Light
Dark

ಸಂಪಾದಕೀಯ: ವಿದ್ಯುತ್ ಅವಘಡದಿಂದ ಕಾಡಾನೆಗಳ ಸಾವು: ಬೇಕಿದೆ ಶಾಶ್ವತ ಪರಿಹಾರ

ಕೊಡಗಿನಲ್ಲಿ ವಿದ್ಯುತ್ ಆಘಾತದಿಂದ ಕಾಡಾನೆಗಳ ಸಾವಿನ ಸರಣಿ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ಒಟ್ಟು ಮೂರು ಆನೆಗಳು ಇದೇ ಕಾರಣದಿಂದ ಮತಪಟ್ಟಿದ್ದರೆ, ಈ ವರ್ಷ ಕೇವಲ ೨ ದಿನಗಳ ಅಂತರದಲ್ಲಿ ೩ ಆನೆಗಳು ದುರ್ಮರಣಕ್ಕೆ ಈಡಾಗಿವೆ. ಆನೆ- ಮಾನವ ಸಂಘರ್ಷ ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕಾಡಾನೆಗಳ ಅಸಹಜ ಸಾವಿನ ಪ್ರಮಾಣವೂ ಕಳವಳಕಾರಿಯಾಗಿದೆ.

ಅರಣ್ಯ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ಆನೆಗಳ ಮರಣ ವರದಿ ಪ್ರಕಾರ ಕಳೆದ ವರ್ಷ ರಾಜ್ಯದಲ್ಲಿ ವಿವಿಧ ಕಾರಣಗಳಿಂದ ೭೦ ಆನೆಗಳು ಮತಪಟ್ಟಿವೆ. ಈ ಪೈಕಿ ಕೊಡಗಿನ ೩ ಆನೆಗಳು ಸೇರಿ ೧೦ ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ.

ಕೊಡಗು ಸೇರಿದಂತೆ ರಾಜ್ಯದ ಮಲೆನಾಡು ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಆನೆಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಜತೆಗೆ ಆನೆ ಕಾರಿಡಾರ್ನಲ್ಲಿ ಮಾನವ ಹಸ್ತಕ್ಷೇಪವೂ ನಿರಂತರವಾಗಿ ನಡೆಯುತ್ತಿದೆ. ಇದರಿಂದಾಗಿಯೇ ಅಸ್ವಾಭಾವಿಕವಾಗಿ ಮತಪಡುವ ಆನೆಗಳ ಸಂಖ್ಯೆಯೂ ಏರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಡಿನ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿಗಳೂ ಆನೆಗಳ ಪಾಲಿಗೆ ಯಮಪಾಶವಾಗಿ ರೂಪಗೊಂಡಿದೆ. ಕೆಲವೆಡೆ ಸರಿಯಾದ ನಿರ್ವಹಣೆ ಇಲ್ಲದೆ ಜೋತಾಡುವ ತಂತಿಗಳು ತಗುಲಿ ಮೃತಪಟ್ಟಿದ್ದರೆ, ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದು ಉಂಟಾದ ಅನಾಹುತದಲ್ಲಿ ಮೂರು ಆನೆಗಳು ಜೀವ ಕಳೆದುಕೊಳ್ಳುವಂತಾಗಿದೆ.

೨೦೧೪-೧೫ ರಲ್ಲಿ ೧೫ ಆನೆ, ೨೦೧೪-೧೫ರಲ್ಲಿ ೧೫ ಆನೆ, ೨೦೧೫-೧೬ರಲ್ಲಿ ೮ ಆನೆ, ೨೦೧೬-೧೭ರಲ್ಲಿ ೬ ಆನೆ, ೨೦೧೭-೧೮ ರಲ್ಲಿ ೧೦ ಆನೆ, ೨೦೧೮-೧೯ರಲ್ಲಿ ೯ಆನೆ, ೨೦೧೯-೨೦ರಲ್ಲಿ ೮ ಆನೆ, ೨೦೨೧ರಲ್ಲಿ ೧೦ ಆನೆಗಳು ರಾಜ್ಯದಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ.

ಕಾಡಾನೆಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಕೊಡಗಿನಲ್ಲಿ ಬಹಳಷ್ಟು ಕಾಡಾನೆಗಳಿಗೆ ಕಾಫಿ ತೋಟಗಳೇ ಆಶ್ರಯತಾಣಗಳಾಗಿವೆ. ಕಾಫಿ ಬೆಳೆಗಾರರು, ರೈತ ಸಂಘಟನೆಗಳಿಂದ ಒತ್ತಡ ಕಂಡು ಬಂದಾಗ ಇಲಾಖೆ ವತಿಯಿಂದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಚರಣೆ ನಡೆಸಲಾಗುತ್ತದೆ. ಆದರೆ ಆನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹೋಗುತ್ತವೆಯೇ ಹೊರತು ಕಾಡಿಗೆ ತೆರಳುವುದಿಲ್ಲ. ಒಂದು ವೇಳೆ ಕಾಡಿಗೆ ಹೋದರೂ ಒಂದು ವಾರ, ೧೦ ದಿನ ಕಳೆದ ಮತ್ತೆ ಕಾಫಿ ತೋಟಕ್ಕೆ ವಾಪಸಾಗುತ್ತವೆ.

