Light
Dark

ಬ್ರಿಕ್ಸ್’ ದೇಶಗಳು, ಅವಕಾಶಗಳು ಮತ್ತು ಸವಾಲುಗಳು

-ಪ್ರೊ.ಆರ್.ಎಂ.ಚಿಂತಾಮಣಿ

ಚೀನದ ವಿಸ್ತರಣಾವಾದಿ ಧೋರಣೆ, ಹಠಮಾರಿತನ ಬ್ರಿಕ್ಸ್ ಬೆಳವಣಿಗೆಗೆ, ಜಾಗತಿಕ ಸಹಕಾರಕ್ಕೆ ತಡೆಯೊಡ್ಡುತ್ತಿದೆ

ದಶಕಗಳಿಂದ ಮುಂದುವರಿಯುತ್ತಿರುವ ಚೀನ- ಭಾರತ ಗಡಿ ಸಮಸ್ಯ ಮತ್ತು ಘರ್ಷಣೆಗಳಿಗೆ ಒಂದು ತಾರ್ಕಿಕ ಅಂತ್ಯ ಕಂಡು ಹಿಡಿಯಬೇಕಾಗಿದೆ. ಚೀನ ತನ್ನ ನೆರೆ ಹೊರೆಯ ಸಣ್ಣ ದೇಶಗಳೊಡನೆ ತನ್ನ ಅತಿಕ್ರಮಣ ಪ್ರವೃತ್ತಿ ತೋರಿಸುತ್ತಿರುವದು ಮತ್ತು ಸಾಗರ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವುದು ಅದರ ಹೊಂದಾಣಿಕೆ ಮನಸ್ಥಿತಿಯನ್ನು ಪ್ರಶ್ನಿಸುವ ಸ್ಥಿತಿ ಒದಗಿದೆ. ಉಕ್ರೇನ ಮೇಲೆ ರಶಿಯದ ಆಕ್ರಮಣ ಮತ್ತು ನಾಲ್ಕು ತಿಂಗಳಿಂದ ಶಾಂತಿ ಪ್ರಿಯತೆಯನ್ನೆ ಪ್ರಶ್ನಿಸುವಂತಾಗಿದೆ. ಇದು ಬ್ರಿಕ್ಸ್ ನಿರ್ಧಾರಗಳಿಗೆ ವ್ಯತಿರಿಕ್ತವಾಗಿದ್ದು, ಅದರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುವಂತಾಗಿದೆ.

ಹಿರಿಯ ಅರ್ಥಶಾಸ್ತ್ರಜ್ಞ ಮತ್ತು ಗೋಡಮನ್ ಸ್ಯಾಚ್ಸ್ ಸಂಸ್ಥೆಯ ಆರ್ಥಿಕ ಸಂಶೋಧನಾ ವಿಭಾಗದಲ್ಲಿ ಉನ್ನತ ಸ್ಥಾನದಲ್ಲಿದ್ದ ಓ ನೀಲ್ ಅವರು ೧೯೯೦ರ ದಶಕದ ಜಾಗತೀಕರಣದ ಹೊಸ ಗಾಳಿಯ ಫಲವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ನಾಲ್ಕು ಅಭಿವೃದ್ಧಿಶೀಲ ದೇಶಗಳಲ್ಲಿ ಇರುವ ಸಾಮ್ಯಗಳನ್ನು ಗುರುತಿಸಿ ಆ ದೇಶಗಳ ಹೆಸರಿನ ಮೊದಲ ಅಕ್ಷರಗಳನ್ನು ಜೋಡಿಸಿ ‘ಬ್ರಿಕ್’ ಎಂದು ಹೆಸರಿಡಲಾಯಿತು. ಆ ದೇಶಗಳೇ ಬ್ರೆಜಿಲ್, ರಶಿಯಾ, ಭಾರತ (ಇಂಡಿಯಾ) ಮತ್ತು ಚೀನ. ಈ ವಿಷಯದ ಬಗ್ಗೆ ಅರ್ಥಶಾಸ್ತ್ರಜ್ಞರು ಮತ್ತು ಆಡಳಿತಗಾರರಲ್ಲಿ ವ್ಯಾಪಕ ಚರ್ಚೆಗಳಾದವು. ಹಲವು ರೀತಿಯಲ್ಲಿ ಅರ್ಥೈಸಲಾಯಿತು. ಹಲವು ಸಲಹೆಗಳೂ ಬಂದವು. ಈ ದೇಶಗಳು ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣದಲ್ಲಿ ‘ಇಟ್ಟಿಗೆ’ಗಳ ಪಾತ್ರದಂತೆ ಬೆಳೆಯುತ್ತಿರುವ ಬಡ ದೇಶಗಳಿಗೆ ಮಾದರಿಯಾಗಿ ಕೆಲಸ ಮಾಡಬಹುದೆಂದೂ ಅಭಿಪ್ರಾಯ ಪಡಲಾಯಿತು. ಅಲ್ಲದೆ ಈ ದೇಶಗಳಲ್ಲಿಯೇ ಸಹಕಾರ ಮತ್ತು ಹೊಂದಾಣಿಕೆ ಹೆಚ್ಚಾದರೆ ಇನ್ನೂ ಹೆಚ್ಚು ಉಪಯೋಗವಾಗಬಹುದು ಎಂದು ಆಶಾ ಭಾವನೆ ವ್ಯಕ್ತಪಡಿಸಲಾಯಿತು. ನಂತರದ ದಿನಗಳಲ್ಲಿ ದಕ್ಷಿಣ ಆಫ್ರಿಕಾ (ಸೌಥ್ ಆಫ್ರಿಕಾ) ಸೇರಿ ‘ಬ್ರಿಕ್ಸ್’ ಆಯಿತು.

