ಈ ಚುನಾವಣೆಯಲ್ಲಿ ನಾವು ನೂರಾ ಮೂವತ್ತು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದಿದ್ದರು ಸಿದ್ದರಾಮಯ್ಯ, ನೂರಾ ನಲವತ್ತೊಂದು ನನ್ನ ನಂಬರು, ಬರೆದಿಟ್ಟುಕೊಳ್ಳಿ ಎಂದಿದ್ದರು ಡಿ.ಕೆ.ಶಿವಕುವಾರ್. ರಾಜಕಾರಣಿಗಳು ಚುನಾವಣೆಗಳ ಸಂದರ್ಭದಲ್ಲಿ ಇಂಥ ಆತ್ಮವಿಶ್ವಾಸದ ನುಡಿಗಳನ್ನು ಆಡುವುದು ಸಹಜ. ನಾವೇ ಗೆಲ್ಲುತ್ತಿದ್ದೇವೆ ಎಂಬ ಸಂದೇಶವನ್ನು ಮತದಾರರಿಗೆ ನೀಡುವುದು, ದೊಡ್ಡ ಸಂಖ್ಯೆಯನ್ನು ಹೇಳಿ ಎದುರಾಳಿಗಳ ಮನೋಬಲ ಕುಗ್ಗಿಸಲೆಂದು ಉತ್ಪ್ರೇಕ್ಷಿತ ಸಂಖ್ಯೆಗಳನ್ನು ಹೇಳುವುದು ಮಾಮೂಲಿ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುವಾರ್ ಹೀಗೆ ದೊಡ್ಡ ಸಂಖ್ಯೆಗಳನ್ನು ಹೇಳುತ್ತಿರುವಾಗ ಬಿಜೆಪಿಯವರೇನು ಸುಮ್ಮನಿರಲಿಲ್ಲ. ಆ ಪಕ್ಷದ ಎರಡನೇ ಅತಿದೊಡ್ಡ ನಾಯಕ ಅಮಿತ್ ಶಾ, ನೂರಾ ಹದಿಮೂರನ್ನು ದಾಟಿ ಇನ್ನೂ ಹದಿನೈದು ಸ್ಥಾನ ಹೆಚ್ಚು ಗೆಲ್ಲುತ್ತೇವೆ ಎಂದಿದ್ದರು. ನೂರಾ ಐವತ್ತು ದಾಟುತ್ತೇವೆ ಎಂದು ಹೇಳಿದವರಿಗೇನು ಕೊರತೆಯಿಲ್ಲ.
ಆದರೆ ವಾಸ್ತವ ಬೇರೆುಂದೇ ಆಗಿರುತ್ತದೆ. ಜನರ ತೀರ್ಪು ಯಾರ ಲೆಕ್ಕಾಚಾರಕ್ಕೂ ಸಿಗುವುದಿಲ್ಲ ಎಂಬುದನ್ನು 2013ರ ಚುನಾವಣಾ ಫಲಿತಾಂಶಗಳು ಹೇಳುತ್ತಿವೆ. 1989ರ ನಂತರ ಅಂದರೆ ಮೂವತ್ತನಾಲ್ಕು ವರ್ಷಗಳ ನಂತರ ಇಷ್ಟು ದೊಡ್ಡ ಜನಾದೇಶ ಯಾವ ಪಕ್ಷಕ್ಕೂ ಸಿಕ್ಕಿರಲಿಲ್ಲ. 1989ರಲ್ಲಿ ವಿರೇಂದ್ರ ಪಾಟೀಲರ ಕಾಲದಲ್ಲಿ ಕಾಂಗ್ರೆಸ್ ಪಕ್ಷ 174ಸ್ಥಾನಗಳನ್ನು ಗೆದ್ದು ಬೀಗಿತ್ತು. ಇಷ್ಟು ವರ್ಷಗಳ ನಂತರ ಎರಡನೇ ಅತಿದೊಡ್ಡ ಗೆಲುವು ಕಾಂಗ್ರೆಸ್‌ಗೆ ಒಲಿದುಬಂದಿದೆ.
ಆಯ್ಕೆಯಾದ ಶಾಸಕರ ಸಂಖ್ಯೆ ಜನಾದೇಶದ ಪೂರ್ಣ ಚಿತ್ರ ನೀಡುವುದಿಲ್ಲ. ಅದಕ್ಕಾಗಿ ನಾವು ಶೇಕಡಾವಾರು ಮತಗಳನ್ನು ಗಮನಿಸಬೇಕಾಗುತ್ತದೆ. 1989ರ ಚುನಾವಣೆಯಲ್ಲಿ ಕಾಂಗ್ರೆಸ್ 174 ಸ್ಥಾನಗಳನ್ನು ಗೆದ್ದಿದ್ದು ಶೇ.43.7 ಮತಗಳನ್ನು ಪಡೆಯುವ ಮೂಲಕ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ.42.9ಮತಗಳನ್ನು ಪಡೆದು 135 ಸ್ಥಾನಗಳನ್ನು ಗೆದ್ದಿದೆ. ಶೇಕಡಾವಾರು ಮತಗಳಲ್ಲಿ 1989ರ ದಿಗ್ವಿಜಯಕ್ಕೂ 2013ರ ಜಯಭೇರಿಗೂ ಅಂಥ ವ್ಯತ್ಯಾಸವೇನೂ ಇಲ್ಲ.
ದೇವೇಗೌಡರು ಮುಖ್ಯಮಂತ್ರಿ ಹುದ್ದೆಗೇರಿದ 1994ರ ಚುನಾವಣೆುಂಲ್ಲಿ ಜಾ.ದಳ ಗಳಿಸಿದ್ದು ಶೇ.33.54ರಷ್ಟು ಮತಗಳು(115 ಸ್ಥಾನಗಳು). 1999ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಲು ಜನಾದೇಶ ನೀಡಿದ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದು ಶೇ.40.84ಮತಗಳು (132 ಸ್ಥಾನಗಳು). 2004ರಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ 79ಸ್ಥಾನ ಗಳಿಸಿದಾಗ ಪಡೆದಿದ್ದು ಶೇ.28.33 ಮತಗಳು ಮಾತ್ರ.2004ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ 110 ಸ್ಥಾನಗಳನ್ನು ಗಳಿಸಿದ ಬಿಜೆಪಿ ಗಳಿಸಿದ್ದು ಶೇ.33.86ರಷ್ಟು ಮತಗಳು. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಜನಾದೇಶ ದೊರೆತ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.36.6ರಷ್ಟು ಮತಗಳಿಸಿತ್ತು(122 ಸ್ಥಾನ). ಇನ್ನು 2018ರಲ್ಲಿ ಅತಂತ್ರ ವಿಧಾನಸಭೆ ನಿರ್ವಾಣವಾಗಿ ಬಿಜೆಪಿ 104 ಸ್ಥಾನಗಳನ್ನು ಪಡೆದಾಗ ಗಳಿಸಿದ್ದು ಶೇ.36.4ರಷ್ಟು ಮತಗಳು.
ಇದೆಲ್ಲವನ್ನೂ ಗಮನಿಸಿದಾಗ ಹೊಸ ಇತಿಹಾಸ ನಿರ್ವಾಣವಾಗಿರುವುದು ಸ್ಪಷ್ಟ. ಶೇ.42.9 ಮತ ಗಳಿಕೆ ಸಾಮಾನ್ಯದ್ದಲ್ಲ. 2019ರಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಜಯ ಗಳಿಸಿದ ಬಿಜೆಪಿ ಗಳಿಸಿದ್ದು ಶೇ.37.36ರಷ್ಟು ಮತಗಳು ಮಾತ್ರ.
ಕರ್ನಾಟಕದಲ್ಲಿ ಈ ಬಾರಿ ಆಡಳಿತ ವಿರೋಧಿ ಅಲೆ ಇತ್ತು ಎಂಬುದು ಸಾಧಾರಣವಾಗಿ ಎಲ್ಲರಿಗೂ ಗೊತ್ತಿತ್ತು. ಅದು ಕಣ್ಣಿಗೆ ಕಾಣುವ ಸತ್ಯವಾಗಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ದೊಡ್ಡದೊಂದು ಅಲೆಯೇ ಎದ್ದು ಬಂದಿದೆ ಎಂಬುದನ್ನು ಫಲಿತಾಂಶಗಳು ಹೇಳುತ್ತಿವೆ. ಸಾಧಾರಣವಾಗಿ ಇಂಥ ಅಲೆಗಳು ಬಂದಾಗ ಘಟಾನುಘಟಿಗಳ ತಲೆಗಳು ಉರುಳುವುದು ಸಹಜ. ಈ ಬಾರಿ ಉರುಳಿರುವ ತಲೆಗಳಾದರೂ ಸಾವಾನ್ಯದವುಗಳೇ?
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟು ಕೊಡುವ ವಿಷಯದಿಂದ ಹಿಡಿದು ಎಲ್ಲವನ್ನೂ ನಿಯಂತ್ರಿಸಿದ್ದು ಆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್. ಹೆಸರಿಗೆ ದೆಹಲಿ ಹೈಕಮಾಂಡ್ ಇದ್ದರೂ ಅಲ್ಲಿ ಸಂತೋಷ್ ಹೇಳಿದಂತೆಯೇ ಆಗಿದೆ ಎಂಬುದು ಗುಟ್ಟಿನ ವಿಷಯವೇನಲ್ಲ. ಈ ಬಾರಿಯ ಚುನಾವಣೆಯ ಸೋಲು ಸಂತೋಷ್ ಅವರಿಗೆ ಬಹಳ ದೊಡ್ಡ ಮುಖಭಂಗ. ಬಿಜೆಪಿ ಹೈಕಮಾಡ್‌ನಲ್ಲಿ ಸಹಜವಾಗಿಯೇ ಅವರ ಧ್ವನಿ ಉದುಗಿಹೋದಂತಾಗಿದೆ. ಸಂತೋಷ್ ಮಾಡಿದ ಪ್ರೋಂಗಗಳೆಲ್ಲವೂ ತಿರುಗುಬಾಣವಾಗಿವೆ. ಬಿ.ಎಸ್. ಯಡಿಯೂರಪ್ಪ ಅವರನ್ನು ತೆರೆಮರೆಗೆ ಸರಿಸಲು ಬಿಜೆಪಿ ಹೈಕವಾಂಡ್ ಮಾಡಿದ ಪ್ರಯತ್ನಗಳು ಹೀನಾಯವಾಗಿ ವಿಫಲವಾಗಿವೆ. ಈಗ ಬಿಜೆಪಿ ಒಡೆದ ಮನೆ ವಾತ್ರವಲ್ಲ, ನಾಯಕನೇ ಇಲ್ಲದ ಮನೆ. ವಿ.ಸೋಮಣ್ಣ, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಡಿ.ಸುಧಾಕರ್, ಬಿ.ಸಿ.ಪಾಟೀಲ್, ರೇಣುಕಾಚಾರ್ಯ, ಹರತಾಳು ಹಾಲಪ್ಪ ಹೀಗೆ ಸೋತು ಮನೆಗೆ ಸೇರಿದವರ ಪಟ್ಟಿ ದೊಡ್ಡದಿದೆ. ಈ ಪಟ್ಟಿಗೆ ಕಿರೀಟವಿಟ್ಟಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇಪ್ಪತ್ತು ವರ್ಷಗಳ ನಂತರ ಸೋತಿದ್ದಾರೆ.
