Light
Dark

ಸಂಪಾದಕೀಯ | ಸಮೃದ್ಧತೆಯ ಸಂಕೇತವಾದ ಮಳೆಯೇ ಮರಣಮೃದಂಗವಾಗಲು ಕಾರಣರಾರು?

ರಾಜ್ಯದೆಲ್ಲೆಡೆ ವ್ಯಾಪಕ ಮಳೆಯಾಗುತ್ತಿದೆ. ಕೆರೆಕಟ್ಟೆಗಳು ತುಂಬುತ್ತಿವೆ. ಜಲಾಶಯಗಳು ಭರ್ತಿಯಾಗುತ್ತಿವೆ. ಮಳೆ ಎಂಬುದು ಸದಾ ಸಮೃದ್ಧಿಯ ಸಂಕೇತ. ಯಾವ ವರ್ಷದಲ್ಲಿ ವಾಡಿಕೆಯ ಪೂರ್ಣಪ್ರಮಾಣದಲ್ಲಿ ಮಳೆಯಾಗುತ್ತದೋ ಆ ವರ್ಷದಲ್ಲಿ ಬೆಳೆ ಸಮೃದ್ಧವಾಗಿರುತ್ತದೆ. ದೇಶದ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಜಿಡಿಪಿ ಪ್ರಮಾಣವೂ ಗಣನೀಯವಾಗಿ ಹೆಚ್ಚಳವಾಗಿರುತ್ತದೆ. ಸತತ ಮೂರ್ನಾಲ್ಕು ವರ್ಷಗಳ ಕಾಲ ವಾಡಿಕೆಯಷ್ಟು ಮತ್ತು ವಾಡಿಕೆಗಿಂತ ಹೆಚ್ಚು ಮಳೆಯಾದರೆ, ಮುಂದಿನ ಎರಡು- ಮೂರು ವರ್ಷಗಳ ಕಾಲ ಸಾಧಾರಣ ಮಳೆಯಾದರೂ ಸಮೃದ್ಧ ಬೆಳೆ ಬರುತ್ತದೆ. ಮಳೆ ಹೆಚ್ಚಿದಷ್ಟೂ ಅಂತರ್ಜಲ ಹೆಚ್ಚುತ್ತದೆ. ಕೆರೆಕಟ್ಟೆ ತುಂಬಿ ತುಳುಕಿದಷ್ಟೂ ಜನರ ಬದುಕೂ ತುಂಬಿತುಳುಕಿ ಹನಸಾಗುತ್ತದೆ.

ದುರದೃಷ್ಟವಶಾತ್ ಇತ್ತೀಚಿನ ವರ್ಷಗಳಲ್ಲಿ ಸಂತಸ ಮತ್ತು ಸಮೃದ್ಧಿಯ ಸಂಕೇತವಾಗಿರುವ ಮಳೆ ಆಯ್ದ ಭಾಗಗಳಲ್ಲಿ ಅಪಾಯಕಾರಿಯೋ ಇಲ್ಲವೇ ಬದುಕು ಕಸಿಯುವ ಪ್ರಳಯಕಾರಿಯೋ ಆಗಿರುತ್ತದೆ. ಭಾರಿ ಮಳೆಯಿಂದಾಗಿ ಊರೂರುಗಳೆ ಮುಳುಗಿ ಹೋಗುತ್ತವೆ. ವಾರಗಟ್ಟಲೆ ಸಂಪರ್ಕ ಕಡಿದುಕೊಳ್ಳುತ್ತವೆ. ಮಳೆ ಬದುಕನ್ನೂ ಕೊಚ್ಚಿಕೊಂಡು ಹೋಗಿಬಿಡುತ್ತದೆ.
ಮಳೆಯಿಂದಾಗುವ ಅನಾಹುತಗಳ ಪೈಕಿ ಬಹುಪಾಲು ನೈಸರ್ಗಿಕವಲ್ಲ, ಮಾನವ ನಿರ್ಮಿತವಾದುವು. ಮಳೆಗಾಲದಲ್ಲಿ ಮಳೆ ಬರುತ್ತದೆಂದು ಗೊತ್ತಿದ್ದರೂ, ಇಂತಿಷ್ಟು ಪ್ರಮಾಣಲ್ಲಿ ಸುರಿದರೆ, ವಸತಿ ಪ್ರದೇಶ ಮುಳುಗಡೆಯಾಗುವುದು ಖಚಿತವಾಗಿದ್ದರೂ ಅಪಾಯವನ್ನು ನಿರ್ಲಕ್ಷಿಸಿ ಅದೇ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲಾಗುತ್ತಿದೆ. ಮಳೆಬಂದು ಮುಳುಗಡೆಯಾದಾಗ ಪ್ರಕೃತಿಯನ್ನೇ ದೂಷಿಸಲಾಗುತ್ತಿದೆ. ಮುನ್ನೆಚ್ಚರಿಕೆಯಿಂದ ತಪ್ಪಿಸಿಕೊಳ್ಳಬಹುದಾದ ಇಂತಹ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವುದರಲ್ಲಿ ಜನರ ಪಾತ್ರವೆಷ್ಟಿದೆಯೋ ಸರ್ಕಾರದ ಪಾತ್ರವೂ ಅಷ್ಟೇ ಇದೆ.

