Light
Dark

ನಿರೀಕ್ಷೆಯಂತೆ ಏರುಮುಖದಲ್ಲಿ ಬಡ್ಡಿ ದರಗಳು  

ಭಾರತದ ಆರ್ಥಿಕ ಬುನಾದಿ ಇತರರಿಗಿಂತ ಸುಭದ್ರವಾಗಿದೆ. ಸದ್ಯಕ್ಕೆ ಬೇರೆ ದೇಶಗಳಂತೆ ಆರ್ಥಿಕ ಹಿಂಜರಿತದ ಭಯವಿಲ್ಲ!

ಪ್ರೊ.ಆರ್.ಎಂ.ಚಿಂತಾಮಣಿ

ರಿಜರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ದ್ವೈಮಾಸಿಕ ಸಭೆಯು ಕಳೆದ ಶುಕ್ರವಾರ ಮುಂದಿನ ಎರಡು ತಿಂಗಳಿಗಾಗಿ ರೆಪೊ ದರವನ್ನು (ಬ್ಯಾಂಕುಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ತಾನು ಕೊಡುವ ಅಲ್ಪಾವಧಿ ತಾತ್ಕಾಲಿಕ ಸಾಲದ ಮೇಲಿನ ಬಡ್ಡಿ ದರ) ಶೇ.೫.೯೦ಕ್ಕೆ ನಿಗದಿಪಡಿಸಿದೆ. ಇದರಿಂದ ಹಣದುಬ್ಬರ (ಬೆಲೆಯೇರಿಕೆ) ಕಾಟದಿಂದಾಗಿ ಇದೇ ಮೇ ತಿಂಗಳಿಂದ ನಾಲ್ಕು ಬಾರಿ (ಶೇ.೦.೪೦, ೦.೫೦, ೦.೫೦ ಮತ್ತು ೦.೫೦) ನೀತಿಯ ದಿಕ್ಸೂಚಿ ರೆಪೊ ದರ (ರಿಜರ್ವ್ ಬ್ಯಾಂಕು ತನ್ನಲ್ಲಿಟ್ಟ ಬ್ಯಾಂಕುಗಳ ಅಲ್ಪಾವಧಿ ಠೇವಣಿಗಳ ಮೇಲೆ ಕೊಡುವ ಬಡ್ಡಿ ದರ) ಮತ್ತು ಬ್ಯಾಂಕ್ ರೇಟ್ (ಬ್ಯಾಂಕುಗಳಿಗೆ ಆಪತ್ಕಾಲದಲ್ಲಿ ಕೊಡುವ ಸಾಲಗಳ ಮೇಲೆ ಆಕರಿಸುವ ಬಡ್ಡಿ ದರ) ಅನುಕ್ರಮವಾಗಿ ಶೇ.೫.೬೫ ಮತ್ತು ಶೇ.೬.೧೫ ಮಟ್ಟಕ್ಕೆ ನಿಲ್ಲುತ್ತವೆ.

ಎಲ್ಲ ಕೇಂದ್ರೀಯ ಬ್ಯಾಂಕುಗಳೂ ಹೀಗೇ ಮಾಡುತ್ತಿವೆ. ಅಲ್ಲದೆ ‘ತಟಸ್ಥ’ ನಿಲುವಿಗೆ ತಿರುಗುವುದಾಗಿ ಹೇಳುತ್ತಿದ್ದ ಕೇಂದ್ರೀಯ ಬ್ಯಾಂಕು ಈಗ ತಾನೆ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳುತ್ತಿರುವ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಪೂರಕವಾಗುವಂತೆ ‘ಉದಾರ ನಿಲುವ’ನ್ನು (accommodative stance) ಮುಂದುವರಿಸುವುದಾಗಿಯೂ ಹಂತ ಹಂತವಾಗಿ ವ್ಯವಸ್ಥೆಯಲ್ಲಿಯ ನಗದು ಹರಿವನ್ನು(liquidity) ಬಿಗಿಗೊಳಿಸುವುದಾಗಿಯೂ ಹೇಳಿದೆ.

