Mysore
26
light rain

Social Media

ಬುಧವಾರ, 13 ನವೆಂಬರ್ 2024
Light
Dark

ಮೂಳೆ ಸವೆತಕ್ಕೆ ಇಲ್ಲಿದೆ ಶಮನ

ವಯಸ್ಸು 60 ದಾಟುತ್ತಿದ್ದಂತೆಯೇ ವಯೋಸಹಜ ಕಾಯಿಲೆಗಳಾದ ಡಯಾಬಿಟಿಸ್, ರಕ್ತದೊತ್ತಡದ ಜತೆಜತೆಗೆ ಮೂಳೆ ಸಮಸ್ಯೆಗಳು ಹೇಳದೆ ಕೇಳದೆ ಬರುವುದು ಸಹಜ. 80ರ ಪ್ರಾಯ ದಾಟುತ್ತಿದ್ದಾಗ ಬಳಸುತ್ತಿದ್ದ ಊರುಗೋಲುಗಳನ್ನು ಈಗ 60-65 ವಯಸ್ಸಿನವರೇ ಬಳುಸುತ್ತಿರುವುದು, ಮನುಷ್ಯನ ಜೀವತಾವಧಿ ಇಳಿಮುಖವಾಗುತ್ತಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

ಮನುಷ್ಯ ಆರೋಗ್ಯಕರವಾಗಿ ಜೀವನ ಸಾಗಿಸಬೇಕು ಎಂದರೆ, ಅದರಲ್ಲಿಯೂ ವಯಸ್ಸಾಗುತ್ತಿದ್ದಂತೆ ಬದುಕು ಪ್ರಯಾಸದಾಯಕವಾಗಿರಬಾರದು ಎಂದರೆ ಮೂಳೆ ಗಳನು ಬಲವಾಗಿರುವಂತೆ ನೋಡಿಕೊಳ್ಳಬೇಕು. ಮೂಳೆಗಳು ನಮ್ಮ ದೇಹದ ರಚನೆಯನ್ನು ಒದಗಿಸುವ ಜತೆಗೆ ನಮ್ಮ ಚಲನಶೀಲತೆಗೆ ಹಾಗೂ ಅಂಗಾಗಗಳನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಇಂತಹ ಮೂಳೆಗಳು ಖನಿಜ ಮತ್ತು ಪೋಷಕಾಂಶಗಳನ್ನು ಹೀರಿಕೊಂಡು ಹೆಚ್ಚು ಸಾಂದ್ರತೆಯನ್ನು ಹೊಂದಿದ್ದಾಗ ಮಾತ್ರ ನಾವು ಹಲವು ವರ್ಷಗಳ ಕಾಲ ಮೂಳೆ ಸಮಸ್ಯೆಗಳಿಲ್ಲದೆ ಬದುಕಬಹುದು.

ವಯಸ್ಸಾಗುತ್ತಿದ್ದಂತೆ ಸವೆತಕ್ಕೊಳಗಾಗುವ ಮೂಳೆಗಳನ್ನು ಬಲಪಡಿಸಿಕೊಳ್ಳಲು ಗುಣಮಟ್ಟದ ಆಹಾರ ಮತ್ತು ಹಿತಮಿತವಾದ ವ್ಯಾಯಾಮ ಮಾಡುವುದು ಅತ್ಯವಶ್ಯಕ. ಮೂಳೆಗಳಲ್ಲಿನ ದ್ರವ್ಯರಾಶಿಗಳನ್ನು ನಾವು ವೇಗವಾಗಿ ಕಳೆದುಕೊಳ್ಳುತ್ತಿದ್ದರೆ ಅದನ್ನು ಆಸ್ಟಿಯೊಪೊರೋಸಿಸ್ ಎನ್ನಲಾಗುತ್ತದೆ. ಉತ್ತಮ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಜತೆಗೆ ಈ ಆಸ್ಟಿಯೊಪೊರೋಸಿಸನ್ನು ತಡೆಗಟ್ಟಿ ನಾವು ಮೂಳೆಯ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಒಂದಿಷ್ಟು ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ.

ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಯಾವುದೇ ಶಾರ್ಟ್‌ಕಟ್‌ ಮಾರ್ಗಗಳಿಲ್ಲ. ನಮ್ಮ ಮೂಳೆಗಳ ಯೋಗಕ್ಷೇಮ ನೋಡಿಕೊಳ್ಳಲು ಆರೋಗ್ಯಕರ ಜೀವನ ಕ್ರಮ ಅತ್ಯವಶ್ಯ. ಹಿತಮಿತ ವ್ಯಾಯಾಮಗಳನ್ನು ಮೊದಲಿನಿಂದ ರೂಢಿಸಿಕೊಂಡಿದ್ದರೆ, ಉತ್ತಮ ಆಹಾರ ಸೇವನೆಯಲ್ಲಿದ್ದರೆ ವಯಸ್ಸಾದ ಮೇಲೂ ಸಾಕಷ್ಟು ವರ್ಷಗಳ ಕಾಲ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

1) ಗುಣಮಟ್ಟದ ಆಹಾರ ಸೇವನೆ:
ವಯಸ್ಸಾಗುತ್ತಿದ್ದಂತೆ ಸಾಮಾನ್ಯವಾಗಿ ಬಾಯಿಗೆ ರುಚಿಸುವ ಆಹಾರಗಳೇ ಬೇಕು ಅನಿಸುತ್ತದೆ. ಹಾಗಂತ ಸಿಕ್ಕ ಸಿಕ್ಕ ಆಹಾರಗಳನ್ನು ಸೇವಿಸುತ್ತಾ ಹೋದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬೇಕು ಎಂದರೆ ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸಬೇಕು. ಇದು ಮೂಳೆಗಳಿಗೆ ಹೆಚ್ಚಿನ ಸಾಂದ್ರತೆಯನ್ನು ನೀಡಿ ಮೂಳೆಗಳನ್ನು ಬಲಪಡಿಸುತ್ತದೆ. ಡೇರಿ ಉತ್ಪನ್ನಗಳು, ಹಸಿರು ತರಕಾರಿಗಳು ಮತ್ತು ಮಾಂಸಾಹಾರ ಸೇವಿಸುವುದಾದರೆ ಸಮುದ್ರಾಹಾರಗಳಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದ್ದು, ಇವು ಹೆಚ್ಚಿನ ಸಾಂದ್ರತೆ ಒದಗಿಸಲಿವೆ.

2) ತರಕಾರಿಗಳ ಸೇವನೆ:
ತರಕಾರಿಗಳಲ್ಲಿ ವಿಟಮಿನ್‌ಗಳು ಹಾಗೂ ಖನಿಜಾಂಶಗಳು ಸಮೃದ್ಧ ವಾಗಿರುವುದರಿಂದ ಅವುಗಳ ಸೇವನೆ ಉತ್ತಮ. ವಿಟಮಿನ್ ಸಿ ಮೂಳೆಯ ಕೋಶಗಳು ಹಾನಿಯಾಗದಂತೆ ರಕ್ಷಿಸುತ್ತದೆ. ಎಲೆಕೋಸು, ಕೋಸುಗಡ್ಡೆ, ಹಸಿರು ಮತ್ತು ಹಳದಿ ತರಕಾರಿಗಳ ಸೇವನೆ ಮೂಳೆಗಳಲ್ಲಿನ ಖನಿಜೀಕರಣವನ್ನು ಸುಧಾರಿಸುತ್ತವೆ.

3) ಆರೋಗ್ಯಕರ ಜೀವನ ಶೈಲಿ:
ಧೂಮಪಾನ, ಮದ್ಯಪಾನಗಳಂತಹ ದುಶ್ಚಟಗಳಿಂದ ದೂರವಿದ್ದು, ಒಮೆಗಾ-3 ಕೊಬ್ಬಿನಾಮ್ಲಗಳು, ಮೆನ್ನೀಸಿಯಮ್ ಮತ್ತು ಸತುವು ಸಮೃದ್ಧವಾಗಿರುವ ಉತ್ತಮ ಆಹಾರಗಳನ್ನು ಸೇವಿಸುವುದರಿಂದ ಮೂಳೆಗೆ ಬೇಕಾದ ಆರೋಗ್ಯವನ್ನು ಕಾಪಾಡಿಕೊಂಡು ತುಂಬ ವರ್ಷಗಳ ಕಾಲ ಮೂಳೆ ಸಮಸ್ಯೆಯಿಂದ ದೂರಾಗಿರಬಹುದು.

4) ನಿಯಮಿತ ವ್ಯಾಯಾಮ:
ಭಾರ ಎತ್ತುವ ವ್ಯಾಯಾಮಗಳು ಹಿಂದಿನಿಂದಲೂ ರೂಢಿಸಿಕೊಂಡವರಿಗೆ ವಯಸ್ಸಾಗುತ್ತಿದ್ದಂತೆ ಮೂಳೆಗಳ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ. ನಿಯಮಿತ ವ್ಯಾಯಾಮಗಳನ್ನು ಮಾಡಿ ಸ್ನಾಯುಗಳಲ್ಲಿನ ದ್ರವ್ಯರಾಶಿಯನ್ನು ಹೆಚ್ಚಿಸಿಕೊಂಡು ಮೂಳೆಗಳನ್ನು ಬಲಪಡಿಸಬೇಕು. ವ್ಯಾಯಾಮಗಳಿಂದ ಸ್ಥಾಯಗಳಲ್ಲಿನ ಕ್ಯಾಲ್ಸಿಯಂ, ಮೆಗ್ನಿಸಿಯಂ ಅಂಶವನ್ನು ಹೆಚ್ಚಿಸಿ ಮೂಳೆಗಳನ್ನು ಬಲಪಡಿಸುತ್ತವೆ.

5) ತೂಕದ ಸಮತೋಲನ ಮುಖ್ಯ:
ದೇಹದ ತೂಕ ಹೆಚ್ಚಿದಷ್ಟೂ ಕಡಿಮೆಯಾದಷ್ಟೂ ಮೂಳೆಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹೆಚ್ಚಿನ ತೂಕ ಹೊಂದಿದ್ದರೆ ಅದು ಮೂಳೆಗಳ ಮೇಲೆ ಭಾರ ಬಿದ್ದು ಮೂಳೆಯ ಸಾಂದ್ರತೆ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಬಲವಾದ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ದೇಹದ ತೂಕದ ಸಮತೋಲನ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ.

 

Tags: