Mysore
30
clear sky

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ದೆಹಲಿ ಧ್ಯಾನ: ಸೇಬಿನ ಸೀಮೆಯಲ್ಲಿ ಬಿಜೆಪಿಯ ಗೆಲುವು ಕಳೆದ ಸಲದಷ್ಟು ಸಲೀಸಲ್ಲ

 ಹಿಮಾಚಲದಲ್ಲಿ ಮನೆ ಕಟ್ಟಿಕೊಂಡಿರುವ ಪ್ರಿಯಾಂಕಾ ಗಾಂಧೀ ಕಾಂಗ್ರೆಸ್ಸಿನ ಪರವಾಗಿ ಅತ್ಯಂತ ಹುರುಪಿನ ಪ್ರಚಾರ ನಡೆಸಿ ಜನಮನ ಸೆಳೆದಿರುವ ವರದಿಗಳಿವೆ!  

ಡಿ.ಉಮಾಪತಿ

ಹಿಮಾಚಲ ಪ್ರದೇಶ ಪಶ್ಚಿಮ ಹಿಮಾಲಯ ತಪ್ಪಲಿನ ಪುಟ್ಟ ರಾಜ್ಯ. ಮುಕ್ಕಾಲು ಕೋಟಿಯನ್ನೂ ಮುಟ್ಟದ ಜನಸಂಖ್ಯೆ ಒಟ್ಟು ೬೮ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ. ಸಿಂಧೂ ಕಣಿವೆಯ ನಾಗರಿಕತೆಯಷ್ಟೇ ಪುರಾತನ ಇತಿಹಾಸ. ಕಿರಾತ, ಕಿನ್ನರ, ದಾಸ, ಖಾಸ, ದಾಗಿ, ಕೋಯ್ಲಿ ಮುಂತಾದ ಪ್ರಾಚೀನ ಬುಡಕಟ್ಟು ಜನಾಂಗಗಳ ಆವಾಸ ಸ್ಥಾನ. ನಿಸರ್ಗಧಾಮಗಳು, ಸದಾ ಹರಿಯುವ ನದಿಗಳ ನಾಡು. ಆದರೆ ದೇಶದ ರಾಜಕೀಯ ಆಗು ಹೋಗುಗಳನ್ನು ನಿರ್ಧರಿಸುವಲ್ಲಿ ಈ ಪರ್ವತ ಸೀಮೆಯ ಪಾತ್ರ ನಿರ್ಣಾಯಕವೇನೂ ಅಲ್ಲ. ಆದರೆ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯು ದೇಶದಲ್ಲಿ ವಿಧಾನಸಭಾ ಚುನಾವಣೆಗಳ ಸರಣಿಗೆ ನಾಂದಿ ಹಾಡುವ ಕಾರಣ ಪ್ರಾಮುಖ್ಯತೆ ಗಳಿಸಿಕೊಳ್ಳುತ್ತದೆ. ಈ ಕಾರಣದಿಂದಾಗಿ ಇಲ್ಲಿನ ಸೋಲು-ಗೆಲುವುಗಳು ಬಿಜೆಪಿ ಮತ್ತು ಕಾಂಗ್ರೆಸ್ ಗೆ ಮಹತ್ವಪೂರ್ಣ.

ದೇಶ ಸೇವಿಸುವ ಸೇಬಿನ ಶೇ.೪೦ರಷ್ಟನ್ನು ಬೆಳೆದುಕೊಡುವ ಈ ರಾಜ್ಯದ ಮುಂದಿನ ಸರ್ಕಾರ ಕಾಂಗ್ರೆಸ್ಸಿನದೇ ಅಥವಾ ಬಿಜೆಪಿಯದೇ ಎಂಬ ಸಂಗತಿ ಈಗಾಗಲೇ ಮತಪಟ್ಟಿಗೆಗಳಲ್ಲಿ ಬಂದಿಯಾಗಿದೆ. ಈ ಗುಟ್ಟು ಡಿಸೆಂರ್ಬ ಎಂಟರಂದು ರಟ್ಟಾಗಲಿದೆ.