ಆರ್ಥಿಕ ಬೆಳವಣಿಗೆಗೆ ಹಣದುಬ್ಬರ ಅಡ್ಡಗಾಲು

ಜಾಗತಿಕ ಮಟ್ಟದಲ್ಲಿ ಮೂರು ಆತಂಕಕಾರಿ ಅನಿಶ್ಚಿತತೆಗಳನ್ನು ಗುರುತಿಸಲಾಗಿದೆ. ಎಲ್ಲ ದೇಶಗಳಲ್ಲೂ ಮಿತಿ ಮೀರಿದ ಹಣ ದುಬ್ಬರದಿಂದ ಆರ್ಥಿಕ ಬೆಳವಣೆಗೆ ಕುಂಠಿತವಾಗಿ ಆರ್ಥಿಕ ಹಿಂಜರಿತದ ಭಯ ಕಾಡುತ್ತಿದೆ. ವಿಶೇಷವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಐವತ್ತು ವರ್ಷಗಳಿಂದ ಕಾಣದ ಬೆಲೆಯೇರಿಕೆಯಿಂದ ಆರ್ಥಿಕ ಹಿಂಜರಿತ ಈಗಾಗಲೇ ಕಾಲಿಟ್ಟಿದೆ. ಎರಡನೆಯದಾಗಿ ಉಕ್ರೇನ್- ರಶಿಯಾ ನಡುವೆ ಮುಂದುವರಿಯುತ್ತಿರುವ ಯುದ್ಧದಿಂದ ಇನ್ನೊಂದೆಡೆ ಚೀನ- ಆಮೆರಿಕ ನಡುವಿನ ಶೀತಲ ಸಮರದಿಂದ ವಿಶ್ವ ಪೂರೈಕೆ ಸರಪಳಿಯಲ್ಲಿ ದೊಡ್ಡ ಸಮಸ್ಯೆಗಳುಂಟಾಗುತ್ತವೆ. ಮೂರನೆಯದಾಗಿ ಹಣಕಾಸು ಪೇಟೆಗಳು ಆತಂತ್ರ ಸ್ಥಿತಿಯಲ್ಲಿದ್ದು ಏರಿಳಿತಗಳು ನಿರೀಕ್ಷೆ ಮೀರಿ ಘಟಿಸುತ್ತಿವೆ. ಕಚ್ಚಾ ತೈಲವೂ ಸೇರಿ ಉತ್ಪಾದನೆಗಳ ಬೆಲೆಗಳು ಇಳಿಮುಖವಾಗಿದ್ದು, ಆಮದು ದೇಶಗಳಿಗೆ ವರವಾದರೆ ರಫ್ತು ದೇಶಗಳಿಗೆ ಶಾಪವಾಗುತ್ತಿವೆ.

