(ಚಿತ್ರಕೃಪೆ- ಸತೀಸ್ ಆಚಾರ್ಯ )
ಕೇಂದ್ರ ಸರ್ಕಾರ ಹೇರಿರುವ ಸರಕು ಮತ್ತು ಸೇವಾ ತೆರಿಗೆಯ ಪರಿಷ್ಕೃತ ದರಗಳು ಜುಲೈ ೧೮ರಿಂದ ಜಾರಿಯಾಗಿವೆ. ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ತೆರಿಗೆ ಪರಿಷ್ಕರಣೆಯ ಪ್ರಸ್ತಾಪ ಮಾಡಿದಂದಿನಿಂದಲೂ ಸಮಾಜದ ಎಲ್ಲಾ ವರ್ಗಗಳಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಜಿಎಸ್ ಟಿ ಮಂಡಳಿ ಮತ್ತು ಕೇಂದ್ರ ಸರ್ಕಾರ ಎಷ್ಟೊಂದು ನಿರ್ದಯವಾಗಿವೆಯೆಂದರೆ ಈ ಎಲ್ಲಾ ವಿರೋಧಗಳನ್ನೂ ಮೀರಿ ಪರಿಷ್ಕೃತ ತೆರಿಗೆ ಜಾರಿಗೆ ತಂದಿವೆ.
ಸರ್ಕಾರ ನಡೆಸಲು ತೆರಿಗೆಮೂಲದ ಸಂಪನ್ಮೂಲ ಹೆಚ್ಚಿನ ಪ್ರಮಾಣದಲ್ಲಿ ಕ್ರೋಢೀಕರಣವಾಗಬೇಕು. ನಿಜ, ಆದರೆ, ಸರ್ಕಾರದ ಉದ್ದೇಶ ಬರೀ ತೆರಿಗೆ ಸಂಗ್ರಹಿಸುವುದೇ ಆಗಿಬಿಟ್ಟರೆ ಕಲ್ಯಾಣರಾಷ್ಟ್ರದ ಕನಸು ನನಸಾಗುವುದು ಹೇಗೆ?
ಜನಸಾಮಾನ್ಯರು ಹೆಚ್ಚಿನ ತೆರಿಗೆ ಹೊರೆ ಇಲ್ಲದೇ, ಬೆಲೆ ಏರಿಕೆಯ ಆತಂಕಗಳಿಲ್ಲದೇ, ಊಟ ವಸತಿಯಗಳಿಲ್ಲದೇ ಶಾಂತಿ ಮತ್ತು ಸೌಹಾರ್ದಯುತವಾಗಿ ಜೀವನ ನಡೆಸುವ ಪರಿಕಲ್ಪನೆಯ ಕಲ್ಯಾಣ ರಾಷ್ಟ್ರದ ಕನಸು. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಕಲ್ಯಾಣ ರಾಷ್ಟ್ರದ ಕನಸನ್ನು ನನಸು ಮಾಡುವುದು ಕಷ್ಟವೇನೂ ಅಲ್ಲ. ಆದರೆ, ಕೇಂದ್ರ ಸರ್ಕಾರಕ್ಕೆ ಕಲ್ಯಾಣ ರಾಷ್ಟ್ರದ ಕನಸು ನನಸಾಗುವುದು ಬೇಕಿಲ್ಲ ಎಂಬುದು ಅದರ ನಡವಳಿಕೆಗಳಿಂದಲೇ ಗೊತ್ತಾಗುತ್ತಿದೆ.
ಊಟ- ವಸತಿ- ಶಾಂತಿ- ನೆಮ್ಮದಿ ಇವು ಮೂಲಭೂತ ಅಗತ್ಯಗಳು. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಹೆಚ್ಚೆಚ್ಚು ಜನರು ಬಡತನದತ್ತ ಸರಿಯುತ್ತಿದ್ದಾರೆ. ಬಡತನ ಕಾಡುವಾಗ ಶಾಂತಿ ಮತ್ತು ನೆಮ್ಮದಿ ಮರಿಚಿಕೆಯೇ ತಾನೆ?
ಕೇಂದ್ರ ಸರ್ಕಾರ ಜುಲೈ ೧೮ರಿಂದ ಜಾರಿ ಮಾಡಿರುವ ಪರಿಷ್ಕೃತ ಮತ್ತು ಹೊಸ ತೆರಿಗೆಗಳನ್ನು ಹೇರುವ ಅಗತ್ಯವೇ ಇರಲಿಲ್ಲ. ಆಹಾರಧಾನ್ಯಗಳು, ಹೈನು ಉತ್ಪನ್ನಗಳು, ಶೈಕ್ಷಣಿಕ ಪರಿಕರಗಳು ಹೀಗೆ ಯಾವುದು ಮೂಲಭೂತವಾಗಿ ಅತ್ಯಗತ್ಯವೋ ಅಂತಹ ವಸ್ತುಗಳ ಮೇಲೆ ತೆರಿಗೆ ಹೇರಲಾಗಿದೆ.
