ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದು ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಉದ್ಯಾನವವನ್ನು ಒಳಗೊಂಡಿರುವ ಪ್ರವಾಸಿ ತಾಣವಾಗಿದೆ. ಬೆಟ್ಟಕ್ಕೆ ಪ್ರತಿದಿನ ಪ್ರವಾಸಿಗರು ಬರುತ್ತಲೇ ಇರುತ್ತಾರೆ.
ಇಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಜಾತ್ರೆ ಸಂದರ್ಭದಲ್ಲಿ ಹಿಮವದ್ ಗೋಪಾಲಸ್ವಾಮಿ ಕಲ್ಯಾಣೋತ್ಸವವನ್ನು ಏರ್ಪಡಿಸಲಾಗುತ್ತದೆ. ನಂತರ ಗೋಪಾಲಸ್ವಾಮಿಯ ದಿವ್ಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರುತ್ತದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟವು ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಬೆಟ್ಟವಾಗಿದ್ದು, ಸುಮಾರು ೧,೪೫೦ ಅಡಿ ಎತ್ತರವಿದೆ. ಬೆಟ್ಟಪ್ರದೇಶವು ಅತಿ ಎತ್ತರದ ವಿಶಾಲ ಪ್ರದೇಶವನ್ನು ಹೊಂದಿದ್ದು, ತಂಗಾಳಿಯೊಂದಿಗೆ ಮುಂಜಾನೆ ಹಾಗೂ ಸಂಜೆ ಸದಾ ಹಿಮದಿಂದ ಆವೃತವಾಗುವುದರಿಂದ ಮತ್ತು ಗೋಪಾಲಸ್ವಾಮಿ ನೆಲೆ ನಿಂತಿರುವುದರಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ.
ಹಿಮವದ್ ಗೋಪಾಲಸ್ವಾಮಿ ದೇಗುಲಕ್ಕೆ ಸುಮಾರು ಏಳು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ ಎನ್ನಲಾಗಿದೆ. ಇತಿಹಾಸದ ಪ್ರಕಾರ ಹೊಯ್ಸಳ ದೊರೆ ಚೋಳ ಬಲ್ಲಾಳ ಈ ದೇವಾಲಯವನ್ನು ನಿರ್ಮಿಸಿದ್ದು, ಮೈಸೂರಿನ ಒಡೆಯರ ಕಾಲದಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಲಾಯಿತು ಎನ್ನಲಾಗಿದೆ. ಒಂದೇ ಸುತ್ತು ಪೌಳಿಯಲ್ಲಿ ನಿರ್ಮಾಣವಾಗಿರುವ ದೇವಾಲಯ ವಿಶಾಲ ಆವರಣವನ್ನು ಹೊಂದಿದ್ದು, ಮುಖಮಂಟಪದಲ್ಲಿ ದಶಾವತಾರದ ಕೆತ್ತನೆಗಳು, ಬಲಿಪೀಠ, ಧ್ವಜ ಸ್ತಂಭಗಳು ಆಕರ್ಷಕವಾಗಿವೆ.
ದ್ವಾಪರ ಯುಗದ ಗೋವರ್ಧನಗಿರಿಯೇ ಈ ಗೋಪಾಲಸ್ವಾಮಿ ಬೆಟ್ಟ ಎಂಬ ಪ್ರತೀತಿ ಇದೆ. ಇಲ್ಲಿನ ದೇಗುಲದಲ್ಲಿ ರುಕ್ಮಿಣಿ, ಸತ್ಯಭಾಮೆಯರ ಸಹಿತ ಶ್ರೀಕೃಷ್ಣನನ್ನು ಸಂತಾನ ಗೋಪಾಲಕೃಷ್ಣ ಎಂದೂ ಕರೆಯಲಾಗುತ್ತದೆ. ಇಲ್ಲಿನ ಮೂಲ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರೆಂದೂ ಹೇಳಲಾಗುತ್ತದೆ. ಈ ಬೆಟ್ಟವನ್ನು ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಿರಿ, ಹಂಸಾದ್ರಿ, ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನ ಗಿರಿ ಮೊದಲಾದ ಬೆಟ್ಟಗಳು ಸುತ್ತುವರಿದಿವೆ.
ವಿಶೇಷ ಬಸ್ ಸೌಲಭ್ಯ: ಹಿವಮದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರತಿನಿತ್ಯ ಬಸ್ ವ್ಯವಸ್ಥೆ ಇದೆ. ಆದರೆ ಬ್ರಹ್ಮ ರಥೊತ್ಸವದ ದಿನ ಗುಂಡ್ಲುಪೇಟೆ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಇರುತ್ತದೆ. ಖಾಸಗಿ ವಾಹನಗಳಲ್ಲಿ ತೆರಳುವವರು, ಚೆಕ್‌ಪೋಸ್ಟ್ ಬಳಿ ಇರುವ ಅರಣ್ಯ ಇಲಾಖೆ ಆವರಣದಲ್ಲಿ ಪಾರ್ಕಿಂಗ್ ಮಾಡಿ, ಬೆಟ್ಟಕ್ಕೆ ಸೀಮಿತವಾಗಿ ನಿಗದಿಪಡಿಸಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಅರಣ್ಯ ಇಲಾಖೆಯಿಂದ ಜೀಪ್‌ನಲ್ಲಿ ಕರೆದೊಯ್ಯುವ ವ್ಯವಸ್ಥೆಯೂ ಇದೆ.
“ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋದಾಗ ಊಟಿಯಲ್ಲಿರುವ ಅನುಭವವಾಗುತ್ತದೆ. ಬೇಸಿಗೆಯಲ್ಲೂ ತಂಪಾದ ವಾತಾವರಣ ಇರುತ್ತದೆ. ಶೀತ ಗಾಳಿ ಬೀಸುತ್ತದೆ. ಇನ್ನು ಬೇರೆ ದಿನಗಳಲ್ಲಿ ಮಂಜು ಕವಿದ ವಾತಾವರಣದ ಆಹ್ಲಾದಕರ ಅನುಭವದ ಜೊತೆಗೆ ದೇವಾಲಯದ ಸುತ್ತಲಿನ ಮನಮೋಹಕ ದೃಶ್ಯ ಎಲ್ಲರನ್ನೂ ಆಕರ್ಷಿಸುತ್ತದೆ. ಹಾಗಾಗಿಯೇ ವಿವಿಧ ರಾಜ್ಯಗಳಿಂದ, ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಭಾಗಿಯಾಗಿ ಕಣ್ತುಂಬಿ ಕೊಳ್ಳುತ್ತಾರೆ.”
– ಮಹೇಂದ್ರ ಹಸಗೂಲಿ





