Light
Dark

ಸಂಪಾದಕೀಯ | ಹೆಚ್ಚು ಜನೌಷಧ ಕೇಂದ್ರಗಳು ಪ್ರಾರಂಭವಾಗಲಿ

ಕಡಿಮೆ ದರದಲ್ಲಿ ಲಭ್ಯವಾಗುವ ಜನೌಷಧಗಳು ದೊರಕುವ ಕೇಂದ್ರಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಚಾಮರಾಜನಗರದಲ್ಲಿ ಈಚೆಗೆ ‘ಪ್ರಧಾನಮಂತ್ರಿ ಭಾರತೀಯ ಜನೌಷಧ ಮಳಿಗೆಗಳು ಹೊಸದಾಗಿ ಎರಡು ಕಡೆ ಆರಂಭವಾಗಿದೆ. ಒಂದು ನಗರದ ಹೊರಹೊಲೆಯದ ಎಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ಬೋಧನಾ ಆಸ್ಪತ್ರೆಯಲ್ಲಿ, ಮತ್ತೊಂದು ಸಂಪಿಗೆ ರಸ್ತೆಯಲ್ಲಿ ಶುರುವಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ 13 ಜನೌಷಧ ಮಳಿಗೆಗಳು ಸ್ಥಾಪನೆಯಾದಂತಾಗಿದ್ದು. ಈ ಪೈಕಿ ಎರಡು ಕೇಂದ್ರಗಳ ಬಾಗಿಲು ಮುಚ್ಚಲ್ಪಟ್ಟಿವೆ. ಚಾಮರಾಜನಗರದ ಅಗ್ರಹಾರದ ಕಾಶಿವಶಿ ಕಾಂಪ್ಲೆಕ್ಸ್ ನಲ್ಲಿದ್ದ ಮತ್ತು ಎಳಂದೂರು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿದ್ದ ಜನೌಷಧಿ ಮಳಿಗೆಗಳು ಬಂದ್ ಆಗಿವೆ.
ಸಾರ್ವಜನಿಕ ಆಸ್ಪತ್ರೆ ಒಳಗಡೆ ಅಥವಾ ಆವರಣದಲ್ಲಿ ಜನೌಷಧಿ ಮಳಿಗೆಗಳಿದ್ದರೆ ಬಡ ರೋಗಿಗಳಿಗೆ ತುಂಬಾ ಅನುಕೂಲ. ಈ ಉದ್ದೇಶದಿಂದ ಯಳಂದೂರು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತೆರೆಯಲಾಗಿದ್ದ ಮಳಿಗೆ ಬಂದ್ ಮಾಡಬಾರದಿತ್ತು.
ಚಾಮರಾಜನಗರ ತಾಲೂಕು ಐದು, ಕೊಳ್ಳೇಗಾಲ ತಾಲೂಕು ನಾಲಕ್ಕು, ಯಳಂದೂರು ತಾಲೂಕು ಒಂದು, ಗುಂಡ್ಲುಪೇಟೆ ತಾಲೂಕು ಒಂದು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 11 ಜನೌಷಧ ಮಳಿಗೆಗಳಿವೆ. ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆ ಹಳೆ ಕಟ್ಟಡದಲ್ಲಿ ‘ಜನ ಸಂಜೀವಿನಿ’ ಔಷಧ ಮಳಿಗೆ ಇದೆ.

