Light
Dark

ಆಡಳಿತವಿರೋಧಿ ಅಲೆಯ ವಾಸ್ತವ ತೆರೆದಿಟ್ಟ ಯಡಿಯೂರಪ್ಪ

ಕೆಲ ದಿನಗಳ ಹಿಂದೆ ನಡೆದ ಪಕ್ಷದ ಚಿಂತನಾ ಬೈಠಕ್ ನಲ್ಲಿ ಸ್ವಪಕ್ಷೀಯರ ಅತಿವಿಶ್ವಾಸದ ಬಲೂನಿಗೆ ಯಡಿಯೂರಪ್ಪ ಸೂಜಿ ಚುಚ್ಚಿದ್ದಾರೆ.
ಅವರು ಸೂಜಿ ಚುಚ್ಚಿದ ರೀತಿ ಆತ್ಮವಿಶ್ವಾಸ ತೋರಿಸಿದ ನಾಯಕರಿಗಷ್ಟೇ ಅಲ್ಲ, ಬಿಜೆಪಿಯ ಇತರ ನಾಯಕರನ್ನೂ ಕಂಗೆಡಿಸಿದೆ.
ಅಂದ ಹಾಗೆ ಚಿಂತನಾ ಬೈಠಕ್ ನಲ್ಲಿ ಭಾಗವಹಿಸಿದ್ದ ಬಿಜೆಪಿಯ ಹಲ ನಾಯಕರು: ಮುಂದಿನ ವಿಧಾನಸಭಾ ಚುನಾವಣೆಯ ತಯಾರಿ ಕುರಿತು ಮಾತನಾಡಿದ್ದರು.

ಮೋದಿ- ಅಮಿತ್ ಶಾ ಜೋಡಿಯೇ ರಾಜ್ಯಕ್ಕೆ ಬಂದು ಚುನಾವಣೆಯ ಉಸ್ತುವಾರಿ ವಹಿಸಿಕೊಳ್ಳುವುದು ಪಕ್ಷಕ್ಕೆ ಬಹುದೊಡ್ಡ ಆತ್ಮಸ್ಥೈರ್ಯ ನೀಡಲಿದೆ.
ಯಾಕೆಂದರೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಮುಂಚೂಣಿಯಲ್ಲಿ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ಯಡಿಯೂರಪ್ಪ ಸೇರಿದಂತೆ ಅತಿರಥ-ಮಹಾರಥರ ಪಡೆಯೇ ನಿಂತಿರುತ್ತದೆ. ಆದರೆ ಎದುರಾಳಿ ಕಾಂಗ್ರೆಸ್ ಸೈನ್ಯದ ಮುಂದೆ ಇವರನ್ನು ಸರಿಗಟ್ಟಬಲ್ಲ ನಾಯಕರು ಯಾರಿರುತ್ತಾರೆ? ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಂತಹ ನಾಯಕರು ಇವರಿಗೆ ಎಷ್ಟು ಪ್ರತಿರೋಧ ಒಡ್ಡಬಹುದು?

ಇದೇ ರೀತಿ ರಾಜ್ಯದಲ್ಲಿ ನಮಗೆ ಪ್ರಮುಖ ಎದುರಾಳಿಯಾಗಿರುವ ಕಾಂಗ್ರೆಸ್ ಪಕ್ಷ ಆಂತರಿಕ ಸಂಘರ್ಷದಿಂದ ನರಳುತ್ತಿದೆ. ಅಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ನಡುವೆ ನಾಯಕತ್ವಕ್ಕಾಗಿ ಕಚ್ಚಾಟ ನಡೆಯುತ್ತಿದೆ.
ಈ ಕಚ್ಚಾಟ ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದವರಿಗೇ ಗೊತ್ತು. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ವಿಶ್ವಾಸ ಆ ಪಕ್ಷದಲ್ಲಿಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ನಿರಾಯಾಸವಾಗಿ ನೂರೈವತ್ತು ಸ್ಥಾನಗಳನ್ನು ಗೆದ್ದು ಸ್ವಯಂಬಲದ ಮೇಲೆ ಸರ್ಕಾರ ರಚಿಸುತ್ತದೆ ಅಂತ ಈ ನಾಯಕರು ಚಿಂತನ ಬೈಠಕ್ ನಲ್ಲಿ ಹೇಳಿದರು.

ಆದರೆ ಈ ನಾಯಕರ ಮಾತುಗಳನ್ನು ಸಭೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಲಿಲ್ಲ. ಬದಲಿಗೆ, ಇವತ್ತಿನ ಪರಿಸ್ಥಿತಿ ನೀವು ಹೇಳಿದಷ್ಟು ಸರಳವಾಗಿಲ್ಲ. ಯಾಕೆಂದರೆ ಈ ಹೊತ್ತಿಗೂ ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ನಮಗಿಂತ ಮುಂದಿದೆ. ಹಾಗಂತ ಅವರು ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುವ ಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಆದರೆ ಅವರು ನಮಗಿಂತ ಮುಂದಿದ್ದಾರೆ ಎಂಬುದೇ ವಾಸ್ತವ.

ಎಲ್ಲಕ್ಕಿಂತ ಮುಖ್ಯವಾಗಿ ಸಿದ್ಧರಾಮಯ್ಯ ಅವರಿಗಿರುವ ಶಕ್ತಿಯ ಬಗ್ಗೆ ತಪ್ಪು ಕಲ್ಪನೆ ಬೇಡ. ಇವತ್ತಿಗೂ ಅವರು ದೊಡ್ಡ ಜನನಾಯಕ. ಅಹಿಂದ ಸಮುದಾಯದ ಮತಗಳನ್ನು ಗಣನೀಯ ಪ್ರಮಾಣದಲ್ಲಿ ತಾವು ಬಯಸಿದ ಅಭ್ಯರ್ಥಿಗಳಿಗೆ ವರ್ಗಾಯಿಸುವ ಶಕ್ತಿ ಅವರಿಗಿದೆ.
ಇದೇ ರೀತಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಕೂಡಾ ಚುನಾವಣಾ ತಂತ್ರಗಾರಿಕೆಯಲ್ಲಿ ನಿಪುಣ. ಅವರ ವಿಷಯದಲ್ಲೂ ನಮಗೆ ತಪ್ಪು ಕಲ್ಪನೆ ಇರಬಾರದು. ಅದಕ್ಕಿಂತ ಮುಖ್ಯವಾಗಿ ಇವತ್ತು ನಮ್ಮಲ್ಲಿರುವ ಲೋಪಗಳೇನು ಅನ್ನುವುದರ ಕುರಿತು ಆತ್ಮಾವಲೋಕನ ಮಾಡಿಕೊಂಡು ನಾವು ಮುನ್ನುಗ್ಗಬೇಕೇ ಹೊರತು ಬೇರೆಯವರ ಲೋಪಗಳ ಆಧಾರದ ಮೇಲೆ ನಮಗೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿಂದಲ್ಲ ಎಂಬುದು ಯಡಿಯೂರಪ್ಪ ಅವರ ಮಾತಾಗಿತ್ತು.

ಯಾವಾಗ ಯಡಿಯೂರಪ್ಪ ಇಂತಹ ಮಾತುಗಳನ್ನಾಡಿದರೋ? ಇದಾದ ನಂತರ ಬಿಜೆಪಿ ಪಾಳೆಯದಲ್ಲಿ ವಿಪರೀತ ಆತ್ಮವಿಶ್ವಾಸದಿಂದ ಮಾತನಾಡುವ ಪ್ರವೃತ್ತಿ ಕಡಿಮೆಯಾಗಿದೆ.

****

ಅಂದ ಹಾಗೆ ಯಡಿಯೂರಪ್ಪ ಸ್ವಪಕ್ಷೀಯರನ್ನು ಹೀಗೆ ಎಚ್ಚರಿಸಲು ಕಾರಣಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಬಿಜೆಪಿ ಒಂದು ಬಾರಿ ಮೈತ್ರಿಯ ನೆಲೆಯಲ್ಲಿ, ಎರಡು ಬಾರಿ ಸ್ವಯಂಬಲದ ಮೇಲೆ ಅಧಿಕಾರ ಹಿಡಿದಿದ್ದಕ್ಕೆ ಅವರೇ ಮುಖ್ಯ ಕಾರಣ.

