ಹೊಸ ವರ್ಷದ ಮೊದಲ ದಿನಗಳು. ನಟಿ ತಾರಾ ಅವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಕೊಡಮಾಡಿದ ಗೌರವ ಡಾಕ್ಟರೇಟ್ ಕುರಿತಂತೆ ಅಲ್ಲಿನ ಅಽಕಾರಿಗಳು ಮಾಹಿತಿ ನೀಡಿ ಘಟಿಕೋತ್ಸವಕ್ಕೆ ಬರುವಂತೆ ವಿನಂತಿಸುತ್ತಾರೆ. ಕೂಡಲೇ ಅವರು, ಗೋವಾದಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದ ತಮ್ಮ ಪತಿ ವೇಣು ಅವರಿಗೆ ಈ ವಿಷಯ ತಿಳಿಸುತ್ತಾರೆ. ತಕ್ಷಣ ವೇಣು ಅವರು, ‘ಬೇಡ, ಬೇಡ, ಬೇಡ ಅಂತ ಹೇಳಿಬಿಡು. ಯಾರ್ಯಾರೋ ಅದನ್ನು ಪಡೆಯುತ್ತಾರೆ. ಕೊಂಡುಕೊಳ್ಳುತ್ತಾರೆ’ ಎಂದು ಒಂದಿಬ್ಬರು ಭೂಗತ ಜಗತ್ತಿನ ಮಂದಿ ಅದನ್ನು ಪಡೆದ ವಿಷಯ ಹೇಳುತ್ತಾರೆ.
ತಾರಾ ಕೂಡಲೇ ವಿವಿಯ ಅಧಿಕಾರಿಯನ್ನು ಸಂಪರ್ಕಿಸಿ ಇದನ್ನು ಹೇಳುತ್ತಾರೆ. ಆಗ ಅವರು ಈ ವಿವಿಗಳು ನೀಡುವ ಗೌರವ ಡಾಕ್ಟರೇಟ್, ಅದರ ಆಯ್ಕೆಯ ವಿಧಾನ, ಅಂತಿಮವಾಗಿ ರಾಜ್ಯಪಾಲರಿಂದ ಸಹಿ ಮುಂತಾದ ವಿವರಗಳನ್ನು ನೀಡುತ್ತಾರೆ. ಕೊನೆಗೆ ಅವರು ಅದನ್ನು ಸ್ವೀಕರಿಸಿದರೆನ್ನಿ. ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ನಟಿ ಗಿರಿಜಾ ಲೋಕೇಶ್ ಮತ್ತು ಸಂಗೀತ ಸಂಯೋಜಕ, ನಟ ಸಾಧುಕೋಕಿಲ ಅವರಿಗೆ ಗೌರವ ಡಾಕ್ಟರೇಟ್ ನೀಡಿತು.
ರಾಜ್ಯದ ವಿಶ್ವವಿದ್ಯಾನಿಲಯಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಕೊಡುಗೆ ನೀಡಿದವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸುತ್ತವೆ. ಸಾಮಾನ್ಯವಾಗಿ ಪ್ರತಿ ಘಟಿಕೋತ್ಸವದಲ್ಲಿ ಈ ಗೌರವಕ್ಕೆ ಮೂವರನ್ನು ಆಯ್ಕೆ ಮಾಡಿ, ಅಂತಿಮವಾಗಿ ವಿವಿಯ ಕುಲಾಧಿಪತಿಗಳಾದ ರಾಜ್ಯಪಾಲರ ಅನುಮತಿ ಪಡೆದು ಪ್ರದಾನ ಮಾಡುವುದು ವಾಡಿಕೆ. ಚಿತ್ರರಂಗದ ಹಲವು ಸಾಧಕರನ್ನು ರಾಜ್ಯದ ವಿವಿಧ ವಿವಿಗಳು ಈ ಗೌರವ ನೀಡಿ ಪುರಸ್ಕರಿಸಿವೆ. ಚಿತ್ರರಂಗದಲ್ಲಿ ಈ ಗೌರವ ಪಡೆದ ಮೊದಲಿಗರು ರಾಜ್ ಕುಮಾರ್. ಅವರಿಗೆ ೧೯೭೬ರಲ್ಲಿ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿತು. ಈ ವಿಶ್ವವಿದ್ಯಾನಿಲಯದಿಂದ ಈ ಗೌರವಕ್ಕೆ ಪಾತ್ರರಾದವರು ತಾರೆ ಜಯಂತಿ (೨೦೧೨) ಮತ್ತು ಪುನೀತ್ ರಾಜ್‌ಕುಮಾರ್ (೨೦೨೨ ಮರಣೋತ್ತರ) ಬೆಂಗಳೂರು ವಿಶ್ವವಿದ್ಯಾನಿಲಯ ವಿಷ್ಣುವರ್ಧನ್ ಅವರಿಗೆ ಈ ಗೌರವವನ್ನು ೨೦೦೫ರಲ್ಲಿ ನೀಡಿತು. ಮುಂದಿನ ವರ್ಷ ತಾರೆ ಸರೋಜಾದೇವಿ, ೨೦೧೩ರಲ್ಲಿ ಹಂಸಲೇಖ, ೨೦೨೩ರಲ್ಲಿ ಸಂಗೀತ ಸಂಯೋಜಕ ಗುರುಕಿರಣ್ ಗೌರವ ಡಾಕ್ಟರೇಟ್‌ಗೆ ಭಾಜನರಾದರು. ಅದಾಗಲೇ ವಿವಿ ವಿಭಜನೆಯಾಗಿತ್ತು. ೨೦೨೨ರಲ್ಲಿ ಬೆಂಗಳೂರು ಉತ್ತರ ವಿವಿ ಅನಂತನಾಗ್ ಅವರಿಗೆ, ಬೆಂಗಳೂರು ನಗರ ವಿವಿ ರವಿಚಂದ್ರನ್ ಅವರಿಗೆ ಈ ಗೌರವ ಕೊಡಮಾಡಿತು.
ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯದ ವಿವಿಧ ವಿವಿಗಳಿಂದ ಕನ್ನಡ ಚಲನಚಿತ್ರ ನಟನಟಿಯರು ಪಡೆದರು. ಕೆ. ಎಸ್. ಅಶ್ವಥ್ (೨೦೦೮), ಲೀಲಾವತಿ (೨೦೦೮), ತುಮಕೂರು ವಿವಿ; ಭಾರತಿ ವಿಷ್ಣುವರ್ಧನ್ (೨೦೧೦), ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ; ರಾಜೇಶ್ (೨೦೧೨) ಹಂಪಿ ಕನ್ನಡ ವಿಶ್ವವಿದ್ಯಾನಿಲಯ; ಅಂಬರೀಶ್ (೨೦೧೩) ಕರ್ನಾಟಕ ವಿಶ್ವವಿದ್ಯಾನಿಲಯ; ಶಿವರಾಜ್‌ಕುಮಾರ್ (೨೦೧೪), ಉಮಾಶ್ರೀ (೨೦೨೪) ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯ; ದೇವದಾಸ್ ಕಾಪಿಕಾಡ್ (೨೦೨೨) ಮಂಗಳೂರು ವಿಶ್ವವಿದ್ಯಾನಿಲಯ; ರಮೇಶ್ (೨೦೨೨) ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ. ನಟನಟಿಯರು ಮಾತ್ರವಲ್ಲದೆ, ಸಾಧಕ ನಿರ್ದೇಶಕರನ್ನೂ ವಿವಿಗಳು ಗೌರವಿಸಿವೆ. ೨೦೦೬ರಲ್ಲಿ ಗಿರೀಶ್ ಕಾಸರವಳ್ಳಿ ಮತ್ತು ೨೦೦೮ರಲ್ಲಿ ಬರಗೂರು ರಾಮಚಂದ್ರಪ್ಪ (ಸಾಹಿತ್ಯ ಕ್ಷೇತ್ರದಲ್ಲೂ ಇರುವವರು) ಇವರಿಗೆ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು. ಟಿ. ಎಸ್. ನಾಗಾಭರಣ ಅವರಿಗೆ ೨೦೨೩ರಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಈ ಗೌರವ ನೀಡಿತು.
