477ಕ್ಕೂ ಅಧಿಕ ವಚನಗಳ ರಚನೆಕಾರ
ಸಿದ್ಧನಕೊಪ್ಪಲು ಕುಮಾರ್
1, 2 ನೇ ಶತಮಾನ ಒಂದು ಅದ್ಭುತ ಶರಣರ ಸಮಾಗಮದ ಕಾಲ. ಏಕೆಂದರೆ ಈ ಶತ ಮಾನದಲ್ಲಿ ನಡೆದಂತಹ ಶರಣ ಚಳವಳಿ ಅನನ್ಯವಾದದ್ದು, ಬಸವಣ್ಣನ ಮುಂದಾಳತ್ವದಲ್ಲಿ ಜರುಗಿದ ಈ ಚಳವಳಿಗೆ ಹಲವಾರು ಶರಣರು ಕೈಜೋಡಿಸಿದರು. ಅಂತಹ ಪ್ರಮುಖರಲ್ಲಿ ಮಡಿವಾಳ ಮಾಚಿದೇವರು ಕೂಡ ಒಬ್ಬರು. ಅಂದಿನ ಸಮಾಜ ದಲ್ಲಿ ವೈದಿಕ ಧರ್ಮದ ವರ್ಣವ್ಯವಸ್ಥೆಯ ಪ್ರಭಾವ ದಿಂದಾಗಿ ಮೇಲು-ಕೀಳು, ಉಚ್ಚ-ನೀಚ, ಶ್ರೇಷ್ಠ- ಕನಿಷ್ಠ ಎಂಬ ಸಾಮಾಜಿಕ ಮತ್ತು ಆರ್ಥಿಕ ಶೋಷಣೆಗೆ ಒಳಗಾಗಿದ್ದಂತಹ ಕಾಲ, ಮಹಿಳೆಯ ರಿಗೆ ಉತ್ತಮವಾದಂತಹ ಕಾಲವೇನಲ್ಲ. ಧಾರ್ಮಿಕ ಸಂಪ್ರದಾಯದ ಹೆಸರಿನಲ್ಲಿ ಮೂಢ ನಂಬಿಕೆಗಳು, ಕಂದಾಚಾರಗಳು ರಾರಾಜಿಸುತ್ತಿದ್ದವು.
ಮಹಿಳೆಯರು ಹಲವು ರೀತಿಯಲ್ಲಿ ಶೋಷಣೆಗೆ ಒಳಗಾಗಿದ್ದ ಕಾಲವದು. ಅಂತಹ ಸಂದರ್ಭದಲ್ಲಿ ಧರ್ಮದ ಸುಧಾರಣೆ ಹಾಗೂ ಸಮಾನತೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳನ್ನು ಒದಗಿಸುವ ದೃಷ್ಟಿಯಿಂದ ಬಸವಣ್ಣ, ಮಾಚಿದೇವ, ಅಕ್ಕಮಹಾದೇವಿ, ಚೆನ್ನಬಸವಣ್ಣ ಇತ್ಯಾದಿ ಹತ್ತು ಹಲವಾರು ಶರಣರು ಸಾಮಾಜಿಕ ಪರಿವರ್ತನೆಯ ಕ್ರಾಂತಿಯನ್ನು ಕೈಗೊಂಡಂತಹ ಒಂದು ಅವಿಸ್ಮರಣೀಯ ಕಾಲವದು. ಮಡಿವಾಳ ಮಾಚಯ್ಯ, ಮಡಿವಾಳಯ್ಯ, ಮಾಚಪ್ಪ. . . ಹೀಗೆ ಅನೇಕ ಹೆಸರುಗಳಿಂದ ಮಾಚಿದೇವರು ಪ್ರಸಿದ್ಧಿಯಾದವರು. ಕವಿಯಾಗಿ, ಕಲಿಯಾಗಿ ಹೆಸರು ಮಾಡಿದ್ದವರು. ಇವರ ಕಾಲ ಕ್ರಿ. ಶ. ಸುಮಾರು ೧೧೬೦, ಮಾಚಿದೇವರು ೪೭೭ ಕ್ಕಿಂತಲೂ ಅಧಿಕ ವಚನಗಳನ್ನು ರಚಿಸಿದ್ದಾರೆ.
