದರಿಂದ ಯಾರು ನಾಲಿಗೆ ಮೇಲೆ ನಿಯಂತ್ರಣ ಸಾಧಿಸುವುದಿಲ್ಲವೋ ಅವರಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಳವಿಲ್ಲ.
ಇಂದು ಸುಳ್ಳು ಆರೋಪ, ಆಧಾರರಹಿತ ಮಾತುಗಳು ಹಾಗೂ ಸಂಸ್ಕೃತಿ ಹೀನ ಮಾತುಗಳು ಜನರ ಅಪಹಾಸ್ಯಕ್ಕೀಡಾಗಿ ಮುಂದಿನ ದಿನಗಳಲ್ಲಿ ಆ ರಾಜಕಾರಣಿ ಗಂಭೀರವಾದ ವಿಚಾರಗಳನ್ನು ಹೇಳಿದಾಗಲೂ ಜನರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ರಾಜಕಾರಣದ ವ್ಯವಸ್ಥೆಯಲ್ಲಿ ರಾಹುಲ್ ಗಾಂಧಿಯವರ ಈ ಘಟನೆ ಎಲ್ಲರಿಗೂ ಎಚ್ಚರಿಕೆಯಂತಿದ್ದು, ವಿಶೇಷವಾಗಿ ಕಾಂಗ್ರೆಸಿಗರಿಗೆ ಎಚ್ಚರಿಕೆಯಾಗಿದೆ.
ವಚನ ಸಾಹಿತ್ಯ ಜನ್ಮತಾಳಿದ ಕನ್ನಡ ನಾಡಿನಲ್ಲಿ ಬಹುವಚನದ ಸಂಸ್ಕೃತಿಯನ್ನೇ ಅರಿಯದಂತೆ ಕಾಂಗ್ರೆಸಿಗರು ಮಾತನಾಡುತ್ತಿದ್ದಾರೆ. ನಾಲಿಗೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವುದರಿಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರಂತಹ ನಾಯಕರು ಬಹುವಚನ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ರಾಹುಲ್ ಗಾಂಧಿಯವರ ಘಟನೆಯಿಂದ ಎಚ್ಚೆತ್ತು ಮುಂದಿನ ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಆಧಾರರಹಿತ ಆರೋಪಗಳಿಂದ ರಾಜಕೀಯವನ್ನು ಕಲುಷಿತ ಮಾಡಬಾರದು. ಅದರಲ್ಲಿಯೂ ವ್ಯಕ್ತಿಗತ ನಿಂದನೆ, ಚಾರಿತ್ರ್ಯ ವಧೆ ಮಾಡುವವರಿಗೆ ಇದು ತಕ್ಕ ಪಾಠವಾಗಿದೆ.
ರಾಹುಲ್ ಗಾಂಧಿಯವರನ್ನು ಸಂಸದೀಯ ಸ್ಥಾನದಿಂದ ಅನರ್ಹಗೊಳಿಸಿರುವುದು ಜನಪ್ರತಿನಿಧಿಗಳು ನಾವು ಏನು ಬೇಕಿದ್ದರು ಮಾತನಾಡಬಹುದು ಎಂದುಕೊಂಡಿರುವವರಿಗೆ ತಕ್ಕ ಪಾಠವಾಗಿದೆ. ಅಲ್ಲದೆ ಮಾನನಷ್ಟ ಮೊಕದ್ದಮೆ ಎಷ್ಟು ಗಂಭೀರವಾಗಿದೆ ಎಂಬುದು ಸಾಬೀತಾಗಿದೆ. ಇನ್ನೊಬ್ಬರ ಚರಿತ್ರೆಯ ಮೇಲೆ ಮಸಿ ಬಳಿಯುವ ವಿಕೃತ ಮನಸ್ಸಿರುವವರಿಗೆ ಇದು ಪಾಠವಾಗಿದೆ. ಜನಪ್ರತಿನಿಧಿಗಳ ಮಾತಿಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಕುಶವಿದೆ ಎಂಬುದನ್ನು ನೆನಪಿಸಿದೆ. ಈ ರೀತಿಯ ಮಾತುಗಳಿಂದ ಇಂದು ರಾಹುಲ್ ಗಾಂಧಿಯವರು ಅನರ್ಹಗೊಂಡಿರುವುದು ಸಂಸತ್ತಿಗೆ ಹಾಗೂ ನೆಹರು ಕುಟುಂಬಕ್ಕೆ ಕಪ್ಪು ಚುಕ್ಕಿ ಇಟ್ಟಂತಾಗಿದೆ.