ಬ್ರಿಟನ್, ಆಮೆರಿಕ, ಯುರೋಪಿಯನ್ ಯೂನಿಯನ್ ಸೆಂಟ್ರಲ್ ಬ್ಯಾಂಕುಗಳು ಸೇರಿದಂತೆ ಬಹುತೇಕ ಎಲ್ಲ ದೇಶಗಳಲ್ಲಿ ಹಣದುಬ್ಬರ ನಿಂಯತ್ರಿಸಲು ಬಡ್ಡಿ ದರಗಳನ್ನು ಹೆಚ್ಚಿಸಲಾಗುತ್ತಿದೆ. ಯೂರೋಪ್- ಆಮೆರಿಕಗಳಲ್ಲಿ ಇದು ಹೆಚ್ಚು. ತಮ್ಮ ದೇಶಗಳ ಸಮಸ್ಯೆಗಳನ್ನೆದುರಿಸಲು ಅಲ್ಲಿಯ ಕೇಂದ್ರಿಯ ಬ್ಯಾಂಕುಗಳು ಕ್ರಮ ಕೈಗೊಂಡರೂ ಪರಿಣಾಮ ಎಲ್ಲರ ಮೇಲೂ ಆಗುತ್ತದೆ. ಇಂದಿನದ್ದು ‘ಗೋಬಲ್ ವಿಲೇಜ್’, ಎಲ್ಲ ದೇಶಗಳೂ ಒಂದಿಲ್ಲೊಂದು ಕಾರಣಕ್ಕೆ ಪರಸ್ಪರಾವಂಬಿಗಳು. ಲಾಭ ನಷ್ಟಗಳೆರಡೂ ಎಲ್ಲ ದೇಶಗಳಿಗೂ ಹರಡುತ್ತವೆ. ಆಮೆರಿಕದಲ್ಲಿ ಬಡ್ಡಿ ದರ ಹೆಚ್ಚಿದ್ದರಿಂದ ಭಾರತವೂ ಸೇರಿ ಎಲ್ಲ ತೀವ್ರ ಬೆಳೆಯುತ್ತಿರುವ ದೇಶಗಳಿಂದ ವಿದೇಶಿ ಪೇಟೆ ಹೂಡಿಕೆಗಳು (foreign portfolio investments ) ಹೊರ ಹೋಗುತ್ತಿರುವುದು ಹೆಚ್ಚಾಗಿದೆ. ಇದರಿಂದ ಈ ದೇಶಗಳ ವಿದೇಶಿ ವಿನಿಮಯ ನಿಧಿಯ ಮೇಲೆ ಒತ್ತಡ ಬಿದ್ದು ನಾಣ್ಯಗಳು ಡಾಲರ್ ವಿರುದ್ಧ ಮೌಲ್ಯ ಕಳೆದುಕೊಂಡಿರುತ್ತವೆ. ಆಮದು ವೆಚ್ಚ ಹೆಚ್ಚಾಗಿ ಹಣದುಬ್ಬರವನ್ನೂ ಆಮದು ಮಾಡಿಕೊಂಡಂತಾಗಿದೆ.

ಭಾರತದ ಇಂದಿನ ಸ್ಥಿತಿಯನ್ನು ಗಮನಿಸಿದರೆ ನಮ್ಮ ಆರ್ಥಿಕ ಬುನಾದಿ ಇತರರಿಗಿಂತ ಸುಭದ್ರವಾಗಿದೆ ಎಂದು ರಿಜರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಒಪ್ಪಿಕೊಳ್ಳುತ್ತಾರೆ. ಭಾರತದ ವಿದೇಶಿ ವಿನಿಮಯ ನಿಧಿ ಸೆಪ್ಟೆಂಬರ್ ಕೊನೆಯ ಹೊತ್ತಿಗೆ ೨೩೫ ಬಿಲಿಯನ್ ಡಾಲರಿಗೂ ಹೆಚ್ಚಾಗಿದ್ದು, ರೂಪಾಯಿ ಬೆಲೆ ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಸದ್ಯಕ್ಕೆ ಇತರರಂತೆ ಆರ್ಥಿಕ ಹಿಂಜರಿತದ ಭಯವಿಲ್ಲ.

ಈ ಹಣಕಾಸು ವರ್ಷದ ಆರಂಭದಿಂದಲೂ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ರಿಜರ್ವ್ ಬ್ಯಾಂಕಿನ ಗರಿಷ್ಟ ತಾಳಿಕೊಳ್ಳುವ ಮಿತಿಗಿಂತ (ಶೇ.೬.೦) ಮೇಲೆಯೇ ಮುಂದುವರಿದಿದೆ. ಜುಲೈನಲ್ಲಿ ಶೇ.೬.೭ ಇದ್ದದ್ದು ಆಗಸ್ಟ್‌ನಲ್ಲಿ ಶೇ.೭.೦ಕ್ಕೆ ಹೋಗಿತ್ತು. ಇಂಧನ ಮತ್ತು ಆಹಾರ ಪದಾರ್ಥಗಳ ಹಣದುಬ್ಬರ ಇದಕ್ಕಿಂತ ಮೇಲೆಯೇ ಇದ್ದವು.