ಇತ್ತೀಚಿನ ಭಾರತೀಯ ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ ಜನರ ಉಪಭೋಗ ಪ್ರಮಾಣವು ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ. ಅಂದರೆ, ಜನರ ಖರೀದಿಸುವ ಶಕ್ತಿ ಕುಂದುತ್ತಿದೆ. ಜನರ ಖರೀದಿ ಶಕ್ತಿ ಕುಂದುತ್ತಿದೆ ಎಂದಾದರೆ, ಜನರ ಸಂಪಾದನೆ ಕುಸಿದಿದೆ ಅಥವಾ ಸರಕು ಮತ್ತು ಸೇವೆಗಳ ದರಗಳು ದುಬಾರಿಯಾಗಿವೆ ಎಂದೇ ಅರ್ಥ. ಜನಸಾಮಾನ್ಯರೀಗ ಎರಡು ಸಮಸ್ಯೆಗಳ ನಡುವೆ ಜೀಕುತ್ತಿದ್ದಾರೆ. ಜನರ ಸಂಪಾದನೆ ಕುಸಿದಿರುವುದು ಹೌದು. ಅಗತ್ಯವಸ್ತುಗಳ ದರ ತೀವ್ರವಾಗಿ ಏರಿರುವುದು ಹೌದು.
ಆಹಾರ ಧಾನ್ಯಗಳ ಮೇಲೆ ಶೇ.೫ರಷ್ಟು ಜಿಎಸ್ ಟಿ ವಿಧಿಸುವ ನಿರ್ಧಾರವನ್ನು ಮಾನವೀಯತೆ ಇರುವ ಯಾರೂ ಒಪ್ಪುವುದಿಲ್ಲ. ಮೊಸರಿನ ಮೇಲೂ ಶೇ.೫ರಷ್ಟು ತೆರಿಗೆ ಹೇರುವುದರ ಹಿಂದಿನ ಮನಸ್ಥಿತಿ ಕೂಡ ಅಮಾನವೀಯವಾದುದೇ.
ಅಂತಾರಾಷ್ಟ್ರೀಯ ಮಟ್ಟದ ಪೌಷ್ಠಿಕತೆ ಸೂಚ್ಯಂಕದಲ್ಲಿ ಭಾರತವು ೧೧೬ ದೇಶಗಳ ಪೈಕಿ ೧೦೧ನೇ ಸ್ಥಾನದಲ್ಲಿದೆ. ಹಿಂದಿನ ವರ್ಷ ೯೪ನೇ ಸ್ಥಾನದಲ್ಲಿದ್ದು ೧೦೧ಕ್ಕೆ ಕುಸಿದಿದೆ. ನೆರೆಯ ಮಯನ್ಮಾರ್ (೭೧) ನೇಪಾಳ (೭೬) ಬಾಂಗ್ಲಾದೇಶ (೭೬) ಪಾಕಿಸ್ತಾನ (೯೨)ದೇಶಗಳಿಗಿಂತಲೂ ನಮ್ಮ ದೇಶದ ಸ್ಥಿತಿ ದಯನೀಯವಾಗಿದೆ.
ಪೌಷ್ಠಿಕತೆಯ ಕೊರತೆ ಬರುವುದು ಜನರಿಗೆ ಆಹಾರವೇ ಸಿಗದಾ
ದಾಗ. ಆಹಾರ ಧಾನ್ಯಗಳ ದರಗಳು ಏರುತ್ತಿದ್ದರೆ, ಅವುಗಳ ಮೇಲೆ ಸರ್ಕಾರ ತೆರಿಗೆ ಹೇರಿ ಮತ್ತಷ್ಟು ದುಬಾರಿ ಮಾಡುತ್ತಿದ್ದರೆ ಜನರು ಆಹಾರ ಸೇವಿಸುವುದಾದರೂ ಹೇಗೆ? ಪೌಷ್ಠಿಕತೆಯ ಮೂಲವಾಗಿರುವ ಹೈನು ಉತ್ಪನ್ನಗಳ ಮೇಲೂ ತೆರಿಗೆ ಹೇರಿದರೆ ಪೌಷ್ಠಿಕತೆ ಸೂಚ್ಯಂಕದಲ್ಲಿ ನಾವು ಮೇಲೆರಲು ಸಾಧ್ಯವೇ?