೧೯೯೩ರಿಂದ ಈ ರಾಜ್ಯದ ಅಧಿಕಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕೈ ಬದಲಾಯಿಸುತ್ತ ಬಂದಿದೆ. ಆದರೆ ಚುನಾವಣೆಗಳ ಕುರಿತು ಭವಿಷ್ಯ ಹೇಳಲಾಗದು. ನೆರೆಯ ಉತ್ತರಾಖಂಡ ಇತ್ತೀಚೆಗಷ್ಟೇ ಪುನಃ ಬಿಜೆಪಿಯನ್ನೇ ಆರಿಸಿರುವ ಉದಾಹರಣೆ ಉಂಟು. ಆದರೆ ಸ್ಥಳೀಯ ನಾಯಕತ್ವವು ಈ ಚುನಾವಣೆಯನ್ನು ಗೆಲ್ಲಲು ಪ್ರಧಾನಿ ಮೋದಿಯವರ ವರ್ಚಸ್ಸನ್ನೇ ಅವಲಂಬಿಸಿರುವುದು ನಿಚ್ಚಳ ಗೋಚರ.

೨೦೧೭ರ ಚುನಾವಣೆಗಳಲ್ಲಿ ಬಿಜೆಪಿ ಶೇ.೪೮.೮ರಷ್ಟು ಮತಗಳನ್ನು ಗಳಿಸಿ ೪೪ ಸೀಟುಗಳನ್ನು ಗೆದ್ದಿತ್ತು. ಕಾಂಗ್ರೆಸ್ ಶೇ.೪೧.೭ರಷ್ಟು ಮತ ಗಳಿಸಿ ೨೧ ಕ್ಷೇತ್ರಗಳಲ್ಲಿ ಗೆಲುವಿಗೇ ತೃಪ್ತಿ ಪಡಬೇಕಿತ್ತು. ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಸೋತಿರುವ ಕಾಂಗ್ರೆಸ್ ಪಕ್ಷಕ್ಕೆ ಹಿಮಾಚಲದ ಗೆಲವು ಜೀವನ್ಮರಣದ ಪ್ರಶ್ನೆ. ಶುರುವಿನಲ್ಲಿ ಸದ್ದು ಮಾಡಿದ ಆಮ್ ಆದ್ಮಿ ಪಾರ್ಟಿ ತನ್ನ ಮುಂಚೂಣಿಯ ನಾಯಕರು ಪಕ್ಷಾಂತರ ಮಾಡಿದ ನಂತರ ರಣರಂಗದಿಂದ ಹಿಂದೆ ಸರಿದಿದೆ.

ದೇಶದಲ್ಲಿ ಸೇವಿಸಲಾಗುವ ಸೇಬಿನ ಶೇ.೪೦ರಷ್ಟನ್ನು ಹಿಮಾಚಲವೂ, ಶೇ.೫೦ರಷ್ಟನ್ನು ಕಾಶ್ಮೀರವೂ ಬೆಳೆದುಕೊಡುತ್ತವೆ.
ಶಿಮ್ಲಾ, ಕಿನ್ನಾರ್, ಕುಲು, ಮಂಡಿ, ಚಂಬಾ ಜಿಲ್ಲೆಗಳೇ ಅಲ್ಲದೆ ಸಿಮಾರರ್ ಮತ್ತು ಲಾಹೋಲ್ ಸ್ಪಿತಿಯ ಕೆಲವು ಭಾಗಗಳಲ್ಲಿ ಬೆಳೆಯಲಾಗುವ ಸೇಬು ರಾಜ್ಯದ ಪ್ರಧಾನ ವಾಣಿಜ್ಯ ಬೆಳೆ. ವರ್ಷಕ್ಕೆ ಐದು ಲಕ್ಷ ಟನ್ನುಗಳಷ್ಟು ಸೇಬು ಹಿಮಾಚಲದಿಂದ ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಿಗೆ ರವಾನೆಯಾಗುತ್ತದೆ. ೧.೦೫ ಲಕ್ಷ ಹೆಕ್ಟೇರುಗಳಲ್ಲಿ ಬೆಳೆಯಲಾಗುವ ಈ ರಾಜ್ಯದ ಸೇಬಿನ ವಹಿವಾಟಿನ ಮೊತ್ತ ಸುಮಾರು ನಾಲ್ಕು ಲಕ್ಷ ಕೋಟಿ ರುಪಾಯಿಗಳದು. ರಾಜ್ಯದ ಆರ್ಥವ್ಯವಸ್ಥೆಗೆ ಪ್ರವಾಸೋದ್ಯಮದ ಕೊಡುಗೆಯೂ ದೊಡ್ಡದು.

ಶಿಮ್ಲಾ (ಗ್ರಾಮಾಂತರ) ಸೇರಿದಂತೆ ಸೇಬು ಬೆಳೆಯುವ ಸೀಮೆಯಲ್ಲಿ ಹನ್ನೊಂದು ವಿಧಾನಸಭಾ ಕ್ಷೇತ್ರಗಳಿವೆ.

ಒಂದು ಕಾಲಕ್ಕೆ ಶಿಮ್ಲಾ ಜಿಲ್ಲೆಯ ’’ಸೇಬು ಸ್ವರ್ಗ’’ ಕಿಯಾರಿ ಗ್ರಾಮ ಏಷ್ಯಾದ ಹತ್ತು ಅತ್ಯಂತ ಸಿರಿವಂತ ಹಳ್ಳಿಗಳ ಪಟ್ಟಿಗೆ ಸೇರಿತ್ತು. ಈಗ ಅದು ಗತವೈಭವ. ೧೯೩೦ರ ದಶಕದಲ್ಲಿ ಹಿಮಾಚಲಕ್ಕೆ ಸೇಬು ಕೃಷಿ ಪ್ರವೇಶ ಆದದ್ದು ಇದೇ ಹಳ್ಳಿಯಿಂದ. ಹಿಮಾಚಲದ ಲಕ್ಷಾಂತರ ರೈತರ ಜೀವನಶೈಲಿಯನ್ನೇ ಬದಲಿಸಿದ ಬೆಳೆಯಿದು. ಇಲ್ಲಿನ ಕೆಲವು ಸೇಬು ಬೆಳೆಗಾರರ ವಾರ್ಷಿಕ ವರಮಾನ ೫೦ ಲಕ್ಷ ರೂಪಾಯಿಗೂ ಹೆಚ್ಚು.

ಸೇಬಿನ ಕೃಷಿಯನ್ನು ಹವಾಮಾನ ಏರಿಳಿತ ಹಿಂದೆಂದೂ ಇಲ್ಲದಂತೆ ಕಾಡತೊಡಗಿದೆ. ಆಲಿಕಲ್ಲು ಮಳೆ ಈಗ ಸರ್ವೇಸಾಧಾರಣ ವಿದ್ಯಮಾನ. ಇಂದಿನ ಚಳಿಗಾಲಗಳು ಹಿಂದಿನಂತೆ ಕಾಡಿ ಕೊರೆಯುವಷ್ಟು ದಟ್ಟವಲ್ಲ. ಈ ಎರಡೂ ಅಂಶಗಳು ಸೇಬಿನ ಕೃಷಿಗೆ ಪೂರಕ ಅಲ್ಲ. ಚೀನಾ ಮತ್ತು ಅಮೆರಿಕೆಯಿಂದ ಆಮದಾಗುತ್ತಿರುವ ಸೇಬಿನ ಪ್ರಮಾಣ ಹೆಚ್ಚುತ್ತಿರುವುದೂ ಹಿಮಾಚಲ ಮತ್ತು ಕಾಶ್ಮೀರದ ಸೇಬು ಬೆಳೆಗಾರರ ಪಾಲಿಗೆ ಒಳ್ಳೆಯ ಸುದ್ದಿಯಲ್ಲ. ಸೇಬು ಬೆಳೆಗಾರರ ಸಮಸ್ಯೆಗಳಿಗೆ ರಾಜ್ಯ ಬಿಜೆಪಿ ಸರ್ಕಾರವಾಗಲಿ, ಕೇಂದ್ರ ಬಿಜೆಪಿ ಸರ್ಕಾರವಾಗಲಿ ಕಿವಿಗೊಟ್ಟಿಲ್ಲ.

ಹಿಂದೀ ಆಡಳಿತ ಭಾಷೆಯಾದರೂ ನಿತ್ಯ ವ್ಯವಹಾರದಲ್ಲಿ ಪಹಾಡಿ, ಕುಲ್ಲುವಿ, ಮಂಡೇಲಿ, ಕಾಂಗ್ಡಿ, ಕಿನ್ನರಿ, ಚಂಬೇಲಿ ಸಂಪರ್ಕ ಭಾಷೆಗಳಾಗಿ ಬಳಕೆಯಾಗುತ್ತವೆ. ಹಿಂದೂಗಳ ಪ್ರಮಾಣ ಶೇ.೯೫.೧೭. ಮುಸಲ್ಮಾನರು ಶೇ.೨.೧೮ ಮಾತ್ರ. ಸಿಕ್ಖರು ಮತ್ತು ಬೌದ್ಧ ಜನಸಂಖ್ಯೆ ಶೇ.ಒಂದೂಕಾಲರ ಆಸುಪಾಸು.

