– ಆರ್.ಟಿ.ವಿಠ್ಠಲಮೂರ್ತಿ
ರಿಯಲ್ ಎಸ್ಟೇಟ್ ಮಾಫಿಯಾದವರಿಗೆ ಭೂಮಿ ಕೊಟ್ಟರೆ ಅತ್ತ ರೈತ ಬೆಳೆರಿಗೆ ಬೆಳೆಯೂ ಇಲ್ಲ ಇತ್ತ ಕನ್ನಡಿಗರಿಗೆ ಉದ್ಯೋಗವೂ ಇಲ್ಲ!
ಕಳೆದ ವಾರದ ಬೆಳವಣಿಗೆಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುಷಿಯಾಗಿದ್ದಾರೆ. ಅವರ ಈ ಖುಷಿಗೆ ರಾಜಕೀಯ ಬೆಳವಣಿಗೆಗಳು ಕಾರಣವಲ್ಲ, ಅಧಿಕಾರಕ್ಕೆ ಬಂದು ಹದಿನೈದು ತಿಂಗಳು ಕಳೆದರೂ ಅವರಿಚ್ಚೆಯಂತೆ ಏನೂ ನಡೆಯುತ್ತಿಲ್ಲ. ಆದರೆ ಕಳೆದ ವಾರ ನಡೆದ ಜಾಗತಿಕ ಬಂಡವಾಳದಾರರ ಸಮಾವೇಶ ಅವರಿಗೆ ನೆಮ್ಮದಿ ನೀಡಿದೆ. ಕಾರಣ? ಕರ್ನಾಟಕದ ಇತಿಹಾಸದಲ್ಲಿ ಹಿಂದೆ ಎಂದೂ ಸಾಧನೆಯಾಗದಷ್ಟು ಪ್ರಮಾಣದ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬಂದಿದ್ದಾರೆ.
ಈಗಿನ ಮಾಹಿತಿಯ ಪ್ರಕಾರ, ಸುಮಾರು ಹತ್ತು ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಲು ಉದ್ಯಮಿಗಳು ಒಪ್ಪಿದ್ದಾರೆ. ಈ ಪ್ರಮಾಣದ ಬಂಡವಾಳ ಹೂಡಿಕೆಯಾದರೆ ರಾಜ್ಯದಲ್ಲಿ ನಿರುದ್ಯೋಗದ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ನಿಸ್ಸಂಶಯ.
ಕೊರೋನಾ ಕಾಲಘಟ್ಟದಲ್ಲಿ ಕುಸಿದ ಕರ್ನಾಟಕದ ಆರ್ಥಿಕತೆ ಈ ವರ್ಷ ಏರುಮುಖ ಕಾಣುತ್ತಿರುವುದು ಹೌದಾದರೂ ಕೇಂದ್ರ ಸರ್ಕಾರದ ನೀತಿಯಿಂದ ಬೊಮ್ಮಾಯಿ ಸರ್ಕಾರಕ್ಕೆ ಸಂಕಟ ಎದುರಾಗಿರುವುದೂ ನಿಜ.
ಸುಮಾರು ಎರಡು ಲಕ್ಷ, ಎಪ್ಪತ್ತು ಸಾವಿರ ಕೋಟಿ ರೂಪಾಯಿ ಗಾತ್ರದ ರಾಜ್ಯ ಬಜೆಟ್ ಗೆ ಈ ಪ್ರಮಾಣದ ಆದಾಯ ಇರಬೇಕಲ್ಲ? ಇಂತಹ ಆದಾಯ ಬರುತ್ತದೆ ಎಂದು ನಿರೀಕ್ಷಿಸಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ದೊಡ್ಡ ಮಟ್ಟದ ನೆರವು ಹರಿದು ಬರಲಿದೆ ಎಂದು ಬೊಮ್ಮಾಯಿ ಭಾವಿಸಿದ್ದರು.