ಕೇಂದ್ರ ಸರ್ಕಾರ ತೆರಿಗೆ ಹೇರಿಕೆಗೆ ಸಂಘಟಿತ ವಲಯದ ಮಾನದಂಡಗಳನ್ನು ಮುಂದಿಟ್ಟುಕೊಂಡು ಅಂದಾಜು ಮಾಡುತ್ತಿದೆ. ಶೇ.೮೦ರಷ್ಟಿರುವ ಅಸಂಘಟಿತ ವಲಯದ ಸ್ಥಿತಿಗತಿಗಳನ್ನು ಅರಿಯದೇ ಅತಾರ್ಕಿಕವಾಗಿ ಆರ್ಥಿಕತೆ, ಅಭಿವೃದ್ಧಿಗಳ ಅಂದಾಜು ಮಾಡುತ್ತಿರುವುದೇ ದೊಡ್ಡ ಲೋಪ. ಕೇಂದ್ರ ಸರ್ಕಾರ ಈ ಲೋಪಗಳನ್ನು ಸರಿಪಡಿಸಿಕೊಳ್ಳುವ ಬದಲು ಮತ್ತಷ್ಟು ಲೋಪ ಮಾಡುತ್ತಲೇ ಇದೆ.
ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ದಿನಗೂಲಿಗಳು, ರೈತ ಕಾರ್ಮಿಕರು ಆಹಾರ ಸೇವಿಸಬಾರದೇ? ಮೊಸರು ಸೇವಿಸಬಾರದೇ? ಇವರೆಲ್ಲರಿಗೂ ಉದ್ಯೋಗ ಖಾತ್ರಿ ಇದೆಯೇ? ಕನಿಷ್ಠ ವೇತನದ ಖಾತ್ರಿ ಇದೆಯೇ? ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೇರಿದ್ದೇ ದೊಡ್ಡ ಪ್ರಮಾದ. ಆದರೂ ಜನರು ಅದನ್ನು ಸಹಿಸಿಕೊಂಡಿದ್ದಾರೆ.
ಇದೀಗ ಆಹಾರ ಧಾನ್ಯಗಳು, ಪೌಷ್ಠಿಕಾಂಶದ ಮೂಲಗಳಾದ ಹೈನು ಉತ್ಪನ್ನಗಳ ಮೇಲೂ ತೆರಿಗೆ ಹೇರುವ ಕ್ರಮ ಅಕ್ಷಮ್ಯವಾದುದು.
ಸರಕು ಮತ್ತು ಸೇವಾ ತೆರಿಗೆ ಮಂಡಳಿಯಲ್ಲಿ ಮಾನವೀಯತೆಯಿರುವ ಯಾರೂಇಲ್ಲವೇ? ಜನರ ಕಲ್ಯಾಣದ ಬಗ್ಗೆ ಪದೇ ಪದೇ ಪ್ರಸ್ತಾಪಿಸುವ ಕೇಂದ್ರ ಸರ್ಕಾರಕ್ಕಾದರೂ ಮಾನವೀಯತೆ ಬೇಡವೇ?
ಒಂದು ಕಡೆಗೆ ಜನರ ಪ್ರತಿಭಟನಾ ಶಕ್ತಿಯನ್ನು ಕುಂದಿಸುತ್ತಾ ಮತ್ತೊಂದು ಕಡೆಗೆ ಜನರ ನಿತ್ಯೋಪಯೋಗಿ ವಸ್ತುಗಳ ಮೇಲೂ ತೆರಿಗೆ ಹೇರುತ್ತಾ ಹೋಗುವುದು ಪ್ರಜಾಪ್ರಭುತ್ವ ಸದಾಶಯಗಳಿಗೆ ವಿರುದ್ಧವಾದ ನಡೆ. ಇಂತಹ ತಪ್ಪು ನಡೆಗಳನ್ನು ಕೇಂದ್ರ ಸರ್ಕಾರ ತಿದ್ದಿಕೊಳ್ಳಬೇಕು. ಸರ್ಕಾರ ನಡೆಯಲು ತೆರಿಗೆ ಹಣಬೇಕು, ಆದರೆ, ತೆರಿಗೆ ಸಂಗ್ರಹವು ಜನರ ನೆಮ್ಮದಿಯನ್ನೇ ಕಿತ್ತುಕೊಳ್ಳುವಂತಾಗಬಾರದು. ಎಲ್ಲಕ್ಕೂ ಮಿಗಿಲಾಗಿ ಸರ್ಕಾರ ನಡೆಸುವವರಿಗೆ ಮಾನವೀಯತೆ ಇರಬೇಕು!