Mysore
22
overcast clouds
Light
Dark

ಈ ಜೀವ ಜೀವನ : ಹೆಣ್ಣೆಂದು ಜರಿದವರೆದುರೇ ಎವರೆಸ್ಟ್ ಏರಿದ ಧೀರೆ ಸವಿತಾ ಕನ್ಸ್ರಾಲ್

ಪಂಜು ಗಂಗೊಳ್ಳಿ

ಅಕ್ಟೋಬರ್ ೪ ರಂದು ಉತ್ತರಖಂಡದ ‘ದ್ರೌಪದಿ ಕಾ ಡಂಡಾ’ ಎಂಬ ಪರ್ವತದಲ್ಲಿ ಸಂಭವಿಸಿದ ಭೀಕರ ಹಿಮಪಾತದ ಅವಘಡದಲ್ಲಿ ಹಲವು ಜನ ಪರ್ವತಾರೋಹಿಗಳು ಸತ್ತರು. ಅವರಲ್ಲಿ ೨೬ ವರ್ಷ ಪ್ರಾಯದ ಸವಿತಾ ಕನ್ಸ್ರಾಲ್ ಎಂಬ ಮಹಿಳಾ ಪರ್ವತಾರೋಹಿಯೂ ಒಬ್ಬರು. ಇವರು ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಮಕಾಲು ಶಿಖರಗಳನ್ನು ಕೇವಲ ೧೬ ದಿನಗಳಲ್ಲಿ ಹತ್ತಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಸವಿತಾ ಕನ್ಸ್ರಾಲ್ ಮೌಂಟ್ ಎವರೆಸ್ಟ್ ಏರಿದ್ದು ಎಷ್ಟು ರೋಚಕವಾದ ಕತೆಯೋ ಅದಕ್ಕಿಂತಲೂ ಮಿಗಿಲಾದುದು ಅವರ ಬದುಕಿನ ಕತೆ!

ಪುರುಷ ಪ್ರಧಾನ ಭಾರತೀಯ ಸಮಾಜದಲ್ಲಿ ತಂದೆ-ತಾಯಿ ಗಂಡು ಸಂತಾನಕ್ಕೆ ಪರಿತಪಿಸುವುದು ಒಂದು ಸಾಮಾನ್ಯ ಸಂಗತಿ. ಅಂತೆಯೇ, ಉತ್ತರಕಾಶಿಯ ಲೋತ್ರು ಎಂಬ ಹಳ್ಳಿಯ ಸವಿತಾ ಕನ್ಸ್ರಾಲ್‌ರ ತಂದೆ-ತಾಯಿ. ಅವರಿಗೆ ನಾಲ್ಕು ಜನ ಹೆಣ್ಣುಮಕ್ಕಳು. ಕೊನೆಯವಳೇ ಸವಿತಾ ಕನ್ಸ್ರಾಲ್. ಸವಿತಾ ಕನ್ಸ್ರಾಲ್ ಹುಟ್ಟುವ ಮೊದಲು ಗಂಡು ಮಗು ಹುಟ್ಟಲಿ ಎಂದು ಆಕೆಯ ತಂದೆ-ತಾಯಿ ಹಲವಾರು ಯಜ್ಞಗಳನ್ನು ನಡೆಸಿದ್ದರು. ಆದರೂ ಹುಟ್ಟಿದ್ದು ಹೆಣ್ಣು ಮಗು. ಸಾಲು ಸಾಲು ನಾಲ್ಕು ಹೆಣ್ಣುಮಕ್ಕಳನ್ನು ಪಡೆದ ಅವರನ್ನು ಸುತ್ತಲಿನ ಸಮಾಜ ಕನಿಕರ ಹಾಗೂ ನಿಕೃಷ್ಟವಾಗಿ ಕಾಣುತ್ತಿತ್ತು. ಇದು ಬಾಲಕಿ ಸವಿತಾ ಕನ್ಸ್ರಾಲ್‌ಳಲ್ಲಿ ಏನೋ ಒಂದು ರೀತಿಯ ರೊಚ್ಚನ್ನು ಹುಟ್ಟಿಸಿತು. ಆ ರೊಚ್ಚೇ ಅವಳನ್ನು ಯಾವ ಗಂಡು ಮಗುವಿಗೆ ಕಡಿಮೆಯಲ್ಲದ, ಸಾಧ್ಯವಾದರೆ ಅದಕ್ಕಿಂತಲೂ ಹೆಚ್ಚಿನದನ್ನು ಸಾಽಸಿ ಸುತ್ತಲಿನವರ ಬಾಯಿ ಮುಚ್ಚಿಸಿ, ತನ್ನ ತಂದೆ ತಾಯಿ ಹೆಮ್ಮೆ ಪಡುವಂತೆ ಮಾಡಲು ಪ್ರೇರೇಪಿಸಿತು.