ಪ್ರಜಾಪ್ರಭುತ್ವ ಎಂದ ಮೇಲೆ ಆರೋಪ, ಟೀಕೆಗಳು ಇರಬೇಕು. ಆದರೆ, ಅದಕ್ಕೆ ಆಧಾರವಿರಬೇಕು ಹಾಗೂ ಆರೋಗ್ಯಕರವಾಗಿರುವ ಜತೆಗೆ ಸಮಾಜಮುಖಿಯಾಗಿ–ರಬೇಕು. ಇದು ದೇಶದ ಬೆಳವಣಿಗೆಗೂ ಪೂರಕ. ಜನರೂ ಕೂಡ ಅದನ್ನು ಒಪ್ಪುತ್ತಾರೆ. ಆದರೆ ನಾನೇನೇ ಮಾತನಾಡಿದರೂ ಜನ ನಂಬುತ್ತಾರೆ ಎಂಬ ಹುಂಬರಿಗೆ ಇದು ಪಾಠವಾಗಿದೆ. ನೆಹರು ಕುಟುಂಬ ಪ್ರಜಾಪ್ರಭುತ್ವದ ಅವಧಿಯ ಬಹುಪಾಲು ದೇಶದಲ್ಲಿ ಅಧಿಕಾರ ಹಿಡಿದಿದ್ದವರು. ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಿ ಅಂಕುಶ ಹಾಕಿದ ಚರಿತ್ರೆ ಈ ಕುಟುಂಬಕ್ಕಿದೆ. ಆದರೆ ಈಗ ಅದೇ ಅವರಿಗೆ ತಿರುಗಬಾಣವಾಗಿದೆ.
ಭಾರತವೆಂಬುದು ಒಂದು ಕುಟುಂಬವಿದ್ದಂತೆ. ಆದರೆ ರಾಹುಲ್ ಗಾಂಧಿ ಅವರು ದೇಶದ ಬಗ್ಗೆ ಇತರೆ ಹೊರದೇಶದ ವೇದಿಕೆಯಲ್ಲಿ ಆಧಾರರಹಿತವಾಗಿ ಮಾತನಾಡುವ ಮೂಲಕ ದೇಶದ ಘನತೆಗೆ ಮಸಿ ಬಳಿಯುವ ಕೆಲಸ ಮಾಡಿದ್ದು ಅತ್ಯಂತ ದುರ್ದೈವ. ದೇಶದ ಘನತೆಗೆ ಧಕ್ಕೆ ತರುವ ಕೆಲಸವು ಸಹ ಒಂದು ರೀತಿಯ ದೇಶ ದ್ರೋಹವೇ ಆಗಿದೆ. ಇದಕ್ಕೆ ಧಿಕ್ಕಾರ ಹೇಳಬೇಕು. ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಶ್ನೆ ಕೇಳುವುದು, ಟೀಕೆ ಮಾಡುವ ಅಧಿಕಾರ ಎಲ್ಲರಿಗೂ ಇದೆ. ಆದರೆ ಅದು ಆರೋಗ್ಯಕರವಾಗಿರಬೇಕು. ಆರೋಪಕ್ಕೆ ಆಧಾರವಿರಬೇಕು. ವ್ಯಕ್ತಿಗತವಾಗಿ ನಿಂದಿಸುವುದು, ಚಾರಿತ್ರ್ಯವಧೆ ರಾಜಕೀಯವೆನಿಸುವುದಿಲ್ಲ, ಪ್ರಶ್ನೆಯೂ ಆಗುವುದಿಲ್ಲ.
ಮತ್ತೊಂದು ಮಾತು ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೇ’ ಎಂಬಂತೆ ಬಿಜೆಪಿ ಸರ್ಕಾರ ಜನರಿಗಾಗಿ ಮಾಡಿರುವ ಕೆಲಸಗಳು, ರಾಷ್ಟ್ರೀಯತೆಯ ಪರ ನಿಲುವುಗಳು, ಕಾಶ್ಮೀರ ವಿಚಾರದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳ ಬಗ್ಗೆ ಜನರ ಬೆಂಬಲವಿದೆ. ಬಿಜೆಪಿ ಸರ್ಕಾರದ ಕೆಲಸಗಳೇ ಮಾತನಾಡುತ್ತಿವೆ, ಇನ್ನೂ ಬಾಯಿಯಿಂದ ಉತ್ತರ ಕೊಡುವ ಅವಶ್ಯಕತೆ ಇಲ್ಲ.
