Mysore
19
scattered clouds

Social Media

ಗುರುವಾರ, 16 ಜನವರಿ 2025
Light
Dark

ದುಷ್ಟ ಸಿದ್ಧಾಂತಿಗಳ ಹುಸಿ ಓಲೈಕೆ!

-ಕೆ.ವೆಂಕಟರಾಜು, ಚಾಮರಾಜನಗರ

ದೇವನೂರ ಮಹಾದೇವ ಅವರ ‘ಆರೆಸೆಸ್- ಆಳ, ಅಗಲ’ ಕೃತಿಯ ಬಗ್ಗೆ ಪ್ರಸನ್ನ ಅವರ ಲೇಖನ ಪ್ರಕಟವಾಗಿದೆ. ಆರೆಸೆಸ್ ಅನ್ನು ವಿರೋಧಿಸುತ್ತಿದ್ದ ಮಾರ್ಕ್ಸ್‌ವಾದಿಗಳು , ಸಮಾಜವಾದಿಗಳು ಮತ್ತು ಗಾಂಧಿವಾದಿಗಳು ವಿವಿಧ ಸಂದರ್ಭದಲ್ಲಿ ಕೈ ಜೋಡಿಸಿದ್ದಾರೆ ಎಂದು ಹೇಳಿ ಎರಡು ಸಂದರ್ಭ ಉಲ್ಲೇಖಿಸುತ್ತಾರೆ.

೧೯೭೧ ರ ಲೋಕಸಭಾ (ಮಧ್ಯಂತರ) ಚುನಾವಣೆ ಸಂದರ್ಭ. ಪ್ರೊ. ಎಮ್. ಗೋಪಾಲಕೃಷ್ಣ ಅಡಿಗರು ಬೆಂಗಳೂರಿನಲ್ಲಿ ಜನಸಂಘದಿಂದ ಚುನಾವಣೆಗೆ ನಿಂತಾಗ ಆರೆಸೆಸ್ ಜತೆ ಕಮ್ಯುನಿಸ್ಟರು, ಸಮಾಜವಾದಿಗಳು ಕೈಗೂಡಿಸಿದ್ದರು ಎಂದು ಹೇಳಿದ್ದಾರೆ. ಇದು ಅರ್ಧ ಸತ್ಯ. ಕಾಂಗ್ರೆಸ್ಸೇತರ ಚಳವಳಿ (ಇದನ್ನು ಲೋಹಿಯಾ ಹಿಂದೆಯೇ ಪ್ರಬಲವಾಗಿ ಪ್ರತಿಪಾದಿಸಿ ಜನಸಂಘವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಇದಕ್ಕೆ ಹಿಂದೆ ರಾಷ್ಟ್ರಪತಿ ಚುನಾವಣೆಯಲ್ಲಿ ಕೋಕಾ ಸುಬ್ಬರಾವ್ ಅವರನ್ನು ಬೆಂಬಲಿಸಿ ಈ ಕೂಟದ ಆರಂಭವಾಗಿತ್ತು ) ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಸನ್ನು ಅಥವಾ ಆಡಳಿತ ಪಕ್ಷವನ್ನೂ ವಿರೋಧಿಸಿ ಅಡಿಗರನ್ನು ಬೆಂಬಲಿಸಿ ಕೆಲಸ ಮಾಡಿದರು. ಆರೆಸೆಸ್‌ನವರೂ ಕೆಲಸ ಮಾಡಿದರು ಇತರರೂ ಕೆಲಸ ಮಾಡಿದರು. ಬೆಂಗಳೂರಿನಲ್ಲಿ ಕೇಶವ ಕೃಪಾದಲ್ಲಿ ಮೀಟಿಂಗ್‌ಗಳು ನಡೆದಿರಬಹುದು.