ಇದಕ್ಕೆ ಪೂರಕವಾಗಿ ಜಿ.ಎಸ್.ಟಿ. ಬಾಬ್ತಿನಲ್ಲಿ ನೀಡುವ ಹಣವನ್ನು ಸ್ತಗಿತಗೊಳಿಸುವ ಬದಲು ಇನ್ನಷ್ಟು ಕಾಲ ಮುಂದುವರಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಕೋರಿದ್ದರು. ಆದರೆ ಈಗಿನ ಮಾಹಿತಿಯ ಪ್ರಕಾರ, ಅವರ ಕೋರಿಕೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿಲ್ಲ. ಹೀಗಾಗಿ ಆ ಬಾಬ್ತಿನಲ್ಲಿ ರಾಜ್ಯಕ್ಕೆ ಯಾವ ಪರಿಹಾರವೂ ಸಿಗುವುದಿಲ್ಲ.
ಅಂದ ಹಾಗೆ ರಾಜ್ಯಗಳಿಗೆ ಕೊಡುವ ಜಿ.ಎಸ್.ಟಿ.ಪಾಲನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ ತನ್ನ ಕೆಲಸವನ್ನು ಮಾತ್ರ ನಿಲ್ಲಿಸಿಲ್ಲ. ಅಥವಾ ಜಿ.ಎಸ್.ಟಿ ತೆರಿಗೆ ಹೇರಿಕೆಯ ವಿಷಯದಲ್ಲಿ ಜನರಿಗೆ ರಿಯಾಯ್ತಿ ತೋರಿಸಿಲ್ಲ. ಯಾಕೆಂದರೆ ಜಿ.ಎಸ್.ಟಿ. ತೆರಿಗೆಯ ಪ್ರಮಾಣ, ವ್ಯಾಪ್ತಿ ಮತ್ತಷ್ಟು ಹೆಚ್ಚಳವಾಗಿದೆ. ಇದನ್ನೇ ಮೋದಿಯವರ ವಿರೋಧಿಗಳು ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.
ಹನ್ನೊಂದು ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಪ್ರಮಾಣದ ಉದ್ಯಮಿಗಳ ಸಾಲವನ್ನು ರೈಟ್ ಆಫ್ ಮಾಡಲು ತೀರ್ಮಾನಿಸಿದ ಕೇಂದ್ರ ಸರ್ಕಾರ, ಈ ಹಣವನ್ನು ಬೇರೆ ಮೂಲಗಳಿಂದ ವಸೂಲಿ ಮಾಡಬೇಕಲ್ಲ? ಹೀಗಾಗಿ ಅದು ಜನಸಾಮಾನ್ಯರು ಬಳಸುವ ವಸ್ತುಗಳ ಮೇಲೆ ಜಿ.ಎಸ್.ಟಿ. ಹೇರುವ ಮೂಲಕ ವಸೂಲಿಗಿಳಿದಿದೆ ಎಂಬುದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರ ದೂರು.
ಹೀಗೆ ಕೇಂದ್ರ ಸರ್ಕಾರದ ಜಿ.ಎಸ್.ಟಿ ನೀತಿಯ ಬಗ್ಗೆ ವಿರೋಧಿಗಳು ಏನೇ ಮಾತನಾಡಬಹುದು. ಆದರೆ ಬಸವರಾಜ ಬೊಮ್ಮಾಯಿ ಮಾತನಾಡುವಂತಿಲ್ಲವಲ್ಲ? ಹೀಗಾಗಿ ಅವರು ಕೇಂದ್ರದ ಅಸಹಕಾರವನ್ನು ಮೌನವಾಗಿ ಸಹಿಸಿಕೊಳ್ಳದೆ ಬೇರೆ ದಾರಿಯೇ ಇಲ್ಲ.