ಇದೀಗ ಸೀಮ್ಸ್ ಆಸ್ಪತ್ರೆ ಒಳಗಡೆ ರೆಡ್ ಕ್ರಾಸ್ ಸಂಸ್ಥೆಯಿಂದ ಜನೌಷಧ ಕೇಂದ್ರ ಸ್ಥಾಪಿಸಲಾಗಿದೆ. ಕೊಳ್ಳೇಗಾಲ, ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ ಒಳಗಡೆಯೂ ಜನೌಷಧ ಕೇಂದ್ರಗಳಿವೆ. ಹೊಸ ತಾಲೂಕು ಕೇಂದ್ರವಾದ ಹನೂರು ಪಟ್ಟಣದಲ್ಲಿ ಒಂದೂ ಜನೌಷದ ಮಳಿಗೆ ಈತನಕ ಕಾರ್ಯಾರಂಭವಾಗಿಲ್ಲ. ಕರುಣಾ ಟ್ರಸ್ಟ್ ವತಿಯಿಂದ ಯಳಂದೂರಿನಲ್ಲಿ, ಖಾಸಗಿ ಒಡೆತನದಲ್ಲಿ ಸಂತೆಮರಹಳ್ಳಿಯಲ್ಲಿ ಜನೌಷಧ ಕೇಂದ್ರಗಳು ನಡೆಯುತ್ತಿರುವುದು ಆಶಾದಾಯಕ ಸಂಗತಿ. ಕಂಪನಿಯ ಔಷಧಿಗಳಿಗಿಂತ ಶೇಕಡ 50 ರಿಂದ 90 ರಷ್ಟು ಕಡಿಮೆ ಬೆಲೆಗೆ ಜನೌಷಧಗಳು ದೊರೆಯುತ್ತದೆ. ಗುಣಮಟ್ಟ ಕೂಡ ಉತ್ತಮವಾಗಿದೆ ಆದರೂ ಬಹಳ ವೈದ್ಯರು ಖಾಸಗಿ ಔಷಧಿ ಅಂಗಡಿಗಳಲ್ಲಿ ಸಿಗುವ ಮಾತ್ರೆ, ಚುಚ್ಚುಮದ್ದು, ಟಾನಿಕ್ ಗಳನ್ನು ಪಡೆಯುವಂತೆ ಸಿಫಾರಸ್ಸು ಮಾಡುತ್ತಾರೆ. ವೈದ್ಯರು ಮತ್ತು ಔಷಧ ಕಂಪನಿಗಳ ಜೊತೆ ಇರುವ ಸಂಬಂಧವೇ ಇದಕ್ಕೆ ಕಾರಣ ಎಂಬ ಆರೋಪವಿದೆ.
ರೋಗಿಗಳು ಜಾಗೃತರಾಗುತಿದ್ದು, ಔಷದ ಚೀಟಿ ಹಿಡಿದು ಜನೌಷಧಿ ಕೇಂದ್ರಗಳತ್ತ ಮುಖ ಮಾಡತೊಡಗಿದ್ದಾರೆ. ಪ್ರೋಟೀನ್ ಪೌಡರ್, ಮಾಲ್ಟ್ ಆಧಾರಿತ ಪೂರಕ ಆಹಾರ ಉತ್ಪನ್ನಗಳು, ಸ್ಯಾನಿಟೈಸರ್, ಮಾಸ್ಕ್, ನ್ಯಾಪ್ಕಿನ್ ಮೊದಲಾದವು ಕಡಿಮೆ ಬೆಲೆಗೆ ಜನೌಷಧ ಕೇಂದ್ರಗಳಲ್ಲಿ ದೊರೆಯುತ್ತವೆ. ನ್ಯಾಪ್ಕಿನ್ ಮತ್ತು ಪ್ಯಾಡ್ ತಲಾ ಹತ್ತು ರೂಪಾಯಿ ದೊರೆಯುತ್ತದೆ. ಖಾಸಗಿ ಔಷದ ಮಳಿಗೆಯಲ್ಲಿ ಅತ್ತೂರು ಗಳ ಪ್ಯಾಡ್ ಗೆ 80 ರೂಪಾಯಿ ಮತ್ತು 25 ರೂಪಾಯಿಗಳ ಎನ್ 95 ಮಾಸ್ಕ್ ರೂಪಾಯಿಗಳಿಗೆ ಸಿಗುತ್ತದೆ. ಹೀಗೆ ಬಿಪಿ ಶುಗರ್ ಗ್ಯಾಸ್ಟ್ರಿಗೆ ಸಂಬಂಧಿಸಿದ ಔಷಧ ಮತ್ತು ಚುಚ್ಚುಮದ್ದಿನ ಬೆಲೆ ಹೊರಗಡೆಗೆ ಹೋಲಿಸಿದರೆ ತುಂಬಾ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಸೀಮ್ಸ್ ಆಸ್ಪತ್ರೆ ಒಳಗಡೆ ಜನೌಷಧಿ ಕೇಂದ್ರ ತೆರೆದಿರುವುದು ಉತ್ತಮ ಬೆಳವಣಿಗೆ. ಸೀಮ್ಸ್ ಬೋಧನಾ ಆಸ್ಪತ್ರೆಯಲ್ಲಿಯೇ ಬಡ ರೋಗಿಗಳಿಗೆ ಉಚಿತವಾಗಿ ಔಷಧಿ ನೀಡಲಾಗುತ್ತದೆ ಆದರೂ ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಔಷಧಿಗಳನ್ನು ಜನೌಷಧ ಕೇಂದ್ರದಲ್ಲಿ ಕಡಿಮೆ ಬೆಲೆಗೆ ಕೊಂಡುಕೊಳ್ಳಲು ರೋಗಿಗಳಿಗೆ ಅತ್ಯಂತ ಅನುಕೂಲವಾಗಿದೆ.
ಜನೌಷಧ ಕೇಂದ್ರಗಳು ಉತ್ತಮವಾಗಿ ವಹಿವಾಟು ನಡೆಸಬೇಕಾದರೆ ವೈದ್ಯರು ಜನೌಷಧಗಳನ್ನು ಪಡೆದುಕೊಳ್ಳುವಂತೆ ರೋಗಿಗಳಿಗೆ ಸಿಪಾರಸು ಮಾಡಬೇಕು. ಖಾಸಗಿ ವೈದ್ಯಕೀಯ ಕಂಪನಿಗಳ ಆಮಿಷಕ್ಕೆ ಬಲಿಯಾಗಬಾರದು. ಬಡವರ ಪರ ಕಾಳಜಿ ಇಟ್ಟುಕೊಂಡು ವೈದ್ಯರು ಕೆಲಸ ಮಾಡಬೇಕಿದೆ. ಜನೌಷಧ ಕೇಂದ್ರಗಳನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದರೆ ಸಾಲದು ಕಾಲಕಾಲಕ್ಕೆ ಔಷಧಗಳನ್ನು ಪೂರೈಸಬೇಕು ಅವುಗಳ ಕೊರತೆಯಾಗಬಾರದು.

