Mysore
23
overcast clouds
Light
Dark

ಬೆಂಗಳೂರು ಡೈರಿ : ಬಿಜೆಪಿ ಜನಸ್ಪಂದನ ಎಫೆಕ್ಟ್; ಸಿದ್ದು-ಡಿಕೆಶಿ ಶೀತಲ ಸಮರಕ್ಕೆಬ್ರೇಕ್!

ಮರಳಿ ಅಧಿಕಾರಕ್ಕೆ ಬರುವುದಕ್ಕೆ ಆತ್ಮವಿಶ್ವಾಸದಲ್ಲಿ ತನಗೆ ಹುಣ್ಣಾಗಿ ಕಾಡುತ್ತಿದ್ದ ಸಮಸ್ಯೆಯನ್ನು ನಿರ್ಲಕ್ಷಿಸಿದ್ದ ಕೈ ಪಾಳೆಯ ಬಿಜೆಪಿ ನೀಡಿದ ಹೊಡೆತದಿಂದ ಎಚ್ಚೆತ್ತು ಔಷಧಿಯ ಬಾಟಲು ಹಿಡಿದುಕೊಂಡಿದೆ. ಅಂದ ಹಾಗೆ ಕೈ ಪಾಳೆಯ ನಿರ್ಲಕ್ಷಿಸಿದ್ದ ಆ ಹುಣ್ಣು ಯಾವುದು ಎಂಬುದು ರಹಸ್ಯದ ವಿಷಯವೇನಲ್ಲ. ಮರಳಿ ಅಧಿಕಾರಕ್ಕೆ ಬಂದರೆ ತಾವೇ ಸಿಎಂ ಆಗಬೇಕು ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹಠವೇ ಈ ಹುಣ್ಣು.
ಕುತೂಹಲದ ಸಂಗತಿಯೆಂದರೆ ಹಲವು ಕಾಲದಿಂದ ಈ ಹುಣ್ಣು ಬೆಳೆಯುತ್ತಾ ಬಂದರೂ ಡಿಕೆಶಿ ಮತ್ತು ಸಿದ್ದರಾಮಯ್ಯ ಇಬ್ಬರೂ ನಿರ್ಲಕ್ಷಿಸಿದ್ದರು. ಹೀಗಾಗಿ ಪಕ್ಷದಲ್ಲಿ ತಮ್ಮ ತಮ್ಮ ಶಿಬಿರಗಳನ್ನು ಸೃಷ್ಟಿಸಿಕೊಂಡು ದಾರಿ ಸಾಫ್ ಮಾಡಿಕೊಳ್ಳತೊಡಗಿದ್ದರು. ಅವರಿಬ್ಬರ ಈ ಶಿಬಿರಗಳ ನಡುವೆ ಕೈ ಪಾಳೆಯದ ಇನ್ನಷ್ಟು ನಾಯಕರು, ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಪರಿಸ್ಥಿತಿ ಸೃಷ್ಟಿಯಾದರೆ ಏನು ಮಾಡಬಹುದು ಅಂತ ಲೆಕ್ಕ ಹಾಕತೊಡಗಿದ್ದರು.
ಇಂತಹ ಲೆಕ್ಕಾಚಾರಗಳೇ ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ಹಲವು ಕ್ಯಾಂಡಿಡೇಟುಗಳ ಆತ್ಮಸ್ಥೈರ್ಯವನ್ನು ಕುಗ್ಗಿಸತೊಡಗಿದ್ದಲ್ಲದೆ, ಇಂತಹ ಸಂಘರ್ಷದಿಂದ ತಮ್ಮ ಗೆಲುವಿನ ದಾರಿಗೆ ಅಡ್ಡಿಯಾಗಬಹುದು ಅಂತ ಅನಿವಾರ್ಯವಾಗಿ ಬೇರೆ ಪಕ್ಷಗಳ ಕಡೆ ನೋಡತೊಡಗಿದ್ದರು.
ಇಷ್ಟಾದರೂ ಎಲೆಕ್ಷನ್ ಸ್ಪೆಷಲಿಸ್ಟ್ ಸುನಿಲ್ ಕನುಗೋಳ್ ಅವರ ಸರ್ವೇ ರಿಪೋರ್ಟುಗಳು, ಕೈ ಪಾಳೆಯ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ ಅಂತ ಹೇಳುತ್ತಿದ್ದುದರಿಂದ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಿಬ್ಬರೂ ತಮ್ಮ ತಮ್ಮ ಹಿತವೇ ಮುಖ್ಯ ಎಂಬಂತೆ ನಡೆದುಕೊಳ್ಳತೊಡಗಿದ್ದರು.
ಆದರೆ ಸುನಿಲ್ ಕನುಗೋಳ್ ಸರ್ವೇ ರಿಪೋರ್ಟು, ಇಂತಿಂತಹ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಗೊಳಿಸಲು ಇಂತಿಂತಹ ಸ್ಥಳೀಯ ನಾಯಕರನ್ನು ಸೆಳೆಯಬೇಕು, ಆ ಮೂಲಕ ಪಕ್ಷದ ಅಭ್ಯರ್ಥಿಯ ಗೆಲುವಿಗೆ ದಾರಿ ಮಾಡಿಕೊಡಬೇಕು ಅಂತ ಹೇಳುತ್ತಿದೆ.
ಸುನಿಲ್ ಕನುಗೋಳ್ ಅವರ ಸರ್ವೇ ರಿಪೋರ್ಟಿನ ಆಧಾರದ ಮೇಲೆ ಕೈ ಪಾಳೆಯದ ಬಹುತೇಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿವಿಧ ಜಾತಿಯ ನಾಯಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಎಲ್ಲಿಯವರೆಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ಒಂದು ಎಂಬ ಭಾವನೆ ದಟ್ಟವಾಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಟೆಕ್ನಿಕ್ಕುಗಳು ಪ್ರಯೋಜನಕ್ಕೆ ಬರುವುದಿಲ್ಲ ಎಂಬುದು ಸ್ಪಷ್ಟ.
ಇಷ್ಟಾದರೂ ಡಿಕೆಶಿ ಮತ್ತು ಸಿದ್ದರಾಮಯ್ಯ ಒಂದು ನದಿಯ ಎರಡು ದಡಗಳಂತೆ ಕಾರ್ಯ ನಿರ್ವಹಿಸುತ್ತಲೇ ಇದ್ದರು. ಆದರೆ ಯಾವಾಗ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶ ನಡೆಸಿ ಕೈ ಪಾಳೆಯಕ್ಕೆ ಧಮಕಿ ಹಾಕಿತೋ? ಇದಾದ ನಂತರ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ನಡುವಣ ಕಚ್ಚಾಟದ ತೀವ್ರತೆ ಕಡಿಮೆಯಾಗಿಬಿಟ್ಟಿದೆ.
ಹೀಗಾಗಿ ನಾನೇ ಸಿಎಂ ಎಂಬ ಮೆಸೇಜನ್ನು ಉಭಯ ನಾಯಕರ ಯಾವೊಬ್ಬ ಬೆಂಬಲಿಗರಿಗೂ ಕೊಡುತ್ತಿಲ್ಲ. ಅದಕ್ಕಿಂತ ಮುಖ್ಯವಾಗಿ ಉಭಯ ನಾಯಕರು ತಮ್ಮ ಬಳಿ ಬಂದವರ ಬಳಿ, ಈ ಕುರಿತಂತೆ ನೀವು ಅವರ ಬಳಿಯೂ ಮಾತನಾಡಿ ಅಂತ ಹೇಳುತ್ತಿದ್ದಾರೆ. ಅರ್ಥಾತ್, ಸಿದ್ದರಾಮಯ್ಯ ಅವರ ಬಳಿ ಹೋದವರಿಗೆ ಡಿ.ಕೆ.ಶಿವಕುಮಾರ್ ಗಮನಕ್ಕೂ ತನ್ನಿ ಎಂಬ ಮಾತು ಕೇಳುತ್ತಿದ್ದರೆ, ಡಿ.ಕೆ.ಶಿವಕುಮಾರ್ ಬಳಿ ಹೋದರೆ, ಒಂದು ಸಲ ಸಿದ್ದರಾಮಯ್ಯನವರ ಬಳಿ ಮಾತುಕತೆ ನಡೆಸಿ ಎಂಬ ಸಲಹೆ ಕೇಳಿ ಬರುತ್ತಿದೆ.
ಹೀಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಶೀತಲ ಸಮರಕ್ಕೆ ಬ್ರೇಕ್ ಬಿದ್ದಿದೆಯಲ್ಲದೆ, ಆ ಮೂಲಕ ಕಾಂಗ್ರೆಸ್ ಪಾಳೆಯದಲ್ಲಿ ಪುನ ರಣೋತ್ಸಾಹ ಕಾಣತೊಡಗಿದೆ.
