Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಜಗತ್ತಿಗೆ ಜ್ಞಾನದ ದೀವಿಗೆ ಹಚ್ಚಿದ ಬುದ್ಧ

  • ಆರ್.ಮಹದೇವಪ್ಪ, ಪ್ರಗತಿಪರ ಚಿಂತಕರು, ಮೈಸೂರು

ಜಗತ್ತಿನಲ್ಲಿರುವ ಪ್ರತಿಯೊಂದೂ ವಸ್ತುವೂ ಬದಲಾವಣೆಗೆ ಒಳಗಾಗಿ ತನ್ನ ಆಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಅಂದರೆ ಮರ-ಗಿಡ-ಬಳ್ಳಿ, ಪ್ರಾಣಿ-ಪಕ್ಷಿ, ನದಿ, ಬೆಟ್ಟ, ಸರೋವರ ಹೀಗೆ ವಸ್ತು ವಿಷಯಗಳೆಲ್ಲವೂ ಅಶಾಶ್ವತ. ಪ್ರತಿಯೊಂದೂ ಸ್ವತಂತ್ರವಲ್ಲ, ಒಂದು ಮತ್ತೊಂದನ್ನು ಅವಲಂಬಿಸಿದೆ. ಒಂದರ ಅಸ್ತಿತ್ವ ಮತ್ತೊಂದನ್ನು ಅವಲಂಬಿಸಿದೆ. ಇದು ಜಗದ ನಿಯಮ ಮತ್ತು ಸಾರ್ವತ್ರಿಕ ಸತ್ಯ. ಯಾವುದೇ ವಿಷಯ ವಸ್ತುವಿನ ಬೆಳವಣಿಗೆಗೆ ಕಾರಣಗಳಿವೆ. ಹುಟ್ಟು, ಬೆಳವಣಿಗೆ, ಸಾವು ಇವು ಕಾರಣಗಳಿಲ್ಲದೆ ಯಾವುದೂ ಗತಿಸುವುದಿಲ್ಲ. ಇವು ಸಾರ್ವಕಾಲಿಕ ಸತ್ಯಗಳು. ಈ ಜಗತ್ತು ಹೇಗೆ ಸೌಂದರ್ಯದಿಂದ ಕೂಡಿದೆಯೋ ಹಾಗೆಯೇ ದುಃಖದಿಂದಲೂ ತುಂಬಿದೆ. ದುಃಖವಿದೆ, ದುಃಖಕ್ಕೆ ಕಾರಣವಿದೆ. ದುಃಖ ಪರಿಹಾರ ಸಾಧ್ಯವಿದೆ ಮತ್ತು ದುಃಖಕ್ಕೆ ಪರಿಹಾರ ಮಾರ್ಗವಿದೆ ಎಂದು ತನ್ನ ಧ್ಯಾನದ ಮೂಲಕ ಕಂಡುಕೊಂಡ ಮೊಟ್ಟ ಮೊದಲ ಮಹನೀಯ, ತಪಸ್ಸಿನ ಮೂಲಕ ಮೋಕ್ಷ ಪಡೆಯಬೇಕು, ಸ್ವರ್ಗಪ್ರಾಪ್ತಿಗಾಗಿ ತಪ್ಪಸ್ಸು ಮಾಡಬೇಕು, ಸ್ವರ್ಗದಲ್ಲಿ ಸ್ಥಾನ ಪಡೆಯಬೇಕೆಂಬ ಋಷಿಗಳ ಮೌಢ್ಯ ನಿವಾರಣೆ ಮಾಡಿದ ಮಹಾನುಭಾವ, ಸ್ವರ್ಗ-ನರಕಗಳ ಕಲ್ಪನೆಯನ್ನು ಹರಿದುಹಾಕಿ ವಾಸ್ತವಿಕ ಪ್ರಾಪಂಚಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದವ, ಅಜ್ಞಾನದಿಂದ ಪರಿತಪಿಸುತ್ತಿದ್ದ, ವ್ಯಕ್ತಿ ಮತ್ತು ಸಮಾಜಕ್ಕೆ ಸುಜ್ಞಾನ ದೀವಿಗೆಯನ್ನು ನೀಡಿದ, ಆತ್ಮ ಪರಮಾತ್ಮ, ದೇವರ ಕಲ್ಪನೆಯನ್ನು ನಿರಾಕರಿಸಿ, ಪ್ರೀತಿ-ಕರುಣೆ, ಮೈತ್ರಿಯನ್ನು ಜಗಕ್ಕೆ ಸಾರಿದ ಮೊದಲ ಗುರು ಎನಿಸಿದ ವ್ಯಕ್ತಿಯನ್ನು ಕೇಂದ್ರೀಕರಿಸಿ, ಬೋಧಿಸಿದ ಬುದ್ಧನ ಬೋಧನೆಗಳು ವ್ಯಕ್ತಿಯ ಬದಲಾವಣೆಗೆ ಕಾರಣೀಭೂತವಾಗಿ ಸಮಾಜದ ಆರೋಗ್ಯಕರ ಸ್ಥಿತಿ ಮತ್ತು ಬೆಳವಣಿಗೆಗೆ ಕಾರಣಗಳಾಗಿವೆ.