ತೀರಾ ಹೆಚ್ಚೆಂದರೆ ಪುನ: ಕೇಂದ್ರ ಸರ್ಕಾರದ ಮುಂದೆ ಹೋಗಿ ನಮಗೆ ಜಿ.ಎಸ್.ಟಿ ಪಾಲು ಸೇರಿದಂತೆ ಎಲ್ಲ ವಿಭಾಗಗಳಲ್ಲಿ ನಿಮ್ಮ ನೆರವು ಅತ್ಯಗತ್ಯ ಎಂದು ಹೇಳಬಹುದು ಅಷ್ಟೇ.
ಆದರೆ ಬೊಮ್ಮಾಯಿ ಏನೇ ಹೇಳಿದರೂ ಕೇಂದ್ರ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ.ಅದು ರಾಜ್ಯಗಳಿಗೆ ನೀಡುವ ಜಿ.ಎಸ್.ಟಿ. ಪರಿಹಾರ ಮಾತ್ರವಲ್ಲ, ವಿವಿಧ ಯೋಜನೆಗಳಿಗೆ ನೀಡುವ ಪಾಲನ್ನೂ ಕಡಿಮೆ ಮಾಡಿ ಬಿಟ್ಟಿದೆ.
ಪರಿಣಾಮ? ಕೇಂದ್ರದ ನಿಲುವಿನಿಂದ ರಾಜ್ಯಕ್ಕೆ ಆಗುವ ಕೊರತೆಯನ್ನು ನಿವಾರಿಸಿಕೊಳ್ಳಲು ರಾಜ್ಯ ಸರ್ಕಾರ ಬಹುತೇಕ ಎಲ್ಲ ಇಲಾಖೆಗಳಿಗೆ ಪತ್ರ ಬರೆದು: ಈಗಿನ ನಿರೀಕ್ಷೆ ಏನಿದೆ? ಅದಕ್ಕಿಂತ ಹೆಚ್ಚು ಆದಾಯವನ್ನು ಸಂಗ್ರಹಿಸಲು ಸಾಧ್ಯವೇ? ಸಾಧ್ಯವಿದ್ದರೆ ಮೂಲ ಯಾವುದು?ಅಂತ ಕೇಳಿ ಪತ್ರ ಬರೆದಿದೆ.
ಇದು ಜಾರಿಯಲ್ಲಿರುವಾಗಲೇ ನಡೆದಿರುವ ಜಾಗತಿಕ ಬಂಡವಾಳದಾರರ ಸಮಾವೇಶ ಬಸವರಾಜ ಬೊಮ್ಮಾಯಿ ಅವರ ಮುಖದಲ್ಲಿ ಹರ್ಷ ಮೂಡಿಸಿರುವುದು ಅಸಹಜವೇನಲ್ಲ. ಹೀಗೆ ಹತ್ತು ಲಕ್ಷ ಕೋಟಿ ರೂಪಾಯಿಗಳಷ್ಟುಬಂಡವಾಳ ಹರಿದು ಬರುತ್ತದೆ ಎಂದರೆ ರಾಜ್ಯದಲ್ಲಿ ಹಲವು ಅಭಿವೃದ್ದಿ ಕಾರ್ಯಗಳು ಕಣ್ಣಿಗೆ ಕಂಡಂತಾಗುತ್ತದೆ. ಇದರ ಜಾರಿಗೆ ವಿಳಂಬವಾಗಬಹುದು.
ಆದರೆ ಒಂದು ಸಲ ಬಂಡವಾಳ ಹರಿದು ಬರುತ್ತದೆ ಎಂದರೆ ವ್ಯವಸ್ಥೆಯಲ್ಲಿ ಚಲನಶೀಲತೆ ಆರಂಭವಾಗುತ್ತದೆ. ಆ ಮಟ್ಟಿಗೆ ಇದು ಒಳ್ಳೆಯ ಬೆಳವಣಿಗೆ.