ಪ್ರಭುತ್ವದ ಎದುರು ಪ್ರಶ್ನೆಗಳನ್ನು ಕೇಳುವ ‘ಅಲ್ಗಾರಿದಂ’
ರಾಜಾರಾಂ ತಲ್ಲೂರು
ಪ್ರಭುತ್ವದ ಎದುರು ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ನಟರೊಬ್ಬರನ್ನು ಬಂಧಿಸಲಾಯಿತು. ಇನ್ನೆಲ್ಲೋ ಪತ್ರಕರ್ತರೊಬ್ಬರನ್ನು ಬಂಧಿಸಲಾಯಿತು, ವಿರೋಧಪಕ್ಷದ ಪ್ರಮುಖ ನಾಯಕರೊಬ್ಬರಿಗೆ ಮಾತಿನ ಮನೆಯಲ್ಲೇ ಮಾತನಾಡುವ ಅವಕಾಶ ನಿರಾಕರಿಸಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಲಾಯಿತು. ಈಗ ಅವರ ಲೋಕಸಭೆ ಸದಸ್ಯತ್ವವನ್ನೇ ಅನರ್ಹ ಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಭುತ್ವದ ಎದುರು ಪ್ರಶ್ನೆಗಳನ್ನು ಕೇಳುವುದು ಮತ್ತು ಉತ್ತರದಾಯಿತ್ವವನ್ನು ಬಯಸುವುದು ಅಪರಾಧವೇ ಎಂಬ ಪ್ರಶ್ನೆಯೊಂದು ಧುತ್ತೆಂದು ಎದುರು ಬಂದು ನಿಂತಿದೆ. ಇಂತಹದೊಂದು ಪ್ರಶ್ನೆ ಎದುರು ಬಂದು ನಿಲ್ಲುವ ಪರಿಸ್ಥಿತಿ ಬಂದಿದೆ ಎಂಬುದೇ ಅಭೂತ ಪೂರ್ವ!
ಒಂದು ಚುನಾಯಿತ ಸರ್ಕಾರವು “ಉತ್ತರದಾಯಿತ್ವಕ್ಕೆ” ಬೆನ್ನು ಹಾಕಿ ನಿಂತಾಗ, ಉತ್ತರ ಕೊಡಲು ನಾವು ಸಿದ್ಧರಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದಾಗ ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆ ಅದನ್ನು ಹೇಗೆ ಸ್ವೀಕರಿಸಬೇಕು? ಇದಕ್ಕೆ ಇತ್ತೀಚಿನ ಉದಾಹರಣೆ ಕೋವಿಡ್ ಕಾಲದಿಂದ ಆರಂಭಗೊಂಡಿರುವ ಹಠಾತ್ ಸಾವುಗಳು ಮತ್ತು ಹೃದಯಾಘಾತಗಳ ಸಂಖ್ಯೆಯಲ್ಲಿ ಆಗಿರುವ ಅಸಹಜ ಹೆಚ್ಚಳ. ದೇಶದ ಎಲ್ಲೆಡೆ ಇದು ಜನರ ಗಮನ ಸೆಳೆಯುತ್ತಿದೆ. ಜನರ ಜೀವ ರಕ್ಷಣೆ ಪರಮೋಚ್ಛ ಕರ್ತವ್ಯ ಆಗಿರುವ ಒಂದು ಸರ್ಕಾರವು ಈ ಬಗ್ಗೆ ಸಂಸತ್ತಿನಲ್ಲಿ ಪ್ರತಿಪಕ್ಷ ಪ್ರಶ್ನೆ ಕೇಳಿದಾಗ, ತಾನು ಆ ಅಂಕಿಸಂಖ್ಯೆಗಳನ್ನು ಇಟ್ಟುಕೊಂಡಿಲ್ಲ. ಈ ಸಾವಿಗೆ ಕಾರಣಗಳ ಪತ್ತೆ ಮಾಡಲು icmr ಯಾವುದೇ ಅಧ್ಯಯನ ಆರಂಭಿಸಿಲ್ಲ ಎಂಬ ಉತ್ತರ ನೀಡುತ್ತದೆ. (ಲೋಕಸಭೆಯಲ್ಲಿ ಚುಕ್ಕೆರಹಿತ ಪ್ರಶ್ನೆ ಸಂಖ್ಯೆ 2990, ದಿನಾಂಕ 17–3–2023). ಕೋವಿಡ್ ಕಾಲದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ 2005ರ ಅಡಿಯಲ್ಲಿ ಆರೋಗ್ಯ ಸಂಬಂಧಿ ‘ತುರ್ತುಸ್ಥಿತಿ’ಯನ್ನು ತಾನೇ ಸ್ವತಃ ndma ಮೂಲಕ ನಿಭಾಯಿಸಿದ್ದರ ಕುರಿತು ಅಧಿಕೃತವಾಗಿಯೇ ‘ಜಾಣ ಮರೆವು’ ತೋರಿಸುತ್ತದೆ. ಕೇಳಿದಾಗಲೆಲ್ಲ ಆರೋಗ್ಯವು ರಾಜ್ಯ ಪಟ್ಟಿಯ ವಿಷಯ, ಅದು ತನ್ನ ಜವಾಬ್ದಾರಿ ಅಲ್ಲ ಎಂದು ತಟ್ಟಿ ಹಾರಿಸುತ್ತದೆ. ಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು.