ಈ ದೇಶಗಳು ಒಂದೇ ಪ್ರದೇಶದಲ್ಲಿ ಇರುವಂಥವುಗಳಲ್ಲ. ಭಾರತ ಮತ್ತು ಚೀನಾ ಏಶಿಯದಲ್ಲಿದ್ದರೆ ರಶಿಯ ಪೂರ್ವ ಯುರೋಪಿನಲ್ಲಿ, ಬ್ರೆಜಿಲ್ ದಕ್ಷಿಣ ಆಮೆರಿಕಾದಲ್ಲಿ ಮತ್ತು ದಕ್ಷಿಣ ಆಫ್ರಿಕಾ ಖಂಡದಲ್ಲಿ ಇರುತ್ತವೆ. ಭಾರತ ಮತ್ತು ಚೀನಗಳಲ್ಲಿ ಅತಿ ದೊಡ್ಡ ಜನಸಂಖ್ಯೆ ಇದ್ದರೆ ಇತರೆಡೆ ಕಡಿಮೆ. ರಶಿಯ ಮತ್ತು ಚೀನಗಳು ಏಕ ಪಕ್ಷೀಯ ಕಮ್ಯುನಿಸ್ಟ್ ಆಡಳಿತದಲ್ಲಿದ್ದು ಉಳಿದೆಡೆ ಪ್ರಜಾಪ್ರಭುತ್ವದ ವಿವಿಧ ರೂಪಗಳಿವೆ. ರಾಜಕೀಯ ಭಿನ್ನತೆ ಆರ್ಥಿಕ ಸಹಕಾರಕ್ಕೆ ಅಡ್ಡಿಯಾಗಬಾರದು ಎಂಬ ಮಾತು ಇದೆ. ಇದು ಅಂತಾರಾಷ್ಟ್ರೀಯ ಸಹಕಾರಕ್ಕೆ ರಾಜ ಮಾರ್ಗವಾಗಿರುತ್ತದೆ. ರಾಜಕೀಯ ಹಿತಾಸಕ್ತಿಗಳಲ್ಲಿ ಕೊಡುಕೊಳ್ಳುವ ಮನಸ್ಥಿತಿ ಬೇಕು. ಹೀಗೆ ಆರ್ಥಿಕ ಚಿಂತನೆಯಿಂದ ಆರಂಭವಾದ ಚರ್ಚೆಗಳು ಸರ್ಕಾರಗಳ ಮಟ್ಟದಲ್ಲಿ ರಾಜಕೀಯ ರಾಜಕೀಯ ಹೊಂದಾಣಿಕೆ ಚರ್ಚೆ ಮುಂದುವರಿದು ೨೦೦೦ದ ದಶಕದ ಅಂತ್ಯ ಭಾಗದಲ್ಲಿ ‘ಬ್ರಿಕ್ಸ್’ ಅಂತಾರಾಷ್ಟ್ರೀಯ ಸಂಘಟನೆ ಐದು ದೇಶಗಳ ಸದಸ್ಯತ್ವದೊಂದಿಗೆ ಅಸ್ತಿತ್ವಕ್ಕೆ ಬಂತು.

