ಆಗಸ್ಟ್‌ನಲ್ಲಿ ಉದ್ಯೋಗ ಅರಸುವವರ ಸಂಖ್ಯೆ ೪.೩೦ ಕೋಟಿ ಇತ್ತು. ಇವರೆಲ್ಲರಿಗೆ ಕೆಲಸ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ!

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿಯ ಗೆಜೆಟೆಡ್ ಅಧಿಕಾರಿಗಳೂ ಸೇರಿ ವಿವಿಧ ಹಂತಗಳಲ್ಲಿಯೂ ಖಾತೆ ಇರುವ ೭೫೦೦೦ ಸ್ಥಾನಗಳಿಗೆ ಆಯ್ಕೆಯಾಗಿರುವವರಿಗೆ ನೇಮಕಾತಿ ಪತ್ರಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿಯವರ ಹಸ್ತದಿಂದ ಕೊಡಿಸುವ ಮೂಲಕ ಶನಿವಾರ ೨೨ ಅಕ್ಟೋಬರ್ ೨೦೨೨ರಂದು ‘ರೋಜಗಾರ ಮೇಳ’ವನ್ನು ಉದ್ಘಾಟಿಸಲಾಯಿತು. ರಾಜ್ಯಗಳ ಕೇಂದ್ರ ಸ್ಥಳಗಳಲ್ಲಿ ಕೇಂದ್ರದ ಸರ್ಕಾರದ ಮಂತ್ರಿಗಳು ಕಾರ್ಯಕ್ರಮವನ್ನು ನಿರ್ವಹಿಸಿದರು. ಮಾಧ್ಯಮಗಳಲ್ಲಿ ಇದಕ್ಕೆ ಸಾಕಷ್ಟು ಪ್ರಚಾರವೂ ದೊರೆಯಿತು.
ಆಯ್ಕೆ ಪ್ರಕ್ರಿಯೆಯು ಸಂಬಂಧಪಟ್ಟ ಇಲಾಖೆಗಳ ನೇಮಕಾತಿ ಪ್ರಾಧಿಕಾರಗಳಿಂದ ನಡೆದಿದೆ ಎಂದು ವರದಿಯಾಗಿದೆ. ಅಲ್ಲದೆ ಪ್ರಕ್ರಿಯೆ ಮುಂದುವರಿಯಲಿದ್ದು, ಬರುವ ದಿನಗಳಲ್ಲಿ ಒಟ್ಟು ಹತ್ತು ಲಕ್ಷ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುವದೆಂದೂ ಪ್ರಕಟಿಸಲಾಗಿದೆ. ಸರ್ಕಾರಿ ನೌಕರಿಗಳಿಗಾಗಿಯೇ ಕಾಯುತ್ತ ಕುಳಿತಿರುವ ಅರ್ಹ ಆಕಾಂಕ್ಷಿಗಳಿಗೆ ಇದೊಂದು ಆಶಾದಾಯಕ ಬೆಳವಣಿಗೆ ಎಂದೇ ಹೇಳಬೇಕು. ಅಷ್ಟರ ಮಟ್ಟಿಗೆ ನಿರುದ್ಯೋಗ ಕಡಿಮೆಯಾದೀತು.
ಕೇವಲ ಆರ್ಥಿಕ ದೃಷ್ಟಿಕೋನದಿಂದ ನೋಡಿದರೂ ಅಷ್ಟು ಹುದ್ದೆಗಳು ಖಾಲಿ ಇದ್ದವೆಂದೇ ಅರ್ಥ. ಅಂದರೆ ಇಲ್ಲಿಯವರೆಗೆ ಅಷ್ಟು ಜನ ಅರ್ಹರು ನಿರುದ್ಯೋಗಿಯಾಗಿದ್ದರು ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಇದನ್ನೆ ಆಧಾರವಾಗಿಟ್ಟುಕೊಂಡರೆ ಇದರ ಎರಡು ಪಟ್ಟು (೨೦ ಲಕ್ಷ) ನೌಕರಿಗಳು ಎಲ್ಲ ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರಬಹುದು. ಇವೆಲ್ಲವುಗಳನ್ನೂ ಕಾಲ ಕಾಲಕ್ಕೆ ಪಾರದರ್ಶಕ ವಿಧಾನಗಳಿಂದ ತುಂಬಿದ್ದರೆ ಅಷ್ಟರ ಮಟ್ಟಿಗೆ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತಿತ್ತೇನೊ.