ವ್ಯಕ್ತಿಯ ಲೋಭ, ಮೋಹ, ದ್ವೇಷಗಳು ಎಲ್ಲ ಸಂಘರ್ಷಕ್ಕೆ ಮೂಲ. ಸಂಘರ್ಷ ಕೊನೆಗಾಣಲು ತನ್ನಲ್ಲಿರುವ ಮಾನಸಿಕ ಕೊಳಕನ್ನೂ ತೊಳೆದುಕೊಂಡು ಮನುಷ್ಯ ಪರಿಶುದ್ಧನಾಗಬೇಕು ಎಂದು ಜಗಕ್ಕೆ ತಿಳಿಸಿದ ಮಹಾ ಮಾನತವಾದಿ ಬುದ್ಧ. ವ್ಯಕ್ತಿ ಪರಿಶುದ್ಧನಾದರೆ ಯುದ್ಧ, ಭಯೋತ್ಪಾದನೆ, ಕೊಲೆ, ಸುಲಿಗೆ, ವ್ಯಭಿಚಾರದಂತಹ ವಿಧ್ವಂಸಕ ಕೃತ್ಯಗಳು ನಿಲ್ಲುತ್ತವೆ. ಇದರಿಂದ ಸಮಾಜ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗುತ್ತದೆ. ಕತ್ತಲೆ-ಬೆಳಕು ಜತೆಯಲ್ಲಿರುವಂತೆ ಪ್ರೀತಿ-ದ್ವೇಷಗಳೂ ಜತೆಯಲ್ಲೇ ಇರುತ್ತವೆ. ಪ್ರೀತಿ, ದ್ವೇಷ ಇವು ಮಾನಸಿಕ ಉತ್ಪನ್ನಗಳು. ಇದಕ್ಕೆ ಮನಸ್ಸಿನ ನಿಯಂತ್ರಣ ಮುಖ್ಯ. ಮನಸ್ಸು ದ್ವೇಷದ ಕಡೆ ವಾಲದಂತೆ ನೋಡಿಕೊಳ್ಳುವ ಜವಾಬ್ದಾರಿ ಅತಿ ಮುಖ್ಯವಾದದ್ದು ಎಂಬುದಕ್ಕೆ ಬುದ್ಧನ ಆರ್ಯ ಅಷ್ಟಾಂಗ ಮಾರ್ಗವೇ ಮದ್ದು.

ಪ್ರೀತಿ, ಕರುಣೆಯ ಮತ್ತೊಂದು ಹೆಸರೇ ಬುದ್ಧ. ಪ್ರೀತಿಯನ್ನು ತೋರಿಸುವುದು ಹೇಗೆ? ಅದನ್ನು ವ್ಯಕ್ತಪಡಿಸುವ ವಿಧಾನ ಯಾವುದು? ಒಬ್ಬೊಬ್ಬರನ್ನು ನೋಡಿದಾಗ ಒಂದೊಂದು ರೀತಿಯ ಪ್ರೀತಿಯನ್ನು ವ್ಯಕ್ತಪಡಿಸುತ್ತೇವೆ. ಸ್ವದೇಶದವರು ಪ್ರತಿಯೊಂದಕ್ಕೂ ಹೀಗೆ ಗೆರೆ ಹಾಕಿಕೊಂಡು ಬದುಕುತ್ತಿದ್ದೇವೆ. ದಾರಿಯಲ್ಲಿ ಹೋಗುವವರನ್ನು ಭೇಟಿಯಾದಾಗ ಇತರೆ ಬಂಧುಗಳನ್ನು ನೋಡಿದಾಗ, ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಓಡಿಹೋಗಿ ಹೇಳಲು ಸಾಧ್ಯವೇ? ಪ್ರೀತಿಯನ್ನು ವ್ಯಕ್ತಪಡಿಸುವ ಮಾರ್ಗ ಬೇರೆ-ಬೇರೆಯಾಗಿರುತ್ತದೆ. ತಾಯಿಯಾದವಳು