ಆನೆ- ಮಾನವ ಸಂಘರ್ಷದಿಂದ ಮನುಷ್ಯರು ಮಾತ್ರವಲ್ಲದೆ ಈಗ ಕಾಡಾನೆಗಳೂ ಪ್ರಾಣ ಕಳೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿರುವ ಈ ಗಂಭೀರ ಸಮಸ್ಯೆಗೆ ಇನ್ನೂ ಕೂಡ ಸರ್ಕಾರದಿಂದ ಶಾಶ್ವತ ಪರಿಹಾರ ದೊರಕಿಲ್ಲ. ಅರಣ್ಯದ ಗಡಿಭಾಗದಲ್ಲಿ ರೈಲ್ವೆ ಕಂಬಿಗಳ ಅಳವಡಿಕೆ ಸೇರಿದಂತೆ ಶಾಶ್ವತ ಪರಿಹಾರಕ್ಕಾಗಿ ಅಧಿಕಾರಿಗಳು ಕ್ರಿಯಾಯೋಜನೆಯೊಂದನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ಮೂಲಕ ಆನೆ-ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.

ವಿದ್ಯುತ್ ಸ್ಪರ್ಶ ಮಾತ್ರವಲ್ಲದೆ ಕಾಫಿ ತೋಟಗಳ ನಡುವೆ ಇರುವ ಕೆರೆಗಳಿಗೆ ಬಿದ್ದು ಕೂಡ ಕಾಡಾನೆಗಳು ಸಾವನ್ನಪ್ಪುತ್ತಿವೆ. ಆಹಾರ ಅರಸಿ ಬರುವ ಕಾಡಾನೆಗಳು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಕೂಡ ಹೆಚ್ಚಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ.

ಕೊಡಗಿನಲ್ಲಿ ಬೇಸಿಗೆ ಮಳೆ ಬಿದ್ದರೂ ಅರಣ್ಯ ಪ್ರದೇಶದಲ್ಲಿರುವ ಕೆರೆ, ಬಾವಿ, ತೋಡುಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗುತ್ತಿಲ್ಲ. ಆನೆಗಳಿಗೆ ಬೇಕಾದ ಆಹಾರ ಕೂಡ ಅರಣ್ಯದಲ್ಲಿ ಲಭಿಸುತ್ತಿಲ್ಲ. ಇದರಿಂದ ಕಾಡಾನೆಗಳು ನಾಡಿನತ್ತ ವಲಸೆ ಬರುತ್ತಿದೆ. ಕಂದಕ ನಿರ್ಮಾಣ, ಸೋಲಾರ್ ಬೇಲಿಯಂತಹ ಅಪಾಯಗಳಿಂದ ಕಾಡಾನೆ ನಾಡಿನತ್ತ ಬರುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಕಾಫಿ ತೋಟಗಳಲ್ಲಿರುವ ಕಾಡಾನೆಗಳನ್ನು ಸೆರೆಹಿಡಿದು ಅವುಗಳಿಗೆ ಪುನರ್ವಸತಿ ಕಲ್ಪಿಸಬೇಕಿದೆ.

ಕಾಡಾನೆಗಳಿರುವ ಅರಣ್ಯ ಪ್ರದೇಶವನ್ನು ಅಭಿವೃದ್ಧಿಗೊಳಿಸಬೇಕು. ಆನೆಗಳಿಗೆ ಬೇಕಾದ ನೀರಿಗಾಗಿ ಕೆರೆಗಳ ವ್ಯವಸ್ಥೆ, ಆಹಾರ ಒದಗಿಸುವ ಗಿಡ-ಮರಗಳನ್ನು ಬೆಳೆಸಬೇಕಿದೆ. ಈಗಲೇ ಮುಂಜಾಗೃತಾ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೆ ಮತ್ತಷ್ಟು ಅನಾಹುತ ಹೆಚ್ಚಾಗುವ ಸಾಧ್ಯತೆ ಇದೆ.
ವಿದ್ಯುತ್ ಇಲಾಖೆ ಕೂಡ ಮುಂಜಾಗೃತೆ ವಹಿಸಬೇಕಾದ ಅವಶ್ಯಕತೆ ಇದೆ. ವಿದ್ಯುತ್ ಸ್ಪರ್ಶದಿಂದ ಕಾಡಾನೆಗಳು ಸಾವನ್ನಪ್ಪುತ್ತಿರುವ ಬಹುತೇಕ ಪ್ರಕರಣಗಳಲ್ಲಿ ವಿದ್ಯುತ್ ತಂತಿ ಕೆಲಭಾಗದಲ್ಲಿ ಹಾದುಹೋಗಿರುವುದು ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ವಿದ್ಯುತ್ ಮಾರ್ಗಗಳ ದುರಸ್ತಿ ಕಾರ್ಯ ನಡೆಸಬೇಕಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