ಮನುಷ್ಯ, ಸ್ವಾಮಿ ನಿಷ್ಠೆಯಲ್ಲಿ ತನ್ನನ್ನೂ ಮೀರಿಸುವ ನಾಯಿಗಳನ್ನು ತನ್ನ ಪರಮಾಪ್ತ ಜೊತೆಗಾರ (ಎ ಡಾಗ್ ಈಸ್ ಮ್ಯಾನ್ಸ್ ಬೆಸ್ಟ್ ಫ್ರೆಂಡ್) ಎಂದು ಭಾವಿಸುವುದರಲ್ಲಿ ಆಶ್ಚರ್ಯವಾದುದೇನೂ ಇಲ್ಲ. ಆದರೆ, ನಾಯಿಗಳನ್ನು ದೇವರ ಸ್ಥಾನದಲ್ಲಿರಿಸಿ, ಅವುಗಳಿಗೆ ಗುಡಿಕಟ್ಟಿ ಪೂಜಿಸುವುದು ಅಪರೂಪ. ಅಂತಹ ಅಪರೂಪದ ನಾಯಿ ದೇವಸ್ಥಾನಗಳು ಕರ್ನಾಟಕದ ಎರಡು ಹಳ್ಳಿಗಳಲ್ಲಿವೆ. ಸೀತಾಳಮ್ಮ, ಕಪಾಲಮ್ಮ, ಸಿಡುಬಮ್ಮ, ಕೋವಿಡಮ್ಮ ಎಂದು ಮುಂತಾಗಿ ರೋಗಗಳ ಹೆಸರಲ್ಲೂ ದೇವಸ್ಥಾನ ಕಟ್ಟಿ ಆರಾಧಿಸುವ ಈ ದೇಶದಲ್ಲಿ ನಾಯಿ ದೇವಸ್ಥಾನಗಳಿರುವುದು ಅಪರೂಪವಾದರೂ ಅಸಾಧ್ಯವಾದುದೇನಲ್ಲ, ಬಿಡಿ.
ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ 60 ವರ್ಷ ಪ್ರಾಯದ ಚಂದ್ರಶೇಖರಯ್ಯ ಕುಲಕರ್ಣಿ ಎಂಬುವವರು 1994ರಲ್ಲಿ ಪಾನ್ ಮಸಾಲಾ ತುಂಬಿಸುವ ಸ್ಯಾಷೆಗಳನ್ನು ತಯಾರಿಸುವ ಸಣ್ಣದೊಂದು ಫ್ಯಾಕ್ಟರಿ ನಡೆಸುತ್ತಿದ್ದರು. ಆದರೆ, ವ್ಯವಹಾರ ಬಹಳ ನಷ್ಟದಲ್ಲಿ ನಡೆಯುತ್ತಿದ್ದುದರಿಂದ ಸಹಜವಾಗಿಯೇ ಅವರ ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿತ್ತು.
ಒಂದು ದಿನ, ಒಂದೆರಡು ವಾರಗಳಷ್ಟು ಪ್ರಾಯದ ಪುಟ್ಟ ನಾಯಿ ಮರಿಯೊಂದು ಅವರ ಫ್ಯಾಕ್ಟರಿಯೊಳಗೆ ಕಾಣಿಸಿಕೊಂಡಿತು. ಚಂದ್ರಶೇಖರಯ್ಯ ಹಚ ಹಚಾ ಎಂದು ಅದನ್ನು ಹೊರಗೋಡಿಸಲು ಎಷ್ಟೇ ಪ್ರಯತ್ನಪಟ್ಟರೂ ಅದು ಕುಂಯ್‌ಗುಡುತ್ತ ಅವರ ಬಳಿಯೇ ಸುಳಿದಾಡತೊಡಗಿತು. ಅದರ ಅಸಹಾಯಕತೆ ಕಂಡು ಮರುಕಗೊಂಡ ಚಂದ್ರಶೇಖರಯ್ಯ ಅದನ್ನು ಮನೆಗೆ ತಂದು ಸಾಕ ತೊಡಗಿದರು.
