ಸ್ವಾಭಿಮಾನಕ್ಕೆ ಧಕ್ಕೆಯಾದರೆ ಬಂಡೇಳುವುದು ವಿ.ಶ್ರೀನಿವಾಸ ಪ್ರಸಾದ್ ಅವರ ಜಾಯಮಾನ
ಸಿ.ಹರಕುಮಾರ್
ಸ್ವಾಭಿಮಾನದ ರಾಜಕಾರಣಕ್ಕೆ ಪರ್ಯಾಯವೆಂಬಂತಿದ್ದ ವಿ.ಶ್ರೀನಿವಾಸ ಪ್ರಸಾದ್ ರವರು ನಮ್ಮನ್ನಗಲಿ ಇಂದಿಗೆ ಎರಡು ವರ್ಷಗಳು ಸಂದಿವೆ. ಅವರ ಸಾವಿನ ಶೂನ್ಯತೆಯನ್ನು ತುಂಬ ಬಲ್ಲ, ಅವರಿಗಿದ್ದ ಸಂವೇದನಾಶೀಲತೆಯನ್ನು ಅಳವಡಿಸಿಕೊಂಡಿರುವ, ವೃತ್ತಿ ರಾಜಕಾರಣದ ನಡುವೆಯೂ ಅವರಿಗಿದ್ದ ವೈಚಾರಿಕತೆ ಪ್ರಖರತೆಯನ್ನು ರೂಢಿಸಿಕೊಂಡಿರುವ ರಾಜಕಾರಣಿಗಳು (ವಿಶೇಷವಾಗಿ ಶೋಷಿತ ಸಮುದಾಯಗಳ ಪೈಕಿ ) ಇಂದು ಇಲ್ಲದಿರುವುದು ವಿಷಾದಕರ ಸಂಗತಿ.
ಒಳ ಮೀಸಲಾತಿ ಕಡು ವಿರೋಧಿ
ಒಳ ಮೀಸಲಾತಿಯ ಬಗ್ಗೆ ಪ್ರಸಾದ್‌ರವರಿಗೆ ಇದ್ದ ಸ್ಪಷ್ಟತೆ ಗಾಬರಿ ಹುಟ್ಟಿಸುತ್ತದೆ. ಆರಂಭದಿಂದಲೂ ಒಳ ಮೀಸಲಾತಿಯನ್ನು ವಿರೋಧಿಸಿಕೊಂಡೇ ರಾಜಕಾರಣ ಮಾಡುತ್ತಾ ಬಂದವರಲ್ಲಿ ಬಹುಶಃ ಪ್ರಸಾದ್ ಮೊದಲಿಗರು ಮತ್ತು ಕೊನೆಯವರು ಎಂಬುದನ್ನು ತಳ್ಳಿಹಾಕುವಂತಿಲ್ಲ. ‘ಒಳ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಮತ್ತು ಪರಿಶಿಷ್ಟರನ್ನು ಈ ನೆಪದಲ್ಲಿ ಒಡೆಯುವುದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಪ್ರಸಾದ್‌ರವರೇನಾದರೂ ಇದ್ದಿದ್ದರೆ ಒಳ ಮೀಸಲಾತಿಯ ಅನುಷ್ಠಾನ ಕಷ್ಟವಾಗುತ್ತಿತ್ತು ಅಥವಾ ರಾಜೀನಾಮೆ ಕೊಟ್ಟು ಹೊರ ಬರುತ್ತಿದ್ದರು. ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಒಳ ಮೀಸಲಾತಿಯ ಹೋರಾಟ, ತಲ್ಲಣ, ಸಂಕಟ, ವೈರುಧ್ಯಗಳನ್ನು ಅವಲೋಕಿಸಿ ನೋಡಿದಾಗ ಪ್ರಸಾದ್ ರವರ ಗೈರುಹಾಜರಿಯಲ್ಲಿ ಬಹಳಷ್ಟು ಮಂದಿ ತಮಗಿಷ್ಟ ಬಂದಂತೆ ವ್ಯಾಖ್ಯಾನಿಸಲು ಧೈರ್ಯ ತೋರಿದ್ದಿದೆ. ಸದ್ಯಕ್ಕೆ ಒಳ ಮೀಸಲಾತಿ ಇಷ್ಟವೋ ಅಥವಾ ಕಷ್ಟವೋ ಇದನ್ನು ಒಪ್ಪಿಕೊಳ್ಳುವ ಸಾಂದರ್ಭಿಕ ಪರಿಸ್ಥಿತಿಯಲ್ಲಿದ್ದೇವೆ.
