Mysore
19
few clouds

Social Media

ಗುರುವಾರ, 16 ಜನವರಿ 2025
Light
Dark

ದೆಹಲಿ ಧ್ಯಾನ : ಬಿಹಾರದ ಸೀಮಾಂಚಲ- ಬಿಜೆಪಿ ಈಗಲೇ ಕಣ್ಣಿಟ್ಟ ಗುಟ್ಟೇನು?

ಡಿ. ಉಮಾಪತಿ

ಬಿಜೆಪಿ ಅಪರಾಧ, ಭ್ರಷ್ಟಾಚಾರ ಮುಕ್ತ ಆಡಳಿತದ ಆಶ್ವಾಸನೆ ನೀಡಲಿದೆ. ಇದಿಷ್ಟೇ ಆಗಿದ್ದರೆ ಅಮಿತ್ ಶಾ ಅವರು ಶುರುವಾತನ್ನು ಸೀಮಾಂಚಲದಲ್ಲಿ ಮಾಡಬೇಕಿರಲಿಲ್ಲ!

೨೦೧೫ರ ಬಿಹಾರ ವಿಧಾನಸಭಾ ಚುನಾವಣೆಗಳು ಕದ ಬಡಿದ ಹೊತ್ತಿನಲ್ಲಿ ಹಳೆಯ ಗೆಳೆಯರಾಗಿದ್ದ ನಿತೀಶ್ ಕುಮಾರ್ ಮತ್ತು ಲಾಲೂಪ್ರಸಾದ್ ಯಾದವ್ ಮತ್ತೆ ಒಟ್ಟಾಗಿದ್ದರು. ಈ ಜೋಡಿಗೆ ಸಿಕ್ಕ ಅಪಾರ ಜನಬೆಂಬಲದ ಮುಂದೆ ಬಿಜೆಪಿ ಮೈತ್ರಿಕೂಟ ತರಗೆಲೆಯಾಗಿ ಹೋಗಿತ್ತು. ೨೪೩ ಸೀಟುಗಳ ಪೈಕಿ ಬಿಜೆಪಿ ಮೈತ್ರಿಕೂಟಕ್ಕೆ ದಕ್ಕಿದ್ದು ಕೇವಲ ೫೮.

ಈ ವಿದ್ಯಮಾನದ ನಂತರ ಆರ್‌ಜೆಡಿ ಮತ್ತು ಜೆಡಿ(ಯು) ಇದೀಗ ಪುನಃ ಗೆಳೆತನ ಬೆಳೆಸಿವೆ.
೨೦೧೫ರ ವಿಧಾನಸಭಾ ಚುನಾವಣೆಗಳಲ್ಲಿ ಪಟ್ನಾದ ಗಾಂಧೀ ಮೈದಾನದಿಂದ ಪ್ರಚಾರ ಆರಂಭಿಸಿತ್ತು ಬಿಜೆಪಿ. ರಾಷ್ಟ್ರವಾದಿ- ಕಟ್ಟರ್ ಹಿಂದುತ್ವ- ಕೋಮು ದ್ವೇಷದ ಕಾರ್ಯಸೂಚಿಗಳನ್ನು ಇರಿಸಿಕೊಂಡು ಮಹಾಮೈತ್ರಿಯ ಮೇಲೆ ದಾಳಿ ನಡೆಸಿತ್ತು. ಈಗ ಅಂತಹುದೇ ಆರಂಭಕ್ಕೆ ಹೆಚ್ಚು ಫಲವತ್ತಾದ ಸೀಮೆಯನ್ನು ಗುರುತಿಸಿದೆ. ಬಿಹಾರದಲ್ಲಿ ಮುಸ್ಲಿಮ್ ಪ್ರಾಬಲ್ಯವಿರುವ ಸೀಮಾಂಚಲ ಸೀಮೆಯನ್ನು ಆರಿಸಿಕೊಂಡಿದೆ.
ಕಟೀಹಾರ, ಪೂರ್ಣಿಯ, ಕಿಶನ್ ಗಂಜ್ ಹಾಗೂ ಅರಾಡಿಯಾ ಎಂಬ ನಾಲ್ಕು ಜಿಲ್ಲೆಗಳ ಗುಚ್ಛವೇ ಸೀಮಾಂಚಲ. ಮಾಧೇಪುರ, ಸಹರ್ಸಾ ಹಾಗೂ ಸುಪಾಲ್ ಜಿಲ್ಲೆಗಳನ್ನೂ ಈ ಸೀಮೆಗೆ ಸೇರಿಸುವ ಮತ್ತೊಂದು ಲೆಕ್ಕಾಚಾರವೂ ಉಂಟು.
ಈ ಲೆಕ್ಕಾಚಾರದ ಪ್ರಕಾರ ಸೀಮಾಂಚಲದ ಸರಾಸರಿ ಮುಸ್ಲಿಮ್ ಜನಸಂಖ್ಯೆಯ ಪ್ರಮಾಣ ಶೇ. ೪೭. ಕಿಶನ್ ಗಂಜ್ ಜಿಲ್ಲೆಯಲ್ಲಿ ಮುಸ್ಲಿಮರ ಶೇಕಡಾವಾರು ಜನಸಂಖ್ಯೆ ೭೦. ಪೂರ್ಣಿಯಾದಲ್ಲಿ ೩೫. ಇಡೀ ಬಿಹಾರದ ಸರಾಸರಿ ಮುಸ್ಲಿಮ್ ಜನಸಂಖ್ಯೆಯ ಪ್ರಮಾಣ ಶೇ.೧೭.
ಕೇಂದ್ರ ಗೃಹಮಂತ್ರಿ ಅಮಿತ್ ಶಾ ಇದೇ ತಿಂಗಳ ಮೂರನೆಯ ವಾರದಲ್ಲಿ ಸೀಮಾಂಚಲ ಪ್ರವಾಸ ಮಾಡಲಿದ್ದಾರೆ. ಕಿಶನ್ ಗಂಜ್ ಮತ್ತು ಪೂರ್ಣಿಯಾದಲ್ಲಿ ಎರಡು ರ್ಯಾಲಿಗಳಲ್ಲಿ ಮಾತಾಡಿ ಹಿಂದುತ್ವದ ಅಲೆಗಳನ್ನು ಬಡಿದೆಬ್ಬಿಸುವ ಬಿಜೆಪಿ ‘ಸಮರಕ್ಕೆ ಶಂಖನಾದ’ ಮಾಡಲಿದ್ದಾರೆ ಅಮಿತ್ ಶಾ.
ಅಪರಾಧ ಮುಕ್ತ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದ ಆಶ್ವಾಸನೆ ನೀಡಲಿದೆ. ಇದಿಷ್ಟೇ ಆಗಿದ್ದರೆ ಅಮಿತ್ ಶಾ ಅವರು ಶುರುವಾತನ್ನು ಸೀಮಾಂಚಲದಲ್ಲಿ ಮಾಡಬೇಕಿರಲಿಲ್ಲ. ೨೦೧೯ರಲ್ಲಿ ಬಿಹಾರದ ೪೦ ಲೋಕಸಭಾ ಸೀಟುಗಳ ಪೈಕಿ ಎನ್‌ಡಿಎ ಗೆದ್ದದ್ದು ೩೯. ಉಳಿದ ಏಕೈಕ ಸೀಟು ಕಾಂಗ್ರೆಸ್ ಪಾಲಾಗಿತ್ತು. ಅದು ಸೀಮಾಂಚಲದ ಕಿಶನ್‌ಗಂಜ್ ಕ್ಷೇತ್ರವಾಗಿತ್ತು. ಈ ಸೀಮೆಯಲ್ಲಿರುವ ವಿಧಾನಸಭಾ ಸೀಟುಗಳ ಸಂಖ್ಯೆ ೨೪. ಈ ಪೈಕಿ ಬಿಜೆಪಿ ಎಂಟು, ಜೆಡಿಯು ನಾಲ್ಕು, ಕಾಂಗ್ರೆಸ್ ಐದು, ಆರ್‌ಜೆಡಿ ಎರಡು, ಸಿಪಿಐ(ಎಂಎಲ್) ಒಂದು ಸೀಟನ್ನು ಹೊಂದಿವೆ.
ಸೀಮಾಂಚಲದಲ್ಲಿ ಶಂಖನಾದದ ಬಿಜೆಪಿಯ ತಂತ್ರಗಾರಿಕೆಯ ಕುರಿತು ನಿತೀಶ್ ಕುಮಾರ್ ತಲೆಕೆಡಿಸಿಕೊಂಡಿಲ್ಲ. ಈ ಸಲ ಬಿಜೆಪಿಗೆ ಸೀಮಾಂಚಲದಲ್ಲಿ ಯಶಸ್ಸು ಸಿಗುವುದಿಲ್ಲ. ಅಲ್ಲಿ ನಮ್ಮ ಬೆಂಬಲ ನೆಲೆ ಬಿಜೆಪಿಗಿಂತ ಬಲು ದೊಡ್ಡದು. ಮತದಾರರು ಕೂಡ ಬಿಜೆಪಿಯ ಕೋಮುವಾದಿ ಕಾರ್ಯಸೂಚಿಯನ್ನು ಈಗಾಗಲೆ ಅರಿತಿದ್ದಾರೆ ಎನ್ನುತ್ತಾರೆ ನಿತೀಶ್ ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿಯ ಅಧ್ಯಕ್ಷ ಉಪೇಂದ್ರ ಕುಶವಾಹ.
ಬಲು ಸೂಕ್ಷ್ಮ ಪ್ರದೇಶ ಸೀಮಾಂಚಲ. ಇಸ್ಲಾಮಿಕ್ ಭಯೋತ್ಪಾದನೆ, ಬಾಂಗ್ಲಾದೇಶಿಗಳ ನುಸುಳುವಿಕೆ ಹಾಗೂ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆಯ ಚಟುವಟಿಕೆಗಳ ಮಡುವು ಎನ್ನುತ್ತದೆ ಬಿಜೆಪಿ.
ಈ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಭಾನುವಾರದ ಬದಲಿಗೆ ಮುಸಲ್ಮಾನರ ಪವಿತ್ರ ದಿನವಾದ ಶುಕ್ರವಾರದಂದು ರಜೆ ನೀಡಲಾಗುತ್ತಿದೆ. ಈ ಕುರಿತು ವರದಿ ಸಲ್ಲಿಸುವಂತೆ ಕಳೆದ ತಿಂಗಳು ಅಂದಿನ ಬಿಜೆಪಿ- ಜೆಡಿಯು ಸರ್ಕಾರದ ಶಿಕ್ಷಣ ಮಂತ್ರಿ ಆದೇಶ ನೀಡಿದ್ದರು. ಬಿಹಾರದ ವಿಧಾನಸಭೆಯಲ್ಲಿ ಈ ಕುರಿತು ಪ್ರಸ್ತಾಪವಾಗಿತ್ತು. ನೆರೆಯ ಝಾರ್ಖಂಡ್ ರಾಜ್ಯದಲ್ಲೂ ಬಿಜೆಪಿ ಇದೇ ತಕರಾರನ್ನು ಎತ್ತಿತ್ತು. ಝಾರ್ಖಂಡ್ ನ ಜೆಎಂಎಂ- ಕಾಂಗ್ರೆಸ್ ಸರ್ಕಾರ ರಜೆಯನ್ನು ಶುಕ್ರವಾರದಿಂದ ಭಾನುವಾರಕ್ಕೆ ಬದಲಾಯಿಸಿತ್ತು. ಬಿಹಾರವೂ ಝಾರ್ಖಂಡ್ ಸರ್ಕಾರದ ನಡೆಯನ್ನು ಅನುಕರಿಸಬೇಕೆಂದು ಬಿಜೆಪಿ ಆಗ್ರಹಿಸಿತ್ತು.
ಸೀಮಾಂಚಲದಲ್ಲಿ ಹಿಂದೂಗಳ ಧೃವೀಕರಣ ಮಾಡಿ, ಆ ಸಂದೇಶವನ್ನು ಬಿಹಾರದ ಉಳಿದ ಭಾಗಗಳಿಗೆ ತಲುಪಿಸಬೇಕೆಂಬುದು ಬಿಜೆಪಿಯ ಹವಣಿಕೆ.
ತಮ್ಮ ಜಾತಿ ಮತ ಬ್ಯಾಂಕುಗಳು ಚೆದುರದಂತೆ ಕಾಪಾಡಿಕೊಳ್ಳಲು ಆರ್‌ಜೆಡಿ- ಜೆಡಿ (ಯು) ಹೆಣಗುವಂತೆ ಮಾಡುತ್ತೇವೆ. ಅಲ್ಲಿ ೨೦೨೪ ಲೋಕಸಭಾ ಚುನಾವಣೆಗಳು ನರೇಂದ್ರ ಮೋದಿ ವರ್ಚಸ್ಸಿನ ಅನ್ವಯ ನಡೆಯಲಿವೆ ಎಂಬುದು ಬಿಜೆಪಿಯ ಆತ್ಮವಿಶ್ವಾಸ. ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಮಹಾಮೈತ್ರಿಕೂಟಕ್ಕಿಂತ ಶೇ.೨೭ರಷ್ಟು ಹೆಚ್ಚು ಮತಗಳನ್ನು ಪಡೆದಿತ್ತು ಎನ್‌ಡಿಎ ನಿತೀಶ್ ಅವರ ಜೆಡಿ(ಯು) ಆಗ ಬಿಜೆಪಿಯೊಂದಿಗಿತ್ತು.
ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲೀಸ್ ಎ ಇತ್ತೇಹದುಲ್ ಮುಸ್ಲಿಮೀನ್ (ಎಐಎಂಐಎಂ) ಈ ಸಲವೂ ಸೀಮಾಂಚಲದಲ್ಲಿ ಮುಸ್ಲಿಮ್ ಮತಗಳನ್ನು ಸೆಳೆದು ಮಹಾಮೈತ್ರಿಗೆ ಮಂಕು ಹಿಡಿಸಲಿದೆ ಎಂಬುದು ಬಿಜೆಪಿಯ ನಿರೀಕ್ಷೆ. ೨೦೨೦ರ ವಿಧಾನಸಭಾ ಚುನಾವಣೆಗಳಲ್ಲಿ ಈ ಸೀಮೆಯ ಐದು ಸೀಟುಗಳನ್ನು ಗೆದ್ದಿದ್ದರು ಓವೈಸಿ. ಈ ಪೈಕಿ ನಾಲ್ವರು ಆನಂತರ ಆರ್‌ಜೆಡಿ ಸೇರಿದರೆಂಬುದು ಬೇರೆ ಮಾತು. ಸೀಮಾಂಚಲದಲ್ಲಿ ಶಂಖನಾದ ಸಾಂಕೇತಿಕವೂ ಹೌದು. ಜಾತಿ ಲೆಕ್ಕಾಚಾರವನ್ನು ಪರಿಗಣಿಸಿದರೆ ಸೀಮಾಂಚಲದಲ್ಲಿ ರಾಷ್ಟ್ರೀಯ ಜನತಾದಳ ಮತ್ತು ಸಂಯುಕ್ತ ಜನತಾದಳ ನೇತೃತ್ವದ ಮಹಾಮೈತ್ರಿಯು ಬಿಜೆಪಿಗೆ ಅತ್ಯಂತ ಬಲಿಷ್ಠ ಎದುರಾಳಿ. ಈ ಸ್ಥಿತಿಯನ್ನು ಎದುರಿಸಬೇಕಿದ್ದರೆ ಬಿಜೆಪಿಯು ಜಾತಿ ಲೆಕ್ಕಾಚಾರದ ತಂತ್ರವನ್ನು ಕೈಬಿಡಬೇಕು. ಜಾತಿಗಳನ್ನು ಮೀರಿ ಮತ ಗಳಿಕೆಗೆ ನೆರವಾಗುವ ಹಿಂದುತ್ವವನ್ನು ಮುಂದೆ ಮಾಡುವುದು ಬಿಜೆಪಿಗೆ ಅನಿವಾರ್ಯ.