ಮಳೆಗಾಲದಲ್ಲಿ ಕೆಲ ದಿನಗಳ ಮಟ್ಟಿಗೆ ನದಿಗಳು ತುಂಬಿ ಹರಿದಾಗ, ನದಿಪಾತ್ರದ ಹೊಲಗದ್ದೆಗಳಿಗೆ ನೀರು ತುಂಬಿಕೊಳ್ಳುವುದು ಸಹಜ. ಅದು ನಿರೀಕ್ಷಿತ. ಹಾಗಂತ ಆ ಪ್ರದೇಶದಲ್ಲಿ ಬೆಳೆಬೆಳೆಯಬಾರದೆಂದೇನೂ ಇಲ್ಲ. ಆದರೆ, ಅಂತಹ ನೀರು ತುಂಬಿಕೊಳ್ಳುವ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳುವುದು ಅಪಾಯಕಾರಿ. ನದಿಪಾತ್ರದ ಜನರಿಗೆ ಮಳೆಬಂದಾಗ ಮುಳುಗಡೆಯ ಸಂಕಷ್ಟ ಅನುಭವಿಸುವುದು ಮತ್ತು ಮಳೆ ನಿಂತು ನೀರಿಳಿದು ಹೋದ ನಂತರ ಸಹಜವಾದ ಬದುಕು ನಡೆಸುವುದು ಅಭ್ಯಾಸವಾಗಿದೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ ನಗರ, ಪಟ್ಟಣ, ಅರೆಪಟ್ಟಣ ಮತ್ತು ಗ್ರಾಮಮಟ್ಟಗಳಲ್ಲೂ ಹೊಸದಾಗಿ ವಸತಿ ಪ್ರದೇಶಗಳು ರೂಪುಗೊಳ್ಳುತ್ತಿವೆ. ಈ ವಸತಿ ಪ್ರದೇಶಗಳನ್ನು ನಿರ್ಮಿಸುವರು ಮಳೆಯಿಂದಾಗುವ ಅಪಾಯಗಳನ್ನು ಗಮನಿಸುವುದಿಲ್ಲ. ಮಳೆ ನೀರು ಸಹಜವಾಗಿ ಹರಿದು ಹೋಗುವ ಕಿರುಕಾಲುವೆಗಳನ್ನೇ ಮುಚ್ಚಲಾಗುತ್ತದೆ. ಕೆರೆಗಳನ್ನೇ ಮುಚ್ಚಿ ವಸತಿಪ್ರದೇಶಗಳನ್ನು ನಿರ್ಮಿಸಲಾಗುತ್ತದೆ.

ಕೆರೆಗಳ ನಿರ್ಮಾಣ ವ್ಯವಸ್ಥೆಯಲ್ಲೇ ಮಳೆ ನೀರು ಹರಿದು ಸಹಜವಾಗಿ ಹರಿದು ಬಂದು ತುಂಬಿಕೊಳ್ಳುವ ಮಾರ್ಗ ಇದೆ. ಕೆರೆ ತುಂಬಿ ಕೋಡಿ ಬಿದ್ದು ಹರಿದು ಹೋಗುವ ನೀರು ಮತ್ತೊಂದು ಕೆರೆಯನ್ನು ತಲುಪುವ ವ್ಯವಸ್ಥೆ ಇದೆ. ಹೀಗೆ ಪ್ರತಿಯೊಂದು ಕೆರೆಗಳೂ ಒಂದಿಲ್ಲೊಂದು ಕೆರೆಗಳೊಂದಿಗೆ ಸಂಪರ್ಕಕೊಂಡಿಗಳನ್ನೊಂದಿರುತ್ತವೆ. ಇಂತಹ ಕೊಂಡಿಗಳನ್ನೇ ಕಡಿದುಹಾಕಲಾಗಿದೆ.
ಕೆರೆಗೆ ನೀರು ಹರಿದು ಬರುವ ಕಿರುಗಾಲುವೆಗಳನ್ನೇ ಮುಚ್ಚಿದರೆ, ಸುರಿಯುವ ಮಳೆ ನೀರು ಹರಿದು ಹೋಗುವುದಾದರೂ ಹೇಗೆ? ಇನ್ನು ಕೆರೆಗಳನ್ನೇ ಮುಚ್ಚಿದರೆ ಅಷ್ಟೂ ನೀರು ತಕ್ಷಣ ಹಿಂಗಿ ಹೋಗಲು ಸಾಧ್ಯವೇ?
ಸರ್ಕಾರ ವಸತಿ ಪ್ರದೇಶಗಳಿಗೆ ಅನುಮತಿ ನೀಡುವಾಗ ಆ ವಸತಿ ಪ್ರದೇಶ ಕೆರೆಗಳಿಂದ ದೂರವಿದೆಯೇ? ಮಳೆ ನೀರು ಹರಿದು ಹೋಗುವ ಕಾಲುವೆಗಳನ್ನು ಉಳಿಸಿಕೊಳ್ಳಲಾಗಿದೆಯೇ? ಭಾರಿ ಮಳೆಬಂದರೆ ನೀರು ಹರಿದು ಹೋಗುವ ವ್ಯವಸ್ಥೆ ಇದೆಯೇ ಇತ್ಯಾದಿ ಅಂಶಗಳನ್ನು ಗಮನದಲ್ಲಿಡಬೇಕು. ಆರಂಭದಲ್ಲಿನ ಒಂದಷ್ಟು ಕಟ್ಟುನಿಟ್ಟಿನ ಕ್ರಮಗಳು ಶಾಶ್ವತ ಪರಿಹಾರವಾಗಬಲ್ಲವು.

