ಶ್ರೀರಂಗಪಟ್ಟಣ ದಸರಾ ಹೆಸರಿಗಷ್ಟೇ ಅದ್ಧೂರಿತನದಿಂದ ಕೂಡಿದ್ದು, ಒಳಹೊಕ್ಕಿ ನೋಡಿದರೆ ಸ್ಥಳೀಯ ಕಲಾವಿದರಿಗೆ ಗೌರವಧನ ಕೊಡುವುದಕ್ಕೂ ಜಿಲ್ಲಾಡಳಿತದ ಬಳಿ ಹಣವೇ ಇಲ್ಲದ ಪರಿಸ್ಥಿತಿ ಇದೆ. ಸರ್ಕಾರದಿಂದ ಬಿಡುಗಡೆಯಾಗಿರುವ ಅಲ್ಪಸ್ವಲ್ಪ ಅನುದಾನ, ಇತರೆ ಮೂಲಗಳಿಂದ ಸಂಗ್ರಹಿಸಿದ ಹಣದಿಂದ ಅದ್ಧೂರಿ ದಸರಾ ಎಂದು ಬಿಂಬಿಸಿಕೊಂಡು ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡಿರುವ ಅಧಿಕಾರಿಗಳು ಇದೀಗ ಕಲಾವಿದರಿಗೆ ಕೊಡುವುದಕ್ಕೆ ಹಣವಿಲ್ಲದೆ ಪೇಚಾಡುತ್ತಿದ್ದಾರೆ. ವೇದಿಕೆ ಕಾರ್ಯಕ್ರಮ ಕೊಟ್ಟ ಕಲಾವಿದರು ಹಣವಿಲ್ಲದೆ ಬರಿಗೈಲಿ ವಾಪಸ್ ತೆರಳುತ್ತಿದ್ದಾರೆ. ಈ ನಡೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ.
ಶ್ರೀರಂಗಪಟ್ಟಣ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಸ್ಥಳೀಯವಾಗಿ ಹತ್ತಾರು ಕಲಾತಂಡಗಳು ಭಾಗವಹಿಸಿದ್ದವಲ್ಲದೆ, ಶ್ರೀರಂಗ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಸಾಕಷ್ಟು ಸ್ಥಳೀಯ ಕಲಾವಿದರು ಪ್ರದರ್ಶನ ನೀಡುತ್ತಿದ್ದಾರೆ. ೨೦೧೮ ರವರೆಗೆ ಶ್ರೀರಂಗಪಟ್ಟಣ ದಸರಾದಲ್ಲಿ ವೇದಿಕೆ ಕಾರ್ಯಕ್ರಮ ಕೊಟ್ಟ ಬಳಿಕ ಅಲ್ಲೇ ಕಲಾವಿದರನ್ನು ಗೌರವಿಸಿ ಗೌರವಧನದ ಚೆಕ್ ನೀಡುತ್ತಿದ್ದರು. ೨೦೧೯ರಿಂದ ಕಲಾವಿದರಿಗೆ ನೀಡುವ ಗೌರವಧನವನ್ನು ವಿಳಂಬವಾಗಿ ಪಾವತಿಸುವುದಕ್ಕೆ ಆರಂಭಿಸಿದರು. ದಸರಾ ಮುಗಿದು ಮೂರ್ನಾಲ್ಕು ತಿಂಗಳ ಬಳಿಕ ಕಲಾವಿದರಿಗೆ ಚೆಕ್ ನೀಡುತ್ತಿದ್ದರು. ಈ ಅಲ್ಪ ಹಣ ಪಡೆಯುವುದಕ್ಕಾಗಿ ಕಚೇರಿಗೆ ಅಲೆದೂ ಅಲೆದೂ ಕಲಾವಿದರು ಸುಸ್ತಾಗುತ್ತಿದ್ದರು. ದಾಖಲೆಗಳನ್ನು ಕೇಳಿ ಕಲಾವಿದರನ್ನು ಸುಖಾಸುಮ್ಮನೆ ಅಲೆದಾಡಿಸುತ್ತಿದ್ದುದು ಇದೆ.