ಅಂದ ಹಾಗೆ ಆಡಳಿತಾರೂಢ ಬಿಜೆಪಿ ಕೂಡ ಕಾಂಗ್ರೆಸ್‌ಗೆ ಇಂತಹ ಧಮಕಿ ಹಾಕಲು ಕೈ ಪಾಳೆಯದಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿದ್ದ ಜಗಳವೇ ಮುಖ್ಯ ಕಾರಣ. ಹೀಗೆ ಪರಸ್ಪರ ಕಚ್ಚಾಡುತ್ತಿರುವ ನಾಯಕರ ಪಾಳೆಯಗಳ ಮೇಲೆ ಬೀಳುವುದು ಸುಲಭ ಎಂಬುದು ಬಿಜೆಪಿಯ ನಂಬಿಕೆ.
ಆದರೆ ಇಂತಹ ನಂಬಿಕೆಯ ಮೇಲೆ ಅದು ಹಾಕಿದ ಧಮಕಿ ಕೈ ಪಾಳೆಯದಲ್ಲಿ ಒಗ್ಗಟ್ಟಿನ ಮಂತ್ರ ಕೇಳುವಂತೆ ಮಾಡಿದೆ. ಅಂದ ಹಾಗೆ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ತಾನೇ ಮುಖ್ಯಮಂತ್ರಿಯಾಗುವ ಮಾತು, ನಮ್ಮ ನಮ್ಮಲ್ಲಿನ ಕಚ್ಚಾಟದಿಂದ ನಾವು ಬೇರೆ ಬೇರೆಯಾಗಿಯೇ ಇದ್ದರೆ ಇಬ್ಬರನ್ನೂ ಹುಡುಕಿ ಹುಡುಕಿ ದುರ್ಬಲಗೊಳಿಸುವ ಕೆಲಸಕ್ಕೆ ಆಡಳಿತಾರೂಢ ಬಿಜೆಪಿಯ ನಾಯಕರು ಸಜ್ಜಾಗುತ್ತಾರೆ. ಅದಕ್ಕೆ ಅವಕಾಶವನ್ನೇ ನೀಡಲಿಲ್ಲ ಎಂದರೆ ಅವರು ಹಾಕುವ ಹೊಡೆತವನ್ನು ಒಗ್ಗಟ್ಟನಿಂದ ಎದುರಿಸಬಹುದು ಎಂಬುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಲೆಕ್ಕಾಚಾರ.
****
ಅಂದ ಹಾಗೆ ಅಧಿಕಾರಕ್ಕೆ ಬಂದರೆ ತಾವೇ ಮುಖ್ಯ ಮಂತ್ರಿಯಾಗಬೇಕು ಎಂಬ ಪೈಪೋಟಿ ರಾಜಕಾರಣದಲ್ಲಿ ಹೊಸತೇನಲ್ಲ. ೧೯೫೨ ರ ವಿಧಾನಸಭಾ ಚುನಾವಣೆಯ ನಂತರ ಮರಳಿ ಸಿಎಂ ಆಗಬೇಕು ಅಂತ ಜವಾಬ್ದಾರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿಯವರಿಗೆ ಆಸೆ ಇತ್ತು. ಅದರೆ ನೆಹರೂ ಅವರಿಂದಾಗಿ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿ ಹುದ್ದೆಗೇರಿದರು. ೧೯೫೭ ರಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದಾಗ ನಿಜಲಿಂಗಪ್ಪ ಅವರ ಜತೆ ಬಿ.ಡಿ.ಜತ್ತಿ ಅವರಿಗೂ ಮುಖ್ಯಮಂತ್ರಿಯಾಗುವ ಆಸೆ ಇತ್ತು. ಆದರೆ ನಿಜಲಿಂಗಪ್ಪ ಅವರು ಪ್ರಧಾನಿ ನೆಹರೂ ಬಣದಲ್ಲಿದ್ದವರೆ, ಬಿ.ಡಿ. ಜತ್ತಿಯವರು ಮೊರಾರ್ಜಿ ದೇಸಾಯಿ ಅವರ ಬಣದಲ್ಲಿದ್ದರು. ಹೀಗಾಗಿ ಶಾಸಕಾಂಗ ಪಕ್ಷದಲ್ಲಿ ಬಹುಮತ ಹೊಂದಿದ್ದ ನಿಜಲಿಂಗಪ್ಪ ಅವರು ನಿರಾಯಾಸವಾಗಿ ಮುಖ್ಯಮಂತ್ರಿಯಾದರು.