ಸವಿತಾ ಕನ್ಸ್ರಾಲ್‌ರದ್ದು ಒಂದು ಸಾಧಾರಣ ರೈತ ಕುಟುಂಬ. ಹಾಗಾಗಿ ಸಾಽಸುವ ರೊಚ್ಚಿದ್ದರೂ, ಅದಕ್ಕೆ ಬೆಂಬಲವಾಗಿ ಸೂಕ್ತ ಆರ್ಥಿಕ ಅನುಕೂಲತೆ ಆಕೆಗಿರಲಿಲ್ಲ. ೨೦೧೧ರಲ್ಲಿ ‘ಉತ್ತರಖಂಡ್ ಟೂರಿಸಂ ಡೆವೆಲಪ್‌ಮೆಂಟ್ ಕೌನ್ಸಿಲ್’ ನಡೆಸಿದ ಸಾಹಸ ತರಬೇತಿ ಶಿಬಿರವೊಂದರಲ್ಲಿ ಆಕೆಗೆ ಭಾಗವ

ಹಿಸುವ ಒಂದು ಅವಕಾಶ ಸಿಕ್ಕಿತು. ಅಲ್ಲಿಯೇ ಅವಳಲ್ಲಿ ತಾನೊಬ್ಬಳು ಪರ್ವತಾರೋಹಿಯಾಗುವ ಗುರಿಯ ಬೀಜಾಂಕುರವಾಯಿತು. ವಾಸ್ತವದಲ್ಲಿ, ಪ್ರತಿದಿನ ಶಾಲೆಗೆ ಹೋಗಿ ಬರಲು ೪ಕಿ.ಮೀ. ದೂರ ಗುಡ್ಡಬೆಟ್ಟಗಳನ್ನು ಹತ್ತಿಳಿಯುತ್ತಿದ್ದ ಸವಿತಾ ಕನ್ಸ್ರಾಲ್‌ಗೆ ಆ ಗುರಿಯು ಸಹಜವೂ ಆಗಿತ್ತು. ಆದರೆ, ದೈನಂದಿನ ಮೂಲಭೂತ ಅಗತ್ಯಗಳನ್ನೂ ಪೂರೈಸಿಕೊಳ್ಳಲು ಪರದಾಡಬೇಕಾದ

ಆ ಪರಿಸ್ಥಿತಿಯಲ್ಲಿ ತನ್ನ ಗುರಿ ಎಷ್ಟು ದುಸ್ತರವಾದುದು ಎಂಬ ಅರಿವೂ ಅವಳಿಗಿತ್ತು. ಆದರೂ ಅವಳು ತಂದೆ-ತಾಯಿ ಮಗಳ ಗುರಿ ಸಾಧನೆಗೆ ಬೆಂಬಲವಾಗಿ ನಿಂತು, ಅವಳನ್ನು ನೆಹರೂ ಪರ್ವತಾರೋಹಣ ಸಂಸ್ಥೆಗೆ ಸೇರಿಸಿದರು. ಆಗ ಹಳ್ಳಿಯ ‘ಜನ ಮಗಳನ್ನು ಯಾರಿಗಾದರೂ ಕೊಟ್ಟು ಮದುವೆ ಮಾಡುವುದು ಬಿಟ್ಟು ಊರ ಹೊರಗೇಕೆ ಕಳಿಸುತ್ತೀರಿ’ ಎಂದು ಅವರನ್ನು ಅಧೈರ್ಯಗೊಳಿಸುತ್ತಿದ್ದರು. ಅದೆಲ್ಲವನ್ನು ಮೀರಿ ಸವಿತಾ ಕನ್ಸ್ರಾಲ್ ‘ಎ’ ಗ್ರೇಡಲ್ಲಿ ತನ್ನ ತರಬೇತಿ ಮುಗಿಸಿದಳು.

