ವಾಜಪೇಯಿ ಅವರ ಈ ಚಿತ್ರ ನೋಡಿದಾಗ, ತಗಡೂರು ರಾಮಚಂದ್ರ ರಾಯರು ನೆನಪಾದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ತಗಡೂರರಿಗೆ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಬಂದಾಗ ಮೈಸೂರಿನ ಶತಮಾನೋತ್ಸವ ಭವನದಲ್ಲಿ ಪೌರ ಸನ್ಮಾನ ಏರ್ಪಡಿಸಿದ್ದರು (1983).
ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರದೇ ಅಧ್ಯಕ್ಷತೆ. ಗಾಂಧಿ ಟೋಪಿಯನ್ನು ಹಾಕಿದ್ದ ಎಂಬತ್ತೆಂಟು ವರ್ಷದ ತಗಡೂರರನ್ನು ವ್ಹೀಲ್‌ಛೇರ್ ಮೇಲೆ ಕೂರಿಸಿದ್ದರು. ಅವರು ಈ ಚಿತ್ರದಲ್ಲಿ ವಾಜಪೇಯಿಯವರಂತೆಯೇ ನಿತ್ರಾಣರಾಗಿ ಕಾಣುತ್ತಿದ್ದರು.
ಜರಾಜೀರ್ಣರಾಗಿ ಹೋಗಿದ್ದ ಅವರು ಒಂದು ಕಾಲದ ಅತ್ಯಂತ ದೊಡ್ಡ ಸ್ವಾತಂತ್ರ ಹೋರಾಟಗಾರರಾಗಿದ್ದರು ಎಂದು ನಂಬುವುದಕ್ಕೇ ಸಾಧ್ಯವಿರಲಿಲ್ಲ. ಕನ್ನಡಪ್ರಭದ ಖಾದ್ರಿ ಶಾಮಣ್ಣ ಮೊದಲಾಗಿ ಅನೇಕ ಪ್ರಸಿದ್ಧರು ತಗಡೂರರನ್ನು ಕುರಿತು ಮಾತಾಡಿದರು. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಪೊಲೀಸರಿಗೆ ತಲೆನೋವಾಗಿದ್ದ ತಗಡೂರರ ಉಗ್ರ ಚಟುವಟಿಕೆಗಳನ್ನು ನೆನೆದರು.
ಸ್ವಾತಂತ್ರ್ಯ ಬಾವುಟ ಹಾರಿಸಕೂಡದೆಂದು ನಿಷೇಧ ಹೇರಿದ್ದಾಗ, ತಗಡೂರರು ಸ್ವಾತಂತ್ರ್ಯದ ಬಾವುಟದಲ್ಲೇ ಬಟ್ಟೆ ಹೊಲೆಸಿಕೊಂಡು ಊರಲ್ಲೆಲ್ಲಾ ಓಡಾಡುತ್ತಿದ್ದರಂತೆ. ಅರೆಸ್ಟ್ ಮಾಡಲೂ ಆಗದೆ, ಬಿಡಲೂ ಆಗದೆ ಪೊಲೀಸರು ಕಕ್ಕಾಬಿಕ್ಕಿಯಾಗುತ್ತಿದ್ದರಂತೆ.
ಗೌರಿ ಬಿದನೂರಿನ ವಿದುರಾಶ್ವತ್ಥದಲ್ಲಿ ಗೋಲಿಬಾರ್ ಮಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಂದಿದ್ದರ ಬಗ್ಗೆ ನಾನಾ ಬಗೆಯ ಪ್ರತಿಭಟನೆಗಳನ್ನು ತಗಡೂರರು ಮಾಡಿದ್ದರು. ಮಹಿಳೆಯರನ್ನು ಸಂಘಟಿಸಿ ಹ್ಯಾಮಿಲ್ಟನ್ ಬಿಲ್ಡಿಂಗ್‌ಗೆ ಮುತ್ತಿಗೆ ಹಾಕಿಸಿದ್ದರು. ಈಗಿನ ಲಷ್ಕರ್ ಪೊಲೀಸ್ ಠಾಣೆಯ ಕಟ್ಟಡಕ್ಕೆ ಅಂದಿನ IGP Hamilton ಹೆಸರು ಇಟ್ಟಿದ್ದರು. ಅನ್ಯಾಯದ ಗೋಲಿಬಾರ್ ಮಾಡಿಸಿ ಸ್ವಾತಂತ್ರ್ಯ ಹೋರಾಟಗಾರರ ಕಗ್ಗೊಲೆ ಮಾಡಿದ ಅವನ ಹೆಸರು ತೆಗೆಯಿರಿ ಎಂಬ ಉಗ್ರ ಹೋರಾಟ ಅದು. ಪೊಲೀಸರ ವಿರುದ್ಧ ನಡೆದ ಈ ಚಳವಳಿಯಲ್ಲಿ 2000ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಠಾಣೆಯ ಕಟ್ಟಡದ ಮೇಲೆ ಹತ್ತಿ ಗೋಡೆಯ ಮೇಲೆ ಮೂಡಿಸಿದ್ದ (embossing) ಹ್ಯಾಮಿಲ್ಟನ್ ಬಿಲ್ಡಿಂಗ್ ಅಕ್ಷರಗಳನ್ನು ಕೆತ್ತಿ ಹಾಕಿದ್ದರು.