೨೦೦೬ ರಲ್ಲಿ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಲು ಯಡಿಯೂರಪ್ಪ ಎಷ್ಟು ಶ್ರಮಪಟ್ಟರು? ಎರಡು ಬಾರಿ ಸ್ವಯಂಬಲದ ಮೇಲೆ ಸರ್ಕಾರ ರಚಿಸಲು ಅದೆಷ್ಟು ಕಸರತ್ತು ಮಾಡಿದರು ಎಂಬುದು ಇತಿಹಾಸ.

೨೦೦೮ ಮತ್ತು ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಅದೆಷ್ಟೇ ಶ್ರಮಿಸಿದರೂ ಬಿಜೆಪಿ ೧೧೪ ಎಂಬ ಮ್ಯಾಜಿಕ್ ಸಂಖ್ಯೆಯನ್ನು ಮುಟ್ಟಲು ಸಾಧ್ಯವಾಗಿರಲಿಲ್ಲ.

೨೦೦೮ ರಲ್ಲಿ ಬಿಜೆಪಿ ೧೧೦ ಸ್ಥಾನ ಗಳಿಸಿತ್ತಲ್ಲ? ಅವತ್ತು ಪಕ್ಷೇತರರ ಬೆಂಬಲ ಪಡೆದು ಮೈತ್ರಿಕೂಟ ಸರ್ಕಾರ ರಚಿಸೋಣ. ಅಂತ ಜೆಡಿಎಸ್ ವರಿಷ್ಟ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಕೈ ಪಾಳೆಯದ ವರಿಷ್ಟರಿಗೆ ಪ್ರಪೋಸಲ್ಲು ರವಾನಿಸಿದ್ದರು.

ಕಾಂಗ್ರೆಸ್ ನ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದರೆ ಇಡೀ ದೇಶಕ್ಕೇ ಪಾಸಿಟಿವ್ ಸಂದೇಶವೊಂದನ್ನು ರವಾನಿಸಿದಂತಾಗುತ್ತದೆ ಎಂಬ ಅಂಶ ಈ ಪ್ರಪೋಸಲ್ಲಿನಲ್ಲಿ ಅಡಕವಾಗಿತ್ತು.

ದೇವೇಗೌಡರ ಈ ಪ್ರಪೋಸಲ್ಲನ್ನು ಒಪ್ಪಲು ಕಾಂಗ್ರೆಸ್ ಮಿಜಿ ಮಿಜಿ ಮಾಡುತ್ತಿರುವ ವಿವರ ಸಿಗುತ್ಯಿದ್ದಂತೆಯೇ ಮುನ್ನುಗ್ಗಿದ ಯಡಿಯೂರಪ್ಪ ಪಕ್ಷೇತರರನ್ನು ಸೆಳೆದಿದ್ದಷ್ಟೇ ಅಲ್ಲ, ಸರ್ಕಾರ ರಚಿಸಿದರೂ ಗಂಡಾಂತರ ತಪ್ಪಿದ್ದಲ್ಲ ಅಂತ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳೆಯಗಳಿಂದ ಡಜನ್ ಗೂ ಹೆಚ್ಚು ಶಾಸಕರ ಕೈಲಿ ರಾಜೀನಾಮೆ ಕೊಡಿಸಿ ಉಪಚುನಾವಣೆಗಳಿಗೆ ದಾರಿ ಮಾಡಿ ಕೊಟ್ಟರು.

ಮುಂದೆ ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದಕ್ಕಿದ್ದೇ ೧೦೪ ಸೀಟು.

ಇದೇ ಕಾರಣಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಕೈಗೂಡಿಸಿ ಸರ್ಕಾರ ರಚಿಸಿದವು. ಮುಂದೆ ಯಡಿಯೂರಪ್ಪ ಅವರು ಈ ಮೈತ್ರಿಕೂಟ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಒಂದು ವರ್ಷ ಕಾಯಬೇಕಾಯಿತು.

ಅಂದ ಹಾಗೆ ಈ ರೀತಿ ಮೂರು ಬಾರಿ ಅಧಿಕಾರ ಹಿಡಿಯುವ ಸಂದರ್ಭದಲ್ಲಿ ಬಿಜೆಪಿ ಜನವಿರೋಧಿ ಅಲೆಯನ್ನು ಎದುರಿಸಿರಲಿಲ್ಲ. ಮೊದಲ ಬಾರಿ ೨೦೦೪ ರಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದ್ದುದರಿಂದ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತ್ತು. ಮತ್ತದರ ಬಲದಿಂದಲೇ ೨೦೦೬ರಲ್ಲಿ ಮೈತ್ರಿಕೂಟ ಸರ್ಕಾರದಲ್ಲಿ ಪಾಲುದಾರನಾಗಲು ಯಶಸ್ವಿಯಾಯಿತು.

ನಂತರ ೨೦೦೮ ರಲ್ಲಿ ಚುನಾವಣೆಗೆ ಹೋದಾಗ ಜೆಡಿಎಸ್ ನ ಕುಮಾರಸ್ವಾಮಿ ತಮಗೆ ಅಧಿಕಾರ ಬಿಟ್ಟುಕೊಡದೆ ವಚನದ್ರೋಹ ಮಾಡಿದರು ಎಂದು ಆರೋಪಿಸಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.

೨೦೧೮ ರಲ್ಲಿ ಚುನಾವಣೆಗೆ ಹೋದಾಗ ಆಡಳಿತಾರೂಢ ಕಾಂಗ್ರೆಸ್ ನ ಅನೈಕ್ಯತೆಯ ಲಾಭ ಪಡೆದು ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತ್ತು.
ಆದರೆ ಮುಂದಿನ ಚುನಾವಣೆಗೆ ಹೋಗುವಾಗ ಬಿಜೆಪಿಗೆ ಅನುಕೂಲವಾಗುವ ವಿಷಯ ಏನು? ಬೆಲೆ ಏರಿಕೆಯಿಂದ ಹಿಡಿದು ಭ್ರಷ್ಟಾಚಾರದ ತನಕ ಹಲವು ಅಂಶಗಳು ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸಿವೆ.

ಸಿದ್ದರಾಮಯ್ಯ- ಡಿಕೆಶಿ ನಡುವಣ ಕಚ್ಚಾಟವಾಗಲಿ, ಕೇಂದ್ರದ ನಾಯಕರು ಬಂದು ಕೂರುವುದರಿಂದಾಗಲಿ ಈ ಅಲೆ ಮಾಯವಾಗುವುದಿಲ್ಲ.
ಹೀಗಾಗಿ ಮೊದಲು ಈ ಅಲೆಯನ್ನು ತಡೆಗಟ್ಟಬೇಕು. ನಂತರ ಎದುರಾಳಿಗಳ ವ್ಯೆಹ ಮುರಿಯಬೇಕು ಎಂಬುದು ಯಡಿಯೂರಪ್ಪ ಅವರ ಯೋಚನೆ.
ಅವರ ಈ ಯೋಚನೆಗೆ ಎದುರಾಡುವ ಶಕ್ತಿ ಬಿಜೆಪಿಯ ಯಾರಲ್ಲೂ ಇಲ್ಲ ಎಂಬುದೇ ಸಧ್ಯದ ವಾಸ್ತವ.

ಕೊನೆಯ ಮಾತು: ಚಿಂತನ ಬೈಠಕ್ ನಲ್ಲಿ ಸ್ವಪಕ್ಷೀಯರಿಗೆ ಎಚ್ಚರಿಕೆ ಕೊಟ್ಟ ಯಡಿಯೂರಪ್ಪ ಈಗ ಇದ್ದಕ್ಕಿದ್ದಂತೆ ಪುತ್ರ ವಿಜಯೇಂದ್ರ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ. ಅರ್ಥಾತ್ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಕೂಡಾ ಅವರು ಸ್ವಪಕ್ಷೀಯರಿಗೆ ನೀಡಿರುವ ಎಚ್ಚರಿಕೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