ಬಹುಮತಕ್ಕೆ ನೆಹರೂ ಅವರು ಆದ್ಯತೆ ನೀಡುತ್ತಿದ್ದ ಪರಿಣಾಮವಾಗಿ ಬಿ.ಡಿ.ಜತ್ತಿ ಅವರ ನಿರೀಕ್ಷೆ ಸಫಲವಾಗಲಿಲ್ಲ.
ಮುಂದೆ ೧೯೫೮ ರಲ್ಲಿ ಜತ್ತಿ ಬಣ ನಿಜಲಿಂಗಪ್ಪ ಅವರ ವಿರುದ್ಧ ಬಂಡಾಯವೆದ್ದು ಅವರ ಮೇಲೆ ಹೊರಿಸಿದ ಆರೋಪದ ಪರಿಣಾಮವಾಗಿ ನೆಹರು ಕೂಡ ವಿವಶರಾದರು. ನಿಜಲಿಂಗಪ್ಪ ಕೆಳಗಿಳಿದು, ಬಿ.ಡಿ.ಜತ್ತಿ ಮುಖ್ಯಮಂತ್ರಿಯಾಗಿದ್ದು ಹೀಗೆ.
೧೯೬೨ ರ ಚುನಾವಣೆಯ ನಂತರ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ನಿಜಲಿಂಗಪ್ಪ ಅವರನ್ನು ಸ್ವಪಕ್ಷದ ವಿರೋಧಿ ಬಣ ಚುನಾವಣೆಯಲ್ಲಿ ಗೆಲುವು ಸಾಧಿಸದಂತೆ ನೋಡಿಕೊಂಡಿತು. ಇದು ಗೊತ್ತಾಗಿದ್ದರಿಂದ ನಿಜಲಿಂಗಪ್ಪ ತಾವು ಸೋತರೂ ಪಕ್ಷದ ಶಾಸಕಾಂಗದಲ್ಲಿ ತಮಗಿರುವ ಬಲವನ್ನು ಬಳಸಿ ಎಸ್.ಆರ್. ಕಂಠಿ ಮುಖ್ಯಮಂತ್ರಿಯಾಗುವಂತೆ ಬಿ.ಡಿ.ಜತ್ತಿ ಕನಸು ಹುಸಿಯಾಗುವಂತೆ ಮಾಡಿದರು. ಮುಂದೆ ೧೯೬೭ ರ ಚುನಾವಣೆಯಲ್ಲಿ ಗೆದ್ದು ಪುನ ಸಿಎಂ ಆದ ನಿಜಲಿಂಗಪ್ಪ ಮರು ವರ್ಷವೇ ಎಐಸಿಸಿ ಅಧ್ಯಕ್ಷರಾಗಿ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಲು ತಯಾರಾದ ಬಿ.ಡಿ.ಜತ್ತಿ ಅವರಿಂದಾಗಿ ಶಾಸಕಾಂಗ ಪಕ್ಷದಲ್ಲಿ ಬಲಾಬಲ ಪರೀಕ್ಷೆ ನಡೆಯಿತು.
ಅವತ್ತು ಬಿ.ಡಿ.ಜತ್ತಿ ಎದುರು ತಮ್ಮ ಶಿಷ್ಯ ವೀರೇಂದ್ರಪಾಟೀಲರು ಸ್ಪರ್ಧಿಸುವಂತೆ ನೋಡಿಕೊಂಡರು, ಪರಿಣಾಮ ಜತ್ತಿ ಸೋತು ವೀರೇಂದ್ರಪಾಟೀಲ್ ಸಿಎಂ ಆದರು.
ಮುಂದೆ ಕಾಂಗ್ರೆಸ್ ವಿಭಜನೆಯಾಗಿ ಇಂದಿರಾ ಬಣಕ್ಕೆ ದೇವರಾಜ ಅರಸು ಅಧ್ಯಕ್ಷರಾದರೂ, ಚುನಾವಣೆಯಲ್ಲಿನ ಗೆಲುವಿನ ನಂತರ ಸಿದ್ಧವೀರಪ್ಪ ಅವರನ್ನು ಸಿಎಂ ಮಾಡುವಂತೆ ಒತ್ತಾಯಿಸಿ ಕೆ.ಹೆಚ್.ಪಾಟೀಲರ ನೇತೃತ್ವದ ತಂಡ ಇಂದಿರಾ ಗಾಂಧಿ ಬಳಿ ಹೋಗಿತ್ತು.
