Mysore
18
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಸಿಎಂ ಸ್ಥಾನ ಹಂಚಿಕೆಗೆ ತಡೆ; ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಮಾತಿಗೆ ಬ್ರೇಕ್ ಬಿದ್ದು, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪ್ರಬಲ ಪೈಪೋಟಿ ಶುರುವಾಗಿದೆ. ಅಂದ ಹಾಗೆ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಾಡಿದ ಒಂದು ಮಾತು ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದ್ದು ಸುಳ್ಳೇನಲ್ಲ. ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಹೈಕಮಾಂಡ್ ಮಟ್ಟದಲ್ಲಿ ಒಪ್ಪಂದವಾಗಿದೆ ಅಂತ ಡಿಸಿಎಂ ಡಿ. ಕೆ. ಶಿವ ಕುಮಾರ್ ಅವರಾಡಿದ ಮಾತು ರಾಜ್ಯ ಕಾಂಗ್ರೆಸ್‌ನಲ್ಲಿ ತಲ್ಲಣ ಮೂಡಿ ಸಿದ್ದು ಮಾತ್ರವಲ್ಲ, ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇದ್ದಕ್ಕಿದ್ದಂತೆ ರೇಸು ಅರಂಭವಾಯಿತು. ಹೀಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರೇಸು ಶುರು ವಾದಾಗ ಮೊದಲು ಕೇಳಿ ಬಂದ ಹೆಸರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರದು. ಹೀಗೆ ಅವರ ಹೆಸರು ಮೊದಲು ಕಾಣಿಸಿಕೊಳ್ಳಲು ಜಾರಕಿಹೊಳಿ ಅವರಿಗೂ ಡಿ. ಕೆ. ಶಿವಕುಮಾರ್ ಅವರಿಗೂ ಇರುವ ವೈಯಕ್ತಿಕ ಭಿನ್ನಾಭಿಪ್ರಾಯ.

ಇತ್ತೀಚಿನ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಡಿ. ಕೆ. ಶಿವಕುಮಾರ್ ಮಿತಿ ಮೀರಿ ಕೈ ಆಡಿಸುತ್ತಿದ್ದಾರೆ. ತಮ್ಮ ಜಿಲ್ಲೆಯವರೇ ಆದ ಮಹಿಳಾ ಮತ್ತು ಕಲ್ಯಾಣ ಸಚಿವೆ ಲಕ್ಷಿ ಹೆಬ್ಬಾಳ್ಕರ್ ಅವರನ್ನು ತಮ್ಮ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂಬುದು ಸತೀಶ್ ಜಾರಕಿಹೊಳಿ ಅವರ ಸಿಟ್ಟು.

ಈ ಸಿಟ್ಟು ಕಳೆದ ತಿಂಗಳು ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ತಾರಕಕ್ಕೆ ಹೋಯಿತು. ಕಾರಣ ಅಽವೇಶನದ ಸಂದರ್ಭದಲ್ಲೇ ಕಾಂಗ್ರೆಸ್ ಮಹಾಽವೇಶನಕ್ಕೆ ಶತಮಾನ ತುಂಬಿದ ಕಾರ್ಯಕ್ರಮ ನಡೆಯಿತಲ್ಲ ಈ ಕಾರ್ಯಕ್ರಮ ನಡೆಸುವಾಗ ಕೆಪಿಸಿಸಿ ಅಧ್ಯಕ್ಷರೂ ಆದ ಡಿ. ಕೆ. ಶಿವಕುಮಾರ್ ಅವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಲಕ್ಷಿ ಹೆಬ್ಬಾಳ್ಕರ್ ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದರು ಎಂಬುದು.