ಮಗುವನ್ನು ನೋಡಿಕೊಳ್ಳುತ್ತಾಳೆ, ಆರೈಕೆ ಮಾಡುತ್ತಾಳೆ, ಅಲ್ಲಿ ಪ್ರೀತಿ ವ್ಯಕ್ತವಾಗುತ್ತದೆ. ಪ್ರೇಮಿಗಳು ಪರಸ್ಪರ ಪ್ರೀತಿಸುತ್ತಾರೆ. ತವರು ಮನೆಯಲ್ಲಿ ತೋರುವ ಪ್ರೀತಿ ಗಂಡನ ಸಂಬಂಧಕರು ಬಂದಾಗ ಅಷ್ಟೊಂದು ವ್ಯಕ್ತವಾಗುವುದಿಲ್ಲ. ಈ ಮಾನಸಿಕ ನಡವಳಿಕೆಗಳು ಘಟಿಸುವುದು ಮಾನವನ ಸಹಜ ಗುಣವೂ ಹೌದು. ಈ ಪ್ರೀತಿಯ ಪ್ರತ್ಯೇಕ ತಾಣ, ಗುಣಗಳು ಆಯಾ ಸಂಸ್ಕ ತಿಗಳಲ್ಲಿಯೇ ಮಿಳಿತವಾಗಿವೆ. ಬಾಲ್ಯದಿಂದಲೇ ಈ ಎಲ್ಲದರ ಬಗ್ಗೆ ತರಬೇತಿಯಾಗಿರುತ್ತದೆ. ಸಾರ್ವತ್ರಿಕವಾದ ಪ್ರೀತಿಯನ್ನು ಸರ್ವರಲ್ಲೂ ವ್ಯಕ್ತಪಡಿಸಲಾಗದೇ ದ್ವೇಷ, ಅಸೂಯೆಯಿಂದ ವರ್ತಿಸುತ್ತ ಬದುಕುತ್ತಿದ್ದೇವೆ. ಆದರೆ ನೀರು, ಗಾಳಿ, ಬೆಂಕಿ ಸರ್ವರನ್ನೂ ಸಮಾನವಾಗಿ ನೋಡಿಕೊಳ್ಳುತ್ತವೆ. ಇವಕ್ಕೆ ತನ್ನವರು-ಬೇರೆಯವರು, ಪರಕೀಯರೆನ್ನುವ ಸ್ವಭಾವವಿಲ್ಲ. ಇಂತಹ ಗುಣವನ್ನು ಬುದ್ಧನಲ್ಲಿ ಮಾತ್ರ ಕಾಣಲು ಸಾಧ್ಯ.

ಬುದ್ಧನ ದರ್ಶನದಿಂದ ಬದುಕಿನ ಮಾರ್ಗ, ಸತ್ಯ, ಸತ್ಯದ ದರ್ಶನ, ಧೈರ್ಯ, ದೃಢತೆ, ಪ್ರೀತಿ, ತ್ಯಾಗ, ಮನಸ್ಥೆ ರ್ಯ, ಸ್ವಾವಲಂಬನೆ, ಅನುರಾಗ ಅರಳಿರುವ ಕೆಲವು ಘಟನೆಗಳು ಹೀಗಿವೆ. ಆ ಕಾಲದ ಸುರಸುಂದರಿ ರಾಜಮಹಾರಾಜರೆನ್ನದೆ ಚಕ್ರವರ್ತಿಗಳೂ ಅವಳ ಸಂಗವ ಸೇರಲು ಕಾತರರಾಗಿ ತನ್ನತನವನ್ನೇ ಕಳೆದುಕೊಂಡು ಅವಳ ಗುಲಾಮರಾಗಲು ಹಾತೊರೆಯುತ್ತಿದ್ದರು. ಅವಳೇ ಮಹಾನರ್ತಕಿ ಆಮ್ರಪಾಲಿ. ಬುದ್ಧನನ್ನು ನೋಡಿದೊಡನೆ ಮನಸೋತು, ಕೇಳು ಗುರುವೇ ಏನು ಬೇಕು? ನನ್ನ ಐಶ್ವರ್ಯವೇ? ನನ್ನದೇಹ ಸೌಂದರ್ಯವೇ? ಏನು