ಹಿಂದೆಲ್ಲ ಭಾರಿ ಮಳೆಬಂದಾಗ ಗುಡ್ಡ ಕುಸಿತಗಳು ವಿರಳವಾಗಿರುತ್ತಿದ್ದವು. ಈಗೀಗ ಗುಡ್ಡಗಳು ಕುಸಿಯುವುದು, ರಸ್ತೆಗಳ ಮೇಲೆ ಬಂಡೆಗಳು ಇಲ್ಲವೆ, ಮಣ್ಣು ಕುಸಿದು ಬೀಳುವುದು ಹೆಚ್ಚುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅಸಮರ್ಪಕ ಮತ್ತು ಅವೈಜ್ಞಾನಿಕವಾಗಿ ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಿರುವುದರ ಫಲಶೃತಿ ಇದು. ಕೊಡಗಿನಲ್ಲಿ ಜನವಸತಿ ಪ್ರದೇಶದಲ್ಲಿ ಆಗುತ್ತಿರುವ ಭೂಕುಸಿತಗಳು, ಚಾಮುಂಡಿಬೆಟ್ಟದಲ್ಲಿ ಆಗುತ್ತಿರುವ ಭೂಕುಸಿತಗಳು ನಗರೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಅತಿಯಾದ ನಿರ್ಮಾಣ ಮತ್ತು ಪರಿಸರದ ಬಗೆಗಿನ ದಿವ್ಯ ನಿರ್ಲಕ್ಷ್ಯದ ಪರಿಣಾಮಗಳು.

ಮಳೆಯೊಂದಿಗೆ ನಾವು ಬದುಕಬೇಕು. ಭಾರಿ ಮಳೆಯಿಂದಾಗುವ ಅನಾಹುತಗಳಿಗೆ ಮಳೆಯನ್ನೇ ದೂಷಿಸುವುದರ ಬದಲು ನಾವು ಮಾಡಿಕೊಂಡಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಈಗ ಲಭ್ಯವಿರುವ ನಿಖರ ಹವಾಮಾನ ಮುನ್ಸೂಚನೆಗಳನ್ನು ಜನರಿಗೆ ತಲುಪಿಸಬೇಕು. ಮುಳುಗಡೆಯಾಗುವ ಪ್ರದೇಶದ ಜನರನ್ನು ಮುಂಚಿತವಾಗಿಯೇ ತೆರವುಗೊಳಿಸಬೇಕು. ತೆರವುಗೊಳಿಸಿದ ಜನರಿಗೆ ಸರ್ಕಾರ ಗಂಜಿ ಕೇಂದ್ರ’ ತೆರೆಯುವ ಪ್ರವೃತ್ತಿ ಬಿಟ್ಟು ತಾತ್ಕಾಲಿಕ ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕು. ಆಗ ಪ್ರಾಣಹಾನಿಗಳನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯ. ತೀವ್ರ ಮಳೆಯಿಂದಾಗಿ ಆಗುವ ಬೆಳೆ ಹಾನಿಗೆ ವೈಜ್ಞಾನಿಕವಾಗಿ ಪರಿಹಾರ ಒದಗಿಸಲು ಸರ್ಕಾರ ಮುಂದಾಗಬೇಕು. ಈಗ ಹಾಲಿ ಇರುವ ಬೆಳೆ ವಿಮೆ ನಿಯಮಗಳನ್ನು ರೈತ ಸ್ನೇಹಿಯಾಗಿ ಮಾರ್ಪಾಡು ಮಾಡಬೇಕು. ಸರ್ಕಾರ ವಿಮಾ ಕಂತುಗಳನ್ನು ಸಂಗ್ರಹಿಸಲು ತೋರಿಸುವ ಆಸಕ್ತಿಯನ್ನು ಪರಿಹಾರ ವಿತರಿಸುವಲ್ಲೂ ತೋರಿಸಬೇಕು. ಆಗ ಮಾತ್ರ ಮಳೆ ಯಾವತ್ತೂ ಶಾಪ ಎನಿಸದು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