ಆದರೆ ಇಂದಿರಾ ಗಾಂಧಿ ದೇವರಾಜ ಅರಸರ ಕೈ ಹಿಡಿದರು. ಮುಂದೆ ಅರಸರು ಕೆಳಗಿಳಿಯುವುದು ಅನಿವಾರ್ಯ ವಾದಾಗ ಆ ಜಾಗಕ್ಕೆ ಬರಲು ಸಾರೆಕೊಪ್ಪ ಬಂಗಾರಪ್ಪ ಪ್ರಯತ್ನಿಸಿದರು. ಆದರೆ ಸಂಜಯ ಗಾಂಧಿಯವರ ಬೆಂಬಲ ಪಡೆದ ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗುವ ಲಕ್ಕು ಪಡೆದರು.
೧೯೮೯ ರಲ್ಲಿ ಕೆಪಿಸಿಸಿ ಅಧ್ಯಕ್ಷ ವೀರೇಂದ್ರಪಾಟೀಲರ ನೇತೃತ್ವದಲ್ಲಿ ಪಕ್ಷ ಗೆಲುವು ಗಳಿಸಿದರೂ ಸಿಎಂ ಹುದ್ದೆಯ ರೇಸಿನಲ್ಲಿ ಬಂಗಾರಪ್ಪ ಕೂಡ ಇದ್ದರು. ನಂತರ ವೀರೇಂದ್ರಪಾಟೀಲರು ಕೆಳಗಿಳಿದಾಗ ಆ ಜಾಗಕ್ಕೆ ಬರಲು ಕೆ.ಹೆಚ್.ಪಾಟೀಲ್ ಟ್ರೈ ಕೊಟ್ಟಿದ್ದರು. ಬಂಗಾರಪ್ಪ ಅವರೇ ಕೆಳಗಿಳಿದಾಗ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ತಾವೇ ಮುಖ್ಯಮಂತ್ರಿ ಎಂದು ಊಹಿಸಿದ್ದರು. ಆದರೆ ತಮಿಳುನಾಡಿನ ಮರಗತಂ ಚಂದ್ರಶೇಖರ್ ಮತ್ತು ಕೇರಳದ ಕರುಣಾಕರನ್ ಬೆಂಬಲದಿಂದ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದರು.
೧೯೯೯ ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದರೂ ಕೃಷ್ಣ ಮಾತ್ರವಲ್ಲದೆ, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದರು. ಹೀಗೆ ನೋಡುತ್ತಾ ಹೋದರೆ ಕಾಂಗ್ರೆಸ್ ಪಕ್ಷವೇ ಇರಲಿ, ಇನ್ಯಾರೇ ಅಧಿಕಾರಕ್ಕೆ ಬರಲಿ ಸಿಎಂ ಹುದ್ದೆಗಾಗಿ ಪೈಪೋಟಿ ನಡೆಸುವ ಪಡೆ ಪ್ರತಿ ಚುನಾವಣೆಯ ನಂತರ ಮೇಲೆದ್ದು ನಿಲ್ಲುತ್ತಲೇ ಇರುತ್ತದೆ.
ಮತ್ತು ಇಂತಹ ಕಚ್ಚಾಟಗಳನ್ನು ಹೆಚ್ಚು ನಿಭಾಯಿಸಿದ ಅನುಭವ ಕಾಂಗ್ರೆಸ್ ಪಕ್ಷಕ್ಕಿರುವುದರಿಂದ ಅದು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಇರುವ ಕಚ್ಚಾಟಕ್ಕೆ ಬ್ರೇಕ್ ಹಾಕುವುದು ಕಷ್ಟವೇನಲ್ಲ.
ಆಡಳಿತಾರೂಢ ಬಿಜೆಪಿ ಸರ್ಕಾರ ಈ ಕೆಲಸವನ್ನು ಸುಗಮಗೊಳಿಸಿಕೊಟ್ಟಿದೆ ಅಷ್ಟೇ!

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