ಬೇಕು ಕೇಳು ನನ್ನೊಡಯನೇ ಎಂದು ಭಿನ್ನವಿಸಿಕೊಂಡಾಗ, ಬುದ್ಧನು ಇದಕ್ಕೆ ಪ್ರತಿಕ್ರಿಯಿಸಿ ನಿನ್ನ ಐಶ್ವರ್ಯ, ಸೌಂದರ್ಯ ಇವುಗಳೇನೂ ಬೇಡ. ಆದರೆ ನಿನ್ನ ಮನಸ್ಸನ್ನು ಕೊಡು ಎಂದು ಕೇಳಿದಾಕ್ಷಣ ಒಂದು ಕ್ಷಣ ಕೊಲ್ಮಿಂಚಿನಂತಾಗಿ, ಕಾಲಿಗೆರಗಿ, ಓ ತಂದೆಯೇ ‘ಎಲ್ಲರೂ ನನ್ನ ದೇಹವನ್ನು ಕೇಳುತ್ತಿದ್ದರು. ನೀನು ನನ್ನ ಮನಸ್ಸನ್ನು ಕೇಳುತ್ತಿರುವೆ? ಕೊಡುತ್ತೇನೆ ಪ್ರಭು ಕೊಡುತ್ತೇನೆ’ ಎಂದು ಹೇಳಿ; ತನ್ನೆಲ್ಲ ಸುಖ, ಭೋಗ, ಐಶ್ವರ್ಯಗಳೆಲ್ಲವನ್ನೂ ತೊರೆದು ಬುದ್ಧನ ಅನುಯಾಯಿಯಾಗುತ್ತಾಳೆ. ಇದು ಸಾಮಾನ್ಯ ವಿಷಯವೇನಲ್ಲ. ದ್ವೇಷದಿಂದ ಕುದಿಯುತ್ತಾ, ಕೊಲೆಯೇ ಉಸಿರಾಗಿ, ಕ್ರೌರ್ಯವೇ ಬದುಕಾಗಿ, ಜನರ ಬದುಕಿಗೆ ಭಯೋತ್ಪಾದಕನಾಗಿ, ಹೆಸರು ಕೇಳಿದರೆ ಸಾಕು ತಲ್ಲಣಗೊಳಿಸುತ್ತಿದ್ದ ಅಂಗುಲಿಮಾಲನಿಗೆ ನಿಲ್ಲು ಕಂದ ನಿಲ್ಲು, ದುಡುಕಬೇಡ ಎಂದು ಹೇಳಿ, ಹಾವಾಡಿಗನ ಪುಂಗಿಯಂತಾಗಿ ತನ್ನ ಕರುಣೆ-ಪ್ರೀತಿಯಿಂದ ಬದಲಿಸಿದ ಬುದ್ಧನ ಮೈತ್ರಿಯ ಗುಣಗಳನ್ನು ಜಗತ್ತಿನಲ್ಲಿ ಯಾರಿಗೂ ಹೋಲಿಸಲು ಸಾಧ್ಯವಿಲ್ಲ. ಮೌಢ್ಯವೇ ಮೈದಾಳಿ ತನ್ನ ಕುರುಡು ನಂಬಿಕೆಗಳಿಂದ, ಅಜ್ಞಾನಗಳಿಂದ ಅಗ್ನಿ ಪೂಜೆ, ಯಜ್ಞ ಯಾಗಾದಿಗಳನ್ನು ಮಾಡಿ ತನ್ನೆಡೆಗೆ ನೂರಾರು ಅನುಯಾಯಿಗಳನ್ನು ಆಕರ್ಷಿಸಿ ಪ್ರಾಣಿ ಬಲಿ, ಕಾಡಿನ ನಾಶ, ಪರಿಸರ ನಾಶಕ್ಕೆ ಕಾರಣೀಭೂತರಾದ ‘ಕಶ್ಯಪ’ ಸಹೋದರರನ್ನು ತನ್ನ ಸುಜ್ಞಾನದ ಮೂಲಕ ಜ್ಞಾನದೆಡೆಗೆ ಕರೆದೊಯ್ದು, ಅರಹಂತರೆನಿಸಲು ಕಾರಣರಾದ ಬುದ್ಧನ ಮಹಿಮೆಯನ್ನು ಬಣ್ಣಿಸಲು ಸಾಧ್ಯವಿಲ್ಲ.