ಕಾಕತಾಳೀಯವೋ ಎಂಬಂತೆ ಆ ನಾಯಿ ಮರಿ ಬಂದು ಸೇರಿದಂದಿನಿಂದ ಅವರ ವ್ಯವಹಾರ ಲಾಭದಾಯಕವಾಗತೊಡಗಿತು. ಅವರು ಸಮೀಪದ ಇಂಡಸ್ಟ್ರಿಯಲ್ ಎಸ್ಟೇಟಿನಲ್ಲಿ ಒಂದು ಕಟ್ಟಡ ಖರೀದಿಸಿ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ತನ್ನ ಫ್ಯಾಕ್ಟರಿಯನ್ನು ಅಲ್ಲಿಗೆ ಸ್ಥಳಾಂತರಿಸಿದರು. ತನ್ನ ಅದೃಷ್ಟ ಖುಲಾಯಿಸಲು ಆ ನಾಯಿಮರಿಯೇ ಕಾರಣ ಎಂದು ಅವರು ಬಲವಾಗಿ ನಂಬಿದರು. ಎಲ್ಲಿಂದಲೋ ಬಂದು ಸೇರಿಕೊಂಡ ನಾಯಿ ಮರಿ ಅವರ ಮನೆಯ ಒಬ್ಬ ಸದಸ್ಯನಾಗಿ ಬೆರೆತು ಬೆಳೆಯಿತು. ಚಂದ್ರಶೇಖರಯ್ಯ ಅದಕ್ಕೆ ರಾಜಾ ನಾರಾಯಣ ಸ್ವಾಮಿ ಎಂದು ನಾಮಕರಣ ಮಾಡಿ ಸ್ವಂತ ಮಗನಂತೆ ಸಾಕತೊಡಗಿದರು. ಅದಕ್ಕೆ ಲಿಂಗ ದೀಕ್ಷೆಯನ್ನೂ ಮಾಡಿಸಿದರು.
ಆದರೆ, ಅವರ ಅದೃಷ್ಟದ ಆ ನಾಯಿ 2008ರಲ್ಲಿ ತೀರಿಕೊಂಡಿತು. ಚಂದ್ರಶೇಖರಯ್ಯ ಸ್ವಂತ ಮಗನನ್ನು ಕಳೆದುಕೊಂಡಂತೆ ದುಃಖಿಸಿದರು. ತನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಾರಣವಾದ ತನ್ನ ಆ ‘ಅದೃಷ್ಟ ದೇವತೆ’ಯ ನೆನೆಪನ್ನು ಶಾಶ್ವತವಾಗಿರಸಲು ತೀರ್ಮಾನಿಸಿದ ಅವರು ಅದರ ಹೆಸರಲ್ಲಿ ಒಂದು ದೇವಸ್ಥಾನವನ್ನು ಕಟ್ಟಿಸಿದರು.
ಅಗ್ರಹಾರ ವಾಲಗೇರಹಳ್ಳಿ ಎಂಬುದು ಗೊಂಬೆಗಳಿಗೆ ಹೆಸರಾದ ಚನ್ನಪಟ್ಟಣದ ಚಿಕ್ಕದೊಂದು ಹಳ್ಳಿ. ಈ ಹಳ್ಳಿಯ ಜನರಿಗೆ ನಾಯಿಗಳೆಂದರೆ ದೇವರ ಅವತಾರ. ಇಲ್ಲಿ ನಾಯಿಗಳನ್ನು ಹೊಡೆಯುವುದಾಗಲೀ, ಓಡಿಸುವುದಾಗಲೀ ಮಾಡುವಂತಿಲ್ಲ. ಅಷ್ಟೇ ಅಲ್ಲ, ‘ಶ್ರೀ ನಾಯಿದೊಲೆ ವೀರಪ್ಪ’ ಎಂಬ ಹೆಸರಲ್ಲಿ ಇಲ್ಲಿ ನಾಯಿಗಳಿಗೆ ಒಂದು ದೇವಸ್ಥಾನ ಕಟ್ಟಿಸಿ, ಪೂಜೆ ನಡೆಸಲಾಗುತ್ತಿದೆ!
ಅಗ್ರಹಾರ ವಾಲಗೇರಹಳ್ಳಿಯ ಜನರಿಗೆ ಈ ನಾಯಿದೊಲೆ ವೀರಪ್ಪನ ಮೇಲೆ ಎಷ್ಟು ಶ್ರದ್ಧೆಯೆಂದರೆ, ಜಾತಿಭೇದವಿಲ್ಲದೆ ತಮ್ಮ ಕುಟುಂಬದಲ್ಲಿ ಹುಟ್ಟುವ ಚೊಚ್ಚಲ ಮಗು ಗಂಡಾದರೆ ವೀರಪ್ಪ ಅಥವಾ ವೀರಣ್ಣ ಎಂದು ಅದಕ್ಕೆ ನಾಮಕರಣ ಮಾಡುತ್ತಾರೆ. ಹೆಣ್ಣಾದರೆ ವೀರಮ್ಮ ಎಂದು ಕರೆಯುತ್ತಾರೆ. ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಅವನಿಗೆ ಹರಕೆ ಹೊರುತ್ತಾರೆ. ವರ್ಷಕ್ಕೊಮ್ಮೆ ಶ್ರೀ ನಾಯಿದೊಲೆ ವೀರಪ್ಪನ ಜಾತ್ರೆಯೂ ನಡೆಯುತ್ತದೆ. ಜಾತ್ರೆ ಸಮಯದಲ್ಲಿ ಆಡು, ಕುರಿ, ಕೋಳಿಗಳನ್ನು ಬಲಿ ಕೊಟ್ಟು ಗ್ರಾಮದ ನಾಯಿಗಳಿಗೆ ಬಡಿಸುತ್ತಾರೆ.
ಅಗ್ರಹಾರ ವಾಲಗೇರಹಳ್ಳಿಯ ಜನರ ನಂಬಿಕೆಯ ಪ್ರಕಾರ, ನಾಯಿ ದೊಲೆ ವೀರಪ್ಪ ಅವರ ಗ್ರಾಮದೇವತೆ ವೀರಮಾಸ್ತಿ ಕೆಂಪಮ್ಮನ ಬಲಗೈ ಭಂಟ. ಕೆಂಪಮ್ಮ ತಮಗೆ ಬರಲಿರುವ ಸಂಕಷ್ಟಗಳನ್ನು ಮೊದಲೇ ಗ್ರಹಿಸಿ, ನಾಯಿದೊಲೆ ವೀರಪ್ಪನ ಮೂಲಕ ತಮಗೆ ತಿಳಿಸುತ್ತಾಳೆ ಎಂದು ನಂಬುತ್ತಾರೆ. ಇಲ್ಲಿ ನಾಯಿ ದೇವರಿಗೆ ದೇವಸ್ಥಾನ ಕಟ್ಟಲಾದ ಹಿನ್ನೆಲೆಯಲ್ಲಿ ಎರಡು ಕೂತೂಹಲಕರವಾದ ಕತೆಗಳಿವೆ. ಒಂದು ಕತೆಯ ಪ್ರಕಾರ, ಹಿಂದೊಮ್ಮೆ ಅಗ್ರಹಾರ ವಾಲಗೇರಹಳ್ಳಿಯಲ್ಲಿ ಮೇಯಲು ಹೋಗುತ್ತಿದ್ದ ಆಡು, ಕುರಿಗಳು ಕಾಣೆಯಾಗಲು ಶುರುವಾದವಂತೆ. ಆಗ ಹಳ್ಳಿಯ ಜನ ಕೆಂಪಮ್ಮನಿಗೆ ಪ್ರಾರ್ಥನೆ ಮಾಡಿ ಕೇಳಿಕೊಂಡಾಗ, ಅವಳು ತನಗೊಬ್ಬ ನಾಯಿ ಭಂಟನಿದ್ದಾನೆ, ಅವನಿಗೆ ಒಂದು ಗುಡಿ ಕಟ್ಟಿಸಿ ಪೂಜೆ ಸಲ್ಲಿಸಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದಳಂತೆ.
ಇನ್ನೊಂದು ಕತೆಯ ಪ್ರಕಾರ, 2010ರಲ್ಲಿ ರಮೇಶ್ ಎಂಬ ಒಬ್ಬ ಉದ್ಯಮಿ ಈ ನಾಯಿ ದೇವಸ್ಥಾನವನ್ನು ಕಟ್ಟಿಸಿದವರು. ಅವರು ಕೆಂಪಮ್ಮನಿಗೆ ದೇವಸ್ಥಾನ ಕಟ್ಟಿಸುವಾಗ ಎಲ್ಲಿಂದಲೋ ಬಂದ ಎರಡು ಬೀದಿ ನಾಯಿಗಳು ಅಲ್ಲಿ ಕಾಣಿಸಿಕೊಂಡವು. ದೇವಸ್ಥಾನದ ಕೆಲಸ ಮುಂದುವರಿದಂತೆ ನಾಯಿಗಳು ಅಲ್ಲೇ ಸುತ್ತಾಡುತ್ತ ಎಲ್ಲರಿಗೂ ಪರಿಚಿತವಾದವು. ಆದರೆ, ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಅವು ಹೇಗೆ ಕಾಣಿಸಿಕೊಂಡವೋ, ಹಾಗೇ ಆಶ್ಚರ್ಯಕರವಾಗಿ ಕಣ್ಮರೆಯಾದವು! ಎಷ್ಟು ಹುಡುಕಿದರೂ ಸಿಗಲಿಲ್ಲ. ಆಗ, ಅದು ಕೆಂಪಮ್ಮನದೇ ಲೀಲೆ ಎಂದು ಭಾವಿಸಿದ ಜನ ಆ ನಾಯಿಗಳ ಗೌರವಾರ್ಥ ಗುಡಿಯನ್ನು ಕಟ್ಟಿಸಿದರು.