ರಿಜರ್ವ್ ಬ್ಯಾಂಕ್ ಮೊದಲು ಆದ್ಯತೆ ಮತ್ತು ಜವಾಬ್ದಾರಿ ಹಣದುಬ್ಬರ ನಿಯಂತ್ರಣ ಮತ್ತು ಬೆಲೆಗಳಲ್ಲಿ ಸ್ಥಿರತೆ ಆಗಿರುವುದರಿಂದ ನೀತಿಯ ಬಡ್ಡಿ ದರಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಇದರಿಂದ ಬೆಳೆವಣಿಗೆಯ ಗತಿಗೆ ಹಾನಿಯಾಗಿ ಅರ್ಥ ವ್ಯವಸ್ಥೆ ಹಿಂಜರಿತಕ್ಕೆ ಒಳಗಾಗಬಾರದೆಂಬ ಎಚ್ಚರಿಕೆ ವಹಿಸುವುದೂ ಅವಶ್ಯವಾಗಿತ್ತು. ಆದ್ದರಿಂದಲೇ ಪಾಶ್ಚಿಮಾತ್ಯ ದೇಶಗಳ ಕೇಂದ್ರೀಯ ಬ್ಯಾಂಕುಗಳಿಗಿಂತ ಕಡಿಮೆ ಮಟ್ಟದಲ್ಲಿ ನೀತಿ ದರಗಳನ್ನು ಹೆಚ್ಚಿಸಿದೆ. ನಗದುಹರಿವು ಕಡಿಮೆ ಮಾಡಿಲ್ಲ. ಇಲ್ಲಿ ಶ್ರೀಮಂತ ದೇಶಗಳ ಒಂದು ಮಾಹಿತಿ ದಾಖಲಿಸಬೇಕು. ೨೦೦೮-೦೯ರ ಆರ್ಥಿಕ ಹಿಂಜರಿತದ ನಂತರ ಅಲ್ಲಿಯ ಕೇಂದ್ರಿಯ ಬ್ಯಾಂಕುಗಳು ಅರ್ಥವ್ಯವಸ್ಥೆಯನ್ನು ಮೇಲೆತ್ತಲು ವ್ಯವಸ್ಥೆಗೆ ನಗದು ಹರಿವು ಹೆಚ್ಚಿಸಲು ಹಲವು ಮಾರ್ಗಗಳನ್ನು (ಬಡ್ಡಿ ದರ ತೀವ್ರ ಇಳಿತ, ಬಾಂಡ್ ಖರೀದಿ ಮುಂತಾದ) ಅನುಸರಿಸಿದವು. ಅದಕ್ಕೆ ಈಗ ಪರಿಮಾಣಾತ್ಮಕ ಸರಳಗೊಳಿಸುವಿಕೆ (ಕ್ವಾಂಟಿಟೇಟಿವ್ ಈಸಿಂಗ್- ಕ್ಯೂ.ಇ.) ಎಂದು ಕರೆಯಲಾಯಿತು. ಈಗ ಅದೇ ಬ್ಯಾಂಕುಗಳು ಹಣದುಬ್ಬರ ನಿಯಂತ್ರಿಸಲು ನಗದು ಹರಿವು ಬಿಗಿಗೊಳಿಸಲು ಕ್ವಾಂಟಿಟೇಟಿವ್ ಟೈಟನಿಂಗ್ (ಕ್ಯೂ.ಟಿ.) ಮಾರ್ಗಗಳನ್ನು ಬಳಸುತ್ತಿವೆ.