ಔಷಧಗಳನ್ನು ಸರಿಯಾಗಿ  ಸರಬರಾಜು ಆಗದೆ ಜನೌಷಧ ಕೇಂದ್ರಗಳು ಮುಚ್ಚಿರುವ ಉದಾಹರಣೆಗಳೇ ಹೆಚ್ಚು. ಔಷದ ವ್ಯಾಪಾರಿಗಳು ನಷ್ಟ ಅನುಭವಿಸಿರುವ ಕಾರಣ ಬಂದ್ ಮಾಡಿ ಸುಮ್ಮನಾಗಿದ್ದಾರೆ. ಏನೇ ಆದರೂ ಜನೌಷಧ ಕೇಂದ್ರಗಳು ಖಾಸಗಿ ಕೇಂದ್ರಗಳ ವಿರುದ್ಧ ಪೈಪೋಟಿ ನಡೆಸಬೇಕಿದೆ. ಸರ್ಕಾರಿ ಸ್ವಾಮ್ಯದ ಇಂತಹ ಕೇಂದ್ರಗಳು ಖಾಸಗಿ ಕಂಪನಿಗಳ ಪೈಪೋಟಿ ಎದುರಿಸಲಾರದೆ ಮುಚ್ಚಿ ಹೋದದ್ದು ನಮ್ಮ ಕಣ್ಣೆದುರಿಗೆ ಇವೆ ಇದನ್ನು ಸುಳ್ಳು ಮಾಡಲು ಜನೌಷಧ ಮಳಿಗೆಗಳು ಮುಂದಾಗಬೇಕು.

ಜನೌಷಧ ಕೇಂದ್ರಗಳು ಬೆರಳೆಣಿಕೆ ಎಷ್ಟು ತೆರೆದರೆ ಸಾಲದು ಎಲ್ಲ ಸರ್ಕಾರಿ ಆಸ್ಪತ್ರೆಗಳ ಎದುರು ಹಾಗೂ ಪ್ರಮುಖ ಜನದಟ್ಟಣೆ ಸ್ಥಳಗಳಲ್ಲಿ ತೆರೆಯಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವ ಈ ವೇಳೆ ಕಡಿಮೆ ದರದಲ್ಲಿ ಔಷಧ ಸಿಗುವಂತೆ ಮಾಡುವುದು ಜನಪರ ಕೆಲಸವಾಗಲಿದೆ. ಸರ್ಕಾರಗಳ ಮೇಲೆ ವಿಶ್ವಾಸಾರ್ಹತೆ ಹೆಚ್ಚಾಗಲಿದೆ. ಕೇಂದ್ರಗಳನ್ನು ತೆರೆಯುವಾಗ ಇರುವ ಉತ್ಸಾಹ ನಡೆಸಿಕೊಂಡು ಹೋಗುವಾಗಲೂ ಇರಬೇಕು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