‘ದೇವಭೂಮಿ’ ಎಂದೇ ಹೆಸರಾದ ಹಿಮಾಚಲವೂ ಮನುಷ್ಯ ಮನುಷ್ಯರ ನಡುವಣ ಮೇಲು ಕೀಳಿನ ಕಠಿಣ ಜಾತಿವ್ಯವಸ್ಥೆಯ ಹಿಡಿತದಿಂದ ಮುಕ್ತವಾಗಿಲ್ಲ. ಪಂಜಾಬಿನ ನಂತರ ದೇಶದಲ್ಲಿ ದಲಿತ ಜನಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ರಾಜ್ಯ ಹಿಮಾಚಲ. ಅವರ ಸಾಕ್ಷರತೆಯ ಪ್ರಮಾಣ ಶೇ.೭೮.೯. ರಾಜ್ಯದ ಶೇ.೧೩.೭ರಷ್ಟು ಕೃಷಿ ಭೂಮಿಯ ಒಡೆತನ ದಲಿತರದು. ಶೇ.ಆರರಷ್ಟು ಒಡೆಯರಿಗೆ ನೀರಾವರಿ ಸೌಲಭ್ಯ ದೊರೆತಿದೆ. ದೇಶದ ಇತರೆಡೆ ದಲಿತರ ಮೇಲೆ ನಡೆಯುವ ಬಗೆ ಬಗೆಯ ಅತ್ಯಾಚಾರಗಳಿಗೆ ಹಿಮಾಚಲವೆಂಬ ’’ದೇವಭೂಮಿ’ಯೂ ಹೊರತಲ್ಲ.

ಜಾತಿ, ಅಭಿವೃದ್ಧಿ ಕೆಲಸಗಳು, ಭ್ರಷ್ಟಾಚಾರ, ದುರಾಡಳಿತ, ನಾಯಕತ್ವದ ವರ್ಚಸ್ಸಿನಂತಹ ಅಂಶಗಳು ವಿಶೇಷವಾಗಿ ವಿಧಾನಸಭಾ ಚುನಾವಣೆಗಳ ಮತದಾನದ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಸಾಮಾನ್ಯ ನಂಬಿಕೆ. ಈ ಪಟ್ಟಿಗೆ ನಿರುದ್ಯೋಗವನ್ನು ಈ ಬಾರಿ ಸೇರಿಸಿಕೊಳ್ಳಬೇಕಿದೆ.

ಈ ರಾಜ್ಯದ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇ ಪ್ರಮುಖ ಪಾತ್ರಧಾರಿಗಳು. ಅವರು ತಪ್ಪಿದರೆ ಇವರು, ಇವರು ತಪ್ಪಿದರೆ ಅವರು. ಯಾರೂ ಇಲ್ಲ ಮೂರನೆಯವರು ಎನ್ನುವ ಸ್ಥಿತಿ ನೆಲೆಸಿ ಹಲವು ದಶಕಗಳೇ ಉರುಳಿ ಹೋಗಿವೆ. ಠಾರ್ಕೂ ಸೇನ್ ನೇಗಿ ಮತ್ತು ಜೆಬಿಎಲ್ ಖಾಚಿ ಕೈ ಕಲೆಸಿ ಕಟ್ಟಿದ್ದ ಹಿಮಾಚಲ ಲೋಕ್ ರಾಜ್ ಪಾರ್ಟಿ ೧೯೬೭ರಲ್ಲಿ ಮತ್ತು ಭ್ರಷ್ಟಾಚಾರಕ್ಕೆ ಪರ್ಯಾಯ ಪದವೇ ಆಗಿ ಹೋಗಿದ್ದ ಪಂಡಿತ ಸುಖರಾಮ್ ಅವರು ೧೯೯೭ರಲ್ಲಿ ಕಟ್ಟಿದ್ದ ಹಿಮಾಚಲ ವಿಕಾಸ ಕಾಂಗ್ರೆಸ್, ಮಾಹೇಶ್ವರ ಸಿಂಗ್ ಸ್ಥಾಪಿಸಿದ ಹಿಮಾಚಲ ಲೋಕಹಿತ ಪಾರ್ಟಿ ಎಂಬ ತೃತೀಯ ಶಕ್ತಿಗಳು ಕಂಡ ಅಷ್ಟಿಷ್ಟು ಯಶಸ್ಸು ಬಹುಕಾಲ ಮುಂದೆ ಸಾಗಲಿಲ್ಲ.