ಮಹಿಳೆಯರೇ ಅಟ್ಟಣಿಗೆಯ ಮೇಲೆ ಕಟ್ಟಡವನ್ನು ಹತ್ತಿ, ಹೆಸರು ಅಳಿಸಿದ್ದ ಘಟನೆ ಅದು. ಬಂದೂಕು ಹಿಡಿದಿದ್ದ ಪೊಲೀಸರು ಏನೂ ಮಾಡಲಾಗದೆ ಬೆಪ್ಪಾಗಿ ನಿಂತಿದ್ದರು. ವಿದುರಾಶ್ವತ್ಥದ ಗೋಲಿಬಾರ್ ದುರಂತದ ಬಗ್ಗೆ ಎದ್ದಿದ್ದ ಉಗ್ರ ವಿರೋಧವನ್ನು ನೆನೆದು ಪೊಲೀಸರು ಭಯಗೊಂಡಿದ್ದರು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಪರಿಸ್ಥಿತಿ ಭುಗಿಲೇಳುತ್ತದೆ ಎಂಬ ಆತಂಕ ಪೊಲೀಸರಿಗೆ! ಗಾಂಧಿ, ನೆಹರೂ, ನೇತಾಜಿ ಹೀಗೆ ಎಲ್ಲ ನಾಯಕರ ಗಮನ ಸೆಳೆದಿದ್ದ ಉಗ್ರ ಮಹಿಳಾ ಚಳವಳಿ ಅದು.
ಹ್ಯಾಮಿಲ್ಟನ್ ಹೆಸರನ್ನು ಅದೇ IGP ಎದುರಿಗೇ ಅಳಿಸಿ ಲಷ್ಕರ್ (ಹಿಂದಿದ್ದ ಹೆಸರು– ದಂಡು ಪ್ರದೇಶದ ಠಾಣೆ) ಎಂದು ಬರೆಸಿ ಬಿಟ್ಟರು ಆ ಹೆಣ್ಣುಮಕ್ಕಳು! ಇಂತಹ ಚಳವಳಿಗಳ ಹಿನ್ನೆಲೆಯಲ್ಲಿ ತಗಡೂರರದೇ ನೇತೃತ್ವ. ಈ ರೋಚಕ ಚಳವಳಿಯ ಮುಂಚೂಣಿಯಲ್ಲಿದ್ದವರು ವಿಶಾಲಕ್ಷಮ್ಮನವರು (ಅರವಿಂದ ಪರಿಮಳ ವರ್ಕ್ಸ್‌ನ ಮಾಲೀಕರಾದ ಎಚ್.ಎಸ್.ರಾವ್ ಮತ್ತು ರಾಮತೀರ್ಥರ ತಾಯಿಯವರು. ಅವರೂ ಕೂಡ ಅಂದಿನ ಸಮಾರಂಭದಲ್ಲಿದ್ದರು).
ತಗಡೂರರ ಇಂತಹ ಹತ್ತಾರು ರೋಚಕ ಪ್ರಸಂಗಗಳನ್ನು ವಿವರಿಸುತ್ತಿದ್ದಾಗ ಸಭೆಯಲ್ಲಿದ್ದ ನಮಗೇ ಮೈನವಿರೇಳುತ್ತಿತ್ತು.