ಈ ಚುನಾವಣಾ ವ್ಯಾವಹಾರ ಹೊರತು ಪಡಿಸಿ ಸಹಕಾರ, ಸ್ನೇಹ ಇತ್ಯಾದಿ ಯಾವುವೂ ಇರಲಿಲ್ಲ. ಇನ್ನು ಬಿಜೆಪಿ ಹುಟ್ಟಿದ ಸಂದರ್ಭದ ಮಾತು ಆಡುತ್ತಾರೆ. ಅವರು ಆಗ ಹೇಳಿದ ಗಾಂಧಿಪ್ರಣೀತ ಸಮಾಜವಾದವನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಜನರನ್ನು ಯಾಮಾರಿಸಲು ಈ ಪದ ಪುಂಜ ಬಳಸಲಾಗಿತ್ತು. ಆರ್‌ಎಸ್‌ಎಸ್ಸಿನ ಗೆಳೆಯರು ಒಳಿತಿನ ಭಾವಾವೇಷಕ್ಕೆ ಒಳಗಾಗಿ ಎಂದು ಪ್ರಸನ್ನ ಬರೆಯುತ್ತಾರೆ. ಯಾವ ಒಳಿತೂ, ಯಾವ ಭಾವಾವೇಷವೂ ಇರಲಿಲ್ಲ. ಆಡಳಿತದಲ್ಲಿದ್ದ ಜನತಾ ಇಂದ ಹೊರಬಂದ ಜನಸಂಘದ ಗುಂಪು ಬಿಜೆಪಿ ಮಾಡಿಕೊಂಡಿತು. (ಜನತಾ ಸರಕಾರ ಗಬ್ಬೇಳಲು ಜನಸಂಘದ ಗುಂಪಿನ ದೇಣಿಗೆಯೂ ಇದೆ. ಕೊನೆಗೆ ಇದನ್ನು ಚರಣ್ ಸಿಂಗ್ ಮತ್ತು ರಾಜನಾರಾಯಣ್ ತಲೆಗೆ ಕಟ್ಟಲಾಯಿತು.) ಆಗ ಗಾಂಧಿಪ್ರಣೀತ ಸಮಾಜವಾದ ಎಂಬ ಅರ್ಥಹೀನ ಬಾವುಟ ಏರಿಸಲಾಯಿತು. ಹಾಗೆ ನೋಡಹೋದರೆ ೧೯೭೭ರಲ್ಲಿ ಜನತಾ ಸರಕಾರ ಕೇಂದ್ರದಲ್ಲಿ ಬಂದಾಗ ಬಹಳ ಅಲ್ಪ ಕಾಲಕ್ಕೆ ಒಂದು ರೀತಿಯ ಸಹಕಾರ ಇತ್ತು. ಅಧಿಕಾರ ಸಿಮೆಂಟ್ ಅಲ್ಲವೇ ? ಇದರಿಂದ ದೊಡ್ಡ ಹೊಡೆತ ಬಿದ್ದಿದ್ದು ಸಮಾಜವಾದಿ ಪಕ್ಷಕ್ಕೆ . ದೇಶದ ಎಲ್ಲ ಕಡೆ ಸೋಷಲಿಸ್ಟ್ ಕಚೇರಿ ಮುಚ್ಚಿ ಮೇಜು ಕುರ್ಚಿ ಸಮೇತ ಅವರು ಜನತಾ ಕಚೇರಿಗೆ ಬಂದರು !!

ಹೌದು ನಮ್ಮ ವಿರೋಧಿಗಳು ಶತ್ರುಗಳೇನಲ್ಲ. ಅವರನ್ನು ದ್ವೇಷಿಸಬೇಕಾದ ಅಗತ್ಯ ಇಲ್ಲ. ಇದು ಪ್ರಜಾಪ್ರಭುತ್ವದ ನಿಯಮ ಹಾಗೂ ಸನ್ನಡತೆ. ಆದರೆ ಪ್ರಸನ್ನರ ಮಾತುಗಳು ಅನಗತ್ಯವಾಗಿ ಒಂದು ದುಷ್ಟ ಸಿಧ್ದಾಂತಿಗಳ ಹುಸಿ ಓಲೈಕೆಯಂತೆ ಕಾಣುತ್ತದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