ನೇರ ಲೋಕಸಭೆಗೆ
ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ, ವಿಧಾನಪರಿಷತ್‌ನ ಯಾವುದೇ ಸದಸ್ಯರಾಗಿ ಅನುಭವವಿಲ್ಲದ ಪ್ರಸಾದ್ ನೇರವಾಗಿ ಸಂಸತ್ತಿನ ಕೆಳಮನೆಗೆ ಆಯ್ಕೆಯಾದದ್ದು ಇವರಿಗಿದ್ದ ಆಂಗ್ರಿ ಯಂಗ್ ಮ್ಯಾನ್ ಕಲ್ಚರ್ ಮತ್ತು ಬಿ. ಬಸವಲಿಂಗಪ್ಪನವರ ಪರ ಬೂಸಾ ಚಳವಳಿಯಲ್ಲಿ ತೊಡಗಿಸಿಕೊಂಡ ಹೋರಾಟ ಅವರ ರಾಜಕೀಯ ದಿಕ್ಕು ದೆಸೆಯನ್ನೇ ಬದಲಿಸಿತು. ಪರಿಚಯವೇ ಇಲ್ಲದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಪರಿಚಿತರಾದದ್ದೇ ವಿಶೇಷ. ಇದಕ್ಕೂ ಬಹಳ ಪರಿಣತಿ ಮತ್ತು ತರಬೇತಿ ಅವಶ್ಯವಿತ್ತು. ಅದನ್ನು ಅವರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಉಪಚುನಾವಣೆ (೧೯೭೪) ಮತ್ತು ತಿ. ನರಸೀಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪರಾಭವಗೊಂಡಾಗ ಕಂಡುಕೊಂಡಿದ್ದರು. ಅಲ್ಲಿಂದ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಿಂದ ಹಿಂತಿರುಗಿ ನೋಡಲೇ ಇಲ್ಲ.
ಬೌದ್ಧಿಕ ವಲಯದ ಆಪ್ತತೆ
ಪ್ರಸಾದ್ ಬೇರೆ ದಲಿತ ರಾಜಕಾರಣಿಗಳಂತೆ ಸುಮ್ಮನೆ ಕೂರಲಿಲ್ಲ. ರಾಜಕಾರಣದ ಜೊತೆಗೆ ಅಂಬೇಡ್ಕರ್, ಬುದ್ಧ, ಬಸವಣ್ಣ, ಕುವೆಂಪುರವರ ಸಾಹಿತ್ಯಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಎಡಪಂಥೀಯ ಚಿಂತನೆಗಳನ್ನು ಮೈಗೊಡಿಸಿಕೊಂಡಿದ್ದು ವಿಶೇಷ. ಇದರಿಂದಾಗಿ ಪ್ರಸಾದ್‌ರವರಿಗೆ ಬೌದ್ಧಿಕ ವಲಯದ ಪ್ರಗತಿಪರರು, ವಿಚಾರವಾದಿಗಳು, ಚಿಂತಕರು