ವ್ಯವಸ್ಥಿತ ವಲಯದ ಉದ್ಯೋಗಗಳು
ನೌಕರರು ಅಥವಾ ರೋಜಗಾರ ಉದ್ಯೋಗಿಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲನೆಯದು ವ್ಯವಸ್ಥಿತ (ಸಂಘಟಿತ) ವಲಯದ ನೌಕರರು. ಇವರು ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕಾಯ್ದೆ ಪ್ರಕಾರ ನೇಮಕಗೊಂಡು ನೌಕರಿಯ ಭದ್ರತೆಯನ್ನು ಹೊಂದಿರುತ್ತಾರೆ. ನಿಯಮಿತವಾಗಿ ಸಂಬಳ ಪಡೆಯುತ್ತಿರುತ್ತಾರೆ.
ಇದರೊಡನೆ ನಿವೃತ್ತಿ ವೇತನ, ಭವಿಷ್ಯ ನಿಧಿ ಮತ್ತು ನೌಕರರ ವಿಮಾ ಮುಂತಾದ ಸೌಲಭ್ಯಗಳನ್ನು ಖಚಿತವಾಗಿ ದೊರೆಯುತ್ತದೆ. ಇದರಿಂದಾಗಿ ಇವರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಇರುತ್ತದೆ. ಈ ವಲಯದ ಉದ್ಯೋಗಾವಕಾಶಗಳು ಹೆಚ್ಚಾದಂತೆ ಆರ್ಥಿಕ ಮತ್ತು ಸಾಮಾಜಿಕ ಸ್ವಾಸ್ಥ್ಯ ಹೆಚ್ಚುತ್ತದೆ. ಆರ್ಥಿಕ ಬೆಳವಣಿಗೆಯ ಮಾನದಂಡಗಳಲ್ಲಿ ಇದೂ ಒಂದಾಗಿರುತ್ತದೆ.
ಇನ್ನೊಂದು ವರ್ಗ ಅವ್ಯವಸ್ಥಿತ (ಅಸಂಘಟಿತ) ವಲಯದ ನೌಕರರು. ಇವರು ದಿನಗೂಲಿ, ವಾರದ ಕೂಲಿ ಮತ್ತು ತಿಂಗಳ ಸಂಬಳಕ್ಕಾಗಿ ಖಾಸಗಿ ಮತ್ತು ಸರ್ಕಾರಿ ರಂಗಗಳಲ್ಲಿ ಭದ್ರತೆ ಮತ್ತು ಇತರ ಸೌಲಭ್ಯಗಳಿಲ್ಲದೆ ದುಡಿಯುವವರು. ಇವರಲ್ಲಿ ಕೌಶಲ್ಯ ರಹಿತ ಮತ್ತು ಕೌಲ್ಯ ಹೊಂದಿದವರೂ ಇರುತ್ತಾರೆ. ಇವರ ನೌಕರಿ ಅತಂತ್ರವಾಗಿರುತ್ತದೆ. ಬಹಳಷ್ಟು ಜನರು ಅರ್ಹತೆ ಮತ್ತು ಕೌಶಲಗಳಿದ್ದೂ ಸುಭದ್ರ ಉದ್ಯೋಗ ಸಿಗದೆ ಅನಿವಾರ್ಯವಾಗಿ ಇಲ್ಲಿರುತ್ತಾರೆ. ಇಂಥವರ ಸಂಖ್ಯೆ ಕಡಿಮೆಯಾಗಿ ಇವರಲ್ಲಿ ಹೆಚ್ಚು ಜನ ವ್ಯವಸ್ಥಿತ ವಲಯಕ್ಕೆ ವರ್ಗಾವಣೆಯಾದಂತೆಲ್ಲ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಅಭಿವೃದ್ಧಿ ವೇಗ ಹೆಚ್ಚುತ್ತವೆ.
ಅಸಂಘಟಿತ ವಲಯದಲ್ಲಿ ಕಾರ್ಮಿಕರ ಸಂಖ್ಯೆ ದೊಡ್ಡದಿದ್ದು, ನಿಖರವಾದ ಸಂಖ್ಯೆ ಮತ್ತು ಅವರ ಸ್ಥಿತಿ ಬಗ್ಗೆ ವಿವರ ತಿಳಿಯುವುದು ಕಷ್ಟ. ಕೆಲವು ಆಧಾರಗಳ ಮೇಲೆ ಅಂದಾಜು ಮಾಡಬಹುದಷ್ಟೇ. ಸಂಘಟಿತ ವಲಯದ ನೌಕರರ ವಿವರಗಳನ್ನು ಖಚಿತವಾಗಿ ಕೇಂದ್ರೀಯ ಅಂಕಿ ಸಂಖ್ಯಾ ಕಚೇರಿಯು ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಆರ್ಗನೈಜೇಷನ್, ಎಂಪ್ಲಾಯೀಸ್ ಸ್ಟೇಟ್ ಇನ್ಸೂರೆನ್ಸ್ ಕಾರ್ಪೋರೇಷನ್ ಮತ್ತು ನ್ಯಾಷನಲ್ ಪೆನ್ಸನ್ ಸ್ಕೀಮ್‌ಗಳ ಮಾಸಿಕ ವರದಿಗಳಿಂದ ಸಂಗ್ರಹಿಸಿ ಪ್ರಕಟಿಸುತ್ತದೆ.