ಹೀಗೆ ಸರ್ಕಾರವೊಂದು ತಾನು ಉತ್ತರದಾಯಿ ಅಲ್ಲ ಎಂಬುದನ್ನು ಕಾಯಿದೆಗಳಲ್ಲಿರುವ ನುಸುಳು ಹಾದಿಗಳ ಮೂಲಕವೇ ಜಾರಿ ತೋರಿಸಿಕೊಂಡಾಗ, ಸಹಜವಾಗಿಯೇ ಪ್ರಶ್ನೆಗಳು ಅಸಹನೆಯ ಹಾದಿ ಹಿಡಿಯುತ್ತವೆ. ಪ್ರಭುತ್ವದೆದುರು ಪ್ರಶ್ನೆ ಕೇಳಿ ಪಡಿಪಾಟಲಿಗೆ ಸಿಕ್ಕಿಹಾಕಿಕೊಂಡಿರುವ ಹೆಚ್ಚಿನವರ ಸಮಸ್ಯೆ ಇದು. ತಮ್ಮ ಪ್ರಶ್ನೆಗಳು ಸುಲಭವಾಗಿ ಜನರ ಗಮನ ಸೆಳೆಯಬೇಕೆಂಬ ಕಾರಣಕ್ಕೆ, ಕೇಳುವ ಪ್ರಶ್ನೆಗಳನ್ನು (ಅವು ಸತ್ಯವೇ ಆಗಿದ್ದರೂ) ‘ಜ್ಯೂಸಿ’ಗೊಳಿಸಿದಾಗಲೆಲ್ಲ, ಬಹಳ ಸಶಕ್ತವಾದ ರೆಸ್ಪಾನ್ಸ್ ಮೆಷಿನರಿ ಹೊಂದಿರುವ ಆಡಳಿತ ಪಕ್ಷದ ನಿಗಾ ಘಟಕಗಳೆಲ್ಲ ಏಕಾಏಕಿ ಕಾರ್ಯಾರಂಭಿಸಿ ಬಿಡುತ್ತವೆ. ಇದರ ಫಲವೇ ಸಾಲು ಸಾಲು ಕ್ರಿಮಿನಲ್ ಮೊಕದ್ದಮೆಗಳು. ಇಂತಹದೆಲ್ಲ ನಡೆದಾಗ, ಎತ್ತಬೇಕಾದ ಮಹತ್ವದ ಪ್ರಶ್ನೆಗಳೆಲ್ಲ ಬದಿಗೆ ಸರಿದು ಯಾವ್ಯಾವುದೋ ಪಿಟ್ಕಾಯಣಗಳು ಮುನ್ನೆಲೆಗೆ ಬರುತ್ತವೆ. ಆಳುವವರು ಇದನ್ನೇ ಕಾದುಕೊಂಡಿರುತ್ತಾರೆ! ಸರಳವಾಗಿ ಹೇಳಬೇ–ಕೆಂ–ದರೆ, ಒಂದು ಸರ್ಕಾರದ ಆಡಳಿತ ವೈಖರಿಯನ್ನು ಒಂದಿಡೀ ಅವಧಿಗೆ ಗಮನಿಸಿದ ಬಳಿಕವೂ, ಅದರ ಆಡಳಿತ ನ್ಯೂನತೆಗಳ ಕುರಿತು ಪ್ರಶ್ನೆಗಳನ್ನು ಎತ್ತಿಕೊಂಡೇ ಪ್ರಭುತ್ವವನ್ನು ಉತ್ತರದಾಯಿ ಆಗಿಸಲು ಸಾಧ್ಯವಾಗದಿದ್ದರೆ, ಅದು ಪ್ರಶ್ನಿಸುವವರಲ್ಲೇ ಇರುವ ಕೊರತೆ ಅನ್ನಿಸುತ್ತದೆ. ಆ ರೀತಿಯ ಪ್ರಶ್ನೆಗಳು ಶ್ರಮವನ್ನು ಬೇಡುತ್ತವೆ. ಯಾವುದೋ ಜನಮನ ಕೆರಳಿಸುವ “ಜ್ಯೂಸಿ” ಪ್ರಶ್ನೆಗಳನ್ನು ಎತ್ತಿಕೊಂಡು ಪ್ರಶ್ನಿಸತೊಡಗಿದರೆ, ಅದರಿಂದ ಸಮಸ್ಯೆಗಳೇ ಹೆಚ್ಚು.
ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಇರುವ ಏಕೈಕ ಹಾದಿ ಎಂದರೆ, ಪ್ರಶ್ನಿಸಲು ಸರಿಯಾದ ಅಲ್ಗಾರಿದಂ ಬಳಸುವುದು. ಸರ್ಕಾರ ತನ್ನನ್ನು ಪ್ರಶ್ನಿಸುವವರನ್ನು ಹತ್ತಿಕ್ಕಲು ಯಾವ ಕಾನೂನುಗಳನ್ನು ಬಳಸುತ್ತಿದೆಯೋ, ಅದೇ ಕಾನೂನುಗಳನ್ನು ಬಳಸಿಕೊಂಡು, ದಾಖಲೆಗಳನ್ನು ಮುಂದಿಟ್ಟು, ಕಾನೂನುಬದ್ಧವಾಗಿಯೇ ಪ್ರಶ್ನೆಗಳನ್ನು ಕೇಳತೊಡಗುವುದು ಸರಿಯಾದ ‘ಅಲ್ಗಾರಿದಂ’. ಸಾಂಪ್ರದಾಯಿಕವಾಗಿ ಮಾಧ್ಯಮಗಳು ಈ ಕೆಲಸವನ್ನು ಮಾಡುತ್ತಿದ್ದವು. ಆದರೆ ಈಗ ಅವು ಅದನ್ನು ಮರೆತಿರುವ ಹಿನ್ನೆಲೆಯಲ್ಲಿ, ನಾಗರಿಕರ ಕಡೆಯಿಂದಲೇ ಈ ಹೊರೆಯನ್ನೂ ಹೊರುವ ಕೆಲಸಗಳು ಆಗಬೇಕಾಗಿವೆ. ಈ ರೀತಿಯ ಪ್ರಶ್ನೆಗಳು ತಕ್ಷಣ ಜನಮನ ಸೆಳೆಯಲಾರವು. ಆದರೆ, ಇಂತಹ ಪ್ರಶ್ನೆಗಳು ನೂರಾರು ಸಂಖ್ಯೆಯಲ್ಲಿ ಎದ್ದಾಗ, ಒಂದಿಲ್ಲೊಂದು ಹಂತದಲ್ಲಿ ಆಡಳಿತವು ಉತ್ತರದಾಯಿ ಆಗುವುದು ಅನಿವಾರ್ಯವಾಗುತ್ತದೆ. ತಮ್ಮ ಕಣ್ಣೆದುರೇ ನಡೆದಿರುವ ಅನಾಚಾರಗಳಿಗೆ ಉತ್ತರದಾಯಿ ಆಗದ ಸರ್ಕಾರದ ವೈಫಲ್ಯಗಳ ಬಿಸಿ ಅವರದೇ ಮತದಾರರನ್ನೂ ಒಂದಿಲ್ಲೊಂದು ಕಡೆ ತಟ್ಟಿರುತ್ತದೆ ಎಂಬುದನ್ನು ಆಡಳಿತ ಚುಕ್ಕಾಣಿ ಹಿಡಿದಿರುವವರು ಮರೆಯುವಂತಿಲ್ಲ.