ಆಗೆಲ್ಲ ತಗಡೂರರದು ದಿನಕ್ಕೊಂದು ಚಳವಳಿ. 1910ರಿಂದಲೇ ತಿಲಕ್, ಗಾಂಧಿಜಿಯವರ ಗಮನ ಸೆಳೆದಿದ್ದರು. ಅಸ್ಪ ಶ್ಯತೆಯ ನಿವಾರಣೆಗಾಗಿ ಸವರ್ಣೀಯ ಯುವಕರನ್ನು ಸಂಘಟಿಸಿದ್ದರು. ದೇವಾಲಯ ಪ್ರವೇಶ ಮಾಡಿಸಿದ್ದರು. ಸವರ್ಣೀಯ ಯುವಕರಲ್ಲಿ ಜಾಗೃತಿ ಮೂಡಿಸಿದರು. 1919ರಲ್ಲೇ ತಗಡೂರಿನಲ್ಲಿ ಸ್ವರಾಜ್ಯ ಮಂದಿರ ಸ್ಥಾಪಿಸಿದವರು ಅವರು. ಗಾಂಧಿಜಿಯವರನ್ನೂ ಆಕರ್ಷಿಸಿದ್ದ ಚಳವಳಿಗಳು ಅವು. 1934ರಲ್ಲಿ ಸ್ವತಃ ಗಾಂಧಿಯವರು ತಗಡೂರರ ಬದನವಾಳುವಿಗೆ ಬಂದು ಹರಿಜನ ಫಂಡ್‌ಗೆ ಚಾಲನೆ ಕೊಟ್ಟರು. ಅಸ್ಪ ಶ್ಯತಾ ನಿವಾರಣಾ ಚಳವಳಿ ಬೃಹತ್ ಸ್ವರೂಪ ತಳೆಯಿತು. ಸ್ವದೇಶೀ ಚಳವಳಿಯಲ್ಲಿ ವಿದೇಶಿ ವಸ್ತುಗಳನ್ನು ಸುಡಲು ಹೋಗಿ ತಮ್ಮ ಸ್ವಂತ ಅಂಗಡಿಯನ್ನೇ ಬೆಂಕಿಗೆ ಬಲಿಕೊಟ್ಟರು!
ಅಧ್ಯಕ್ಷತೆ ವಹಿಸಿದ್ದ ನಿಟ್ಟೂರರು (ಮಾಜಿ ಗವರ್ನರ್ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಾಧೀಶರು) ಮಾತಾಡಿದರು; ಯುವಕರಾಗಿದ್ದ ಅವರಿಗೆಲ್ಲಾ ಆ ದಿನಗಳಲ್ಲಿ ನಿತ್ಯ ಸ್ಛೂರ್ತಿಯಾಗಿದ್ದವರೆಂದರೆ ತಗಡೂರರು. ಅವರ ಒಂದೊಂದು ಸಾಹಸದ ಘಟನೆಗಳನ್ನು ಕೇಳಿ ಪ್ರಭಾವಿತರಾಗಿ ಚಳವಳಿಗೆ ಯುವಕರು ಧುಮುಕುತ್ತಿದ್ದರಂತೆ. ಸ್ವಾತಂತ್ರ್ಯ ಹೋರಾಟದಲ್ಲಿ ಪೂರ್ಣ ತೊಡಗಿಕೊಂಡು ತಗಡೂರರು ತಮ್ಮ ಆರೋಗ್ಯ ನಿರ್ಲಕ್ಷಿಸಿದರು. ದೇಹ ಜರ್ಜರಿತವಾಗಿತ್ತು. ಒಂದು ಮಾತನ್ನೂ ಆಡಲಾರದಷ್ಟು ನಿತ್ರಾಣರಾಗಿಬಿಟ್ಟಿದ್ದರು.
ನಿಟ್ಟೂರರ ಮಾತು ಮುಂದುವರಿಯಿತು.
‘ಒಂದು ಕಾಲದಲ್ಲಿ ನಮಗೆಲ್ಲಾ ಉತ್ಸಾಹ, ಸ್ಛೂರ್ತಿ ತುಂಬುತ್ತಿದ್ದವರು ಇವರೇನಾ ಅನ್ನಿಸುತ್ತಿತ್ತು.’ ಈಗಲೂ ಅಷ್ಟೇ. ಅವರನ್ನು ನೋಡಬೇಕು ಅನ್ನಿಸಿದಾಗಲೆಲ್ಲಾ, ಬೆಂಗಳೂರಿನಿಂದ ಬೆಳಿಗ್ಗೆಯೇ ಹೊರಟು ಬರುತ್ತೇನೆ. ನಂಜನಗೂಡಿನ ಹತ್ತಿರದ ಅವರ ಮನೆ ತಲುಪುವಷ್ಟರಲ್ಲಿ ಮಧ್ಯಾಹ್ನ ಹನ್ನೆರಡು ಗಂಟೆಯಾಗಿರುತ್ತದೆ. ಅವರು ಮಂಚದ ಮೇಲೆ ಮೌನವಾಗಿ ಮಲಗಿರುತ್ತಾರೆ. ಏನನ್ನೂ ಮಾತನಾಡಲಾರರು. ಕೈಸನ್ನೆ ಮಾಡುತ್ತಾರೆ. ಕಣ್ಣುಗಳಲ್ಲಿ ಹೊಳಪು ಮೂಡುತ್ತದೆ. ನನಗೂ ಮಾತನಾಡಲಾಗುವುದಿಲ್ಲ. ಮೂರು ಗಂಟೆಗಳ ಕಾಲ ಅವರೆದುರು ಕುರ್ಚಿಯಲ್ಲಿ ಕುಳಿತಿದ್ದು, ನಂತರ ಬೆಂಗಳೂರಿಗೆ ಹೊರಡುತ್ತೇನೆ.