ಹತ್ತಿರವಾಗುತ್ತಾ ಹೋದರು. ಇದೇ ಬೌದ್ಧಿಕ ವಲಯದವರು ಪ್ರಸಾದ್ ರವರ ರಾಜಕಾರಣದಲ್ಲಿ ಆಸರೆಯಾಗಿ ನಿಂತರು. ಒಂದು ಕಾಲಕ್ಕೆ ಅವರ ಉಪಸ್ಥಿತಿ ಇಲ್ಲದ ಅಂಬೇಡ್ಕರ್‌ರವರ ಸಮಾರಂಭಗಳನ್ನು ಊಹಿಸಿಕೊಳ್ಳುವುದೂ ಕಷ್ಟವಾಗಿತ್ತು. ಎಷ್ಟರಮಟ್ಟಿಗೆ ಇವರು ಬ್ಯುಸಿಯಾದರೆಂದರೆ ಅಽವೇಶನಗಳಿಲ್ಲದ ಸಂದರ್ಭದಲ್ಲಿ ಇವರನ್ನು ಭೇಟಿಯಾಗುವುದೇ ಕಷ್ಟವಾಗುತ್ತಿತ್ತು. ಇವರ ಭಾಷಣದ ಕಲೆಗಾರಿಕೆ, ಕಸುಬುದಾರಿಕೆ ಹೇಗೆ ಬೆಳೆಯಿತೆಂದರೆ ಯುನಿವರ್ಸಿಟಿ ಪ್ರೊಫೆಸರ್‌ಗಳು, ಲೇಖಕರು, ಬುದ್ಧಿಜೀವಿಗಳು, ಚಿಂತಕರು ಬೆರಗಾಗುವಂತೆ ಮಾತನಾಡುವ ಸೃಜನಶೀಲತೆ ಲಭ್ಯವಾಗಿತ್ತು. ಅದಕ್ಕೆ ಹಿರಿಯ ರಂಗಕರ್ಮಿ, ನಟ, ಜಿ. ಕೆ. ಗೋವಿಂದರಾವ್ ಇವರನ್ನು ‘ಪೊಲಿಟಿಕಲ್ ಪ್ರೊಫೆಸರ್’ ಎಂದೇ ಕರೆಯುತ್ತಿದ್ದರು.
ಒಮ್ಮೆ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿದ್ದ ಕಮಲಾಪತಿ ತ್ರಿಪಾಠಿ ಹಣೆಗೆ ಧರಿಸುತ್ತಿದ್ದ ದೊಡ್ಡ ಗಾತ್ರದ ಕುಂಕುಮ ನೋಡಿ ‘ನನಗೆ ಭಯವಾಗುತ್ತದೆ, ಇದು ಕಾಂಗ್ರೆಸ್‌ನ ಕಲ್ಚರ್‌ಗೆ ವಿರೋಧ’ ಎಂದೇ ಸ್ಪಷ್ಟವಾಗಿ ಹೇಳಿದ್ದರು. ಯಡಿಯೂರಪ್ಪ ಮತ್ತು ಎಚ್. ಡಿ. ಕುಮಾರಸ್ವಾಮಿರವರ ಮಣಿಕಟ್ಟಿನಲ್ಲಿರುವ ದಾರಗಳನ್ನು ಎಣಿಸಲು ವರ್ಷವೇ ಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದರು. ಪ್ರಸ್ತುತ ಸಮಾಜದ ಕೊಳಕನ್ನು ನಾಜೂಕಾಗಿ ಟೀಕಿಸುತ್ತಿದ್ದರು ‘ಹೆಂಡ ಕಟ್ಟುವವನಿಗೊಂದು ಜಾತಿಯಾದರೆ, ಹೆಂಡ ಕುಡಿಯುವನಿಗೊಂದು ಜಾತಿ’, ‘ಕುರಿ ಕಾಯುವವನಿಗೊಂದು ಜಾತಿಯಾದರೆ, ಕುರಿ ತಿನ್ನುವವನಿಗೊಂದು ಜಾತಿ‘. . . ಹೀಗೆ ಪ್ರತಿ ಕಸುಬಿಗೂ ಒಂದೊಂದು ಜಾತಿ ಇರುವ ಮೌಲ್ಯಗಳು ನಮಗೆ ಬೇಕೆ? ಎಂದು ಪ್ರಶ್ನಿಸುತ್ತಿದ್ದರು. ವೀರಶೈವ ಧರ್ಮ ಜಗತ್ತಿನಲ್ಲೇ ಶ್ರೇಷ್ಠ ಧರ್ಮ ಮತ್ತು ಸಪ್ತಸಾಗರದಾಚೆ ದಾಟಿದೆಯೆಂದು’ ವಚನ ಸಾಹಿತ್ಯದ ಬಗ್ಗೆ ಹೆಮ್ಮೆಯಿಂದ ಹೇಳಿದ್ದರು. ತಮ್ಮ ಜೀವಿತಾವಧಿಯಲ್ಲಿ ‘ಬುದ್ಧನೆಡೆಗೆ ಮರಳಿ ಮನೆಗೆ’ ಎಂಬ ಸಮಾವೇಶ ಆಯೋಜಿಸುವುದರ ಜೊತೆಗೆ ಜನಗಣತಿ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ‘ಬೌದ್ಧ’ ಎಂತಲೂ, ಜಾತಿ ಕಾಲಮ್ ನಲ್ಲಿ ‘ಪರಿಶಿಷ್ಟ ಜಾತಿ’ (ಆದಿ ಕರ್ನಾಟಕ) ಎಂತಲೂ ದಾಖಲೆಯನ್ನು ಬಿಡುಗಡೆ ಮಾಡಿದ ಏಕೈಕ ದಲಿತ ರಾಜಕಾರಣಿ. ಅಷ್ಟರಮಟ್ಟಿಗೆ ಪ್ರಸಾದ್ ಪ್ರಖರ ವಿಚಾರವಾದಿ ಮತ್ತು ಮೌಢ್ಯಗಳ ವಿರೋಧಿ.
ಬಂಡಾಯ ರಾಜಕಾರಣಿ
ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ ಸಂದರ್ಭದಲ್ಲೆಲ್ಲ ತಮ್ಮ ಪಕ್ಷದ ನಾಯಕರ ಮತ್ತು ನಿಲುವಿನ ವಿರುದ್ಧ ಬಂಡೇಳುವುದು ಮತ್ತು ಪಕ್ಷಾಂತರ ಮಾಡುವುದು ಇವರ ಜಾಯಮಾನವಾಗಿತ್ತು. ಎಐಎ ಡಿಎಂಕೆಯಿಂದ ಆರಂಭವಾದ ಚಟುವಟಿಕೆ ಜನತಾ ಪಕ್ಷ, ಕಾಂಗ್ರೆಸ್, ಲೋಕದಳ, ಸಮತಾ ಪಕ್ಷ, ಜೆಡಿಯು, ಜಾ. ದಳ ಮತ್ತು ಬಿಜೆಪಿಯಲ್ಲಿ ಅಂತ್ಯಗೊಂಡಿತು. ತಮ್ಮ ಪಕ್ಷದ ನಾಯಕ ಮತ್ತು ಪ್ರಧಾನಿ ಪಿ. ವಿ. ನರಸಿಂಹರಾಯರು ದಕ್ಷಿಣ ಆಫ್ರಿಕಾದ ಡರ್ಬಾನ್‌ನಲ್ಲಿ ವರ್ಣಭೇದ ನೀತಿಯ ಬಗ್ಗೆ ಮಾತನಾಡಿದ್ದನ್ನು ವ್ಯಂಗ್ಯ ಮಾಡುತ್ತಾ, ಭಾರತದ ಅಸ್ಪೃಶ್ಯತೆ ಬಗ್ಗೆಯೂ ಮಾತನಾಡಬೇಕಾಗಿತ್ತು ಎಂದು ಹೇಳಿದ್ದರು. ಈ ಕಾರಣಕ್ಕಾಗಿ ೧೯೯೬ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಬಿ ಫಾರಂ ದೊರೆಯಲಿಲ್ಲ. ಬಿಜೆಪಿಯಲ್ಲಿದ್ದಾಗ ‘ ಸಂವಿಧಾನ ಬದಲಾಯಿಸಲೆಂದೇ ನಾವು ಅಧಿಕಾರಕ್ಕೆ ಬಂದಿರುವುದು, ಎಂದ ಸಂಸದ ಅನಂತ್ ಕುಮಾರ್ ಹೆಗಡೆಯನ್ನು ತರಾಟೆಗೆ ತೆಗೆದುಕೊಂಡ್ಡಿದ್ದೂ ಅಲ್ಲದೇ ‘ಸಂವಿಧಾನ ಬದಲಾಯಿಸಲು ಅದೇನೂ ಮಗ್ಗಿ ಪುಸ್ತಕವಲ್ಲ‘ ಎಂದಿದ್ದರು. ಬಿಜೆಪಿಯು ಜಲಂತರ್ಗಾಮಿ ಸಬ್ ಮೆರಿನ್ ಪ್ರಕರಣದಲ್ಲಿ ರಾಜೀವ್ ಗಾಂಧಿ ಯವರನ್ನು ದೋಷಿ ಎಂದು ಟೀಕಿಸಿದಾಗ, ‘ರಾಜೀವ್ ಗಾಂಧಿ ಬಗ್ಗೆ ಆ ರೀತಿ ಹಗುರವಾಗಿ ಮಾತನಾಡಬಾರದು’ ಎಂದು ತಿರುಗೇಟು ನೀಡುವುದರ ಜೊತೆಗೆ ಬಿಜೆಪಿಯಲ್ಲಿದ್ದುಕೊಂಡೇ ರಾಜೀವ್ ಗಾಂಧಿ ಮಾಡಿದ ಕಂಪ್ಯೂಟರ್ ಮತ್ತು ಮೊಬೈಲ್ ಕ್ರಾಂತಿ ಹಾಗೂ ಅವರ ವಿದೇಶಾಂಗ ನೀತಿಗಳ ಬಗ್ಗೆ ಹೊಗಳುತ್ತಾ ಪಕ್ಷಕ್ಕೆ ಮುಜುಗರ ತಂದಿದ್ದರು. ಇಂತಹ ವೈರುಧ್ಯಗಳ ಮಧ್ಯೆಯೂ ಕುಳಿತಲ್ಲೇ ರಾಜಕೀಯ ತಂತ್ರಗಾರಿಕೆ ಮಾಡುತ್ತಿದ್ದ ರೀತಿ ಅಚ್ಚರಿ ಹುಟ್ಟಿಸುತ್ತಿತ್ತು. ಇಂತಹ ಎದೆ ಗಾರಿಕೆಯುಳ್ಳ ರಾಜಕಾರಣಿ ಪ್ರಸ್ತುತ ರಾಜಕೀಯ ಪಕ್ಷಗಳಲ್ಲಿ ಸಿಗುವುದು ಅಪರೂಪ. ಧ್ವನಿ ಇಲ್ಲದೆ ಮಲಗಿದ್ದವರ ದನಿಯಾಗಿ ತಮ್ಮ ವಿಶಿಷ್ಟ ವ್ಯಕ್ತಿತ್ವದ ಮೂಲಕ ರಾಜಕೀಯ ಮತ್ತು ಸಾಮಾಜಿಕ ಸಂಚಲನ ಮೂಡಿಸುವಷ್ಟರಮಟ್ಟಿಗೆ ಬೆಳೆದದ್ದು ಮಾತ್ರ ವಿಸ್ಮಯ. ಅಭಿಮಾನಿಗಳಿಗೆ ‘ಅನುಭವ ಮಂಟಪ’ದಂತಿದ್ದ ಭೀಮಸದನ ಈಗ ಪ್ರಸಾದ್ ಇಲ್ಲದೇ ಬಿಕೋ ಎನ್ನುತ್ತಿದೆ.