೨೦೨೦ ಮತ್ತು ೨೦೨೧ರಲ್ಲಿ ಕೊರೊನಾ ಕಾರಣದಿಂದ ಶ್ರೀರಂಗಪಟ್ಟಣ ದಸರಾ ಸರಳವಾಗಿ ನಡೆಯಿತು. ಈಗ ಕೊರೊನಾ ಮರೆಯಾಗಿ ಜಿಲ್ಲಾಡಳಿತ ಅದ್ಧೂರಿಯಾಗಿ ದಸರಾ ಆಚರಿಸುತ್ತಿದ್ದರೂ ಕಲಾವಿದರಿಗೆ ಕೊಡುವುದಕ್ಕೆ ಹಣವಿಲ್ಲ ಎಂದ ಮೇಲೆ ಇದೆಂಥಾ ಅದ್ಧೂರಿ ದಸರಾ ಎನ್ನುವುದು ಕಲಾವಿದರ ಪ್ರಶ್ನೆಯಾಗಿದೆ. ಗೌರವಧನ ವಿಚಾರವಾಗಿ ಕಲಾವಿದರು ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರ್ಕಾರದಿಂದ ಅನುದಾನ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಸ್ವಲ್ಪ ಹಣವನ್ನಷ್ಟೇ ಬಿಡುಗಡೆ ಮಾಡಿದೆ. ಪೂರ್ಣ ಹಣ ಬಿಡುಗಡೆ ಮಾಡಿದಾಗ ಗೌರವಧನ ನೀಡುವುದಾಗಿ ಸಮಜಾಯಿಷಿ ನೀಡುತ್ತಿದ್ದಾರೆ. ಸ್ಥಳೀಯ ಕಲಾತಂಡಗಳು ನೀಡುವ ಪ್ರದರ್ಶನಕ್ಕೆ ಗೌರವಧನ ರೂಪದಲ್ಲಿ ಜಿಲ್ಲಾಡಳಿತ ನೀಡುವುದು ಬರೀ ೫ ಸಾವಿರ ರೂಪಾಯಿಗಳು ಮಾತ್ರ. ಈ ಹಣವನ್ನು ನೀಡುವುದಕ್ಕೂ ಸತಾಯಿಸುತ್ತಿರುವುದು ಕಲೆಗೆ ಮತ್ತು ಕಲಾವಿದರಿಗೆ ಮಾಡುತ್ತಿರುವ ಅವಮಾನವೂ ಹೌದು.
ಒಂದು ತಂಡ ಎಂದ ಮೇಲೆ ಆರೇಳು ಜನರಿರುತ್ತಾರೆ. ಇವರು ಕೊಡುವ ಹಣ ಊಟ- ತಿಂಡಿಗೂ ಸಾಲುವುದಿಲ್ಲ. ಅದನ್ನು ಪಡೆಯುವುದಕ್ಕೂ ತಿಂಗಳಾನುಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ನಮ್ಮದಾಗಿದೆ. ಹೀಗಾಗಿ ನಾವು ಕರೆದುಕೊಂಡು ಬಂದಿರುವ ಕಲಾವಿದರಿಗೆ ಸಾಲ ಮಾಡಿ ಹಣ ಕೊಡಬೇಕಾದ ಪರಿಸ್ಥಿತಿ ಉದ್ಭವಿಸಿದೆ ಎಂದು ನೋವು ತೋಡಿಕೊಳ್ಳುವ ಕಲಾವಿದರು, ತಮ್ಮನ್ನು ಗೌರವದಿಂದ ನಡೆಸಿಕೊಳ್ಳುವ, ಕಲೆಯನ್ನು ಗೌರವಿಸುವ ಮನೋಭಾವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಇಲ್ಲದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಆಗಮಿಸುವಂತಹ ಕಲಾತಂಡಗಳಿಗೆ ಪ್ರಾಯೋಜಿತ ಸಂಭಾವನೆ ನೀಡಿದರೆ, ದೊಡ್ಡ ದೊಡ್ಡ ಗಾಯಕರು, ಹಾಡುಗಾರರು, ನೃತ್ಯ ಕಲಾವಿದರು, ಚಿತ್ರ ನಟ-ನಟಿಯರು ಸೇರಿದಂತೆ ಖ್ಯಾತ ಕಲಾವಿದರು ಖಾಸಗಿ ಏಜೆನ್ಸಿಗಳ ಮೂಲಕ ದಸರಾದಲ್ಲಿ ಒಂದೆರಡು ಗಂಟೆಗಳ ಕಾಲ ಕಾರ್ಯಕ್ರಮ ನೀಡಿ ಹೋಗುತ್ತಾರೆ. ಅವರಿಗೆಲ್ಲಾ ಲಕ್ಷಾಂತರ ರೂ. ನೀಡುವ ಜಿಲ್ಲಾಡಳಿತ ಸ್ಥಳೀಯ ಕಲಾವಿದರಿಗೆ ನೀಡುವ ಸಂಭಾವನೆಯನ್ನು ಹೆಚ್ಚಿಸದೆ ಅವರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ.
ಶ್ರೀರಂಗಪಟ್ಟಣ ದಸರಾಗೆ ಆಹ್ವಾನ ನೀಡುವ ಸಮಯದಲ್ಲೂ ಕಲಾವಿದರನ್ನು ಗೌರವಪೂರ್ವಕವಾಗಿ ಆಹ್ವಾನಿಸುವುದಿಲ್ಲ. ನಾಳೆ ನಿಮ್ಮ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿದೆ. ನಿಮಗೆ ಕೊಡುವ ಸಂಭಾವನೆ ೫ ಸಾವಿರ ರೂ.ಗಳನ್ನು ವೇದಿಕೆಯಲ್ಲೇ ಕೊಡುವುದಿಲ್ಲ. ಸ್ವಲ್ಪ ತಡವಾಗಿ ನೀಡುತ್ತೇವೆ. ಬರ್ತೀರಾ. ಇಲ್ಲವಾ.. ಹೇಳಿ. ನೀವು ಬರುತ್ತೀರಿ ಎಂದರೆ ನಾವು ಟಿಕ್ ಹಾಕಿಕೊಳ್ಳುತ್ತೇವೆ ಎಂದು ಕಾಟಾಚಾರಕ್ಕೆ ಕಲಾವಿದರನ್ನು ಆಹ್ವಾನಿಸಲಾಗುತ್ತದೆ. ಕಲಾವಿದರಿಗೆ ವಿಧಿ ಇಲ್ಲ. ಯಾವುದೇ ಕಾರ್ಯಕ್ರಮಗಳಿಲ್ಲದೆ ಖಾಲಿ ಕುಳಿತಿರುವ ಬದಲು ದಸರಾ ಕಾರ್ಯಕ್ರಮದಲ್ಲಾದರೂ ಪ್ರದರ್ಶನ ಕೊಟ್ಟು ಒಂದಷ್ಟು ಹಣ ಗಳಿಸಬಹುದು ಎಂದುಕೊಂಡ ಕಲಾವಿದರಿಗೆ ಇಲ್ಲೂ ಖಾಲಿ ಕೈ ಎಂಬಂತಾಗಿದೆ.
ರಾಜಕಾರಣಿಗಳು, ಅಧಿಕಾರಿಗಳು ವಿವಿಧ ಭತ್ಯೆಗಳ ಹೆಸರಿನಲ್ಲಿ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತಾರೆ. ಅದರೆ, ಸ್ಥಳೀಯ ಕಲಾವಿದರಿಗೆ ಗೌರವಧನ ನೀಡುವ ವಿಷಯ ಬಂದಾಗ, ಹಣದ ಕೊರತೆ, ಅನುದಾನ ಬಂದಿಲ್ಲ, ಇತ್ಯಾದಿ ಸಬೂಬು ಹೇಳಲಾಗುತ್ತಿದೆ. ಅಧಿಕಾರಿಗಳ ಈ ನಡವಳಿಕೆಯನ್ನು ಯಾರೂ ಮೆಚ್ಚಲಾಗದು. ಸ್ಥಳೀಯ ಕಲಾವಿದರನ್ನು ನಿರ್ಲಕ್ಷಿಸುವುದು, ಅಗೌರವಿಸುವುದು ಅಕ್ಷಮ್ಯ.
ಸ್ಥಳೀಯ ಕಲಾವಿದರಿಗೆ ಗೌರವಧನ ನೀಡಿಕೆಯಲ್ಲಾಗುತ್ತಿರುವ ವಿಳಂಬ ತಪ್ಪಿಸಬೇಕು. ಈಗ ಎಲ್ಲ ಸರಕು ಸೇವೆಗಳ ಬೆಲೆಯೂ ಏರಿದೆ. ಆದರೆ, ಕಲಾವಿದರ ಗೌರವಧನ ಮಾತ್ರ ಹೆಚ್ಚಳವಾಗುತ್ತಿಲ್ಲ. ಸರ್ಕಾರ ಕೂಡಲೇ ಗೌರವಧನವನ್ನು ಹೆಚ್ಚಳ ಮಾಡಬೇಕು. ತಂಡದ ಸಂಖ್ಯೆಗೆ ಅನುಗುಣವಾಗಿ ಗೌರವಧನ ನಿಗದಿ ಮಾಡಬೇಕು. ಪ್ರತ್ಯೇಕವಾಗಿ ಪ್ರಯಾಣ ಮತ್ತು ಊಟೋಪಚಾರದ ಭತ್ಯೆ ನೀಡಬೇಕು.
ಹಣದ ಕೊರತೆಯ ನೆಪ ಹೇಳುವಂತಹ ಪರಿಸ್ಥಿತಿ ಇರಲೇಬಾರದು. ಸರ್ಕಾರದ ಹಣಕಾಸಿನ ಕೊರತೆಯು ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಡವಾಗಿಸಬಾರದು.