Mysore
25
overcast clouds
Light
Dark

ವಿದುಷಿ ನಂದಿನಿ ಈಶ್ವ‌ರ್‌; ಇವರಿಗೆ ನೃತ್ಯವೆಂಬುದು ಅಧ್ಯಾತ್ಮ

ನೃತ್ಯ ಎಂದರೆ ಕೇವಲ ಮನೋರಂಜನೆಗಾಗಿಯೋ, ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕಾಗಿಯೋ ಮಾಡುವ ಕಲೆಯಲ್ಲ. ಅದು ದೇವರ ಆರಾಧನೆಯ ಸಾಧನ. ಆಧ್ಯಾತ್ಮಿಕ ಔನ್ನತ್ಯ ಸಾಧಿಸಿ ಭಗವಂತನಿಗೆ ಹತ್ತಿರವಾಗುವುದು ಇದರ ಗುರಿ ಎಂದು ಬಲವಾಗಿ ನಂಬಿರುವ ನೃತ್ಯ ಗುರು ವಿದುಷಿ ನಂದಿನಿ ಈಶ್ವರ್, ತಮ್ಮ ಶಿಷ್ಯವೃಂದವನ್ನು ಈ ಪಥದಲ್ಲಿ ಕೊಂಡೊಯ್ಯುವ ಹಂಬಲದೊಂದಿಗೆ, ಹಗಲು ರಾತ್ರಿ ಧ್ಯಾನಸ್ಥರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸ ಓದಿಗೆ, ವಿಷಯಕ್ಕೆ, ಮರು ಚಿಂತನೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ, ತಮ್ಮ ಚಿಂತನೆಗಳನ್ನು ನವೀಕರಿಸಿಕೊಳ್ಳುತ್ತಾ, ಇಂದಿನ ಮಕ್ಕಳೊಂದಿಗೆ ತಾವು ಮಗುವಾಗಿ ಬೆರಗಿನಿಂದ ಎಲ್ಲವನ್ನೂ ನೋಡುತ್ತಾ, ಹೊಸ ಕಾಲದೊಂದಿಗೆ ಪ್ರೀತಿಯಿಂದ ಅನುಸಂಧಾನ ಮಾಡುತ್ತಿರುವುದು ಅವರ ಅಸಾಧಾರಣ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

ನೃತ್ಯ ಕಲಾವಿದೆ, ನೃತ್ಯ ನಿರ್ದೇಶಕಿ, ವೀಣಾ ವಾದಕಿ, ಬರಹಗಾರ್ತಿ, ನಿರಾಡಂಬರ ಕಲಾತಪಸ್ವಿನಿಯಾಗಿರುವ ಗುರು ವಿದುಷಿ ನಂದಿನಿ ಈಶ್ವರ್ ಆಗಸ್ಟ್ 7, 1947ರಲ್ಲಿ ಮೈಸೂರಿನಲ್ಲಿ ಜನಿಸಿದರು. ತಮ್ಮ ಅಜ್ಜಿ ಸರಸ್ವತಮ್ಮ, ತಾತ ಡಾ. ರಾಮಶಾಸ್ತ್ರಿಯವರ ಒತ್ತಾಸೆಯ ಮೇರೆಗೆ ತಮ್ಮ ಐದನೆಯ ವಯಸ್ಸಿನಲ್ಲೇ ಗುರು ಶ್ರೀ ವೈ.ಎನ್.ಸಿಂಹ ಮತ್ತು ಪಂಡಿತ್ ತೀರ್ಥರಾಮ್ ಶರ್ಮ (ಆಜಾದ್)” ಅವರಿಂದ ಕಥಕ್ ನೃತ್ಯ ಕಲಿಕೆಯನ್ನು ಆರಂಭಿಸುತ್ತಾರೆ.

ಮುಂದೆ ಮೈಸೂರು ಶೈಲಿಯ ಭರತನಾಟ್ಯವನ್ನು ಆಸ್ಥಾನ ವಿದ್ವಾಂಸರಾಗಿದ್ದ ಪುಟ್ಟಕ್ಕಯ್ಯ ಮತ್ತು ಡಾ. ಕೆ.ವೆಂಕಟಲಕ್ಷಮ್ಮ’ ಅವರಿಂದಲೂ, ತಂಜಾವೂರು ಶೈಲಿಯನ್ನು ಗುರು ಶ್ರೀಮತಿ “ಲಲಿತ ದೊರೈ ಅವರಿಂದಲೂ ಅಭ್ಯಸಿಸುತ್ತಾರೆ. ಮಣಿಪುರಿಯನ್ನು ವಾಲ್ಮೀಕಿ ಬ್ಯಾನರ್ಜಿ ಅವರಲ್ಲಿಯೂ, ಗುರುಳಾದ ಶ್ರೀ “ವೇದಾಂತ ಪ್ರಹ್ಲಾದ ಶರ್ಮ ಮತ್ತು ಪಸುಮರ್ತಿ ಗೋಪಾಲಕೃಷ್ಣ ಶರ್ಮ” ಅವರಿಂದ ಕುಚಿಪೂಡಿ ನೃತ್ಯವನ್ನೂ, ಗುರು ವಾಲ್ಮೀಕಿ ಬ್ಯಾನರ್ಜಿ ಅವರಿಂದ ಮಣಿಪುರಿ, ರವೀಂದ್ರನಾಟ್ಯ, ಡಾನ್ಸ್‌ ಡ್ರಾಮ, ಜಾನಪದ ನೃತ್ಯಗಳನ್ನು ಅಭ್ಯಸಿಸುತ್ತಾರೆ. ಅಲ್ಲದೆ ವೀಣೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸಿರುವ ಗುರು ವಿದುಷಿ ನಂದಿನಿ ಈಶ್ವ‌ ಅವರು ವೀಣೆಯನ್ನು ಗುರುಗಳಾದ “ಎಂ.ಜೆ.ಶ್ರೀನಿವಾಸ್ ಅಯ್ಯಂಗಾರ್” ಮತ್ತು ಶ್ರೀಮತಿ ಎ.ಎಸ್.ಪದ್ಮ’ ಅವರಲ್ಲಿ 66 ಅಭ್ಯಸಿಸುತ್ತಾರೆ. 1980 ರಿಂದ “ರಾಸವೃಂದ ಸ್ಕೂಲ್ ಆಫ್ ಡಾನ್ಸ್” ಸಂಸ್ಥೆಯನ್ನು ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡುತ್ತಾ ಬಂದಿ ದ್ದಾರೆ. ಅಲ್ಲದೆ ದೇಶ ವಿದೇಶಗಳಲ್ಲಿಯೂ ಹಲವಾರು ಕಾರ್ಯಕ್ರಮ ಗಳನ್ನು, ಕಾರ್ಯಾಗಾರಗಳನ್ನು ನಡೆಸುತ್ತಾ, ಸದಭಿರುಚಿಯ ಪ್ರೇಕ್ಷಕರನ್ನು ರೂಪಿಸುವತ್ತಲೂ ತಮ್ಮ ಗಮನವನ್ನು ಹರಿಸಿದ್ದಾರೆ.

ಇವರು ಗೋಕುಲ ನಿರ್ಗಮನ, ಹರಿಣಾಭಿಸರಣ, ಕೆರೆಗೆ ಹಾರ, ಸಾವಿತ್ರಿ ಸತ್ಯವಾನ್, ದಾಸರು ಕಂಡ ಗೋಪಿ ಕೃಷ್ಣ, ಅಕ್ರೂರಾಗಮನ, ಮೇಘದೂತ, ಮಮತೆಯ ಸುಳಿ ಮಂಥರೆ, ವಿಲಿಯಂ ಶೇಕ್ಸ್ ಪಿಯರ್‌ನ ಸಾನೆಟ್‌ಗಳು ಸೇರಿದಂತೆ ಅನೇಕ ನೃತ್ಯ ರೂಪಕಗಳನ್ನು ನಿರ್ದೇಶಿಸಿದ್ದಾರೆ. ಹಾಗೂ ನರ್ತನ – ವೈಚಾರಿಕ ಲೇಖನಗಳು, ಹೀಗೂ ಯೋಚಿಸಬಹುದೇ, ಅಭಿನಯ ದರ್ಪಣ ಒಂದು ವಿಚಾರ ಪಥ, ನರ್ತನ ಯೋಗ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ಸಂಗೀತ ನೃತ್ಯಾ ಅಕಾಡೆಮಿಯು ಪಂಡಿತ್ ತೀರ್ಥರಾಮ್ ಶರ್ಮ ಆಜಾದ್ ಅವರು ರಚಿಸಿರುವ ಇವರ ಅನುವಾದಿಸಿ ಕಥಕ್ ನೃತ್ಯ ಪ್ರವೇಶಿಕವನ್ನು ಹೊರತಂದಿದ್ದಾರೆ. ನಾಟ್ಯರಾಣಿ ಶಾಂತಲಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಟ್ಯ ಶಿರೋಮಣಿ, ನಾಟ್ಯ ಕಲಾತಪಸ್ವಿನಿ, ನೃತ್ಯ ಕಲಾ ಸಿಂಧು, ಚಂದನ ದೂರದರ್ಶನ ಪ್ರಶಸ್ತಿ, ನಾಟ್ಯ ರತ್ನ ಮುಂತಾದ ಹಲವಾರು ಪ್ರಶಸ್ತಿಗಳು ಇವರ ಸಾಧನೆಯನ್ನರಸಿ ಬಂದಿವೆ.

ಸುಮಾರು ಏಳು ದಶಕಗಳಿಂದಲೂ ನೃತ್ಯ ಕಲೆಯ ಸೇವೆಯಲ್ಲಿ ತೊಡಗಿ, ನರ್ತನವನ್ನೇ ತಮ್ಮ ಜೀವನ ಸಂಗಾತಿಯನ್ನಾಗಿಸಿಕೊಂಡಿರುವ ಗುರು ವಿದುಷಿ ನಂದಿನಿ ಈಶ್ವರ್ ಅವರ ನೃತ್ಯ ರೂಪಕಗಳನ್ನು ಮೆಚ್ಚಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದ ಹಲವು ಗಣ್ಯರಲ್ಲಿ ಪುತಿನ, ಕುವೆಂಪು, ಪಂಡಿತ್‌ ರವಿಶಂಕರ್‌ ರವರು ಸೇರಿದ್ದಾರೆ. ಸ್ವತಃ ಪುತಿನ ಅವರೇ ರಾಸವೃಂದಕ್ಕೆ ಆಗಮಿಸಿ ನಂದಿನಿ ಈಶ್ವರ್ ಅವರಿಗೆ ಗೋಕುಲ ನಿರ್ಗಮನ ಮತ್ತು ಹರಿಣಾಭಿಸರಣ ಗೇಯ ನಾಟಕಗಳ ಕಾವ್ಯದ ಸಾಲುಗಳನ್ನು ಅರ್ಥೈಸುತ್ತಾ, ಮೊಟ್ಟ ಮೊದಲ ಬಾರಿಗೆ ಅವು ಸಮರ್ಥವಾದ ನೃತ್ಯರೂಪಕಗಳಾಗಿ ಅರಳಿಕೊಳ್ಳಲು ಸಾಕ್ಷಿಯಾಗಿದ್ದಾರೆ. ಈ ನೃತ್ಯ ರೂಪಕಕ್ಕೆ ಸಂಗೀತ ಅಳವಡಿಸಿದವರು ವಿದುಷಿ ಎಸ್‌.ಕೆ. ವಸುಮತಿಯವರು.

ಇಂದು ಅಮ್ಮನ ಮುಂದುವರಿಕೆ ಎಂಬಂತೆ ಅಷ್ಟೇ ಸಮರ್ಥವಾಗಿ ಅವರ ಮಗ “ಡಾ.ರೋಹಿತ ಈಶ್ವರ್” ಅವರು ಅಮ್ಮನ ಬೆನ್ನಿಗೆ ನಿಂತಿ ದ್ದಾರೆ. ಮಹಾರಾಜ ಕಾಲೇಜಿನಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಹಾಗೂ ವಸ್ತು ಸಂಗ್ರಹಾಲಯ ವಿಭಾಗದಲ್ಲಿ ಸಹ ಪ್ರಾಧ್ಯಾಪಕ ರಾಗಿರುವ ಇವರು ಭರತನಾಟ್ಯ, ಕಥಕ್, ಒಡಿಸ್ಸಿ ಮತ್ತು ರವೀಂದ್ರ ನಾಟ್ಯಗಳನ್ನು ಅಭ್ಯಾಸ ಮಾಡಿದ್ದಾರೆ. ರಾಸವೃಂದದ ಸಹ ನಿರ್ದೇಶಕ ರಾಗಿ ತಾಯಿಯ ಮಾರ್ಗದರ್ಶನದಲ್ಲಿ ಸಂಸ್ಥೆಯ ಉದ್ದೇಶ ಗುರಿಗ ಳನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಹೀಗೆ ಓದು, ಅಧ್ಯಯನ, ಚರ್ಚೆ, ಸಂವಾದ, ಮರು ಚಿಂತನೆ ಗಳಿಂದ ತಮ್ಮನ್ನು ವಿಸ್ತರಿಸಿಕೊಳ್ಳುತ್ತಾ ತಮ್ಮ ಅನುಭವಗಳಿಂದ ಪಡೆದುಕೊಂಡ ಜ್ಞಾನವನ್ನು ಹೊಸ ಪೀಳಿಗೆಗೆ ದಾಟಿಸುತ್ತಾ, ನಿಜದ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಂಡಿರುವ ರಾಸವೃಂದ, ಮತ್ತು ಅದರ ರೂವಾರಿಗಳಾದ ಗುರು ವಿದುಷಿ ನಂದಿನಿ ಈಶ್ವರ್ ಹಾಗೂ ಡಾ.ರೋಹಿತ ಈಶ್ವರ್ ಅವರು ನಮ್ಮಂತಹ ಹಲವು ನೃತ್ಯ ಅಭ್ಯಾಸಿಗಳಿಗೆ ಮತ್ತು ಶಾಲೆಗಳಿಗೆ ಮಾದರಿಯಾಗಿದ್ದಾರೆ.

ಈ ನವೆಂಬರ್ ಹದಿನಾಲ್ಕರಂದು ಮೈಸೂರಿನ ವೀಣೆ ಶೇಷಣ್ಣ ಸಭಾಂಗಣದಲ್ಲಿ “ರಾಸವೃಂದ ನೃತ್ಯ ಶಾಲೆಯ’ ಕಲಾವಿದರು ನಡೆಸಿಕೊಟ್ಟ “ನರ್ತನ ನಮನ’ ಎನ್ನುವ ನೃತ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, ನನ್ನ ಸುಕೃತವೇ ಸರಿ. ಸುಮಾರು ಎರಡೂವರೆ ದಶಕಗಳಿಂದಲೂ ಪ್ರತೀ ವರ್ಷವೂ ಮಕ್ಕಳ ದಿನಾಚರಣೆಯಂದು ತಮ್ಮೆಲ್ಲಾ ನೃತ್ಯ ಗುರುಗಳಿಗೂ ಗೌರವ ನಮನವನ್ನು ಸಲ್ಲಿಸುವ ಸಲುವಾಗಿ ಗುರು ವಿದುಷಿ ನಂದಿನಿ ಈಶ್ವ‌ ಅವರು ಈ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದಾರೆ.

ಅಂದು ಕಾರ್ಯಕ್ರಮ ನೋಡಲೆಂದೇ ನನ್ನೂರಿನಿಂದ ಮೈಸೂರಿಗೆ ಪಯಣ ಬೆಳೆಸಿದ್ದ ನನಗೆ, ಅಂದೇ ದೀಪಾವಳಿ ಹಬ್ಬವೂ ಆಗಿದ್ದರಿಂದ, ಕಾರ್ಯಕ್ರಮ ನೋಡಲು ನಿಜವಾಗಲೂ ಪ್ರೇಕ್ಷಕರು ಬರುವರೇ ಎನ್ನುವ ಸಣ್ಣ ಅನುಮಾನ ಒಂದು ಸುಳಿದಾಡುತ್ತಿತ್ತು. ನನ್ನ ಅನುಮಾನವನ್ನು ಅಣಕಿಸಿ ನಗುವಂತೆ ಕಾರ್ಯಕ್ರಮ ಆರಂಭವಾಗುವ ಹೊತ್ತಿಗೆ ಇಡೀ ಸಭಾಂಗಣ ತುಂಬಿದ್ದು ಕಂಡು ನನಗೆ ಒಳಗೊಳಗೆ ಸಂತಸದ ಜೊತೆ ಆಶ್ಚರ್ಯವೂ ಆಗಿತ್ತು.