ಮಾಚಿದೇವರ ವಚನಗಳ ಅಂಕಿತ ಕಲಿದೇವರದೇವ. ಹೀಗಾಗಿಯೇ ಮಾಚಿದೇವರು ಶುದ್ಧ, ಸಿದ್ಧ ಬದುಕಿನ ಶರಣ, ಸಾಮಾಜಿಕ ಸುಧಾ ರಣಾ ಚಳವಳಿಯ ದಂಡನಾಯಕ, ಸಾಮಾಜಿಕ ಹೊಣೆ ನಿರ್ವಹಿಸಿದ ಗಣಾಚಾರ ಸಂಪನ್ನ, ಶರಣರನ್ನು- ವಚನ ಸಾಹಿತ್ಯವನ್ನು ರಕ್ಷಿಸಿದ ವೀರ ಶರಣ, ವಚನ ಸಾಹಿತ್ಯ ಸಂರಕ್ಷಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಂದು ಮಾಚಿದೇವರು ವಚನಸಾಹಿತ್ಯವನ್ನು ರಕ್ಷಿಸದಿದ್ದಲ್ಲಿ ಶರಣ ಧರ್ಮಕ್ಕೆ, ಶರಣ ಸಂಸ್ಕೃತಿಗೆ, ಶರಣ ಸಾಹಿತ್ಯಕ್ಕೆ ಇಂದು ಜೀವಂತಿಕೆ ಇರುತ್ತಿರಲಿಲ್ಲ. ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಪರಿವರ್ತನೆಗಾಗಿ ಸತ್ಯ, ನೇರ, ನಿಷ್ಠುರ, ನಡೆ-ನುಡಿಗಳಿಂದ ಸಮಾ ಜವನ್ನು ಜಾಗೃತಿಗೊಳಿಸಿದ ದಾರ್ಶನಿಕರಾಗಿದ್ದಾರೆ. ಇವರ ಜನನ ಬಿಜಾಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ದೇವರ ಹಿಪ್ಪರಗಿ, ಅಂದಿನ ಹಿಪ್ಪರಿಗಿಯೇ ಇಂದು ಮಾಚಿದೇವರ ಹಿಪ್ಪರಗಿ (ದೇವರ ಹಿಪ್ಪರಗಿ) ಎಂದು ಪ್ರಖ್ಯಾತಿಯಾಗಿದೆ. ಇವರ ಕಾರ್ಯದಿಂದಾಗಿ ಅನೇಕ ಶರಣರಿಗೆ ಕಲ್ಯಾಣವೇ ಒದಗಿ ಬಂದಂತಾಗಿತ್ತು. ಮಾಚಿ ದೇವರ ದೀಕ್ಷಾಗುರು ಮಲ್ಲಿಕಾರ್ಜುನಸ್ವಾಮಿ, ಲಿಂಗಣ್ಣ ಚಾರ್ಯ ಎಂಬ ಮತ್ತೊಬ್ಬ ಗುರುವೂ ಇದ್ದರೆನ್ನಲಾಗಿದೆ. ಇವರ ಆರಾಧ್ಯ ದೈವ ಕಲ್ಲಿನಾಥ. ಇವರ ವಚನಗಳ ಅಂಕಿತವಿರುವುದು ಆರಾಧ್ಯ ದೈವದ ಹೆಸರಿನಲ್ಲಿಯೇ, ಮಾಚಿದೇವರ ವಚನ ಗಳನ್ನು ಅವಲೋಕಿಸುವಾಗ ಅವರೊಬ್ಬ ಅಪಾರ ಜ್ಞಾನ ಸಂಪತ್ತನ್ನು ಹೊಂದಿದ್ದರೆಂಬುದನ್ನು ಹಾಗೂ ಕಾಯಕದಲ್ಲಿ ನಂಬಿಕೆ, ಪ್ರಾಣಿ ಹಿಂಸೆ, ಪರನಿಂದನೆ ದ್ವೇಷಕನಾಗಿ, ಸ್ತ್ರೀ ರಕ್ಷಕನಾಗಿ ಕಾರ್ಯವನ್ನು ನಿರ್ವಹಿಸಿರುವುದನ್ನು ನಾವು ಗಮನಿಸಬಹುದಾಗಿದೆ.
ಮಾಚಿದೇವರಿಗೆ ವೀರಶೈವ ಧರ್ಮದಲ್ಲಿ ಅಪಾರ ನಂಬಿಕೆ ಮತ್ತು ಭಕ್ತಿ ಇತ್ತು. ಇವರ ವ್ಯಕ್ತಿತ್ವದಲ್ಲಿ ಕಂಡುಬಂದ ವಿಶೇಷ ಅಂಶವನ್ನು ಸಮಕಾಲೀನ ವಚನಕಾರರು, ವೀರಶೈವ ಕವಿಗಳು ಅಪಾರವಾಗಿ ಪ್ರಶಂಸೆ ಮಾಡಿದ್ದಾರೆ. ಅಕ್ಕಮಹಾದೇವಿ ತಮ್ಮ ವಚನದಲ್ಲಿ ಬಸವಣ್ಣನವರ ಭಕ್ತಿ, ಚೆನ್ನಬಸವಣ್ಣನವರ ಜ್ಞಾನ, ಮಡಿವಾಳಯ್ಯನವರ ನಿಷ್ಠೆ ಇಂತಹವುಗಳನ್ನು ಕಂಡು ಧನ್ಯನಾದೆನು ಚೆನ್ನ ಮಲ್ಲಿಕಾರ್ಜುನಯ್ಯ ಎಂದು ಮಡಿವಾಳಯ್ಯನ ನಿಷ್ಠೆಯನ್ನು ಎತ್ತಿಹಿ ಡಿದು, ಮಡಿವಾಳಯ್ಯನೆನ್ನ ಹೆತ್ತ ತಂದೆ ಎಂದು ಪಿತೃ ಸ್ಥಾನ ನೀಡಿದ್ದಾರೆ. ಪ್ರಭುದೇವ ತಮ್ಮ ವಚನದಲ್ಲಿ ಸ್ಮರಿಸುವುದಲ್ಲದೆ, ಪ್ರಭುದೇವ- ಮಾಚಿದೇವರ ನಡುವೆ ನಡೆದ ವಾಗ್ವಾದವು ವೀರಶೈವ ಧರ್ಮದಲ್ಲಿ ಮಾಚಿದೇವರಿಗೆ ಇದ್ದ ಅಪಾರ ಅರಿವಿನ ಪ್ರತೀಕವಾಗಿದೆ. ಪ್ರಭುದೇವನು ಮಾಚಿದೇವರನ್ನು ಕುರಿತು ಆದಿಯ ಕಂಡೆ, ಅನಾದಿಯ ಕಂಡೆ, ಆಯತ- ಸ್ವಾಯತವ ಸನ್ನಿಹಿತವ ಕಂಡೆ, ಗುಹೇಶ್ವರ ಲಿಂಗದಲ್ಲಿ ಬಸವಣ್ಣನ ಕೃಪೆಯಿಂದ ನಿಮ್ಮ ಕಂಡೆನು ಕಾಣ ಕಲಿದೇವರ ದೇವ ಮಡಿವಾಳ ಮಾಚಯ್ಯ ಎಂದು ಮಡಿವಾಳಯ್ಯನ ಜೊತೆಗಿನ ಸಂಬಂಧದ ಸಾರ್ಥಕ ಭಾವವನ್ನು ಪ್ರಕಟಿಸಿದ್ದಾರೆ. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು ಜೊತೆಗೆ ಅವಿಸ್ಮರಣೀಯ ವಾದದ್ದು. ದೇಶದ ನಾನಾ ಭಾಗಗಳಿಂದ ಬರುವವ ರನ್ನು ಪರೀಕ್ಷಿಸಿ ಮಡಿ ಹಾಸಿ ಸ್ವಾಗತಿಸುವ ಕೆಲಸದ ಜೊತೆಗೆ ಅವರನ್ನು ಪರೀಕ್ಷೆಗೆ ಒಳಪಡಿಸದೆ ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಸಿಗುತ್ತಿರಲಿಲ್ಲ. ಮಾಚಿದೇವರ ಮಹಾಜ್ಞಾನಕ್ಕೆ ಇದು ಸಾಕ್ಷಿಯಾಗಿದೆ.
ಬಸವಾದಿ ಶರಣರ ವಿಶ್ವ ಕಲ್ಯಾಣ ತತ್ವಗಳಿಗೆ ತಮ್ಮನ್ನು ಸಮರ್ಪಿಸಿಕೊಂಡ ಮಾಚಿ ತಂದೆಗೆ ಶರಣರೆಂದರೆ ಪಂಚಪ್ರಾಣ, ಮಾಚಿದೇವರ ಅಪಾರ ಜ್ಞಾನ, ಕಾಯಕ, ನಿಷ್ಠೆ, ನ್ಯಾಯ, ನಿರಹಂಕಾರ ಗುಣಗಳನ್ನು ಕಂಡು ಶರಣ ರೆಲ್ಲ ಹೃದಯ ತುಂಬಿ ಶ್ಲಾಸಿದ್ದಾರೆ. ಬಸವಣ್ಣನವರು ಎನ್ನ ಕಾಯವ ಶುದ್ಧ ಮಾಡಿ ದಾತ ಮಡಿವಾಳ, ಎನ್ನ ಮನವ ನಿರ್ಮಲ ಮಾಡಿ ದಾತ ಮಡಿವಾಳ, ಎನ್ನಂತರಂಗವ ಬೆಳಗಿದಾತ ಮಡಿವಾಳ, ಎನ್ನ ಬಹಿರಂಗವ ಬಿಡಿಸಿದಾತ ಮಡಿ ವಾಳ, ಕೂಡಲ ಸಂಗಮದೇವಾ ಎನ್ನ ನಿಮಗೆ ಯೋಗ್ಯನಾ ಮಾಡಿದಾತ ಮಡಿವಾಳ ಎಂದು ಮಾಚಿದೇವರ ಉನ್ನತಿಯನ್ನು ಹೇಳಿದ್ದಾರೆ.
ಮಡಿವಾಳ, ಮಡಿವಾಳನೆಂಬರು ಮಡಿವಾಳನಾರೆಂಬುದನ್ನು ಯಾರೂ ಅರಿಯರು, ಮಡಿವಾಳ ಮಾಚಿ ದೇವರ ತಂದೆಯ ಕೃಪೆಯಿಂದ ನಾನು ಬದುಕಿದೆ ನಯ್ಯಾ ಕೂಡಲ ಸಂಗಮದೇವಾ ಎಂದು ಮನ ತುಂಬಿ ವರ್ಣಿಸಿದ್ದಾರೆ. ‘ಕಲ್ಯಾಣ ಕ್ರಾಂತಿ’ಯ ಸಂದರ್ಭದಲ್ಲಿ ಮಾಚಿ ದೇವರು ಹೊತ್ತ ಜವಾಬ್ದಾರಿ ಅತ್ಯಂತ ಗುರುತರ ವಾದದ್ದು, ಶರಣ ಧರ್ಮ ಸಂರಕ್ಷಣೆ, ವಚನ ಸಾಹಿತ್ಯ ಸಂರಕ್ಷಣೆಯ ದಂಡನಾಯಕನಾಗಿ ಜವಾ ಬ್ದಾರಿ ಹೊತ್ತು ಚನ್ನಬಸವಣ್ಣ, ಅಕ್ಕನಾಗಮ್ಮ, ಕಿನ್ನರಿ ಬೋಪಣ್ಣ ಮೊದಲಾದವರೊಂದಿಗೆ, ಮಾಚಿ ದೇವರು ಶರಣ ಸಮೂಹದ ಬೆನ್ನಿಗೆ ಭೀಮ ರಕ್ಷೆ ಯಾಗಿ ನಿಂತರು. ಕಾಲ ಚೂರ್ಯ ರಾಮ ಮುರಾರಿಯನ್ನು ಎದುರಿಸಿ, ಭೀಮಾ ನದಿಯನ್ನು ದಾಟಿ ತಲ್ಲೂರು, ಮುರುಗೋಡ, ಕಡಕೋಳ, ತಡಕೋಡ, ಕಾತರವಳ್ಳಿಗಳಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತನ್ನ ಧೈರ್ಯ- ಅನುಪಮ ಬಲ ದಿಂದ ಶರಣರನ್ನು ಮತ್ತು ವಚನ ಸಾಹಿತ್ಯವನ್ನು ರಕ್ಷಿಸಿದ ಸಾಹಸಿ. ಹಿಮಾಚಲದಂತೆ ಗಟ್ಟಿ ಕಾಯಕದ ಹಿರಿಯಾಳು ಮಾಚಿದೇವರಾಗಿದ್ದರು. ಹೀಗೆ ಮಡಿವಾಳ ಮಾಚಿದೇವರು ತಮ್ಮ ಮಹಾನ್ ಕರ್ತವ್ಯ ಪೂರೈಸಿ ದೇವರ ಹಿಪ್ಪರಗಿಗೆ ಬಂದು ನೆಲೆಸಿ, ಕೆಲ ವರ್ಷಗಳವರೆಗೆ ಜ್ಞಾನದ ಅನುಭವವನ್ನು ಪ್ರಸಾರ ಮಾಡುತ್ತಾ ಕಲಿದೇವರಲ್ಲಿ ಐಕ್ಯರಾದರು ಎಂಬ ಪ್ರತೀತಿಯಿದೆ.
(ಲೇಖಕರು ವಕೀಲರು, ಕೆ. ಆರ್. ನಗರ ತಾಲ್ಲೂಕು, ಮೈಸೂರು ಜಿಲ್ಲೆ. )