ಇಲ್ಲಿಯವರೆಗೆ ಬ್ರಿಕ್ಸ್ ಸಾಧನೆಗಳು

ಈವರೆಗೆ ೧೪ ಬ್ರಿಕ್ಸ್ ಶೃಂಗ ಸಭೆಗಳಾಗಿದ್ದು, ಅವುಗಳಲ್ಲಿ ೧೧ ಸಭೆಗಳು ಸದಸ್ಯ ದೇಶಗಳ ರಾಜಧಾನಿಗಳಲ್ಲಿ ನಡೆದಿವೆ. ಸದಸ್ಯ ರಾಷ್ಟ್ರಗಳ ಜಾಗತಿಕ ಪ್ರಮುಖರ ಒಂದೆಡೆ ತಮ್ಮ ಸಹಾಯಕರೊಡನೆ ಸೇರಿ ಜಾಗತಿಕ ಸಮಸ್ಯೆಗಳ ಬಗ್ಗೆ ಮತ್ತು ತಮ್ಮೊಳಗೆ ಸಹಕಾರದ ಬಗ್ಗೆ ಚರ್ಚೆಗಳನ್ನು ನಡೆಸಿ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಕೋವಿಡ್-೧೯ ಸಾಂಕ್ರಾಮಿಕ ರೋಗದ ಕಾರಣದಿಂದ ೨೦೨೦-೨೧ ಮತ್ತು ೨೨ರ ಮೂರು ಶೃಂಗ ಸಭೆಗಳನ್ನು ಇದ್ದಲಿಂದಲೇ ವಿದ್ಯುನ್ಮಾನ ಸಾಧನಗಳ ಮೂಲಕ ನಡೆಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ೧೪ನೇ ಸಭೆ ಇದೆ ಜೂ.೨೩ ಮತ್ತು ೨೪ರಂದು ಇದ್ದಲಿಂದಲೇ (್ಖಛ್ಟಿಠ್ಠಿಚ್ಝ ) ನಡೆಯಿತು.

ಈ ಸಭೆಗಳಲ್ಲಿ ಜಾಗತಿಕ ಶಾಂತಿ ಮತ್ತು ಸುವ್ಯವಸ್ಥೆ, ಪರಿಸರ ರಕ್ಷಣೆ, ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟ, ಸುಸ್ಥಿರ ಅಭಿವೃದ್ಧಿ ಗುರಿಗಳು, ಆರ್ಥಿಕ ಸಹಾಯ ಮತ್ತು ಸಹಕಾರ ತಂತ್ರಜ್ಞಾನ ಅಭಿವೃದ್ಧಿ ಮತ್ತು ವಿನಿಯಮ ಕೃಷಿ ಸೇರಿ ಆರ್ಥಿಕ ಸುಧಾರಣೆಗಳು, ಶಿಕ್ಷಣ ಆರೋಗ್ಯ ಮತ್ತು ಕೌಶಲಾಭಿವೃದ್ಧಿ ಸೇರಿದಂತೆ ಮಾನವಾಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಶಕ್ತಿ ಮುಕ್ತ ಚಲನೆ ಮತ್ತು ಹಣಕಾಸು ಮತ್ತು ಬಂಡವಾಳ ಚಲನೆಗೆ ಅವಕಾಶ ಮುಂತಾದ ಹಲವು ಜಾಗತಿಕ ಮಹತ್ವದ ವಿಷಯಗಳ ಚರ್ಚೆಯಾಗಿ ನಿರ್ಣಯಗಳಾಗಿವೆ. ಹಲವು ಜಾರಿಯಾಗಿ ಪರಿಣಾಮಗಳನ್ನು ಕಾಣಬಹುದು.

ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ಸದಸ್ಯ ದೇಶಗಳಲ್ಲಿ ಹೆಚ್ಚಿನ ಸಹಕಾರ ವೇರ್ಪಟ್ಟಿದ್ದು, ಯಶಸ್ವಿಯಾಗಿದ್ದು ಇತರ ಬಡ ದೇಶಗಳಿಗೂ ಸಹಾಯಹಸ್ತ ಚಾಚಿವೆ.

೨೦೧೪-೧೫ರಲ್ಲಿ ವಿಶ್ವ ಬ್ಯಾಂಕ್ ಮತ್ತು ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಹಯೋಗದೊಂದಿಗೆ ‘ಬ್ರಿಕ್ಸ್ ಬ್ಯಾಂಕ್’ ಹೆಸರಿನಲ್ಲಿ ಅಭಿವೃದ್ದಿ ಬ್ಯಾಂಕ್ ಸ್ಥಾಪನೆಯಾಗಿದ್ದು, ಅದರ ಪ್ರಧಾನ ಕಚೇರಿ ಚೀನದ ಶಾಂಘೈನಲ್ಲಿದೆ. ಇದರ ಮೊದಲ ಅಧ್ಯಕ್ಷರಾಗಿ ಭಾರತದ ಪ್ರಸಿದ್ಧ ಬ್ಯಾಂಕರ್ ಕೆ.ವಿ.ಕಾಮತ್ ಐದು ವರ್ಷ ಕೆಲಸ ಮಾಡಿ ಭದ್ರ ಬುನಾದಿ ಹಾಕಿದ್ದಾರೆ.

ಅಲ್ಲದೆ ಬ್ರಿಕ್ಸ್ ರೈಲ್ವೆ ಸಂಶೋಧನೆ ಜಾಲ ಮತ್ತು ‘ಬ್ರಿಕ್ಸ್’ ತಂತ್ರಜ್ಞಾನಧಾರಿತ ಮಾಹಿತಿ ಕಾಣಜ ಸ್ಥಾಪನೆ ಹಾಗೂ ಸದಸ್ಯ ದೇಶಗಳಲ್ಲಿಯ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಅಭಿವೃದ್ಧಿಗೆ ಸಹಕಾರ ಮತ್ತು ಮಾಹಿತಿ ವಿನಿಮಯ ವ್ಯವಸ್ಥೆಗಳನ್ನು ಮಹತ್ವದ ಸಾಧನೆಗಳನ್ನಬಹುದು. ಭಾರತ ಈ ವರ್ಷ ಬ್ರಿಕ್ಸ್ ಸ್ಟಾರ್ಟ್ ಅಪ್ ಅಭಿವೃದ್ಧಿ ಸಮ್ಮೇಳವನ್ನು ಏರ್ಪಡಿಸಲಿದೆ. ಇತರೆ ದೇಶಗಳಿಗೂ ಸಹಾಯವಾಗಿದೆ.

ಬಹುರಾಷ್ಟ್ರೀಯ ಸಹಕಾರಕ್ಕೆ ಬ್ರಿಕ್ಸ್ ಒಂದು ಸಮರ್ಥ ವೇದಿಕೆಯಾಗಿ ಬೆಳೆಯುತ್ತಿದ್ದು, ಅಂತಾರಾಷ್ಟ್ರೀಯ ವಸ್ತುಗಳ ಮತ್ತು ಸೇವೆಗಳ ಪೂರೈಕೆ ಸರಪಳಿ ಸಮರ್ಥವಾಗಿ ಮತ್ತು ವ್ಯವಸ್ಥಿತವಾಗಿ ಮುಂದುವರಿಯಲು ತನ್ನದೇ ಕಾಣಿಕೆಯನ್ನು ಸಲ್ಲಿಸುತ್ತಿದೆ. ಹಣ ದುಬ್ಬರ ನಿಯಂತ್ರಣ ಜಾಗತಿಕ ಆರ್ಥಿಕ ಪುನಶ್ಚೇತನದ ವೇಗ ಹೆಚ್ಚಿಸುವದು ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಬ್ರಿಕ್ಸ್ ಸದಸ್ಯ ದೇಶಗಳಲ್ಲಿ ಮತ್ತು ಇತರ ದೇಶಗಳೊಡನೆ ಸಹಕಾರ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಬಡ ದೇಶಗಳ ಅಭಿವೃದ್ಧಿಗೆ ಸಹಾಯ ಮತ್ತು ತಂತ್ರಜ್ಞಾನ ವರ್ಗಾವಣೆಯಲ್ಲಿಯೂ ಬ್ರಿಕ್ಸ್ ಮುಂದಿದೆ.