ಯಾರ ಊಹೆಗೂ ನಿಲುಕದಂತೆ ಕಾಂಗ್ರೆಸ್ ಇಷ್ಟು ದೊಡ್ಡ ಗೆಲುವು ಸಾಧಿಸಿದ್ದಾದರೂ ಹೇಗೆ? ಬಿಜೆಪಿಗೆ ಆಪರೇಷನ್ ಕಮಲ ವಾಡಲು ಸಣ್ಣ ಅವಕಾಶವೂ ಕೊಡದಂತೆ 135 ಸ್ಥಾನಗಳವರೆಗೆ ಅದು ಏರಿದ್ದಾದರೂ ಹೇಗೆ? ಹಾಗೆ ನೋಡಿದರೆ ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿದ್ದವು. ಒಂದೆರಡು ಸಮೀಕ್ಷೆಗಳು ಕಾಂಗ್ರೆಸ್ ಗೆಲುವಿನ ಸೂಚನೆ ನೀಡಿದ್ದರೂ ದೊಡ್ಡ ಅಂತರದ ಗೆಲುವನ್ನೇನ್ನೂ ಹೇಳಿರಲಿಲ್ಲ. ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆ ವಾತ್ರ ಕಾಂಗ್ರೆಸ್ 140ರ ಹತ್ತಿರ ಬರುವ ಸಾಧ್ಯತೆ ಇದೆ ಎಂದು ಹೇಳಿತ್ತು.
ಈ ಬಾರಿ ಜನರು ಸರ್ಕಾರದ ವಿರೋಧ ಆಕ್ರೋಶ ತೋಡಿಕೊಳ್ಳುತ್ತಿದ್ದದ್ದು ನಿಜ. ಆದರೆ ಬಹಿರಂಗವಾಗಿ ಏನೂ ಹೇಳದ ಜನರೂ ಒಳಗೊಳಗೆ ಕುದಿಯುತ್ತಿದ್ದರೇನೋ. ಫಲಿತಾಂಶ ಈ ಜನರ ಸಾತ್ವಿಕ ಸಿಟ್ಟನ್ನು ಹೇಳುತ್ತಿದೆ. ಯಾರಿಗೆ ಸಿಟ್ಟಿರಲಿಲ್ಲ ಹೇಳಿ? ಎಲ್ಲರಿಗೂ ಸಿಟ್ಟಿತ್ತು. ಲಿಂಗಾಯತರಿಗೆ ಯಡಿಯೂರಪ್ಪ ಅವರನ್ನು ಮೂಲೆಗೆ ಕೂರಿಸಿದ್ದ ಸಿಟ್ಟಿತ್ತು, ಜಗದೀಶ್ ಶೆಟ್ಟರ್- ಲಕ್ಷ್ಮಣ್ ಸವದಿಯವರಿಗೆ ಟಿಕೆಟ್ ಕೊಡದೆ ಅಪಮಾನಿಸಿದ ಸಿಟ್ಟಿತ್ತು, ಚುನಾವಣೆಗೆ ಕೊನೆಯ ಗಳಿಗೆಯಲ್ಲಿ ಮುಸ್ಲಿಮರ ಮೀಸಲಾತಿಯನ್ನು ಕಿತ್ತು, ಹರಿದು ಅದರ ಒಂದು ಸಣ್ಣ ಪಾಲನ್ನು ಕೊಟ್ಟ ವಿಧಾನದ ಕುರಿತೂ ಸಿಟ್ಟಿತ್ತು, ಇನ್ನು ಒಕ್ಕಲಿಗರಿಗೆ ಉರಿಗೌಡ-ನಂಜೇಗೌಡ ಎಂಬ ಪಾತ್ರಗಳನ್ನು ಸೃಷ್ಟಿಸಿ ತಮ್ಮನ್ನು ಮುಸಲ್ಮಾನರ ವಿರುದ್ಧ ಎತ್ತಿಕಟ್ಟಲು ಯತ್ನಿಸಿದ ರೀತಿಯ ಬಗ್ಗೆ ಸಿಟ್ಟಿತ್ತು. ನಮ್ಮನವನೊಬ್ಬ (ಡಿ.ಕೆ.ಶಿವಕುವಾರ್) ಮುಖ್ಯಮಂತ್ರಿಯಾಗಬಹುದೆಂಬ ಆಸೆಯೂ ಇತ್ತು.