“ನೃತ್ಯದಲ್ಲಿ ಅಧ್ಯಾತ್ಮ” ಎನ್ನುವ ಪರಿಕಲ್ಪನೆಯೊಂದಿಗೆ ಗುರು ವಿದುಷಿ ನಂದಿನಿ ಈಶ್ವರ್ ಅವರ ನಿರೂಪಣೆಯಲ್ಲಿ ಗಣಪತಿ ಸ್ತುತಿಯೊಂದಿಗೆ ಆರಂಭಗೊಂಡ ಕಾರ್ಯಕ್ರಮ, ಯಾವ ಅಬ್ಬರವೂ, ಆಡಂಬರವೂ
ಇಲ್ಲದೆ ತಣ್ಣಗೆ ಎಲ್ಲರ ಎದೆಯೊಳಗೆ ಇಳಿದು ಒಂದು ರೀತಿ ಆಧ್ಯಾತ್ಮಿಕ ಅನುಭೂತಿಯನ್ನು ಉಂಟು ಮಾಡುತ್ತಿತ್ತು. ಅಂದು ಇಡೀ ಸಭಾಂಗಣ ಆಧ್ಯಾತ್ಮಿಕ ಸತ್ಸಂಗಕ್ಕೆ ಕುಳಿತಂತೆ ಭಕ್ತಿ ರಸದ ಆಸ್ವಾದನೆಯಲ್ಲಿ ತೇಲುತ್ತಿತ್ತು ಎಂದರೆ ಉತ್ತೇಕೆ ಆಗಲಾರದು. ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದ, ಎಂ.ಎಸ್.ಸುಬ್ಬಲಕ್ಷ್ಮಿ, ಪಂಡಿತ್ ರವಿಶಂಕರ್, ಪಂಡಿತ್ ಹರಿಪ್ರಸಾದ್ ಚೌರಾಸಿಯ, ಪಂಡಿತ್ ವನರಾಜೆ ಭಾಟಿಯ, ಡಿ.ವಿ.ಪಲುಸ್ಕರ್ ಮುಂತಾ ದವರ ಸಂಗೀತ, ಇಡೀ ವಾತಾವರಣವೇ ಸಕಾರಾತ್ಮಕ ಕಂಪನದಿಂದ ದೈವಿಕಗೊಳ್ಳುವಂತೆ ಮಾಡಿತ್ತು. ವೇದಿಕೆಯ ಮೇಲೆ ನರ್ತಿಸುತ್ತಿದ್ದ ರಾಸವೃಂದದ ಹಿರಿ ಕಿರಿಯ ವಿದ್ಯಾರ್ಥಿನಿಯರು ಕೂಡ ಕಲಾ ರಾಧನೆಗೆ ತೊಡಗಿಕೊಂಡವರಂತೆ, ಬಾಹ್ಯದ ಆಕರ್ಷಣೆಗಳಿಂದ ಕಳಚಿ ಕೊಂಡು, ಏಕಾಗ್ರಚಿತ್ತರಾಗಿ ತಮ್ಮ ನೃತ್ಯ ಬಂಧಗಳನ್ನು ಪ್ರಸ್ತುತಪಡಿಸುತ್ತಾ, ಗುರುವಿನ ಇಚ್ಛೆಯನ್ನು ಸಾಕಾರಗೊಳಿಸುವಂತೆ ತನ್ಮಯರಾಗಿದ್ದರು.

ಇಂದಿನ ಒತ್ತಡದ ದಿನಗಳಲ್ಲಿ ಬಾಯಿ ಮಾತಿಗಷ್ಟೇ ಸೀಮಿತವಾಗಿ ವ್ಯಾಪಾರೀಕರಣ ಗೊಳ್ಳುತ್ತಿರುವ ಅಧ್ಯಾತ್ಮ” ಎನ್ನುವ ಪದವು ಅಂದು ಆ ವೇದಿಕೆಯಲ್ಲಿ ಸತ್ಯದಲ್ಲಿ ಅರಳಿಕೊಳ್ಳುತ್ತಾ ಜೀವ ಪಡೆದು ಕೊಳ್ಳುತ್ತಿರುವಂತೆ ಕಾಣುತ್ತಿತ್ತು. ಒಟ್ಟಿನಲ್ಲಿ ಇಡೀ ಕಾರ್ಯಕ್ರಮ “ನಾವು ನರ್ತನದ ಮೂಲಕ ಧ್ಯಾನಕ್ಕೆ ತೊಡಗಿದ್ದೇವೆ, ಸಾಧ್ಯವಾದರೆ ನೀವು ನಮ್ಮೊಂದಿಗೆ ಸಹಪಯಣಿಗರಾಗಿ ಎನ್ನುವಂತಿತ್ತು.
(ಕೊಡಗು ಮೂಲದ ಲೇಖಕಿ ವಿದುಷಿ ವಾಣಿ ಸತೀಶ್ ತಿಪಟೂರಿನ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