೧೯೬೭ರಿಂದ ಹಿಮಾಚಲದ ಚುನಾವಣೆ ಕಣಕ್ಕಿಳಿದ ಭಾರತೀಯ ಜನತಾ ಪಾರ್ಟಿಯ ಹಳೆಯ ರೂಪವಾದ ಭಾರತೀಯ ಜನಸಂಘದ ಮತಗಳಿಕೆಯ ಪ್ರಮಾಣ ೧೯೭೭ರ ತನಕ ಮೂರನೆಯ ಸ್ಥಾನದಲ್ಲಿ ಸ್ಥಗಿತಗೊಂಡಿತ್ತು. ಜನತಾ ಪಾರ್ಟಿಯೊಂದಿಗೆ ಜನಸಂಘ ವಿಲೀನವಾಗಿ ನಂತರ ಹೊರಬಂದು ಭಾರತೀಯ ಜನತಾ ಪಾರ್ಟಿಯ ರೂಪ ತಳೆದ ನಂತರ ಕೇಸರಿ ಪಕ್ಷವು ಕಾಂಗ್ರೆಸ್ ಗೆ ಪರ್ಯಾಯವಾಗಿ ಬೆಳೆಯಿತು.

ಪುಟ್ಟ ರಾಜ್ಯದ ಕೇವಲ ೬೮ ಸದಸ್ಯಬಲದ ಶಾಸನಸಭೆ ಹಿಮಾಚಲದ್ದು. ಹಿಮಾಚಲದವರೇ ಆದ ಬ್ರಾಹ್ಮಣ ಜೆ.ಪಿ.ನಡ್ಡಾ ಪಕ್ಷದರಾಷ್ಟ್ರೀಯ ಅಧ್ಯಕ್ಷರಾದ ನಂತರವೂ ಪ್ರಬಲ ಠಾಕೂರ್ ಪ್ರೇಮ್ ಕುಮಾರ್ ಧುಮಲ್ ಮತ್ತು ಇದೀಗ ಅವರ ಮಗ ಅನುರಾಗ್ ಠಾಕೂರ್ ನಡುವೆ ತಿಸ್ರ ಅಳಿದಿಲ್ಲ . ೬೮ರ ಪೈಕಿ ೨೨ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದದ್ದು ಬಿಜೆಪಿಗೆ ಒಳ್ಳೆಯ ಸುದ್ದಿಯಲ್ಲ.

ಒಂದು ಕಾಲದಲ್ಲಿ ಕಾಂಗ್ರೆಸ್ಸನ್ನು ಕಾಡುತ್ತಿದ್ದ ಬಂಡಾಯದ ವ್ಯಾಧಿಯನ್ನು ಇದೀಗ ಬಿಜೆಪಿ ಎದುರಿಸತೊಡಗಿದೆ. ಖುದ್ದು ಮೋದಿಯವರೇ ಹಸ್ತಕ್ಷೇಪ ಮಾಡುವ ಪರಿಸ್ಥಿತಿ ಒದಗಿತ್ತು. ದೂರವಾಣಿಯ ಮೂಲಕ ಎಚ್ಚರಿಕೆ ನೀಡಿದ ನಂತರವೂ ಸಂಬಂಧಪಟ್ಟ ಅಭ್ಯರ್ಥಿ ಉಮೇದುವಾರಿಕೆಯನ್ನು ವಾಪಸು ಪಡೆಯಲಿಲ್ಲ. ಹಿಮಾಚಲದಲ್ಲಿ ಮನೆ ಕಟ್ಟಿಕೊಂಡಿರುವ ಪ್ರಿಯಾಂಕಾ ಗಾಂಧೀ ಕಾಂಗ್ರೆಸ್ಸಿನ ಪರವಾಗಿ ಅತ್ಯಂತ ಹುರುಪಿನ ಪ್ರಚಾರ ನಡೆಸಿಜನಮನ ಸೆಳೆದಿರುವ ವರದಿಗಳಿವೆ. ನಿರುದ್ಯೋಗದ ಜೊತೆಗೆ, ಅಡುಗೆ ಅನಿಲ ಪೂರೈಕೆ, ಹಳೆಯ ಪಿಂಚಣಿ ಜಾರಿಯ ಸವಾಲುಗಳನ್ನು ಬಿಜೆಪಿ ಎದುರಿಸಿದೆ. ಕೇಸರಿ ಪಕ್ಷದ ಪಾಲಿಗೆ ಈ ಸಲದ ಚುನಾವಣೆ ಕಳೆದ ಸಲದಷ್ಟು ಸಲೀಸಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