Mysore
27
broken clouds
Light
Dark

ಈ ಜೀವ ಜೀವನ: ‘ಕೆರೆಯ ನೀರನ್ನು ಕೆರೆಗೆ ಚೆಲ್ಲುವ’ ಮಿಸ್ಟರ್ ಘಾಟಿ

ಪಂಜು ಗಂಗೊಳ್ಳಿ

ಬತ್ತು ವರ್ಷ ಪ್ರಾಯದ ಅನಾಥ ಬಾಲಕನೊಬ್ಬ ಕಾಮಾಲೆ ರೋಗ ಪೀಡಿತನಾಗಿ ಮಂದಿರದ ಮೂಲೆಯೊಂದರಲ್ಲಿ ಬಿದ್ದಿದ್ದ. ಆ ಮಂದಿರದಲ್ಲಿ ಸಿಗುತ್ತಿದ್ದ ಪ್ರಸಾದವಷ್ಟೇ ಬೆನ್ನಿಗಂಟಿದ ಅವನ ಹಸಿವನ್ನು ನೀಗಿಸಲು ದೊರಕುತ್ತಿದ್ದ ಆಹಾರ. ಒಂದು ದಿನ ಪೊಲೀಸನೊಬ್ಬ ಅವನನ್ನು ಕಳ್ಳನೆಂದು ಭಾವಿಸಿ ಬೈದು, ಬೆತ್ತದಿಂದ ಹೊಡೆದ ನಂತರ ಆ ಬಾಲಕನಿಗೆ ಬದುಕುವುದು ಇನ್ನು ಬೇಡವೆನಿಸುತ್ತದೆ. ಕಾಲೆಳೆಯುತ್ತ ಹತ್ತಿರದಲ್ಲಿ ಹರಿಯುತ್ತಿದ್ದ ಹೊಳೆಯತ್ತ ನಡೆಯುತ್ತಾನೆ. ಯಾರೋ ಕೊಟ್ಟ ಶಾಲಾ ಸಮವಸ್ತ್ರದ ಖಾಕಿ ಚಡ್ಡಿಯನ್ನು ತನ್ನ ಸೊಂಟಕ್ಕೆ ಬಿಗಿದುಕೊಂಡು, ಅದಕ್ಕೆ ಕೆಲವು ಕಲ್ಲುಗಳನ್ನು ಕಟ್ಟಿಕೊಂಡು ಹೊಳೆಗೆ ಹಾರಿ ಜೀವ ಬಿಡುವ ಉದ್ದೇಶದಿಂದ ಹೊಳೆ ದಂಡೆ ಮೇಲೆ ನಿಂತುಕೊಳ್ಳುತ್ತಾನೆ. ಆಗ ಇದ್ದಕ್ಕಿದ್ದಂತೆ ಅವನಿಗೆ ನರ್ಗಿಸ್ ಅಭಿನಯದ ಹಾಡಿನ ‘ದುನಿಯಾ ಮೇ ಆಯೇ ಹೈ ತೋ ಜೀನಾ ಹೀ ಪಡೇಗಾ (ಭೂಮಿಯಲ್ಲಿ ಹುಟ್ಟಿದ ಮೇಲೆ ಜೀವಿಸಲೇ ಬೇಕಾಗುತ್ತದೆ)’ ಎಂಬ ಸಾಲುಗಳು ನೆನಪಾಗಿ ಅವನಲ್ಲಿ ಬದುಕುವ ಆಸೆ ಪುನಃ ಜೀವತಳೆಯುತ್ತದೆ. ಆದರೆ, ಅಂದು ಬದುಕುಳಿದ ಆ ಬಾಲಕ ಮುಂದೆ ಬದುಕಿದ ರೀತಿ ಮಾತ್ರ ಅನನ್ಯವಾದುದು!