ಮುನ್ನೋಟ

ನೀತಿ ಬಡ್ಡಿ ದರಗಳನ್ನು ಏರಿಸಿಯಾಯಿತು. ೨೦೨೨-೨೩ರಲ್ಲಿ ದೇಶದಲ್ಲಿ ಜಿಡಿಪಿ ಶೇ.೭.೦ ರಷ್ಟು ಬೆಳೆಯುವುದೆಂದೂ (ಹಿಂದಿನ ಅಂದಾಜು ಶೇ.೭.೨) ವರ್ಷದಲ್ಲಿ ಸರಾಸರಿ ಶೇ.೬.೭ ಹಣದುಬ್ಬರ ಇರಲಿದೆ ಎಂದೂ ಅಂದಾಜಿಸಲಾಗಿದೆ. ೨೦೨೩-೨೪ರ ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರ ಶೇ.೫.೨ಕ್ಕೆ ಇಳಿಯಬಹುದೆಂದೂ ಎರಡು ವರ್ಷಗಳ ನಂತರ ಅದು ಹಿಡಿತಕ್ಕೆ ಬಂದು ಶೇ.೪.೦ಕ್ಕೆ ಇಳಿಯಲಿದೆ ಎಂದೂ ಗವರ್ನರ್ ದಾಸ್ ಹೇಳಿದ್ದಾರೆ.

ಇದಕ್ಕೆ ಹಲವು ಆಧಾರಗಳಿವೆ. ನಮ್ಮ ಬ್ಯಾಂಕುಗಳು ಈಗಾಗಲೇ ಕೆಲವು ಸಾಲಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ. ಬೇರೆ ಸಾಲಗಳಿಗೂ ಹೆಚ್ಚಿಸುತ್ತವೆ. ಅದೇ ರೀತಿ ಠೇವಣಿಗಳ ಮೇಲಿನ ದರಗಳನ್ನೂ ಅದೇ ಪ್ರಮಾಣದಲ್ಲಿ ಹೆಚ್ಚಿಸಬೇಕು. ಬಡ್ಡಿ ಆದಾಯವನ್ನೇ ನಂಬಿಕೊಂಡು ಕುಟುಂಬಗಳ ಬೆಲೆಯೇರಿಕೆಗಳ ನೋವು ಕಡಿಮೆಯಾದೀತು. ಠೇವಣಿಗಳ ಮೇಲಿನ ದರಗಳನ್ನೂ ಅದೇ ಪ್ರಮಾಣದಲ್ಲಿ ಹೆಚ್ಚಿಸಬೇಕು. ಬಡ್ಡಿ ಆದಾಯವನ್ನು ನಂಬಿಕೊಂಡ ಕುಟುಂಬಗಳ ಬೆಲೆಯೇರಿಕೆಯ ನೋವು ಕಡಿಮೆಯಾದೀತು. ಠೇವಣಿಗಳೂ ಹೆಚ್ಚಾಗಿ ಹೂಡಿಕೆಗಳಿಗೆ ಹೆಚ್ಚು ಸಂಪನ್ಮೂಲ ದೊರೆತು ಉತ್ಪಾದನೆ, ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಹಣದುಬ್ಬರ ತಾನೇ ಕಡಿಮೆಯಾಗುವುದಲ್ಲದೆ ಬೆಳವಣಿಗೆಯ ಗತಿ ಹೆಚ್ಚಾಗಿ ಆರ್ಥಿಕ ಹಿಂಜರಿತದ ಭಯವೂ ಇರುವುದಿಲ್ಲ.

ಒಂದು ಮಾತು: ರಿಜರ್ವ್ ಬ್ಯಾಂಕು ತನ್ನ ಪ್ರಥಮ ಜವಾಬ್ದಾರಿ ನಿಭಾಯಿಸುವ ಬಿಗು ನೀತಿ ಮತ್ತು ಸರ್ಕಾರದ ಹೊಣೆಗಾರಿಕೆ ಬೆಳೆವಣಿಗೆಗೆ ಪೂರಕವಾದ ಉದಾರ ನೀತಿ ಎರಡರ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತಿತ್ತು. ಶಕ್ತಿಕಾಂತ ದಾಸ್ ಮತ್ತು ಸಮಿತಿಯವರು ಎರಡನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ. ಅಭಿನಂದನೆಗಳು!

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