ಡಿ.ವಿ. ರಾಜಶೇಖರ
ಕಮ್ಯುನಿಸಂ ಹೆಸರಿನಲ್ಲಿ ದೌರ್ಜನ್ಯದ ಆಧಾರದ ಮೇಲೆ ರೂಪಿಸಿದ ನಿರಂಕುಶ ಪ್ರಭುತ್ವನ್ನು ಗೋರ್ಬಚೆವ್ ಕೊನೆಗಾಣಿಸಿದ್ದರು.
ಶೀತಲ ಸಮರದ ಅಂತ್ಯದಿಂದ ಸೋವಿಯತ್ ರಷ್ಯಾಕ್ಕೆ ಎಷ್ಟು ನಷ್ಟವಾಯಿತು ಎನ್ನುವುದನ್ನು ಊಹಿಸುವುದೂ ಕಷ್ಟ. ಸೋವಿಯತ್ ಒಕ್ಕೂಟ ಛಿದ್ರವಾಗಿದ್ದರಿಂದ ಮತ್ತು ವಿಶ್ವದ ವಿವಿಧ ದೇಶಗಳಲ್ಲಿ ಇದ್ದ ಕಮ್ಯುನಿಸ್ಟ್ ಸರ್ಕಾರಗಳ ಪತನ (೧೯೮೯) ಮತ್ತು ಆ ದೇಶಗಳು ಬಂಡವಾಳಶಾಹಿ ಮತ್ತು ಮಾರುಕಟ್ಟೆ ವ್ಯವಸ್ಥೆಗೆ ತೆರೆದುಕೊಂಡದ್ದರಿಂದ ಅಮೆರಿಕ ಮತ್ತು ಅದರ ಮಿತ್ರ ದೇಶಗಳಿಗೆ ಆಗಿರುವ ಲಾಭ ಅಪಾರವಾದುದು. ರಷ್ಯಾ ಬದಲಾವಣೆಗೆ ತೆರೆದುಕೊಂಡ ನಂತರವೂ ಅಮೆರಿಕ ಮತ್ತಿತರ ಬಂಡವಾಳಶಾಹಿ ದೇಶಗಳು ಅದನ್ನು ಮೂಲೆಗುಂಪು ಮಾಡುತ್ತ ಬಂದವು. ಇದರಿಂದ ಸಹಜವಾಗಿಯೇ ರಷ್ಯಾ ಆರ್ಥಿಕ ವ್ಯವಸ್ಥೆ ಕುಸಿಯತೊಡಗಿತು.
ಜಗತ್ತು ಚಲಿಸುವ ದಿಕ್ಕನ್ನೇ ಬದಲಾಯಿಸಿದ ಸೋವಿಯತ್ ಒಕ್ಕೂಟದ ಕೊನೆಯ ಅಧ್ಯಕ್ಷ ಮಿಖಾಯಿಲ್ ಸರ್ಜಿಯೆವಿಕ್ ಗೋರ್ಬಚೆವ್ ಕಳೆದ ತಿಂಗಳು ಆಗಸ್ಟ್ ೩೦ ರಂದು ಮಾಸ್ಕೋದಲ್ಲಿ ನಿಧನರಾದಾಗ(೯೧) ರಷ್ಯಾದ ಜನರಾರೂ ಕಣ್ಣಿರು ಸುರಿಸಲಿಲ್ಲ, ಬದಲಾಗಿ ರಷ್ಯಾದ ಇಂದಿನ ಸ್ಥಿತಿಗೆ ಗೋರ್ಬಚೆವ್ ಅವರೇ ಕಾರಣ ಎಂದು ಮನಸ್ಸಿನೊಳಗೇ ಆಕ್ರೋಶ ವ್ಯಕ್ತ ಮಾಡುತ್ತ ಬಹುಪಾಲು ಜನರು ನೊಂದುಕೊಂಡರು.