ಹೊಳೆ ದಂಡೆಯಿಂದ ಹಿಂದಕ್ಕೆ ಬಂದ ಆ ಬಾಲಕ ಮುಂದೆ ಕಲ್ಲು ಕತ್ತರಿಸುವ ಕೆಲಸ ಮಾಡಿದನು. ಸಿಮೆಂಟ್ ಚೀಲಗಳನ್ನು ಹೊತ್ತನು. ಕಾರ್ಖಾನೆಗಳಲ್ಲಿ ಗೇಯ್ದನು. ಹೋಟೆಲುಗಳಲ್ಲಿ ಚಾ ಗ್ಲಾಸುಗಳನ್ನು ತೊಳೆದನು. ಗದ್ದೆ ತೋಟಗಳಲ್ಲಿ ಕೃಷಿಕೂಲಿಯಾಗಿ ದುಡಿದನು. ಹರಿಬಾವು ಮಾನೆ ಎಂಬ ಮಾನವೀಯ ವ್ಯಕ್ತಿಯೊಬ್ಬರು ಆ ಬಾಲಕನಿಗೆ ಆಶ್ರಯ ನೀಡಿದರು. ಬಾಲಕ ದೊಡ್ಡವನಾಗಿ ಮುಂದೊಂದು ದಿನ, ‘ಸಾಯಿನಾಥ್ ರೋಡ್ ವೇಸ್ ಪ್ರೈವೇಟ್ ಲಿಮಿಟೆಡ್’ ಎಂಬ ಸಾರಿಗೆ ಸಂಸ್ಥೆಯನ್ನು ಕಟ್ಟಿದನು. ಅದರ ನಂತರ ಇನ್ನೂ ಹಲವು ಸಂಸ್ಥೆಗಳನ್ನು ಹುಟ್ಟು ಹಾಕಿ, ಕೆಲವು ವರ್ಷಗಳಲ್ಲಿ ಭಿವಂಡಿಯ ಆಗರ್ಭ ಶ್ರೀಮಂತರಲ್ಲೊಬ್ಬನಾದನು. ಆದರೆ, ಅವನು ತಾನು ಗಳಿಸಿದ್ದನ್ನು ತಾನೊಬ್ಬನೇ ಅನುಭವಿಸಲಿಲ್ಲ. ಬದಲಿಗೆ, ‘ಕೆರೆಯ ನೀರನ್ನು ಕೆರೆಗೆ ಚೆಲ್ಲು’ ಎಂಬ ಮಾತಿಗನುಗುಣವಾಗಿ, ತಾನು ಗಳಿಸಿದುದರಲ್ಲಿ ಇತರರಿಗೂ ನೀಡಿ, ‘ಭಿವಂಡಿಯ ಭೂಷಣ’ ಎಂದು ಜನರಿಂದ ಕರೆಸಿಕೊಂಡನು.

ಈ ಅಸಾಮಾನ್ಯ ಬಾಲಕನ ಹೆಸರು ರಂಗರಾವ್ ವಿಠೋಬಾ ಪವಾರ್. ಆದರೆ, ಇವರು ತನ್ನನ್ನು ತಾನು ‘ಮಿಸ್ಟರ್ ಘಾಟಿ’ ಎಂದು ಕರೆದುಕೊಳ್ಳುತ್ತಾರೆ. ಘಾಟಿ ಎಂಬುದು ಮುಂಬೈಯಲ್ಲಿ ಒರಟು ಹಳ್ಳಿ ಗಮಾರರಿಗೆ ಇರುವ ಬಿರುದು. ಕಡು ದಾರಿದ್ರ್ಯದಿಂದ ಪಾರಾಗಿ ಶ್ರೀಮಂತ ಜೀವನ ಪಡೆದರೂ ರಂಗರಾವ್ ಪವಾರ್‌ಗೆ ತಾನು ಅನುಭವಿಸಿದ ಆ ದಾರಿದ್ರ್ಯದ ದಿನಗಳ ನೆನಪು ಎಂದಿಗೂ ಹೋಗಗೊಡಲಿಲ್ಲ. ಸಿಹಿಮೂತ್ರ ರೋಗಿಯಾದುದರಿಂದ ಚಿಕ್ಕ ಕೀರು ಗಾಯವಾದರೂ ಗುಣವಾಗುವುದು ದುಸ್ತರ ಎಂಬ ಅರಿವಿದ್ದರೂ ಕಾಲಿಗೆ ಚಪ್ಪಲಿ ಧರಿಸದೆ ತಿರುಗಾಡುತ್ತಾರೆ. ಮಂದಿರಗಳಿಗೆ ಹೋದಾಗ ಪ್ರಸಾದ ವಿತರಿಸುವ ಸಮಯದಲ್ಲಿ ಬಡಬಗ್ಗರೊಂದಿಗೆ ಕುಳಿತು, ಪ್ರಸಾದ ತಿನ್ನುತ್ತಾರೆ. ಬರೇ ಇಷ್ಟೇ ಆಗಿದ್ದರೆ ರಂಗರಾವ್ ವಿಠೋಬಾ ಪವಾರ್ ಭಿವಂಡಿಯ ಭೂಷಣರಾಗುತ್ತಿರಲಿಲ್ಲ.

