ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ ನಡೆಯುತ್ತಿರುವ ತನಿಖೆ. ಇಲ್ಲಿ ಅನೇಕ ಬಲಿಷ್ಠ ನಾಯಕರ ಕೈವಾಡವಿದೆ. ಹೀಗಾಗಿ ಸಿಬಿಐ ತನಿಖೆ ನಡೆಸುವವರೆಗೂ ಹೋರಾಟ ಮುಂದುವರೆಸುತ್ತೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ, ಮುಡಾ ಪ್ರಕರಣ ಸಂಬಂಧ ಮುಡಾ ಕಚೇರಿ ಮೇಲೆ ಇಡಿ ದಾಳಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ನೀಡಿದ ದೂರಿನ ಆಧಾರದ ಮೇರೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದು ಸತ್ಯಕ್ಕೆ ಸಿಕ್ಕ ಜಯ. ನನ್ನ ಹೋರಾಟಕ್ಕೆ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಇಡಿ ಅಧಿಕಾರಿಗಳಿಗೆ 50:50 ಅನುಪಾತದ ಬದಲಿ ನಿವೇಶನಗಳ ಅನೇಕ ದಾಖಲೆಗಳನ್ನು ಕೊಟ್ಟಿದ್ದೆ. ಇವುಗಳಿಗೆ ಪೂರಕವಾಗಿ ದಾಖಲೆಗಳನ್ನು ಸಂಗ್ರಹಿಸಲು ಮುಡಾ ಕಚೇರಿಗೆ ಭೇಟಿ ನೀಡಿದ್ದಾರೆ. ಹೀಗಾಗಿ ಇದು ನನ್ನ ಹೋರಾಟಕ್ಕೆ ಹಾಗೂ ಸತ್ಯಕ್ಕೆ ಸಿಗುತ್ತಿರುವ ಜಯವಾಗಿದೆ ಎಂದು ಹೇಳಿದರು.
ಮುಡಾದಲ್ಲಿ ಹಗರಣ ನಡೆದಿದೆ ಎಂದು ದೂರು ನೀಡಲು ಹೋದಾಗ ನನ್ನನ್ನು ನೋಡಿ ವ್ಯಂಗ್ಯವಾಡಿದ್ದರು. ಅಲ್ಲದೇ, ಈ ಪ್ರಕರಣ ಇ.ಡಿ.ವ್ಯಾಪ್ತಿಗೆ ಬರುವುದಿಲ್ಲವೆಂಬಂತೆ ಮಾತನಾಡಿದ್ದರು. ಆದರೆ, ಇದೀಗ ಇ.ಡಿ.ಅಧಿಕಾರಿಗಳು ಮುಡಾದ ದಾಖಲೆಗಳನ್ನು ಶೋಧ ಮಾಡುತ್ತಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ನನ್ನ ಗೆಲುವು ನಿಶ್ಚಿತ ಎಂದರು.