ಯಾವಾಗ ಈ ಬೆಳವಣಿಗೆ ನಡೆಯಿತೋ ಇದಾದ ನಂತರ ಸತೀಶ್ ಜಾರಕಿಹೊಳಿ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಪಕ್ಷದ ಹಲವು ಸಚಿವರು ಮತ್ತು ಶಾಸಕರ ಸಭೆ ನಡೆಸಿದರು. ಈ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿಲ್ಲವಾದರೂ, ಇಂತಹ ಸಭೆಯ ಮೂಲಕ ತಮ್ಮ ಹಿಂದೆ ಶಾಸಕರ ದೊಡ್ಡ ಗುಂಪಿದೆ ಎಂಬ ಸಂದೇಶವನ್ನು ವರಿಷ್ಠರಿಗೆ ತಲುಪುವಂತೆ ಜಾರಕಿಹೊಳಿ ನೋಡಿಕೊಂಡರು.

ಅಷ್ಟೇ ಅಲ್ಲ, ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆಗೆ ಸಂಬಂಽಸಿದಂತೆ ಎದ್ದ ಗೊಂದಲವನ್ನು ಪರಿಹರಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕರ್ನಾಟಕಕ್ಕೆ ಬಂದಾಗ, ಅವತ್ತೇ ಅವರನ್ನು ಭೇಟಿ ಮಾಡಿದ ಜಾರಕಿಹೊಳಿ; ತಮ್ಮನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿಕೊಂಡರು. ಅಂದ ಹಾಗೆ ಅವರು ಮನವಿ ಮಾಡಿಕೊಳ್ಳಲು ಸನ್ನಿವೇಶವೂ ಪೂರಕವಾಗಿತ್ತು. ಅದೆಂದರೆ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರನ್ನು ಲೋಕಸಭೆ ಚುನಾವಣೆಯ ನಂತರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದಾಗಿ ವರಿಷ್ಠರು ಹೇಳಿದ್ದರು. ಆದರೆ ಲೋಕಸಭಾ ಚುನಾವಣೆಯ ನಂತರವೂ ಡಿ. ಕೆ. ಶಿವಕುಮಾರ್ ಮುಂದುವರಿಯುತ್ತಿದ್ದಾರೆ. ಇದಲ್ಲದೆ ಈ ಹಿಂದೆ ರಾಜಸ್ತಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಒಂದು ಠರಾವು ಅಂಗೀಕರಿಸಲಾಗಿತ್ತು. ಅದೆಂದರೆ, ಒಬ್ಬ ವ್ಯಕ್ತಿ ಒಂದು ಹುದ್ದೆ ಎಂಬುದು. ಹೀಗೆ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಅಂಗೀಕರಿಸಲಾದ ಠರಾವು ಇಷ್ಟು ಸ್ಪಷ್ಟವಾಗಿರುವಾಗ ಡಿ. ಕೆ. ಶಿವಕುಮಾರ್ ಅವರು ಏಕಕಾಲಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಮತ್ತು ಉಪಮುಖ್ಯಮಂತ್ರಿಯಾಗಿ ಹೇಗೆ ಮುಂದುವರಿಯುತ್ತಿದ್ದಾರೆ? ಎಂಬುದು ಸತೀಶ್ ಜಾರಕಿಹೊಳಿ ಅವರ ಪ್ರಶ್ನೆ.

ಹೀಗೆ ಅವರು ವರಿಷ್ಠರಿಗೆ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಸಂಪುಟದಲ್ಲಿರುವ ಸಹಕಾರ ಸಚಿವ ಕೆ. ಎನ್. ರಾಜಣ್ಣ ಕೂಡ ಸತೀಶ್ ಜಾರಕಿಹೊಳಿ ಅವರ ಮಾತನ್ನೇ ಅನುಮೋದಿಸಿದರು. ಯಾವಾಗ ರಾಜಣ್ಣ ಅವರು ಜಾರಕಿಹೊಳಿ ಅವರ ಮಾತನ್ನು ಅನುಮೋದಿಸಿದರೋ ಆಗ ಸಹಜವಾಗಿಯೇ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ರೇಸಿಗೆ ಒಂದು ಮಟ್ಟದಲ್ಲಿ ಬಿರುಸು ಬಂದು ಬಿಟ್ಟಿದೆ.