‘ವಿಶ್ವದಲ್ಲಿ ಸೋವಿಯತ್ ಒಕ್ಕೂಟ ಬಲಿಷ್ಠ ಪ್ರಜಾತಂತ್ರ ದೇಶವಾಗಲು ಅವರು ಒಂದು ಅವಕಾಶ ಕಲ್ಪಿಸಿದ್ದರು. ಆದರೆ ನಾವು ಆ ಅವಕಾಶವನ್ನು ಕಳೆದುಕೊಂಡೆವು’ ಎಂದು ಹಿಂದಿನ ಕೆಲವು ಕಮ್ಯುನಿಸ್ಟರು ಅಲವತ್ತುಗೊಂಡರು. ಅವರ ನಿಧನಕ್ಕೆ ಸರ್ಕಾರ ರಾಷ್ಟ್ರೀಯ ಶೋಕವನ್ನೂ ಆಚರಿಸಲಿಲ್ಲ. ಕಳೆದ ಶನಿವಾರ ನಡೆದ ಅವರ ಅಂತ್ಯ ಸಂಸ್ಕಾರಕ್ಕೆ ಈಗಿನ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಬರಲೂ ಇಲ್ಲ. ಕಾರ್ಯಕ್ರಮಗಳ ಮಧ್ಯೆ ಅಲ್ಲಿಗೆ ಬರಲು ಅವರಿಗೆ ಸಮಯ ನಿಗದಿ ಮಾಡಿಲ್ಲ ಎಂದು ಸರ್ಕಾರದ ಅಧಿಕೃತ ವಕ್ತಾರರು ಸ್ಪಷ್ಟನೆ ನೀಡಿ ಕೈತೊಳೆದುಕೊಂಡರು. ಗೋರ್ಬಚೆವ್ ಸತ್ತ ದಿನ ಅವರೊಬ್ಬ ಮಹಾನ್ ನಾಯಕ ಎಂದು ಶೊಕ ವ್ಯಕ್ತಮಾಡಿದ್ದನ್ನು ಬಿಟ್ಟರೆ ಪುಟಿನ್ ಈ ಸಂದರ್ಭವನ್ನು ತಮ್ಮ ಆಕ್ರೋಶ ವ್ಯಕ್ತ ಮಾಡಲು ಅಂತಿಮ ಸಂಸ್ಕಾರಕ್ಕೆ ಗೈರು ಹಾಜರಿದ್ದಂತೆ ಕಾಣುತ್ತಿದೆ. ಲೆನಿನ್, ಸ್ಟಾಲಿನ್, ಬ್ರೆಜ್ನೇನ್ ಗೋರಿಗಳ ಮತ್ತು ಗೋರ್ಬಚೆವ್ ಪತ್ನಿ ರೈಸಾ ಅವರ ಗೋರಿಯ ಪಕ್ಕದಲ್ಲಿಯೇ ಅವರ ಮೃತದೇಹವನ್ನು ಮಣ್ಣು ಮಾಡಲಾಯಿತು. ಈ ಸಂದರ್ಭದಲ್ಲಿ ಗೋರ್ಬಚೆವ್ ಅವರ ಹಳೆಯ ಕೆಲವು ಮಿತ್ರರು, ಕೆಳ ಹಂತದ ಸರ್ಕಾರಿ ಅಧಿಕಾರಿಗಳು ಮತ್ತು ಅವರ ಪುತ್ರಿ ಹೃದಯ ತಜ್ಞೆ ಇರಿನಾ ಹಾಜರಿದ್ದರು. ಅವರ ಸಾವನ್ನು ಆಡಳಿತ ಕಮ್ಯುನಿಸ್ಟ್ ಪಕ್ಷ ನಿರ್ಲಕ್ಷ್ಯಿಸಿದಂತೆ ಕಾಣುತ್ತಿತ್ತು. ಈ ಸಂದರ್ಭದಲ್ಲಿ ಹಾಜರಿರಲು ಯಾವುದೇ ವಿದೇಶೀ ಗಣ್ಯರಿಗೆ ಅವಕಾಶ ಕೊಟ್ಟಿರಲಿಲ್ಲ. ಮಾಸ್ಕೋದಲ್ಲಿದ್ದ ವಿವಿಧ ದೇಶಗಳ ಕೆಲವು ರಾಜತಾಂತ್ರಿಕರು ಮಾತ್ರ ಅಲ್ಲಿಗೆ ಬಂದಿದ್ದರು. ಹಾಗೆ ನೋಡಿದರೆ ವಿದೇಶೀ ಗಣ್ಯರಿಗೆ ಒಂದುರೀತಿಯಲ್ಲಿ ನಿಷೇಧವನ್ನೇ ಹೇರಿದಂತಿತ್ತು.
ವಿಪರ್ಯಾಸ ಎಂದರೆ ಇತಿಹಾಸದ ದಿಕ್ಕನ್ನು ಬದಲಿಸಿದ ಕೀರ್ತಿ ಗೋರ್ಬಚೆವ್ ಅವರಿಗೆ ಸಲ್ಲುತ್ತದೆ ಎಂದು ಅಮೆರಿಕ ಸೇರಿದಂತೆ ಪಾಶ್ಚಾತ್ಯ, ಯುರೋಪ್ ದೇಶಗಳ ನಾಯಕರು ಹಾಡಿಹೊಗಳಿರುವುದು. ಕಳೆದ ಶತಮಾನದ ಕೊನೆಯಲ್ಲಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವಣ ಶೀತಲ ಸಮರ ಜಗತ್ತನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದ ಸಂದರ್ಭಗಳಿವೆ. ಜಗತ್ತಿನ ಮೇಲೆ ನಿಯಂತ್ರಣಕ್ಕಾಗಿ ಎರಡೂ ದೇಶಗಳು ನಡೆಸಿದ ಪರೋಕ್ಷ ಯುದ್ಧಗಳು ಲೆಕ್ಕವಿಲ್ಲ. ಕಮ್ಯುನಿಸಂ ವಿಸ್ತರಣೆಯಾಗಲು ಬಿಡಬಾರದೆಂದು ಅಮೆರಿಕ, ಬಂಡವಾಳಶಾಹಿ ಮತ್ತು ಮಾರುಕಟ್ಟೆ ಶಕ್ತಿಗಳು ಸಮಾಜವಾದವನ್ನು ದುರ್ಬಲಗೊಳಿಸಲು ಬಿಡಬಾರದೆಂದು ಸೋವಿಯತ್ ಒಕ್ಕೂಟ ಸಮರಕ್ಕೆ ನಿಂತಿದ್ದವು. ಈ ಎರಡೂ ಬಣಗಳ ನಡುವಣ ಸಂಘರ್ಷದಲ್ಲಿ ಸಿಲುಕಿ ಲಕ್ಷಾಂತರ ಜನರು ಪ್ರಾಣಕಳೆದುಕೊಂಡರು. ಈ ಶೀತಲ ಸಮರಕ್ಕೆ ಕೊನೆಹಾಡಿದವರು ಗೋರ್ಬಚೆವ್ ಎಂದು ಅವರನ್ನು ಪಾಶ್ಚಾತ್ಯರು ಕೊಂಡಾಡಿದ್ದಾರೆ.