ಕನ್ನಡ ಚಿತ್ರರಂಗದಲ್ಲಿ ಖ್ಯಾತನಾಮರಲ್ಲಿ ಗೌರವ ಡಾಕ್ಟರೇಟ್ ಅಲ್ಲದೆ, ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರ್ ಆದವರಿದ್ದಾರೆ. ತಾರೆ ಜಯಮಾಲ ಅವರು ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಪಡೆದರೆ, ನಟ, ನೃತ್ಯಕೋವಿದ ಶ್ರೀಧರ್ ಹಂಪಿ ವಿವಿಯಿಂದ ಪಡೆದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಗೌರವಿಸುವ ಈ ಸಂಪ್ರದಾಯದಂತೆ ಕೆಲವು ಖಾಸಗಿ ವಿವಿಗಳೂ ಇದನ್ನು ನೀಡುತ್ತವೆ. ಆದರೆ ಗೌರವ ಡಾಕ್ಟರೇಟ್‌ಗಳ ಕುರಿತಂತೆ ಛಾಯಾಗ್ರಾಹಕ ವೇಣು ಅವರು ನೀಡಿದ ಪ್ರತಿಕ್ರಿಯೆಗೆ ಬಲವಾದ ಕಾರಣ ಇದೆ. ಹಲವು ನಕಲಿ ವಿವಿಗಳು ಡಾಕ್ಟರೇಟ್ ನೀಡುತ್ತವೆ. ಅವುಗಳು ಕೊಂಡುಕೊಳ್ಳುವ ‘ಗೌಡಾ’ಗಳು. ಲಕ್ಷಗಳಿಂದ ಇದರ ಬೆಲೆ ಈಗ ಸಾವಿರ ರೂ. ಗಳಿಗೂ ಇಳಿದಿದೆ ಎನ್ನುವವರಿದ್ದಾರೆ. ಇಂತಹ ವಿವಿಗಳಿಂದ ಭೂಗತ ಜಗತ್ತಿನ ಮಂದಿ ಸೇರಿದಂತೆ, ಸಮಾಜವಿರೋಧಿ ಕೃತ್ಯಗಳ ಮೂಲಕ ಕುಖ್ಯಾತರಾದವರೂ ಗೌರವ ಡಾಕ್ಟರೇಟ್ ಕೊಂಡುಕೊಂಡು ತಮ್ಮ ಹೆಸರಿನ ಮುಂದೆ ಡಾ. ಸೇರಿಸಿಕೊಂಡ ಉದಾಹರಣೆಗಳು ಸಾಕಷ್ಟು.
ಇಂತಹ ವಿವಿಗಳು ವರ್ಷದಲ್ಲಿ ಎರಡೋ ಮೂರೋ ಬಾರಿ ಈ ಪದವಿ ಪ್ರದಾನ ಸಮಾರಂಭ ಹಮ್ಮಿಕೊಳ್ಳುತ್ತವೆ, ಅಲ್ಲಿ ಮೂವರಿಗೋ, ನಾಲ್ವರಿಗೋ ಅಲ್ಲ, ನೂರಾರು ಮಂದಿಗೆ ಒಮ್ಮೆಲೇ ‘ಗೌಡಾ’ ಪ್ರದಾನ! ನಾಲ್ಕೆ ದು ವರ್ಷಗಳ ಹಿಂದೆ ಮಂಡ್ಯದಲ್ಲಿ ಇಂತಹದೊಂದು ಸಮಾರಂಭ ನಡೆದಾಗ ಪೊಲೀಸರು ದಾಳಿ ಮಾಡಿ ಅವರನ್ನು ಚದುರಿಸಿದ್ದು ಸುದ್ದಿಯಾಗಿತ್ತು. ಆ ಕಾರ್ಯಕ್ರಮದಲ್ಲಿ ಸಚಿವರೊಬ್ಬರು ಬೇರೆ ಅತಿಥಿಯಾಗಿದ್ದದ್ದು ವಿಶೇಷ!
ಇದು ಡಾಕ್ಟರೇಟ್ ಒಂದಕ್ಕೇ ಸೀಮಿತವಾಗಿಲ್ಲ. ಸಿನಿಮಾ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ದೇಶ ನೀಡುವ ಅತ್ಯುನ್ನತ ಗೌರವ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’. ಆದರೆ ಇತ್ತೀಚಿನ ದಿನಗಳಲ್ಲಿ ಆ ಹೆಸರಿನ ಹಲವು ಪ್ರಶಸ್ತಿಗಳಿವೆ. ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಅವಾರ್ಡ್ಸ್ ಅವುಗಳಲ್ಲಿ ಒಂದು. ಕಳೆದ ಕೆಲವು ವರ್ಷಗಳಿಂದ ನೋಯ್ಡಾದಲ್ಲಿ ಒಬ್ಬ ವ್ಯಕ್ತಿ ಏಳೆಂಟು ಚಿತ್ರೋತ್ಸವಗಳನ್ನು ಹಮ್ಮಿಕೊಳ್ಳುತ್ತಿದ್ದು, ಅವುಗಳಲ್ಲಿ ಇದೂ ಒಂದು. ಇದರಲ್ಲಿ ಪ್ರಶಸ್ತಿ ಪಡೆದವರೆಲ್ಲ ತಮಗೆ ಫಾಲ್ಕೆ ಪ್ರಶಸ್ತಿ ಸಂದಿದೆ ಎಂದು ಬೀಗುತ್ತಾರೆ.
ದಾದಾ ಸಾಹೇಬ್ ಫಾಲ್ಕೆ ಫಿಲಂ ಫೌಂಡೇಶನ್ ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ ಎಕ್ಸಲೆನ್ಸ್ ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ ಐಕಾನ್ ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳಿವೆ, ಇಂತಹವಕ್ಕೆ ಈ ದಿನಗಳಲ್ಲಿ ಸಾಕಷ್ಟು ಮಂದಿ ಪ್ರಾಯೋಜಕರೂ ಇರುತ್ತಾರೆನ್ನಿ. ತಾರೆಯರು ಪಾಲ್ಗೊಳ್ಳುವ ಸಮಾರಂಭ ಎಂದರೆ ಅಲ್ಲಿ ಸುದ್ದಿವಾಹಿನಿಗಳಿರುತ್ತವೆ; ಪ್ರಚಾರ ಇರುತ್ತದೆ. ಮಾಧ್ಯಮಗಳೂ ಅಷ್ಟೇ. ಯಾವುದೇ ಸಂಸ್ಥೆಯ ಹೆಸರಿರಲಿ, ಅವು ನಗಣ್ಯ; ಅದೇನಿದ್ದರೂ ಅವುಗಳ ಪಾಲಿಗೆ ‘ಫಾಲ್ಕೆ ಪ್ರಶಸ್ತಿ’! ಫಾಲ್ಗೆಯವರ ಮೊಮ್ಮಗ ಈ ಕುರಿತು ತಕರಾರೆತ್ತಿದ್ದೂ ಇದೆ. ಇವೆಲ್ಲ ಬಿಕರಿಯಾಗುತ್ತಿರುವುದರ ಬಗೆಗೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದಕ್ಕಿಂತ ಚೋದ್ಯದ ವಿಷಯವೆಂದರೆ, ಈ ಪ್ರಶಸ್ತಿಗಳನ್ನು ಪಡೆದ ಮಂದಿ ತಮಗೆ ಪ್ರತಿಷ್ಠಿತ ಫಾಲ್ಕೆ ಸಂದಿದೆ ಎಂದು ತಮ್ಮ ಇನ್ಸಾ , ಫೇಸ್‌ಬುಕ್‌ಗಳ ಮೂಲಕ ಹೇಳಿಕೊಳ್ಳುವುದು, ಅದರ ಪ್ರತಿಕ್ರಿಯೆ ಇತ್ಯಾದಿ! ಉತ್ತರದಿಂದ ದಕ್ಷಿಣಕ್ಕೂ ಕೈ ಚಾಚಿರುವ ಈ ಫಾಲ್ಕೆ ಪ್ರಶಸ್ತಿ ಕನ್ನಡಕ್ಕೂ ವ್ಯಾಪಿಸಿದೆ. ಎರಡು ಮೂರು ವರ್ಷಗಳ ಹಿಂದೆ ಜನಪ್ರಿಯ ನಟರೊಬ್ಬರಿಗೆ ಆ ಪ್ರಶಸ್ತಿ ಸಂದಿತ್ತು. ಅವರ ಅಭಿಮಾನಿ ಬಳಗ, ‘ರಾಜ್‌ಕುಮಾರ್ ಅವರ ನಂತರ ತಮ್ಮ ನೆಚ್ಚಿನ ನಟನಿಗೆ ಫಾಲ್ಕೆ ಪ್ರಶಸ್ತಿ ಸಂದಿದೆ’ ಎಂದು ಸಾಮಾಜಿಕ ತಾಣಗಳಲ್ಲಿ ಸಂಭ್ರಮಿ ಸಿದ್ದೇ ಸಂಭ್ರಮಿಸಿದ್ದು! ಹ್ಞಾಂ, ಇದೀಗ ‘ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಸೇವಾರತ್ನ ಪ್ರಶಸ್ತಿ’ ಹೆಸರಿನ ಪ್ರಶಸ್ತಿಪ್ರದಾನ ಮುಂದಿನ ವಾರ ನಡೆಯಲಿದೆ. ಕನ್ನಡ ಚಿತ್ರರಂಗದ ೪೪ ಮಂದಿ ಚಿತ್ರ ಈ ಪ್ರಶಸ್ತಿಯನ್ನು ಪಡೆಯಲಿದ್ದಾರೆ! ಫಾಲ್ಕೆ ಹೆಸರು ಹೇಳಿದ ಕೂಡಲೇ ಪ್ರಾಯೋಜಕರೂ ಸಾಕಷ್ಟು ಮಂದಿ ಸಿಗುತ್ತಾರೆ.
ರಾಷ್ಟ್ರಮಟ್ಟದ್ದು ಮಾತ್ರವಲ್ಲ, ಅಂತಾರಾಷ್ಟ್ರೀಯ ಪ್ರಶಸ್ತಿಗಳು, ರಾಜ್ಯೋತ್ಸವ ಪ್ರಶಸ್ತಿಗಳು, ಕರ್ನಾಟಕ ರತ್ನ ಪ್ರಶಸ್ತಿಗಳೂ ಖಾಸಗಿ ಸಂಸ್ಥೆಗಳೂ ನೀಡುವುದಿದೆ. ಸಂಬಂಧಪಟ್ಟವರ ಗಮನಕ್ಕೆ ಬಂದರೂ ಕೈಚೆಲ್ಲಿದ ಉದಾಹರಣೆಗಳೇ ಹೆಚ್ಚು. ಕಲಾವಿದರಿಗೆ ಚಪ್ಪಾಳೆ ಮತ್ತು ಪ್ರಶಸ್ತಿಗಳೇ ಜೀವಸೆಲೆ. ಅದು ಯಾರಿಂದ ಬರುತ್ತದೆ ಎನ್ನುವುದರ ಕುರಿತಾಗಲಿ, ಆಯ್ಕೆಯ ಕುರಿತಾಗಲೀ, ಅವರು ಗಮನ ಹರಿಸುವುದು ಕಡಿಮೆ. ಈ ಕಾರಣದಿಂದಲೇ ಅಸಲಿ ಪ್ರಶಸ್ತಿಗಳನ್ನು ಗೌರವಗಳನ್ನು ಅನುಮಾನದಿಂದ ನೋಡುವಂತಾಗಿದೆ. ನಕಲಿ ಸುದ್ದಿಗಳು ಬೇಗ ಹರಡುವಂತೆ ನಕಲಿ/ ಬಿಕರಿ ಪ್ರಶಸ್ತಿಗಳು ಹೆಚ್ಚು ಸುದ್ದಿಯಲ್ಲಿರುತ್ತವೆ, ಪ್ರಾಯೋಜಕರನ್ನು ಪಡೆಯುತ್ತವೆ. ಇರಲಿ, ಗೌರವ ಡಾಕ್ಟರೇಟ್ ಪಡೆದ ಎಲ್ಲ ಸಾಧಕರಿಗೂ ಅಭಿನಂದನೆಗಳು.