ಈ ಬಿರುಸು ರಾಜ್ಯ ಕಾಂಗ್ರೆಸ್ ಪಕ್ಷವನ್ನು ನಲುಗಿಸುತ್ತದೋ? ಅಲುಗಾಡಿಸುತ್ತದೋ? ಗೊತ್ತಿಲ್ಲ. ಆದರೆ ಹೀಗೆ ಕೆಪಿಸಿಸಿ ಹುದ್ದೆಗೆ ರೇಸು ಪ್ರಾರಂಭವಾದ ನಂತರ ಒಂದು ಅನುಮಾನ ದಟ್ಟವಾಗಿ ಕಾಡತೊಡಗಿದೆ. ಅದೆಂದರೆ, ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಾಡಿದ ಮಾತು ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಮೇಲೇಳುವಂತೆ ಮಾಡಿದೆ. ಹೀಗೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಡಿ. ಕೆ. ಶಿವಕುಮಾರ್ ಮಾತನಾಡುತ್ತಿದ್ದಾರೆ ಎಂದರೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದಲೇ ಕೆಳಗಿಳಿಸಬೇಕು ಎಂಬುದು ಹಲವರ ಯೋಚನೆ.

ಇವತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ತಮ್ಮ ಕೈಯ್ಯಲ್ಲಿರುವುದರಿಂದ ತಾನೇ ಡಿ. ಕೆ. ಶಿವಕುಮಾರ್ ಅವರು ಧಾಡಸಿತನದಿಂದ ಹೊರಟಿರುವುದು. ಹೀಗಾಗಿ ಮೊದಲು ಅವರ ಕೈಲಿರುವ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಕಿತ್ತುಕೊಂಡರೆ ಒಂದು ಮಟ್ಟದಲ್ಲಿ ಅವರನ್ನು ದುರ್ಬಲಗೊಳಿಸಿದಂತಾಗುತ್ತದೆ. ಹೀಗೆ ದುರ್ಬಲಗೊಂಡ ಡಿ. ಕೆ. ಶಿವಕುಮಾರ್ ಪುನಃ ಮೇಲೆದ್ದು ಚೇತರಿಸಿಕೊಳ್ಳಲು ಸಮಯ ಬೇಕು. ಆದರೆ ಅವರು ಚೇತರಿಸಿಕೊಳ್ಳುವ ಮುನ್ನವೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಯ ಅಽಕಾರ ಹಂಚಿಕೆ ಕಾರ್ಯ ನಡೆಯಬಾರದು. ನಡೆಯುವುದೇ ಆದರೆ ಭವಿಷ್ಯದ ನಾಯಕತ್ವಕ್ಕೆ ತಮ್ಮನ್ನು ಪರಿಗಣಿಸಬೇಕು ಎಂಬುದು ಹಲವು ನಾಯಕರ ವಾದ.

ಯಾವಾಗ ಇಂತಹ ವಾದ ದಟ್ಟವಾಗುತ್ತಾ ಹೋಗುತ್ತದೋ ಅಗ ಸಹಜವಾಗಿಯೇ ಪರ್ಯಾಯ ನಾಯಕತ್ವದ ವಿಷಯದಲ್ಲಿ ಹೈಕಮಾಂಡ್ ವರಿಷ್ಠರು ಎಚ್ಚರಿಕೆಯ ಹೆಜ್ಜೆ ಇಡುತ್ತಾರೆ. ವಸ್ತುಸ್ಥಿತಿ ಎಂದರೆ ಇವತ್ತಿನ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ. ಕೆ. ಶಿವಕುಮಾರ್ ಅವರಿಗೆ ಪಟ್ಟಕಟ್ಟುವ ವಿಷಯದಲ್ಲಿ ವರಿಷ್ಠರಿಗೂ ಸಮ್ಮತಿ ಇಲ್ಲ. ಏಕೆಂದರೆ ಅಹಿಂದ ವರ್ಗಗಳ ಪ್ರಬಲ ನಾಯಕರಾಗಿ ಮೇಲೆದ್ದು ನಿಂತಿರುವ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವುದು ಎಂದರೆ ಭವಿಷ್ಯದಲ್ಲಿ ಪಕ್ಷ ಅಧಿಕಾರದ ಆಸೆಯನ್ನು ಕಳೆದುಕೊಳ್ಳುವುದು ಅಂತಲೇ ಅರ್ಥ ಎಂಬುದು ವರಿಷ್ಠರಿಗೆ ಮನದಟ್ಟಾಗಿದೆ. ಅದೇ ರೀತಿ ೮೯ರಿಂದ ೯೪ರವರೆಗಿನ ಕಾಂಗ್ರೆಸ್ ಅವಧಿಯನ್ನು ಹೆಚ್ಚು ಎಚ್ಚರಿಕೆಯಿಂದ ಗಮನಿಸುವಂತೆ ಮಾಡಿದೆ.