ಸಮಸ್ಯೆಗಳು ಮತ್ತು ಆತಂಕಗಳು

ಇಷ್ಟೆಲ್ಲ ಸಾಧನೆಗಳಾಗಿದ್ದರೂ ನಿರೀಕ್ಷಿತ ಪ್ರಗತಿ ಆಗಿಲ್ಲವೆಂಬುದನ್ನು ಒಪ್ಪಿಕೊಳ್ಳಲೇಬೇಕು. ಐದು ಬ್ರಿಕ್ಸ್ ದೇಶಗಳು ಭೌಗೋಳಿಕವಾಗಿ ದೊಡ್ಡ ದೇಶಗಳಾಗಿದ್ದು, ಸಾಕಷ್ಟು ನೈಸರ್ಗಿಕ ಸಂಪತ್ತು ಮತ್ತು ಮಾನವ ಸಂಪನ್ಮೂಲಗಳನ್ನು ಹೊಂದಿದೆ. ಅವೆಲ್ಲವುಗಳ ಸದುಪಯೋಗ ಜಾಗತಿಕ ಅಭಿವೃದ್ಧಿಗೆ ಆಗಬೇಕಾದಷ್ಟು ಹೊಂದಾಣಿಕೆಯ ರಾಜಕೀಯ ಇಚ್ಛಾ ಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ರಶಿಯಾ ಮತ್ತು ಚೀನದ ವಿಸ್ತರಣಾವಾದಿ ಧೋರಣೆ ಮತ್ತು ಹಠಮಾರಿತನ ಬ್ರಿಕ್ಸ್ ಬೆಳವಣಿಗೆಗೆ ಮತ್ತು ಜಾಗತಿಕ ಸಹಕಾರಕ್ಕೆ ತಡೆಯೊಡ್ಡುತ್ತಿರುವುದನ್ನು ಕಾಣುತ್ತಿದ್ದೇವೆ. ಇತ್ತೀಚಿನ ಭಾರತದಲ್ಲಿಯ ಆಂತರಿಕ ಸಮಸ್ಯೆಗಳೂ ಒಂದು ಕಾರಣವೆನ್ನಬಹುದು. ಇವೆಲ್ಲ ನೈತಿಕ ತಡೆಗಳೆನ್ನಬಹುದು.

ದಶಕಗಳಿಂದ ಮುಂದುವರಿಯುತ್ತಿರುವ ಚೀನ- ಭಾರತ ಗಡಿ ಸಮಸ್ಯ ಮತ್ತು ಘರ್ಷಣೆಗಳಿಗೆ ಒಂದು ತಾರ್ಕಿಕ ಅಂತ್ಯ ಕಂಡು ಹಿಡಿಯಬೇಕಾಗಿದೆ. ಚೀನ ತನ್ನ ನೆರೆ ಹೊರೆಯ ಸಣ್ಣ ದೇಶಗಳೊಡನೆ ತನ್ನ ಅತಿಕ್ರಮಣ ಪ್ರವೃತ್ತಿ ತೋರಿಸುತ್ತಿರುವದು ಮತ್ತು ಸಾಗರ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವುದು ಅದರ ಹೊಂದಾಣಿಕೆ ಮನಸ್ಥಿತಿಯನ್ನು ಪ್ರಶ್ನಿಸುವ ಸ್ಥಿತಿ ಒದಗಿದೆ. ಉಕ್ರೇನ ಮೇಲೆ ರಶಿಯದ ಆಕ್ರಮಣ ಮತ್ತು ನಾಲ್ಕು ತಿಂಗಳಿಂದ ಶಾಂತಿ ಪ್ರಿಯತೆಯನ್ನೆ ಪ್ರಶ್ನಿಸುವಂತಾಗಿದೆ. ಇದು ಬ್ರಿಕ್ಸ್ ನಿರ್ಧಾರಗಳಿಗೆ ವ್ಯತಿರಿಕ್ತವಾಗಿದ್ದು, ಅದರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುವಂತಾಗಿದೆ. ಮೊದಲು ಇವೆಲ್ಲವುಗಳಿಗೂ ಅಂತ್ಯ ಹಾಡಿ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಬೇಕು. ಆಗ ಮಾತ್ರ ಬ್ರಿಕ್ಸ್ ಮತ್ತು ಇತರ ಬಹುರಾಷ್ಟ್ರೀಯ ಸಂಘಟನೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಬಲ್ಲವು. ವಿಶ್ವ ಸಂಸ್ಥೆಗೂ ಬಲ ಬರುತ್ತದೆ. ಆರ್ಥಿಕ ಸಹಕಾರಕ್ಕೆ ರಾಜಕೀಯ ಸಹ ಚಿಂತನೆ ಮುಖ್ಯ.

ಒಂದು ಮಾತು: ಮೂರನೇ ಮಹಾಯುದ್ಧ ತಪ್ಪಿಸಲು ೧೯೬೦-೭೦ರ ದಶಕದ ‘ಶೀತಲ ಸಮರ’ ಅವಧಿಯಲ್ಲಿದ್ದಂತಹ ಮೂರನೇಯ ಸಮರ್ಥ ಮತ್ತು ಶಾಂತಿಪ್ರಿಯ ‘ತಟಸ್ತ’ ಪ್ರಭಾವಿ ಶಕ್ತಿಯ ಅವಶ್ಯಕತೆ ಇದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