೨೦೧೩ರಲ್ಲಿ ಪಶ್ಚಿಮೀ ಉತ್ತರಪ್ರದೇಶದಲ್ಲಿ ಹಠಾತ್ತನೆ ಸಿಡಿದ ಕೋಮು ಗಲಭೆಗಳು ಹಿಂದು- ಮುಸ್ಲಿಂ ಮತಗಳ ಧೃವೀಕರಣಕ್ಕೆ ಕಾರಣವಾದವು. ಮಾಯಾವತೀ ಅವರೊಂದಿಗೆ ಬಂಡೆಯಂತೆ ನಿಂತಿದ್ದ ದಲಿತ ಮತಗಳನ್ನು ಕೂಡ ಚೆದುರಿಸಿದ್ದವು. ಸಾವಿರಾರು ವರ್ಷಗಳ ಇತಿಹಾಸ ಉಳ್ಳ ಪ್ರಬಲ ಖಾಪ್ ಪಂಚಾಯಿತಿಗಳು ಖುಲ್ಲಂ ಖುಲ್ಲಾ ಮೋದಿ ಮಂತ್ರ ಪಠಿಸಿದ್ದವು. ಆರುನೂರು ಕಿ.ಮೀ.ಉದ್ದಗಲಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ‘ಜನಿವಾರ ಕ್ರಾಂತಿ ಸಂದೇಶ’ದ ಬೃಹತ್ತಾದ ಕೇಸರಿ ಭಿತ್ತಿಪತ್ರಗಳು. ಗಂಗಾ ಬಯಲಿನ ಫಲವತ್ತು ನೆಲದಲ್ಲಿ ಕೋಮುದ್ವೇಷದ ಹಾಲಾಹಲದ ಹೊಲಗಳು ಹುಲುಸಾದವು.
ಗುಜರಾತಿನಲ್ಲಿ ಮುಸಲ್ಮಾನರನ್ನು ‘ಹಣಿದು ಶರಣಾಗಿಸಿ ಅಂಕೆಯಲ್ಲಿಟ್ಟುಕೊಂಡಿರುವ’ ಮೋದಿ- ಅಮಿತ್ ಶಾ ಜೋಡಿಗೆ ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಸೀಟುಗಳನ್ನು ಗೆಲ್ಲುವ ಸವಾಲು ಎದುರಾಗಿತ್ತು. ವಿಷದ ಪೈರನ್ನು ಬಿತ್ತಿ ಬೆಳೆಯಲು ಶಾ ಆರಿಸಿಕೊಂಡ ಫಲವತ್ತಾದ ನೆಲ ಪಶ್ಚಿಮ ಯುಪಿ ೨೦೧೪ರ ಲೋಕಸಭಾ ಚುನಾವಣೆಗೆ ಉತ್ತರಪ್ರದೇಶ- ಬಿಹಾರದಲ್ಲಿ ೨೦೧೩ರಲ್ಲೇ ತಯಾರಿ ನಡೆಸಿ ಪಶ್ಚಿಮ ಯುಪಿಯಲ್ಲಿ ‘ಕೋಮುವಾದೀ ನೆಲ ಹದ’ ಮಾಡಿದರು ಅಮಿತ್ ಶಾ.
ಇಡೀ ಉತ್ತರಪ್ರದೇಶದಲ್ಲಿ ಅವರ ಪ್ರಮಾಣ ಶೇ.೧೯ರಷ್ಟು. ಆದರೆ ಪಶ್ಚಿಮೀ ಉತ್ತರಪ್ರದೇಶದಲ್ಲಿ ಈ ಪ್ರಮಾಣ ಹತ್ತಿರ ಹತ್ತಿರ ಶೇ.೩೩. ಮೊರಾದಾಬಾದಿನಲ್ಲಿ ಮುಸಲ್ಮಾನರ ಜನಸಂಖ್ಯಾ ಪ್ರಮಾಣ- ಶೇ.೪೫.೫೪. ಅಮರೋಹ ಮತ್ತು ಸಹಾರಣಪುರದಲ್ಲಿ ತಲಾ ಶೇ.೨೯. ಮುಝಫ್ಫರನಗರದಲ್ಲಿ ಶೇ.೩೮. ಮೇರಠ್ ಜಿಲ್ಲೆಯಲ್ಲಿ ಶೇ.೩೩ ಹಾಗೂ ಬಾಘಪತದಲ್ಲಿ ಶೇ.೨೫.
೨೦೧೪ರ ಲೋಕಸಭಾ ಚುನಾವಣೆಗಳಲ್ಲಿ ಉತ್ತರಪ್ರದೇಶದ ೮೦ ಲೋಕಸಭಾ ಸೀಟುಗಳಲ್ಲಿ ೭೧ ಸೀಟುಗಳ ಬಂಪರ್ ಫಸಲನ್ನು ತೆಗೆಯಿತು ಬಿಜೆಪಿ. ೨೦೨೪ರ ಚುನಾವಣಾ ಗೆಲುವಿಗೆ ಮುಸಲ್ಮಾನ ಬಾಹುಳ್ಯದ ಸೀಮಾಂಚಲದ ನೆಲವನ್ನು ಈಗಲೇ ಹದ ಮಾಡತೊಡಗಿದೆ!

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