ಶೀತಲ ಸಮರದ ಅಂತ್ಯದಿಂದ ಸೋವಿಯತ್ ರಷ್ಯಾಕ್ಕೆ ಎಷ್ಟು ನಷ್ಟವಾಯಿತು ಎನ್ನುವುದನ್ನು ಊಹಿಸುವುದೂ ಕಷ್ಟ. ಸೋವಿಯತ್ ಒಕ್ಕೂಟ ಛಿದ್ರವಾಗಿದ್ದರಿಂದ ಮತ್ತು ವಿಶ್ವದ ವಿವಿಧ ದೇಶಗಳಲ್ಲಿ ಇದ್ದ ಕಮ್ಯುನಿಸ್ಟ್ ಸರ್ಕಾರಗಳ ಪತನ (೧೯೮೯) ಮತ್ತು ಆ ದೇಶಗಳು ಬಂಡವಾಳಶಾಹಿ ಮತ್ತು ಮಾರುಕಟ್ಟೆ ವ್ಯವಸ್ಥೆಗೆ ತೆರೆದುಕೊಂಡದ್ದರಿಂದ ಅಮೆರಿಕ ಮತ್ತು ಅದರ ಮಿತ್ರ ದೇಶಗಳಿಗೆ ಆಗಿರುವ ಲಾಭ ಅಪಾರವಾದುದು. ರಷ್ಯಾ ಬದಲಾವಣೆಗೆ ತೆರೆದುಕೊಂಡ ನಂತರವೂ ಅಮೆರಿಕ ಮತ್ತಿತರ ಬಂಡವಾಳಶಾಹಿ ದೇಶಗಳು ಅದನ್ನು ಮೂಲೆಗುಂಪು ಮಾಡುತ್ತ ಬಂದವು. ಇದರಿಂದ ಸಹಜವಾಗಿಯೇ ರಷ್ಯಾ ಆರ್ಥಿಕ ವ್ಯವಸ್ಥೆ ಕುಸಿಯತೊಡಗಿತು. ರಷ್ಯಾದ ಜೊತೆಗೆ ಇನ್ನೂ ಸಂಬಂಧ ಪಡೆದಿದ್ದ ಕೆಲವೇ ಕೆಲವು ದೇಶಗಳನ್ನೂ ಒಂದೊಂದೊಂದಾಗಿ ಅಮೆರಿಕ ಮತ್ತು ಅದರ ಮಿತ್ರ ದೇಶಗಳು ಹಾಗೂ ಯುರೋಪ್ ಒಕ್ಕೂಟ ತನ್ನ ತೆಕ್ಕೆಗೆ ಕೊಳ್ಳುವ ಪ್ರಯತ್ನ ಆರಂಭವಾಯಿತು. ನ್ಯಾಟೋ ಸೇನಾ ರಕ್ಷಣೆ ವ್ಯಾಪ್ತಿಗೆ ತರುವ ಭರವಸೆಯನ್ನೂ ನೀಡಲಾಯಿತು. ರಷ್ಯಾದ ನೆರೆ ದೇಶ ಮತ್ತು ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಯುಕ್ರೇನ್ ದೇಶವನ್ನು ಓಲೈಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನವನ್ನು ಯೂರೋಪ್ ಒಕ್ಕೂಟ ಮಾಡಿತು. ಯುರೋಪ್ ಒಕ್ಕೂಟ ಸೇರಬಯಸಿದ ಉಕ್ರೇನ್‌ಗೆ ಅಮೆರಿಕವೂ ಬೆಂಬಲ ಕೊಟ್ಟಿತು.
ನ್ಯಾಟೋ ಪಡೆಗಳು ತನ್ನ ಗಡಿಯಲ್ಲೇ ನಿಲ್ಲುವ ಸೂಚನೆ ಇದೆಂದು ಮತ್ತು ವಿನಾಶದ ಸೂಚನೆಯೆಂದು ರಷ್ಯಾ ಭಾವಿಸಿತು. ಯುಕ್ರೇನ್‌ನ ಈ ನಡೆ ಕೊನೆಗೆ ತನ್ನ ಕುತ್ತಿಗೆಗೆ ಸುತ್ತಿಕೊಳ್ಳಬಹುದೆಂದು ಭೀತಿಯಿಂದ ರಷ್ಯಾ ದೇಶ ಯುಕ್ರೇನ್ ಮೇಲೆ ಮಿಲಿಟರಿ ಆಕ್ರಮಣ ನಡೆಸಿತು.
ಇದರ ಪರಿಣಾಮವಾಗಿ ರಷ್ಯಾ ಇಂದು ಅನೇಕ ನಿರ್ಬಂಧಗಳಿಗೆ ಒಳಗಾಗಿದೆ. ಅದರ ಉಸಿರು ಕಟ್ಟಿದೆ. ಈ ಸಂದರ್ಭದಲ್ಲಿ ಪುಟಿನ್ ರಷ್ಯಾದ ಅಧ್ಯಕ್ಷರು. ಸಹಜವಾಗಿಯೇ ಅವರಿಗೆ ಗೋರ್ಬಚೆವ್ ಬಗ್ಗೆ ಆಕ್ರೋಶವಿದೆ. ಸೋವಿಯತ್ ಒಕ್ಕೂಟದ ವಿಸರ್ಜನೆ ಮತ್ತು ಅದರ ಪ್ರಾಂತ್ಯಗಳೆಲ್ಲಾ ಪ್ರತ್ಯೇಕ ದೇಶಗಳಾಗಿ(೧೯೯೧) ಕ್ರಮೇಣ ಅಮೆರಿಕ ಮತ್ತು ಯೂರೋಪ್ ಒಕ್ಕೂಟದ ತೆಕ್ಕಗೆ ಬಿದ್ದದ್ದರ ಬಗ್ಗೆ ಅವರಿಗೆ ಕೋಪವಿದೆ. ಈ ಶತಮಾನದ ಭೌಗೋಳಿತ ರಾಜಕೀಯದ ಮಹಾದುರಂತ ಎಂದು ಈ ಹಿಂದೆ ಪುಟಿನ್ ವರ್ಣಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪುಟಿನ್ ಅವರಿಗಷ್ಟೇ ಅಲ್ಲ ರಷ್ಯಾದ ಕಮ್ಯುನಿಸ್ಟರ ಪಾಲಿಗೆ ಗೋರ್ಬಚೆವ್ ವಿಲನ್ ಆಗಿದ್ದಾರೆ.
ಕೃಷಿ ಕಾರ್ಮಿಕರ ಕುಟುಂಬದಲ್ಲಿ ಹುಟ್ಟಿದ ಗೋರ್ಬಚೆವ್ ಯುವಕರಾಗಿದ್ದಾಗಲೇ ಕಮ್ಯುನಿಸ್ಟ್ ಪಕ್ಷದಲ್ಲಿ ಮುಂಚೂಣಿ ನಾಯಕರಾಗಿ ಬೆಳೆದರು. ಪಾರ್ಟಿಯ ಜನರಲ್ ಸೆಕ್ರೆಟರಿ ಆದ ತಕ್ಷಣ ಅವರು ಯೋಚಿಸಿದ್ದು ಸ್ಥಗಿತಗೊಂಡಿರುವ ದೇಶದ ಆರ್ಥವ್ಯವಸ್ಥಗೆ ಮರುಜೀವ ಕೊಡುವುದು. ಈ ದಿಸೆಯಲ್ಲಿ ಗೋರ್ಬಚೆವ್ ಕಾರ್ಯಪ್ರವೃತ್ತರಾದರು. ಸೋವಿಯತ್ ಒಕ್ಕೂಟದ ಆರ್ಥ ವ್ಯವಸ್ಥೆಯ ಪುನಾರಚನೆ (ಪೆರೊಸ್ಟ್ರೈಕಾ) ಮತ್ತು ಮುಕ್ತತೆ (ಗ್ಲಾಸನಾಟ್) ಹಾಗೂ ಪ್ರಜಾತಂತ್ರ ಸ್ಥಾಪನೆ ಅವರ ಮೂಲ ಗುರಿಗಳಾದವು. ಈ ಮೂರು ಅಂಶಗಳನ್ನು ಮುಂದಿಟ್ಟುಕೊಂಡು ಗೋರ್ಬಚೆವ್ ಮುಂದೆ ಹೆಜ್ಜೆ ಇಟ್ಟರು. ಈ ದಿಸೆಯಲ್ಲಿ ದೇಶದ ಕಾಂಗ್ರೆಸ್‌ಗೆ ಚುನಾವಣೆಗಳನ್ನು ಘೋಷಿಸಲಾಯಿತು.
ಗೋರ್ಬಚೆವ್ ಶೀತಲ ಸಮರವನ್ನು ಅಂತ್ಯಗೊಳಿಸಲು ನಿರ್ಧರಿಸಿ ಅಮೆರಿಕದ ಅಂದಿನ ಅಧ್ಯಕ್ಷ ರೊನಾಲ್ಡ್ ರೀಗನ್ ಜೊತೆ ಮಾತುಕತೆ ನಡೆಸಿದರು. ಅಂತಿಮವಾಗಿ ಮಧ್ಯಮ ಹಂತದ ಪರಮಾಣು ಅಸ್ತ್ರಗಳನ್ನು ಎರಡೂ ದೇಶಗಳು ನಾಶಮಾಡುವ ಬಗ್ಗೆ ಒಪ್ಪಂದವಾದವು.
ಅವರು ಆರಂಭಿಸಿದ ಸ್ವಾತಂತ್ರ್ಯದ ಪರಿಕಲ್ಪನೆ ಮೊದಲು ಬಾಲ್ಟಿಕ್ ದೇಶಗಳಲ್ಲಿ ಜಾರಿಗೆ ಬರತೊಡಗಿತು. ಒಂದೊಂದಾಗಿ ಕಮ್ಯುನಿಸ್ಟ್ ದೇಶಗಳು ಸ್ವತಂತ್ರ ದೇಶಗಳಾಗಿ ಘೋಷಿಸಿಕೊಂಡವು. ೧೯೮೯ರ ನವೆಂರ್ಬ ೯ ರಂದು ಜರ್ಮನಿಯಲ್ಲಿ ಸ್ವಾತಂತ್ರ್ಯದ ಗಾಳಿ ಬೀಸತೊಡಗಿತು. ಕಮ್ಯುನಿಸ್ಟ್ ಆಡಳಿತದ ಪೂರ್ವ ಜರ್ಮನಿಯ ಜನರು ಬೀದಿಗಿಳಿದರು. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಸೇನಾ ಕಾರ್ಯಾಚರಣೆ ನಡೆಸಿ ಜನರನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಯುತ್ತಿತ್ತು. ಆದರೆ ಗೋರ್ಬಚೆವ್ ಅದಕ್ಕೆ ಅವಕಾಶ ನೀಡಲಿಲ್ಲ. ಎರಡೂ ಜರ್ಮನಿಯ ಮಧ್ಯೆ ಇದ್ದ ಬರ್ಲಿನ್ ಗೋಡೆಯನ್ನು ಜನರು ಕೆಳಗೆ ಉರುಳಿಸಿದರು. ಅವರ ಜೊತೆಗೆ ಪಶ್ಚಿಮ ಜರ್ಮನಿಯ ಜನರೂ ಸೇರಿಕೊಂಡರು. ಎರಡೂ ಜರ್ಮನಿ ಒಂದಾಗುವುದನ್ನು ಜನರು ಸ್ವಾಗತಿಸಿದರು. ಅಲ್ಲಿಗೆ ಯೂರೋಪಿನಲ್ಲಿ ಕಮ್ಯುನಿಸ್ಟ್ ಮತ್ತು ಕಮ್ಯುನಿಸ್ಟೇತರ ದೇಶಗಳ ಮಧ್ಯೆ ಇದ್ದ ಗೋಡೆ ಕೆಳಚಿಬಿದ್ದಂತಾಯಿತು.
ಅಲ್ಲಿಂದ ಒಂದೊಂದೊಂದಾಗಿ ಕಮ್ಯುನಿಸ್ಟ್ ಸರ್ಕಾರಗಳು ಬೀಳತೊಡಗಿದವು.
ಸೋವಿಯತ್ ಒಕ್ಕೂಟ ಕೂಡಾ ಛಿದ್ರವಾಯಿತು (೧೯೮೯). ಸೋವಿಯತ್ ಒಕ್ಕೂಟ ಛಿದ್ರವಾಗುವುದನ್ನು ಗೋರ್ಬಚೆವ್ ನಿರೀಕ್ಷಿಸಿರಲಿಲ್ಲ. ಅವರ ಕಲ್ಪನೆಗೂ ಮೀರಿ ಬದಲಾವಣೆಗಳಾದವು. ಆದರೆ ಗೋರ್ಬಚೆವ್ ಇತಿಹಾಸದ ಚಕ್ರವನ್ನು ಹಿಂದಕ್ಕೆ ತಿರುಗಿಸಲು ಆಗುತ್ತಿರಲಿಲ್ಲ. ಪಶ್ಚಿಮ ಮತ್ತು ಪೂರ್ವ ದೇಶಗಳ ನಡುವಣ ಬಾಂಧವ್ಯ ಸುಧಾರಿಸುವಲ್ಲಿ ಮಾಡಿದ ಸಾಧನೆಗಾಗಿ, ಒಂದು ತೊಟ್ಟೂ ರಕ್ತ ಹರಿಯದೆ ತಂದ ಅಭೂತಪೂರ್ವ ಬದಲಾವಣೆಗಾಗಿ ಗೋರ್ಬಚೆವ್ ಅವರಿಗೆ ೧೯೯೦ರಲ್ಲಿ ನೋಬೆಲ್ ಪ್ರಶಸ್ತಿ ನೀಡಲಾಯಿತು.