ಆದರೆ ಹೀಗೆ ಖುಷಿಯಲ್ಲಿರುವ ಕಾಲಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಿಸಬೇಕಾದ ಕೆಲವು ವಿಷಯಗಳಿವೆ. ಈ ಪೈಕಿ ಮುಖ್ಯವಾದುದು ಎಂದರೆ, ಇದುವರೆಗೆ ಬಂಡವಾಳದಾರರ ಸಮಾವೇಶದ ಮೂಲಕ ಇಲ್ಲಿ ಸಂಪತ್ತು ವಿನಿಯೋಗ ಮಾಡುವುದಾಗಿ ಹೇಳಿದ ಬಹುತೇಕ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಿಲ್ಲ.
ಒಂದು ಮಾಹಿತಿಯ ಪ್ರಕಾರ, ಹೂಡಿಕೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡ ಬಂಡವಾಳದ ಪ್ರಮಾಣ ಏನಿದೆ? ಆ ಪೈಕಿ ಇದುವರೆಗೆ ಹೂಡಿಕೆಯಾಗಿರುವುದು ಶೇಕಡಾ ಮೂವತ್ತೆರಡರಷ್ಟು ಪ್ರಮಾಣದ ಹಣ ಮಾತ್ರ.
ಆದರೆ ಅಚ್ಚರಿಯ ವಿಷಯವೆಂದರೆ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದ ಉದ್ಯಮಿಗಳ ಪೈಕಿ ಬಹುತೇಕರು, ಉದ್ಯಮ ಸ್ಥಾಪಿಸಲು ತಮಗೆ ಮಂಜೂರು ಮಾಡಿದ ಬಹುತೇಕ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ.
ಮಂಜೂರಾದ ಭೂಮಿಯನ್ನು ಪಡೆಯಲು ಅವರಿಗೆ ಅಸಕ್ತಿಯಿದೆ. ಆದರೆ ಅಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ಇಲ್ಲ ಎಂಬುದರ ಅರ್ಥ ಏನು?
ಈ ಹಿಂದೆ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಂತಹದೇ ಆರೋಪ ಕೇಳಿ ಬಂದಾಗ, ಯೋಜನೆಗೆ ಅಂತ ಭೂಮಿ ಪಡೆದವರೆಷ್ಟು? ಪಡೆದವರ ಪೈಕಿ ಉದ್ಯಮ ಸ್ಥಾಪಿಸಿದವರೆಷ್ಟು? ಅಂತ ಸರ್ವೇ ಮಾಡಿಸುವುದಾಗಿ ಹೇಳಿದ್ದರು.
ಆದರೆ ಹೀಗೆ ಹುತ್ತ ಕೆದಕಲು ಮುಂದಾದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ತದ ನಂತರ ಈ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಕಾರಣ? ಉನ್ನತ ಸ್ಥಾನದಲ್ಲಿದ್ದವರು ಈ ವಿಷಯದಲ್ಲಿ ತುಂಬ ಮುಂದುವರಿಯದಂತೆ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಸೂಚಿಸಿದ್ದರಂತೆ.
ಅಂದ ಹಾಗೆ ಇಷ್ಟು ವರ್ಷ ಕಳೆದ ಮೇಲೆ ಹಿಂತಿರುಗಿ ನೋಡಿದರೆ ಈ ಆರೋಪ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಕೇಳುತ್ತಿದೆ.
ಪಟೇಲರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದ ಮೂಲಕ ಬಳ್ಳಾರಿ ಭಾಗದಲ್ಲಿ ಎರಡು ಸಾವಿರ ಎಕರೆ ಭೂಮಿ ಪಡೆದ ಗಣಿ ಉದ್ಯಮಿಯೊಬ್ಬರು ಇವತ್ತಿಗೂ ಸದರಿ ಭೂಮಿಯಲ್ಲಿ ಕಾರ್ಖಾನೆಗಳನ್ನು ಎಬ್ಬಿಸಿಲ್ಲ. ಜನರಿಗೆ ಉದ್ಯೋಗ ನೀಡುವ ಮಾತು ದೂರವೇ ಉಳಿಯಿತು.