ಸದ್ಯದ ನಿರುದ್ಯೋಗ ಸ್ಥಿತಿ
ಅಧಿಕೃತ ವರದಿಗಳ ಪ್ರಕಾರ ನಮ್ಮ ದೇಶದಲ್ಲಿ ಇದೇ ಆಗಸ್ಟ್ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.೮.೩ ಇತ್ತು. ಇದು ಕಳೆದ ವರ್ಷ ಆಗಸ್ಟ್‌ನಲ್ಲಿ ಶೇ.೬.೮ ಇತ್ತು. ಹಿಂದಿನ ಐದು ತಿಂಗಳಲ್ಲಿಯೇ ಇದು ಅತಿ ಹೆಚ್ಚು. ಇದರ ಮಹತ್ವ ಅರ್ಥ ಮಾಡಿಕೊಳ್ಳಬೇಕಾದರೆ ನಾವು ಮೊದಲು ಉದ್ಯೋಗಗಳಲ್ಲಿ ಪಾಲ್ಗೊಳ್ಳುವಿಕೆ ಪ್ರಮಾಣವನ್ನು ಬಗ್ಗೆ ತಿಳಿದುಕೊಳ್ಳಬೇಕು. ದುಡಿಯುವ ವಯಸ್ಸಿನಲ್ಲಿರುವವರ ಪೈಕಿ (೧೮ರಿಂದ ೬೦ ವರ್ಷ ವಯಸ್ಸಿನವರಲ್ಲಿ) ಈಗಾಗಲೇ ದುಡಿಮೆಯಲ್ಲಿ (ಕೆಲಸದಲ್ಲಿ) ಇರುವವರ ಮತ್ತು ಕೆಲಸ ಅರಸುತ್ತಿರುವವರ ಒಟ್ಟು ಪ್ರಮಾಣವೇ ಉದ್ಯೋಗಗಳಲ್ಲಿ ಪಾಲ್ಗೊಳ್ಳುವಿಕೆ ಪ್ರಮಾಣ. ಒಂದು ನಿರ್ದಿಷ್ಟ ಸಮಯದಲ್ಲಿ ನಿವೃತ್ತರು ಹೊರ ಹೋಗುತ್ತಾರೆ. ವಯಸ್ಸಿಗೆ ಬಂದು ಕೆಲಸಬೇಕೆನ್ನುವವರು ಒಳ ಸೇರುತ್ತಾರೆ.
ಸಂಶೋಧನಾ ಸಂಸ್ಥೆ ಸಿಎಂಐಇ ಪ್ರಕಾರ ಕಳೆದ ಆಗಸ್ಟ್‌ನಲ್ಲಿ ಪಾಲ್ಗೊಳ್ಳುವಿಕೆ ಪ್ರಮಾಣ ಶೇ. ೩೯.೨೪ರಷ್ಟು ಇತ್ತು. ಅಂದರೆ ಪ್ರತಿ ೧೦೦ ದುಡಿಯುವ ವಯಸ್ಸಿನವರಲ್ಲಿ ದುಡಿಮೆಯಲ್ಲಿ ಪಾಲ್ಗೊಳ್ಳುವವರು ೩೯.೨೪ ಜನರಿದ್ದು, ಅವರಲ್ಲಿ ೮.೩ ಜನ ನಿರುದ್ಯೋಗಿಗಳಾಗಿದ್ದಾರೆ (ಉದ್ಯೋಗ ಅರಸುತ್ತಿದ್ದಾರೆ) ಎಂದರ್ಥ. ಈ ಸಂಖ್ಯೆ ಕಡಿಮೆಯಾದಷ್ಟು ಒಳ್ಳೆಯದು. ಹೆಚ್ಚಾದರೆ ಆತಂಕ.
ಸಿಎಂಐಇ ಅಂದಾಜುಗಳ ಪ್ರಕಾರ ಕಳೆದ ಆಗಸ್ಟ್‌ನಲ್ಲಿ ೪ ದಶಲಕ್ಷ ಹೊಸಬರೂ ಸೇರಿ ಉದ್ಯೋಗ ಅರಸುವವರ ಒಟ್ಟು ೪೩೦ ದಶಲಕ್ಷ (ಸಂಘಟಿತ ಮತ್ತು ಅಸಂಘಟಿತ ಎರಡರಲ್ಲಿಯೂ) ಇತ್ತು. ಇವರೆಲ್ಲರಿಗೂ ಸಮರ್ಪಕವಾಗಿ ಕೆಲಸ ಒದಗಿಸುವಲ್ಲಿ ನಮ್ಮ ಅರ್ಥವ್ಯವಸ್ಥೆ ಯಶಸ್ವಿಯಾಗಿಲ್ಲವೆಂಬುದು ಸಿಎಂಐಇ ಅಭಿಪ್ರಾಯ.
ಇದೇ ಸಂಸ್ಥೆಯ ಇನ್ನೊಂದು ಲೆಕ್ಕಾಚಾರದಂತೆ ಸಂಬಳ ಪಡೆಯುವ ನೌಕರರ ಸಂಖ್ಯೆ ಜುಲೈ ತಿಂಗಳಿಂದ ಆಗಸ್ಟ್ ಕೊನೆಯವರೆಗೆ ೪.೬ ದಶಲಕ್ಷ ಕಡಿಮೆಯಾಗಿ ೭೬.೨ ದಶಲಕ್ಷಕ್ಕೆ ಇಳಿದಿದೆ. ಅಂದರೆ ಅಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ ಮತ್ತು ಕೆಲಸ ಹುಡುಕುತ್ತಿದ್ದಾರೆ ಅಥವಾ ಅಷ್ಟು ಜನ ನಿವೃತ್ತರಾಗಿ ಸ್ಥಳಗಳನ್ನು ಭರ್ತಿ ಮಾಡಿರಲಿಕ್ಕಿಲ್ಲ. ಅಥವಾ ಎರಡು ಕಾರಣಗಳಿರಬಹುದು. ಸರ್ಕಾರಗಳ ಖಾಲಿ ಹುದ್ದೆಗಳ ಸಂಖ್ಯೆಗೆ ಇವುಗಳು ಕೂಡಿರಬಹುದು. ನಿರುದ್ಯೋಗ ಹೆಚ್ಚಲು ಇದೂ ಒಂದು ಕಾರಣ.
ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವವಿದ್ಯಾನಿಲಯಗಳು, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಸಂಸ್ಥೆಗಳ ಪರೀಕ್ಷಾ ಫಲಿತಾಂಶಗಳು ಹೊರ ಬಂದಿದ್ದು, ಅಂತಿಮ ವರ್ಷಗಳ ಪರೀಕ್ಷೆಗಳಲ್ಲಿ ಪಾಸಾದವರಲ್ಲಿ ಬಹು ಸಂಖ್ಯೆಯ ಪದವೀಧರರು ಉದ್ಯೋಗ ಅರಸುವವರ (ನಿರುದ್ಯೋಗದ) ಲೆಕ್ಕಕ್ಕೆ ಸೇರಿರುತ್ತಾರೆ. ಇದು ಸಮಸ್ಯೆ ಬಿಗಡಾಯಿಸಲು ಒಂದು ಕಾರಣ.
ಇಪಿಎಫ್‌ಒ ಸಂಖ್ಯೆಗಳನ್ನು ಗಮನಿಸಿದಾಗ ಕಳೆದ ಏಪ್ರಿಲ್‌ನಿಂದ ಜೂನ್‌ವರೆಗೆ ಮೂರು ತಿಂಗಳು ೧.೩ ದಶಲಕ್ಷದಂತೆ ಹೊಸ ಪ್ರಾವಿಡೆಂಟ್ ಫಂಡ್ ಖಾತೆಗಳು ಆರಂಭಿಸಲ್ಪಟ್ಟಿದ್ದರೆ ಜುಲೈನಲ್ಲಿ ಕಡಿಮೆಯಾಗಿ ೧.೧೧ ದಶಲಕ್ಷ ಹೊಸ ಖಾತೆಗಳಿದ್ದರೆ ಆಗಸ್ಟ್‌ನಲ್ಲಿ ಇನ್ನೂ ಕುಸಿದು ೦.೯ ದಶಲಕ್ಷ ಹೊಸ ಖಾತೆಗಳು ಆರಂಭವಾಗಿವೆ. ಅಷ್ಟು ಕಡಿಮೆ ಸಂಖ್ಯೆಯಲ್ಲಿ ಹೊಸಬರಿಗೆ ಕೆಲಸ ಸಿಕ್ಕಿದೆ ಎಂದಂತಲ್ಲವೆ? ಕೇಂದ್ರದ ಮಾದರಿಯನ್ನು ರಾಜ್ಯ ಸರ್ಕಾರಗಳು ಅನುಸರಿಸಿದಂತೆ ಮತ್ತು ಖಾಸಗಿ ವಲಯದ ಸ್ಥಿತಿ ಸುಧಾರಿಸಿ ನೇಮಕಾತಿ ಆರಂಭಿಸಿದರೆ ನಿರುದ್ಯೋಗ ಸ್ಥಿತಿ ಹಿಡಿತಕ್ಕೆ ಬಂದೀತು.