ಆ ತರಬೇತಿಯ ನಂತರ ಹೆಚ್ಚಿನ ಉನ್ನತ ತರಬೇತಿ ಪಡೆಯಲು ಬೇಕಾದ ಶುಲ್ಕ ಭರಿಸಲು ಹಣವನ್ನು ಹೊಂದಿಸಲಾಗದೆ ಸವಿತಾ ಕನ್ಸ್ರಾಲ್, ಡೆಹ್ರಾಡೂನ್

ಗೆ ಹೋಗಿ, ಅಲ್ಲಿ ಹೋಟೆಲ್, ಚಪ್ಪಲಿ ಅಂಗಡಿಗಳಲ್ಲಿ ಒಂದು ವರ್ಷ ಕೆಲಸ ಮಾಡಿ, ಫೀಸಿಗೆ ಬೇಕಾದಷ್ಟು ಹಣ ಕೂಡಿಸಿ, ಹಿಂತಿರುಗಿ ಬಂದು ಉನ್ನತ ತರಬೇತಿಯನ್ನು ಪಡೆದಳು. ತನ್ನ ಕಠಿಣ ಶ್ರಮದಿಂದ ೨೦೧೬ರಲ್ಲಿ, ತಾನು ತರಬೇತಿ ಪಡೆದ ನೆಹರೂ ಪರ್ವತಾರೋಹಣ ಸಂಸ್ಥೆಯಲ್ಲೇ ಅತಿಥಿ ತರಬೇತಿದಾರ ಕೆಲಸವನ್ನೂ ಪಡೆದಳು. ೨೦೧೮ರಲ್ಲಿ ೫೬೭೦ ಮೀಟರ್ ಎತ್ತರದ ದ್ರೌಪದಿ ಕಾ ಡಂಡಾ ಪರ್ವತವನ್ನು ಏರುವ ಮೂಲಕ ಸವಿತಾ ಕನ್ಸ್ರಾಲ್ ತನ್ನ ಪರ್ವತಾರೋಹಣ ಯಾತ್ರೆಯನ್ನು ಶುರು ಮಾಡಿದಳು. ಅದರ ನಂತರ, ಕ್ರಮವಾಗಿ, ೫೯೩೦ಮೀ ಎತ್ತರದ ಮೌಂಟ್ ಹನುಮಾನ್ ಟಿಬ್ಬಾ, ೭೧೨೦ಮೀ ಎತ್ತರದ ಮೌಂಟ್ ತ್ರಿಶೂಲ್ ಪರ್ವತಗಳನ್ನು ಏರಿ, ೨೦೨೧ರಲ್ಲಿ ವಿಶ್ವದ ನಾಲ್ಕನೇ ಅತಿ ಎತ್ತರದ ಶಿಖರ ೮೫೧೬ಮೀ ಎತ್ತರದ ಮೌಂಟ್ ಲ್ಹೋಟ್ಸೇ ಪರ್ವತಗಳನ್ನು ಯಶಸ್ವಿಯಾಗಿ ಏರಿದಳು. ಈಗ ಅವಳ ಮುಂದಿದ್ದುದು ವಿಶ್ವದ ಅತೀ ಎತ್ತರದ ಶಿಖರಗಳಲ್ಲಿ ಐದನೆಯದಾದ ೮೪೬೩ಮೀ. ಎತ್ತರದ ಮೌಂಟ್ ಮಕಾಲು ಮತ್ತು ವಿಶ್ವದಲ್ಲಿ ಅತ್ಯಂತ ಎತ್ತರದ ಶಿಖರವಾದ ೮೮೪೯ಮೀ. ಎತ್ತರದ ಮೌಂಟ್ ಎವರೆಸ್ಟ್.