ಭಿವಂಡಿಯಲ್ಲಿ ಬಡ ಮಕ್ಕಳಿಗೆ ಹತ್ತನೇ ತರಗತಿ ತನಕ ಉಚಿತ ಶಿಕ್ಷಣ ನೀಡಲು ಒಂದು ಶಾಲೆಯನ್ನು ಕಟ್ಟಿದ್ದಾರೆ. ಬಾಲ್ಯದಲ್ಲಿ ತನ್ನ ಹಸಿವು ನೀಗುತ್ತಿದ್ದ ಮಂದಿರದ ಪ್ರಸಾದದ ಋಣ ತೀರಿಸಲು ಭಿವಂಡಿ ಮತ್ತು ಗುಜರಾತಿನಲ್ಲಿ ಹಲವು ದೇವಸ್ಥಾನಗಳನ್ನು ಕಟ್ಟಿ, ಅವುಗಳಲ್ಲಿ ಆಗಾಗ್ಗೆ ಅನ್ನ, ಪ್ರಸಾದ ಹಂಚುವ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಬಡರೋಗಿಗಳನ್ನು ಭಿವಂಡಿಯಿಂದ ಮುಂಬೈಯಂತಹ ದೂರದ ನಗರಗಳಿಗೆ ಉಚಿತವಾಗಿ ಕರೆದೊಯ್ಯಲು ಎರಡು ಆಂಬ್ಯುಲೆನ್ಸ್‌ಗಳನ್ನು ಇರಿಸಿದ್ದಾರೆ. ಯುವಜನರಿಗೆ ಔದ್ಯೋಗಿಕ ತರಬೇತಿ ನೀಡಲು ಒಂದು ಸಂಸ್ಥೆಯನ್ನು ನಡೆಸುತ್ತಿದ್ದಾರೆ. ನಾಪೋಲಿ ಪೊಲೀಸ್ ಠಾಣೆಗೆ ಒಂದು ಅತಿಥಿ ಗೃಹ ಕಟ್ಟಿಸಿ ಕೊಟ್ಟಿದ್ದಾರೆ. ಲಾತೂರ್ ಭೂಕಂಪ ನಡೆದಾಗ ಆಹಾರ, ಬಟ್ಟೆ, ಔಷಽ, ಆಂಬ್ಯುಲೆನ್ಸ್ ಮತ್ತು ವೈದ್ಯರ ತಂಡವನ್ನು ಕರೆದುಕೊಂಡು ಹೋಗಿ ನೆರವಾಗಿದ್ದರು.

೧೯೯೯ರಲ್ಲಿ ನಡೆದ ಒಂದು ಘಟನೆಯನ್ನು ಭಿವಂಡಿಗರು ಎಂದಿಗೂ ಮರೆಯಲಾರರು. ಆ ವರ್ಷ ರಂಗರಾವ್ ವಿಠೋಬಾ ಪವಾರ್‌ರ ಕಿರಿಯ ಮಗಳ ಮದುವೆ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥ ನಡೆದ ಕೆಲದಿನಗಳಲ್ಲಿ ಕಾರ್ಗಿಲ್ ಯುದ್ಧ ಶುರುವಾಯಿತು. ಐನೂರಕ್ಕೂ ಹೆಚ್ಚು ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡು, ಸಾವಿರಕ್ಕೂ ಅಧಿಕ ಮಂದಿ ಅಂಗವಿಕಲರಾಗಿ ಅವರ ಮನೆಗಳಲ್ಲಿ ಶೋಕಾಚರಣೆ ನಡೆಯುತ್ತಿರುವಾಗ ತನ್ನ ಮಗಳ ಮದುವೆ ನಡೆಸಲು ಮನಸ್ಸು ಬಾರದ ರಂಗರಾವ್ ಪವಾರ್, ಅವಳ ಮದುವೆಗೆಂದು ತೆಗೆದಿರಿಸಿದ್ದ ಐದು ಲಕ್ಷ ರೂಪಾಯಿಗಳನ್ನು ಸಂತ್ರಸ್ತ ಸೈನಿಕರ ಕಲ್ಯಾಣ ನಿಧಿಗೆ ನೀಡಿದರು ಅವರ ಮಗಳು ಯೋಗಿತಾ ತಾನು ಅಪ್ಪನಿಗೇನೂ ಕಡಿಮೆಯಿಲ್ಲ ಎಂಬಂತೆ, ತನ್ನ ಮತ್ತು ಭಾವಿ ಪತಿಯ ನಿಶ್ಚಿತಾರ್ಥ ಉಂಗುರಗಳನ್ನು ಸೈನಿಕರ ನಿಧಿಗೆ ದಾನ ಕೊಟ್ಟು ಅತ್ಯಂತ ಸರಳ ರೀತಿಯಲ್ಲಿ ಮದುವೆಯಾದರು. ರಂಗರಾವ್‌ರ ಹಿರಿಯ ಅಳಿಯ ಧ್ಯಾನೇಶ್ವರ ಪಾಟೀಲ್ ೫೧೦೦೦ ರೂಪಾಯಿ ಕೊಟ್ಟನು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