ಇದೇ ರೀತಿ ಕರ್ನಾಟಕದಲ್ಲಿ ಅಭಿವೃದ್ಧಿ ಎಂಬುದು ಉಕ್ಕುಕ್ಕಿ ಹರಿಯುವಂತೆ ಮಾಡುವುದಾಗಿ ಮೂಗಿಗೆ ತುಪ್ಪ ಹಚ್ಚಿದ ಉದ್ಯಮಿಯೊಬ್ಬರು ಕೊಪ್ಪಳ ಭಾಗದಲ್ಲಿ ಒಂದು ಸಾವಿರ ಎಕರೆ ಭೂಮಿ ಪಡೆದವರೊಬ್ಬರು ಸದರಿ ಜಾಗಕ್ಕೆ ಬೇಲಿ ಹಾಕಿಕೊಂಡು ಕುಳಿತಿದ್ದಾರೆ. ಹೀಗೆ ಹೇಳುತ್ತಾ ಹೋದರೆ ಭೂಮಿ ಪಡೆದು ಉದ್ಯಮ ಸ್ಥಾಪಿಸದ ಹಲವರ ಪಟ್ಟಿಯೇ ಇದೆ. ವಿಚಿತ್ರವೆಂದರೆ, ಕಳೆದ ವಾರ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲೂ ಇದೇ ಆಸಾಮಿಗಳು ತಮಗೆ ಮತ್ತೆ ಭೂಮಿ ಬೇಕು ಎಂದು ಅರ್ಜಿ ಹಾಕಿದ್ದಾರೆ.
ಇಂತಿಷ್ಟು ಪ್ರಮಾಣದ ಭೂಮಿ ಕೊಟ್ಟರೆ ಇಂತಿಷ್ಟು ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತೇವೆ. ರಾಜ್ಯದಲ್ಲಿ ಆರ್ಥಿಕ ಕ್ರಾಂತಿಯಾಗುವುದರ ಜತೆಗೆ, ಉದ್ಯೋಗ ಕ್ರಾಂತಿಯೂ ಆಗುತ್ತದೆ ಎಂದು ಸರ್ಕಾರದ ಮೂಗಿಗೆ ತುಪ್ಪ ಹಚ್ಚಿದ್ದಾರೆ.
ಆಳವಾಗಿ ಗಮನಿಸುತ್ತಾ ಹೋದರೆ ಇಂತವರೆಲ್ಲ ರಿಯಲ್ ಎಸ್ಟೇಟ್ ಮಾಫಿಯಾದವರಂತೆ ಕಾಣುತ್ತಾರೆಯೇ ಹೊರತು ಬೇರೇನಲ್ಲ. ಇಂತವರಿಗೆ ಭೂಮಿ ಕೊಟ್ಟರೆ ಅತ್ತ ರೈತ ಬೆಳೆ ಬೆಳೆದ ಹಾಗೂ ಅಲ್ಲ, ಇತ್ತ ಕನ್ನಡಿಗರಿಗೆ ಉದ್ಯೋಗ ಸಿಕ್ಕಿದಂತೆಯೂ ಅಲ್ಲ.
ಹೀಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಸಧ್ಯದ ಖುಷಿಯ ನಡುವೆ ಇಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭೂ ಮಾಫಿಯಾದವರು ಯಾರು?ಎಂಬುದನ್ನು ಗುರುತಿಸುವ, ಅವರ ಕೈಗೆ ಹೋಗಿರುವ ಸಾವಿರಾರು ಎಕರೆ ಭೂಮಿಯನ್ನು ಮರುವಶ ಮಾಡಿಕೊಳ್ಳುವ ಕಡೆ ಗಮನ ಹರಿಸಬೇಕು.
ಇಲ್ಲದಿದ್ದರೆ ಈ ಸಮಾವೇಶದ ಮೂಲಕ ಕರ್ನಾಟಕದ ಆರ್ಥಿಕ ಚಿತ್ರವಷ್ಟೇ ಅಲ್ಲ, ಸಾಮಾಜಿಕ ಚಿತ್ರವೂ ಬದಲಾಗಿ ಹೋಗುತ್ತದೆ.