ಒಳಮೀಸಲಾತಿಗೆ ಕೈಹಾಕಿ ಬಿಜೆಪಿ ದಲಿತ ಸಮೂಹದ ಎಲ್ಲ ಜಾತಿಯವರ ಸಿಟ್ಟಿಗೂ ಗುರಿಯಾಯಿತು. ಕೇಂದ್ರ ಸರ್ಕಾರದಿಂದ ಇನ್ನೂ ಒಪ್ಪಿಗೆ ಸಿಗದೆ ಜಾರಿಯೇ ಆಗದ ಹೆಚ್ಚುವರಿ ಮೀಸಲಾತಿಯನ್ನೂ ಸೇರಿಸಿ ಒಳಮೀಸಲಾತಿ ಹಂಚಿಕೆ ವಾಡಿದ ಬಿಜೆಪಿ ಸರ್ಕಾರ ಎಲ್ಲರ ವಿಶ್ವಾಸ ಗಳಿಸಿಕೊಳ್ಳುವ ಆಸೆಯಲ್ಲಿತ್ತು. ಆದರೆ ಎಡಗೈ, ಬಲಗೈ, ಬೋವಿ, ಬಂಜಾರ ಮತ್ತಿತರ ಎಲ್ಲ ಸಮುದಾಯಗಳೂ ಸಿಟ್ಟಿಗೆದ್ದವು.
ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ ಅದು ಬಿಜೆಪಿಯ ಹಾರ್ಡ್‌ಕೋರ್ ಕೋಮುವಾದಿ ಅಜೆಂಡಾಗಳಿಗೆ ಕೈ ಇಡುತ್ತಿರಲಿಲ್ಲ. ಆದರೆ ಈ ಬಾರಿ ಹಾಗಾಗಲಿಲ್ಲ. ಯಡಿಯೂರಪ್ಪನವರ ಸಣ್ಣ ಅವಧಿ ಮತ್ತು ಬೊಮ್ಮಾಯಿುಯವರ ಮೂರು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ವಿಭಜಕ ರಾಜಕಾರಣಕ್ಕೆ ಕೈ ಹಾಕಿತು. ಬೊಮ್ಮಾಯಿುಯವರ ಅವಧಿಯಲ್ಲಿ ಇದು ಅತಿರೇಕಕ್ಕೆ ಏರಿತು. ಮತಾಂತರ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ಕಾಯ್ದೆಗಳಲ್ಲಿ ಬಿಜೆಪಿ ಸರ್ಕಾರದ ಮುಸ್ಲಿಂ ದ್ವೇಷ ಎದ್ದು ಕಾಣುತ್ತಿತ್ತು. ಇದಕ್ಕಿಂತ ಘೋರವೆಂದರೆ ಬೊವ್ಮಾಯಿ ಸರ್ಕಾರ ಕೆಲವು ಕೋಮುವಾದಿ ಸಂಘಟನೆಗಳಿಗೆ, ನಾಡಿನಾದ್ಯಂತ ಶಾಂತಿ ಕದಡುವ, ಕೋಮು ಸಂಘರ್ಷ ನಡೆಸುವ ಬಲಪಂಥಿಯ ಶಕ್ತಿಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದು! ಬೊಮ್ಮಾಯಿುಯವರ ಕೃಪಾಶೀರ್ವಾದದಿಂದಲೇ ರಾಜ್ಯದಲ್ಲಿ ಹಿಜಾಬ್ ವಿವಾದ ಅತಿರೇಕಕ್ಕೇರಿತು. ಮುಸ್ಲಿಂ ಹೆಣ್ಣುಮಕ್ಕಳನ್ನು ಶಿಕ್ಷಣವಂಚಿತರನ್ನಾಗಿ ವಾಡುವ ಹೀನ ಹುನ್ನಾರ ನಡೆದುಹೋಯಿತು. ಹಿಂದೂಗಳು ಹಲಾಲ್ ವಾಂಸ ತಿನ್ನಬಾರದು ಎಂಬ ಅಭಿಯಾನವನ್ನು ನಡೆಸಲಾಯಿತು. ಬೊವ್ಮಾಯಿ ಸರ್ಕಾರ ನೋಡಿಕೊಂಡು ಸುಮ್ಮನಿತ್ತು. ಮುಸ್ಲಿಮರು ಮಸೀದಿಗಳಲ್ಲಿ ಆಜಾನ್ ಕೂಗಬಾರದು ಎಂಬ ಅಭಿಯಾನವೂ ನಡೆಯಿತು. ಸರ್ಕಾರ ತುಟಿ ಎರಡು ವಾಡಲಿಲ್ಲ. ಬಿಜೆಪಿ ನಾಯಕರು ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಲೇ ಬಂದರು.