ಸ್ತ್ರೀ ಲೋಲುಪನಾಗಿ ಭೋಗವಿಲಾಸದಲ್ಲಿ ಮುಳುಗಿದ್ದ ಶ್ರೀಮಂತಕುಮಾರ ‘ಯಶ’ ಮಧ್ಯರಾತ್ರಿಯಲ್ಲಿ ತನ್ನ ಗೆಳೆಯರೊಂದಿಗೆ ನೃತ್ಯ, ಮೋಜು ಮಾಡುತ್ತಿದ್ದವರ ಮಲಗಿದ್ದ ಸ್ಥಿತಿಯನ್ನು ನೋಡಿ ಜುಗುಪ್ಸೆಪಡುತ್ತಾನೆ. ಕುಡಿದ ಮತ್ತಿನಲ್ಲಿ ಪ್ರಜ್ಞೆ ಇಲ್ಲದೆ ಬಟ್ಟೆಬರೆ ಅಸ್ತವ್ಯಸ್ತವಾಗಿದ್ದು, ತಲೆಕೆದರಿಕೊಂಡು ಬಾಯಿಯಲ್ಲಿ ಜೊಲ್ಲು ಸೋರಿಸುತ್ತಾ ವಿಕಾರವಾಗಿ ಮಲಗಿದ್ದ ಗೆಳತಿಯರನ್ನು ನೋಡಿ; ಈ ಜಗತ್ತೇ ಕೊಳಕು, ಅಸಹ್ಯ, ಅಸಹನೀಯ, ಹೊಲಸು ಎಂದು ಜುಗುಪ್ಸೆಯಿಂದ ಹೊರಬಂದು ಅದನ್ನೇ ತೊದಲುತ್ತಾ, ತೊಳಲಾಡುತ್ತಾ ಬರುತ್ತಿದ್ದ ‘ಯಶ’ನಿಗೆ ಕೊಳಕಿನ ಜತೆ ಸೌಂದರ್ಯ, ಸಂತೋಷವೂ ಇದೆ ನೋಡು ಬಾ! ಮುಂಜಾನೆಯ ಸೂರ್ಯಕಿರಣ, ಅರಳುತ್ತಿರುವ ಹೂವು, ಮನಮೋಹಕವಾದ ಹೂ-ಬಳ್ಳಿಗಳು, ಝೇಂಕರಿಸುತ್ತಿದ್ದ ದುಂಬಿಗಳ ನಾದ, ಜುಳುಜುಳು ಎಂದು ಹರಿಯುವ ನದಿ, ಹಸಿರು ವನವನ್ನು ತೋರಿಸಿ, ಜೀವನದಲ್ಲಿ ಜೀವರಸವನ್ನು ತುಂಬುತ್ತಾನೆ. ಬಾ ಗೆಳೆಯ ನನ್ನೊಡನೆ ಬದುಕನ್ನು ಅನುಭವಿಸು ಎಂದು ಅವನಿಗೆ ಮಾರ್ಗದಾತನೆನಿಸುತ್ತಾನೆ.

ಕಸ ಗುಡಿಸುವ ಸುನಿತಾನನ್ನು ಓಡ್ಹೋಗಿ ಅಪ್ಪಿಕೊಂಡು ಅವನನ್ನು ಸಂತೈಸಿ, ಮೈದಡವಿ ನನ್ನೊಂದಿಗೆ ಬರುವೆಯಾ? ಎಂದು ಪ್ರೀತಿಯಿಂದ ಕರೆದುಕೊಂಡು ಹೋಗಿ, ಸಂಘದಲ್ಲಿ ಸ್ಥಾನನೀಡಿ ಅರಹಂತನಾಗುವಂತೆ ಮಾಡಿದ ಮಹಾಪುರುಷ. ಮಗುವನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಮುಳುಗಿ ಅಸಹಾಯಕ ಸ್ಥಿತಿಯಲ್ಲಿದ್ದ ಕಿಸಾಗೋತಮಿಗೆ ತೇಲುವ ತೆಪ್ಪವಾಗುತ್ತಾನೆ. ದುಃಖದ ಸ್ಥಿತಿಯಲ್ಲಿ ಶಕ್ತಿ ನೀಡುವ ಮನಸ್ಥೈರ್ಯ ಕೊಡುವ, ಸಾಂತ್ವನ ಹೇಳುವ ಬುದ್ಧನ ಮಾತುಗಳು ನೊಂದ ಜನರಿಗೆ ಪರಿಹಾರ ಕಲ್ಪಿಸುವ ಆಶ್ರಯ ತಾಣಗಳಾಗಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