ನಂತರದ ದಿನಗಳಲ್ಲಿ ರಷ್ಯಾದಲ್ಲಿ ಗೋರ್ಬಚೆವ್ ಬಂಧನವಾಯಿತು. ಸೇನಾ ಕ್ರಾಂತಿಗೆ ಪ್ರಯತ್ನ ನಡೆಯಿತು. ಗೋರ್ಬಚೆವ್ ಅವರ ಎಲ್ಲ ಅಧಿಕಾರವನ್ನು ಕಿತ್ತುಕೊಳ್ಳಲಾಯಿತು. ಬೋರಿಸ್ ಯಲ್ಸ್ಟಿನ್ ಅಧಿಕಾರಕ್ಕೆ ಬಂದು ದೇಶವನ್ನು ಸಂಘಟಿತವಾಗಿ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದರು. ಆದರೆ ಅದು ಅವರಿಂದ ಸಾಧ್ಯವಾಗಲಿಲ್ಲ.
ಆ ನಂತರ ಗೋರ್ಬಚೆವ್ ರಾಜಕೀಯ ತೆರೆಯ ಹಿಂದೆ ಸರಿದು ಮಾನವೀಯ ಕಾರ್ಯಗಳಲ್ಲಿ ತೊಡಗಿಕೊಂಡರು. ೧೯೯೬ರಲ್ಲಿ ಮತ್ತೆ ರಷ್ಯಾ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ರಾಜಕೀಯಕ್ಕೆ ಬರುವ ಪ್ರಯತ್ನನಡೆಸಿದರು. ಆದರೆ ಅವರಿಗೆ ಶೇ ೫ರಷ್ಟೂ ಮತ ಬೀಳಲಿಲ್ಲ. ಜನರು ಅವರನ್ನು ತಿರಸ್ಕರಿಸಿದ್ದರು. ಆ ನಂತರ ಅವರು ಆಡಳಿತ ಪಕ್ಷದ ವಿರೋಧಿ ಪತ್ರಿಕೆಯೊಂದನ್ನು ನಡೆಸಲು ಪ್ರಯತ್ನಿಸಿದರು. ಅದೂ ಆಗಲಿಲ್ಲ. ಪುಟಿನ್ ಜೊತೆಗೆ ಅವರ ಸಂಬಂಧ ಉತ್ತಮವಾಗಿರಲಿಲ್ಲ. ಪುಟಿನ್ ಅವರ ಯುಕ್ರೇನ್ ಸೇನಾ ಅತಿಕ್ರಮಣ ಪ್ರಯತ್ನವನ್ನು ಅವರು ವಿರೋಧಿಸಿದ್ದರು. ಕಮ್ಯುನಿಸಂ ಹೆಸರಿನಲ್ಲಿ ದೌರ್ಜನ್ಯದ ಆಧಾರದ ಮೇಲೆ ರೂಪಿಸಿದ ನಿರಂಕುಶ ಪ್ರಭುತ್ವನ್ನು ಗೋರ್ಬಚೆವ್ ಕೊನೆಗಾಣಿಸಿದ್ದರು. ಆದರೆ ಪುಟಿನ್ ಮತ್ತೆ ಅದೇ ನಿರಂಕುಶ ಪ್ರಭುತ್ವವನ್ನು ದೇಶದಲ್ಲಿ ಸ್ಥಾಪಿಸಿದರು. ಇದಕ್ಕಾಗಿ ಗೋರ್ಬಚೆವ್ ನೊಂದಿದ್ದರು. ಆದರೆ ಅವರೇನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.