ಇದೆಲ್ಲವನ್ನೂ ನೋಡುತ್ತಿದ್ದ ಮುಸ್ಲಿಂ ಸಮುದಾಯ ಈ ಬಾರಿ ತುಂಬ ಪ್ರಜ್ಞಾಪೂರ್ವಕವಾಗಿ ಬಿಜೆಪಿ ವಿರುದ್ಧ ಮತ ಚಲಾಯಿಸಿದೆ. ಅದರ ಪರಿಣಾಮವನ್ನು ಚುನಾವಣೆಯಲ್ಲಿ ನೋಡುತ್ತಿದ್ದೇವೆ. ಮುಸ್ಲಿಮರು ಹಿಂದೆ ಬಿಜೆಪಿಗೆ ಮತ ಚಲಾಯಿಸುತ್ತಿರಲಿಲ್ಲ ಎಂದೇನಿಲ್ಲ. ಹಲವೆಡೆ ಆಯಾ ಭಾಗದ ಶಾಸಕರ ವರ್ಚಸ್ಸು ಮತ್ತು ಒಡನಾಟದ ಕಾರಣದಿಂದ ಮುಸ್ಲಿಮರ ಒಂದಷ್ಟು ಮತಗಳು ಬಿಜೆಪಿಗೆ ಹೋಗುತ್ತಿದ್ದವು. ಆದರೆ ಈ ಬಾರಿ ಹೀಗೆ ಆಗಲಿಲ್ಲ. ನಮಗೆ ಮುಸ್ಲಿಮರ ಮತ ಸಿಗದೇ ಹೋದ್ದರಿಂದ ಸೋತೆವು ಎಂದು ಸಿ.ಪಿ.ಯೋಗೀಶ್ವರ್ (ಚನ್ನಪಟ್ಟಣ), ಪ್ರೀತಂ ಗೌಡ (ಹಾಸನ) ಬಹಿರಂಗವಾಗಿಯೇ ಹೇಳಿಕೊಂಡರು. ಆದರೆ ಸೋತ ಬಹಳಷ್ಟು ಶಾಸಕರು ಖಾಸಗಿಯಾಗಿ ಇದನ್ನೇ ಹೇಳಿಕೊಳ್ಳುತ್ತಿದ್ದಾರೆ. ನಮಗೆ ಮುಸ್ಲಿಮರ ಮತ ಬೇಡ ಎಂದು ಬಸನಗೌಡ ಪಾಟೀಲ ಯತ್ನಾಳ, ಅನಂತ ಕುವಾರ್ ಹೆಗಡೆ, ಕೆ.ಎಸ್.ಈಶ್ವರಪ್ಪ ಅಂಥವರು ಪದೇಪದೇ ಹೇಳುತ್ತಿದ್ದರೂ ಬಿಜೆಪಿಗೆ ಮುಸ್ಲಿಮರ ಮತಗಳೇನು ನಿಂತಿರಲಿಲ್ಲ. ಈ ಬಾರಿ ಹಾಗೆ ಆಗಿಲ್ಲ, ನಮಗೆ ಬಿಜೆಪಿ ಬೇಡ ಎಂದು ಅವರು ನಿರ್ಧರಿಸಿದ್ದಾರೆ.