ಮೌಂಟ್ ಎವರೆಸ್ಟ್ ಏರಲು ಸವಿತಾ ಕನ್ಸ್ರಾಲ್‌ರಿಗಿದ್ದ ಅತ್ಯಂತ ದೊಡ್ಡ ತೊಡರು ಹಣಕಾಸಿನದಾಗಿತ್ತು. ಅವಳು ಆರ್ಥಿಕ ಸಹಕಾರಕ್ಕೆ ಮೊದಲಿಗೆ ಸರ್ಕಾರಿ ಮತ್ತು ಖಾಸಗೀ ಸಂಘಸಂಸ್ಥೆಗಳನ್ನು ಕೇಳಿಕೊಂಡರೂ ಹೆಚ್ಚಿನ ಪ್ರಯೋಜನವಾಗಲಿಲ್ಲ. ನಂತರ ಅವಳು ಕ್ರೌಡ್ ಫಂಡಿಂಗ್ ಮೊರೆ ಹೋಗಿ, ೧.೫ಲಕ್ಷ ರೂ. ಸಂಗ್ರಹಿಸಿದಳು. ಅದರ ನಂತರ ಕೆಲವು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಅವಳ ನೆರವಿಗೆ ಬಂದು, ೩೫ಲಕ್ಷ ರೂ. ಸಂಗ್ರಹವಾಯಿತು. ಒಮ್ಮೆ ಬೇಕಾದ ಹಣಕಾಸಿನ ವ್ಯವಸ್ಥೆಯಾದ ಮೇಲೆ ಸವಿತಾ ಕನ್ಸ್ರಾಲ್‌ಗೆ ಮುಂದಿನ ತೊಡರುಗಳನ್ನು ದಾಟುವುದು ಹೆಚ್ಚಿನ ಕಷ್ಟವಾಗಲಿಲ್ಲ. ಮೇ ತಿಂಗಳಲ್ಲಿ

ಕೇವಲ ಹದಿನಾರು ದಿನಗಳಲ್ಲಿ ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಮಕಾಲು ಪರ್ವತಗಳನ್ನು ಏರಿ, ಅತ್ಯಂತ ಕಡಿಮೆ ಅವಽಯಲ್ಲಿ ಈ ಸಾಧನೆ ಮಾಡಿದ ದೇಶದ ಪ್ರಪ್ರಥಮ ಮಹಿಳೆ ಎಂಬ ದಾಖಲೆ ಸ್ಥಾಪಿಸಿದಳು.

ಆ ಮೂಲಕ ಸವಿತಾ ಕನ್ಸ್ರಾಲ್ ಕೇವಲ ತನ್ನ ಹೆತ್ತವರಿಗೆ ಮಾತ್ರವಲ್ಲದೆ, ಗಂಡುಮಕ್ಕಳಿಲ್ಲ ಎಂಬ ಕಾರಣಕ್ಕೆ ಅವರನ್ನು ಕೇವಲವಾಗಿ ನೋಡುತ್ತಿದ್ದ ತನ್ನ ಹಳ್ಳಿಗೂ ಹೆಸರು ತಂದರು. ಗಂಡು ಮಕ್ಕಳೂ ಸಾಧಿಸಲಾಗದ್ದನ್ನು ಸಾಽಸಿ ಮನೆಗೆ ಹಿಂತಿರುಗಿದ ಸವಿತಾ ಕನ್ಸ್ರಾಲ್‌ಳನ್ನು ಇಡೀ ಹಳ್ಳಿಯೇ ನೆರೆದು ವೀರೋಚಿತವಾಗಿ ಸ್ವಾಗತಿಸಿತು. ಆದರೆ, ಆಕೆ ಆ ಸಾಧನೆ ಮಾಡಿ ತೋರಿಸಲಷ್ಟೇ ಹುಟ್ಟಿ ಬಂದವಳಂತೆ ಅಕ್ಟೋಬರ್ ತಿಂಗಳಲ್ಲಿ ತನ್ನ ಪರ್ವತಾರೋಹಣ ಯಾತ್ರೆಯಲ್ಲಿ ತಾನು ಮೊತ್ತಮೊದಲಿಗೆ ಹತ್ತಿದ ದ್ರೌಪದಿ ಕಾ ಡಂಡಾ ಶಿಖರದಲ್ಲೇ ತನ್ನ ಬದುಕಿನ ಯಾತ್ರೆಯನ್ನು ಮುಗಿಸಿದಳು…

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