‘ಅವರೊಂದಿಗೆ ಅನಿಸಿದ ಎಲ್ಲವನ್ನೂ ಮಾತಾಡಿದೆನೆಂಬ ಸಂತೃಪ್ತಿ ನನ್ನ ಮನಸ್ಸನ್ನು ತುಂಬಿರುತ್ತದೆ. ಅವರಿಗೂ ಅಷ್ಟೇ. ಅಲ್ಲಿಯ ತನಕ ನಾವಿಬ್ಬರೂ ಮುಕ್ತವಾಗಿ ಎಲ್ಲ ವಿಚಾರಗಳನ್ನೂ ಮಾತಾಡಿದೆವು ಅನ್ನಿಸುತ್ತದೆ’.
ಇಲ್ಲಿರುವ ವಾಜಪೇಯಿ ಚಿತ್ರ ನೋಡಿ ಈ ಪ್ರಸಂಗ ನೆನಪಾಯ್ತು. ಹೃದಯ ಸಂವಾದ ಎಂದರೆ ಇದೇನಾ?
ವಾಜಪೇಯಿ ಇರುವ ತನಕವೂ ಅವರನ್ನು ಅದ್ವಾನಿಯವರು ಮನೆಗೆ ಬಂದು ಮಾತಾಡಿಸಿಕೊಂಡು ಹೋಗುತ್ತಿದ್ದರಂತೆ. ಭಾವುಕ ಮೌನ, ನೆನಪುಗಳು, ಕಣ್ಣೀರು ಇಷ್ಟೇ ಅವರ ಮಾತಂತೆ. ಇವರಿಬ್ಬರ ನಡುವಿನ ಮಾತುಕತೆ ಪರಸ್ಪರರಿಗೆ ಮಾತ್ರ ಅರಿವಾಗುವ ಸಹೃದಯ ಸಂವಾದ ಇದ್ದಿರಬಹುದೇ?
ಹೀಗೆ ಮೂಲೆ ಹಿಡಿದ ನಿತ್ರಾಣಿ ಮುದುಕರುಗಳು ನಮ್ಮ ಸುತ್ತಲಲ್ಲೂ ಇರುತ್ತಾರೆ. ಕ್ವಾರಂಟೈನ್ ಮುಗಿದ ಮೇಲೆ ಹೋಗಿ ಒಂದಷ್ಟು ಕಾಲ ಅವರೊಂದಿಗಿದ್ದು ಬರಬೇಕು ಎಂದು ನಿರ್ಧರಿಸಿದವನೇ ಅನೇಕ ಹಿರಿಯರ ಮನೆಗೆ ಹೋಗಿ ಮಾತಾಡಿಸಿ ನಮಸ್ಕರಿಸಿ ಬಂದೆ.
ಹೀಗೇ ನೆನಪಾದ ಇತರ ನಾಲ್ಕಾರು ಹಿರಿಯರೊಂದಿಗೆ ಫೋನ್ ಮಾಡಿ ಮಾತಾಡಿದೆ.
ಅಯ್ಯೋ ಅದೇನು ಸಂತಸ, ಸಂಭ್ರಮ!
‘ನಂದಿರ್ಲಿ. ನೀನೆಂಗಿದ್ದೀಯಾ ಹೇಳೋ?!’ ಎಂದವರೇ ಹೆಚ್ಚು.
ಈ ಮೊದಲು ಬಹುವಚನದಲ್ಲೇ ಮಾತಾಡಿಸುತ್ತಿದ್ದರು. ಅವರ ಈಗಿನ ಏಕವಚನ ಎಷ್ಟು ಆಪ್ಯಾಯಮಾನವಾಗಿ ಕೇಳಿಸಿತು ಗೊತ್ತಾ ?