ಬಿಜೆಪಿ ಹೀಗೆ ಮೈತುಂಬ ಗಾಯ ಮಾಡಿಕೊಂಡು ಒದ್ದಾಡುತ್ತಿರುವಾಗ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುವಾರ್ ಜಂಟಿ ನಾಯಕತ್ವದಲ್ಲಿ ಹುಮ್ಮಸ್ಸಿನಿಂದ ಚುನಾವಣೆಗೆ ಹೊರಟಿತ್ತು. ಕಾಂಗ್ರೆಸ್ ಪಕ್ಷ ತನ್ನ ಮಡಿವಂತಿಕೆ ಬಿಟ್ಟು ಪ್ರಚಾರದಲ್ಲಿ ಹೊಸತನ ತಂದುಕೊಂಡಿತ್ತು. ಬಡವರ ಪಾಲಿಗೆ ಸಂಜೀನಿಯಾಗಬಹುದಾದ ಐದು ಗ್ಯಾರಂಟಿಗಳನ್ನು ನೀಡಿ ಜನರನ್ನು ಒಲಿಸಿಕೊಳ್ಳಲು ಯಶಸ್ವಿಯಾಯಿತು. ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್ ಸರ್ಕಾರ ಎಂದು ಕರೆದಿದ್ದಲ್ಲದೆ, ಅದನ್ನು ಪದೇಪದೇ ಹೇಳಿಹೇಳಿ ಜನರ ಮನಸಲ್ಲಿ ಬೇರೂರುವಂತೆ ವಾಡಿತು. ಬಿಜೆಪಿ ಶರಣಾಗುವ ಮುನ್ನ ಕಡೆಯ ಪ್ರಯತ್ನವೆಂಬಂತೆ ಚುನಾವಣಾ ಪ್ರಚಾರಕ್ಕೆ ನರೇಂದ್ರ ಮೋದಿಯವರನ್ನು ಒಂದು ವಾರದ ಮಟ್ಟಿಗೆ ಕರೆತಂದು ಹಿಂದೆಂದೂ ಕಾಣದಂಥ ಅಬ್ಬರದ ಪ್ರಚಾರ ನಡೆಸಿತು. ಆದರೆ ಜನ ನಿರ್ಧಾರ ಮಾಡಿಯಾಗಿತ್ತು. ನರೇಂದ್ರ ಮೋದಿಯವರಿಗೆ ಕೈ ಬೀಸಿ ಬಂದ ಜನರು ಇವಿಎಂನಲ್ಲಿ ಕೈಗೆ ಮತ ಒತ್ತಿದರು.
ಸ್ವತಃ ಕಾಂಗ್ರೆಸ್ ಮುಖಂಡರೇ ಇಂಥದ್ದೊಂದು ದೊಡ್ಡ ಗೆಲುವನ್ನು ನಿರೀಕ್ಷಿಸಿರಲಿಲ್ಲವೇನೋ? ದೊಡ್ಡ ಗೆಲುವುಗಳು ಯಾವಾಗಲೂ ದೊಡ್ಡ ಸವಾಲುಗಳನ್ನು ಮುಂದೊಡ್ಡುತ್ತವೆ, ದೊಡ್ಡ ಜವಾಬ್ದಾರಿಗಳನ್ನು ಹೇರುತ್ತದೆ. ಸಿದ್ದರಾಮಯ್ಯ-ಡಿ.ಕೆ.ಶಿವಕುವಾರ್ ಜೋಡಿ ಈ ದೊಡ್ಡ ಗೆಲುವಿನ ಜವಾಬ್ದಾರಿ ಹೊತ್ತು ಸಫಲರಾಗುವರೇ? ಕಾದು ನೋಡಬೇಕು.