ಏಕೆಂದರೆ ೮೯ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಸರ್ಕಾರ ರಚಿಸಿತು. ಆದರೆ ಮುಂದಿನ ಐದೇ ವರ್ಷಗಳಲ್ಲಿ ಅದು ವೀರೇಂದ್ರ ಪಾಟೀಲರ ಜತೆ, ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ನೋಡಿತು. ಹೀಗೆ ದೊಡ್ಡ ಶಕ್ತಿಯಾಗಿದ್ದರೂ ಪದೇ ಪದೇ ನಾಯಕತ್ವ ಬದಲಿಕೆ ಮಾಡಿದ ಕಾರಣಕ್ಕಾಗಿ ೧೯೯೪ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ ೩೮ ಸ್ಥಾನಗಳನ್ನಷ್ಟೇ ಗಳಿಸಿ ಕುಸಿದು ಹೋಯಿತು. ಅರ್ಥಾತ್, ಪದೇ ಪದೇ ನಾಯಕತ್ವ ಬದಲಿಸುವ ಕೆಲಸದಿಂದ ಡ್ಯಾಮೇಜ್ ಜಾಸ್ತಿಯೇ ಹೊರತು ಲಾಭವೇನಿಲ್ಲ ಎಂಬುದು ವರಿಷ್ಠರಿಗೂ ಗೊತ್ತು. ಹೀಗಾಗಿ ಇತ್ತೀಚೆಗೆ ಕರ್ನಾಟಕಕ್ಕೆ ಬಂದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಅಽಕಾರ ಹಂಚಿಕೆಗೆ ಸಂಬಂಽಸಿದ ಪರ-ವಿರೋಧದ ಚರ್ಚೆಗೆ ಬ್ರೇಕ್ ಹಾಕಿ ಹೋಗಿದ್ದಾರೆ. ಅವರು ಹಾಕಿ ಹೋದ ಈ ಬ್ರೇಕ್ ಮತ್ತಷ್ಟು ಕಾಲ ಹಾಗೇ ಉಳಿಯಬೇಕು ಎಂದರೆ ಮುಖ್ಯಮಂತ್ರಿ ಹುದ್ದೆಯ ಅಧೀಕಾರ ಹಂಚಿಕೆಗೆ ಸಂಬಂಽಸಿದಂತೆ ಒಪ್ಪಂದವಾಗಿದೆ ಎಂಬ ಮಾತು ಕೇಳಿ ಬರಬಾರದು. ಒಂದು ವೇಳೆ ಮತ್ತೆ ಕೇಳಿ ಬಂದರೆ ಯಥಾ ಪ್ರಕಾರ, ಡಿ. ಕೆ. ಶಿವಕುಮಾರ್ ಅವರನ್ನು ದುರ್ಬಲಗೊಳಿಸುವ ಕೆಲಸ ಮತ್ತಷ್ಟು ಬಿರುಸು ಪಡೆಯುತ್ತದೆ. ಇಂತಹ ಮಾತು ಕೇಳಬಾರದು ಎಂಬ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಽಸಿದ ರೇಸು ಚಾಲ್ತಿಯಲ್ಲಿಯೇ ಇರುತ್ತದೆ.

Tags: