Mysore
27
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಜಿಎಸ್‌ಟಿ ಇಳಿಕೆ ಮೋದಿ ಸರ್ಕಾರದ ಆರ್ಥಿಕ ಸುಧಾರಣೆಯ

column gst

ದೆಹಲಿ ಕಣ್ಣೋಟ

ಶಿವಾಜಿ ಗಣೇಶನ್‌ 

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಬರುವ ದೀಪಾವಳಿಗೆ ಜಿಎಸ್‌ಟಿ ಪರಿಷ್ಕರಣೆ ಮಾಡಿ ದೇಶದ ಜನರಿಗೆ ಕೊಡುಗೆಯೊಂದನ್ನು ನೀಡುವುದಾಗಿ ಘೋಷಿಸಿದ್ದರು. ಪ್ರಧಾನಿ ಮೋದಿ ಅವರು ತಮ್ಮ ಈ ಘೋಷಣೆಯಂತೆ ಸೆಪ್ಟೆಂಬರ್ ೨೨ರಿಂದ ಆರಂಭವಾಗುವ ನವರಾತ್ರಿಯ ಉಡುಗೊರೆಯಾಗಿ ಜಿಎಸ್‌ಟಿಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಪ್ರಕಟಿಸಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

೧೯೯೧-೧೯೯೬ (ಏಪ್ರಿಲ್) ಅವಽಯಲ್ಲಿ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಆಡಳಿತದಲ್ಲಿ ಹಣಕಾಸು ಸಚಿವರಾಗಿದ್ದ ಡಾ. ಮನಮೋಹನ ಸಿಂಗ್ ಅವರು ಜಾರಿಗೆ ತಂದ ಮುಕ್ತ ಆರ್ಥಿಕ ನೀತಿಯಿಂದ ದೇಶದ ಹಣಕಾಸು ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ ಕಂಡಿತು. ಆ ದಿನಗಳ ಪೂರ್ವದಲ್ಲಿ ಮಂಡಲ್ ಆಯೋಗದ ವರದಿಯ ಜಾರಿಯಿಂದ ದೇಶದಾದ್ಯಂತ ವಿಶೇಷವಾಗಿ ದೆಹಲಿಯಲ್ಲಿ ನಡೆದ ಹಿಂಸಾಚಾರ, ಪ್ರತಿಭಟನೆ ಮತ್ತು ಅದಕ್ಕೆ ಪೂರಕವಾಗಿ ಬಿಜೆಪಿ ನಡೆಸಿದ ರಥಯಾತ್ರೆ ಹಿನ್ನೆಲೆಯಲ್ಲಿ ದೇಶ ಕಂಡ ಆರ್ಥಿಕ ಸಂಕಷ್ಟದಿಂದ ಜನಜೀವನ ನಲುಗಿ ಹೋಗಿತ್ತು. ತೊಂಬತ್ತರ ದಶಕದ ಆರಂಭದಲ್ಲಿ ಇಡೀ ವಿಶ್ವದಲ್ಲಿಯೇ ಆರ್ಥಿಕ ಪರಿಸ್ಥಿತಿಯ ಬದಲಾವಣೆಯ ಸಂಕ್ರಮಣ ಕಾಲ. ಎಲ್ಲ ದೇಶಗಳಲ್ಲೂ ವಿಶ್ವ ವಾಣಿಜ್ಯ ಸಂಸ್ಥೆಯು ತರಲು ಹೊರಟಿದ್ದ ಆರ್ಥಿಕ ಸುಧಾರಣೆ ಮತ್ತು ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕುವ ದಿನಗಳು ಎದುರಾಗಿದ್ದವು. ಸಂಸತ್ತಿನ ಒಳಗೂ ಮತ್ತು ಹೊರಗೂ ಎಡಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳಿಂದ ಭಾರೀ ಪ್ರತಿಭಟನೆಗಳು ನಡೆದವು.

ಇದನ್ನೂ ಓದಿ: ಗದ್ದೆಗಿಳಿದು ಭತ್ತದ ಸಸಿ ನಾಟಿ ಮಾಡಿದ ಎಸ್‌ಪಿ

ಅಂತಹ ಸಂಕ್ರಮಣದ ಕಾಲದಲ್ಲಿ ಆರ್ಥಿಕವಾಗಿ ಜರ್ಜರಿತವಾಗಿದ್ದ ಭಾರತ ಮುಕ್ತ ಆರ್ಥಿಕ ನೀತಿಯನ್ನು ಒಪ್ಪಿಕೊಂಡು ಆರ್ಥಿಕ ಸುಧಾರಣೆಯತ್ತ ಮುಖ ಮಾಡದೇ ಬೇರೆ ದಾರಿ ಇರಲಿಲ್ಲ. ಈ ಮುಕ್ತ ಆರ್ಥಿಕ ನೀತಿಯಿಂದಾಗಿ ಕೇಂದ್ರ ಸರ್ಕಾರವೇ ಕಟ್ಟಿ ಬೆಳೆಸಿದ ನಷ್ಟದಲ್ಲಿದ್ದ ಹಲವು ಉದ್ದಿಮೆಗಳನ್ನು ಮುಚ್ಚಬೇಕಾಯಿತು. ಮತ್ತೆ ಕೆಲವನ್ನು ತನ್ನ ಬಂಡವಾಳವನ್ನು ಹಿಂತೆಗೆದುಕೊಂಡು (ಷೇರು ವಿಕ್ರಯ) ಖಾಸಗಿ ಉದ್ಯಮ ಕ್ಷೇತ್ರಗಳಿಗೆ ಮಾರಾಟ ಮಾಡಲಾಯಿತು. ಮತ್ತೆ ಕೆಲವನ್ನು ಸರ್ಕಾರಿ ಮತ್ತು ಖಾಸಗಿ ಜಂಟಿ ಒಡೆತನದಿಂದ ಆಧುನೀಕರಿಸಿ ಮುಂದುವರಿಸಿದ್ದು ಈಗ ಇತಿಹಾಸ. ಈ ಮುಕ್ತ ಆರ್ಥಿಕ ನೀತಿಯನ್ನು ಎಡ ಪಕ್ಷಗಳು ಮತ್ತು ಅವುಗಳ ಕಾರ್ಮಿಕ ಸಂಘಟನೆಗಳು ಬಲವಾಗಿ ವಿರೋಽಸಿದವು. ಸರ್ಕಾರಿ ಉದ್ದಿಮೆಗಳು ಮುಚ್ಚಿದಾಗ ಮತ್ತು ಅವುಗಳನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಿದಾಗ ಸಾವಿರಾರು ಮಂದಿ ಕಾರ್ಮಿಕರು ಕೆಲಸ ಕಳೆದುಕೊಂಡದ್ದು ನಿಜ. ಕೆಲವು ಉದ್ದಿಮೆಗಳಲ್ಲಿ ಸ್ವಯಂ ನಿವೃತ್ತಿ ಪಡೆಯುವ ಮಂದಿಗೆ ಗೋಲ್ಡನ್ ಹ್ಯಾಂಡ್ ಶೇಕ್ ಹೆಸರಿನಲ್ಲಿ ಒಂದಿಷ್ಟು ಪರಿಹಾರ ನೀಡಿ ಗೌರವಯುತವಾಗಿ ಮನೆಗೆ ಕಳುಹಿಸಲಾಯಿತು.

ವಾಸ್ತವವಾಗಿ ಮುಕ್ತ ಆರ್ಥಿಕ ನೀತಿ ಜಾರಿಗೆ ಬರುವ ಮುನ್ನ ದೇಶದ ಹಣಕಾಸು ಪರಿಸ್ಥಿತಿ ನೆಟ್ಟಗಿರಲಿಲ್ಲ. ಒಂದು ಟೆಲಿಫೋನ್, ಅಡುಗೆ ಅನಿಲ್ ಸಂಪರ್ಕ ಪಡೆಯಲು ಸರ್ಕಾರಕ್ಕೆ ಅರ್ಜಿ ಹಾಕಿ ವರ್ಷಗಟ್ಟಲೆ ಕಾಯಬೇಕಿತ್ತು. ನಿವೇಶನ ಕೊಳ್ಳಲು, ಮನೆ ಕಟ್ಟಲು ಯಾವುದೇ ಬ್ಯಾಂಕುಗಳು ಸರಳ ಬಡ್ಡಿ ದರದಲ್ಲಿ ಸಾಲ ನೀಡುತ್ತಿರಲಿಲ್ಲ. ಕೇವಲ ಗೃಹ ನಿರ್ಮಾಣ ಸಹಕಾರ ಸಂಘಗಳು ತನ್ನ ಸದಸ್ಯರಿಗೆ ಮಾತ್ರ ಶೇ.೧೨ರಿಂದ ೧೫ರ ವರೆಗಿನ ಬಡ್ಡಿಯಲ್ಲಿ ಸಾಲ ನೀಡುತ್ತಿದ್ದವು. ಹಾಗಾಗಿ ಮಧ್ಯಮ ವರ್ಗಗಳ ಜನರ ಮನೆ ಕಟ್ಟುವ ಕನಸು ನನಸಾಗುತ್ತಿರಲಿಲ್ಲ. ಬಹುತೇಕ ಅಧಿಕಾರಿಗಳ ತಿಂಗಳ ಸಂಬಳ ಹತ್ತು ಸಾವಿರ ರೂ.ಗಳನ್ನೂ ಮುಟ್ಟುತ್ತಿರಲಿಲ್ಲ. ಇನ್ನು ಜನಸಾಮಾನ್ಯರ ಸ್ಥಿತಿಗತಿಯು ಹೇಗಿತ್ತೆಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ.

ಯಾವುದೇ ಸುಧಾರಣೆಯನ್ನು ಜಾರಿಗೆ ತಂದಾಗ ಕೆಲವು ಮಂದಿ ಕಷ್ಟ ನಷ್ಟಕ್ಕೆ ಒಳಗಾಗುವುದು ಸಹಜ. ಆದರೆ ಬದಲಾವಣೆ ಬಂದಾಗ ಹೆಚ್ಚು ಮಂದಿಗೆ ಅನುಕೂಲವಾಗುವುದು ಅಷ್ಟೇ ಸತ್ಯ. ಇಂದು ನಿವೇಶನ ಕೊಳ್ಳಲು, ಮನೆಕಟ್ಟಲು, ವಾಹನ ಕೊಳ್ಳಲು ಬಹುತೇಕ ಸರ್ಕಾರಿ ಸಿಬ್ಬಂದಿ ಸಶಕ್ತರಾಗಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ತಮಗೆ ಇಷ್ಟವಾದ ವಾಹನ ಖರೀದಿಸುವ ಆರ್ಥಿಕ ಬಲವನ್ನು ಗಳಿಸಿಕೊಂಡಿದ್ದಾರೆ. ಇಂದು ಹಳ್ಳಿಗಳು ಸೇರಿದಂತೆ ನಗರಗಳಲ್ಲಿ ಕನಿಷ್ಠ ದ್ವಿಚಕ್ರವಾಹನಗಳಿಲ್ಲದ ಮನೆಗಳಿಲ್ಲ ಎನ್ನುವಂತಾಗಿದೆ. ಬೃಹತ್ ನಗರಗಳಲ್ಲಿ ಮನೆಗೊಂದೆರಡು ಕಾರುಗಳಿರುವ ಆರ್ಥಿಕ ಬದಲಾವಣೆಯನ್ನು ನೋಡಬಹುದಾಗಿದೆ. ಕಾಕತಾಳೀಯ ಎನ್ನುವಂತೆ ಈ ತೊಂಬತ್ತರ ದಶಕದಲ್ಲಿ ಮಾಹಿತಿ ತಂತ್ರಜ್ಞಾನ ಎನ್ನುವ ಮಾಯಾಲೋಕವೇ ಸೃಷ್ಟಿಯಾಗಿ ವಿಶ್ವದ ಆರ್ಥಿಕ ಸುಧಾರಣೆಗೆ ಜೊತೆ ಜೊತೆಯಾಗಿ ನಿಂತುಕೊಂಡಿತು. ಇದರಿಂದ ಕಾರ್ಪೊರೇಟ್ ಸಂಸ್ಥೆಗಳು ಹುಟ್ಟಿಕೊಂಡವು. ಮೂರು ದಶಕಗಳಲ್ಲಿ ಆದ ಈ ಬದಲಾವಣೆ ಈಗ ಇತಿಹಾಸ.

ಪ್ರಧಾನಿ ನರೇಂದ್ರ ಮೋದಿ ಆಡಳಿತವು ೨೦೧೭ರಲ್ಲಿ ಜಾರಿಗೆ ತಂದ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ ) ವ್ಯವಸ್ಥೆ ಡಾ. ಮನಮೋಹನ ಸಿಂಗ್ ಅವರ ಕನಸಿನ ಕೂಸು. ನರಸಿಂಹರಾವ್ ಆಡಳಿತ ಕಾಲದಲ್ಲಿಯೇ ಮೌಲ್ಯವರ್ಧಿತ ತೆರಿಗೆ (ವ್ಯಾಟ್)ಪದ್ಧತಿಯನ್ನು ಜಾರಿಗೆ ತರುವ ಮೂಲಕ ಜಿಎಸ್‌ಟಿ ಆರ್ಥಿಕ ವ್ಯವಸ್ಥೆಯ ಪರಿಕಲ್ಪನೆಯ ಮುನ್ನೋಟವನ್ನು ಮನಮೋಹನ ಸಿಂಗ್ ಕಂಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರೂ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ತರಬೇಕೆನ್ನುವ ಕನಸು ಕಂಡಿದ್ದರು. ಆದರೆ ಅವರು ೨೦೦೪ರಲ್ಲಿ ಮತ್ತೆ ಅಧಿಕಾರಕ್ಕೆ ಬರಲಾಗದ ಪರಿಣಾಮ ಅವರ ಕನಸು ನನಸಾಗಲಿಲ್ಲ. ಡಾ. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿ ಎರಡನೇ ಅವಧಿಯಲ್ಲಿ ಶೇ.೧೮ ರಂತೆ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತರುವ ಯತ್ನ ನಡೆಸಿದಾಗ ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಸೇರಿದಂತೆ ಬಿಜೆಪಿ ಆಡಳಿತ ರಾಜ್ಯಗಳು ಮತ್ತು ಕೇರಳ ಸರ್ಕಾರ ಬಲವಾಗಿ ವಿರೋಧಿಸಿದವು. ಇದರ ಪರಿಣಾಮ ಅಂದರೆ ೨೦೧೩ರಲ್ಲಿಯೇ ಜಾರಿಗೆ ತರಬೇಕಾಗಿದ್ದ ಈ ಜಿಎಸ್‌ಟಿ ವ್ಯವಸ್ಥೆಯ ವಿಳಂಬದಿಂದ ದೇಶದ ಆರ್ಥಿಕ ಸ್ಥಿತಿಯ ಮೇಲೆ ೧೨ ಲಕ್ಷ ಕೋಟಿ ರೂ. ನಷ್ಟವಾಯಿತೆಂದು ಅಂದಾಜಿಸಲಾಗಿದೆ. ಆದರೆ ಬದಲಾವಣೆ ಜಗದ ನಿಯಮ ಎನ್ನುವಂತೆ ಮೋದಿ ಅವರು ಪ್ರಧಾನಿಯಾಗಿ ಬಂದ ಮೇಲೆ ಆರ್ಥಿಕ ಸುಧಾರಣೆಯನ್ನು ಮನಗಂಡು ೨೦೧೭ರಲ್ಲಿ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದರು. ಈ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದಾಗ ವಿರೋಧಕ್ಕಾಗಿ ವಿರೋಧ ಎನ್ನುವಂತೆ ರಾಜಕೀಯವಾಗಿ ಬಿಜೆಪಿಯೇತರ ರಾಜ್ಯ ಸರ್ಕಾರಗಳು ವಿರೋಧಿಸಿದವು.

ನಾಲ್ಕು ಹಂತದ ಜಿಎಸ್‌ಟಿಯಿಂದ ಬಹುತೇಕ ವಸ್ತುಗಳು ಮತ್ತು ಜೀವನೋಪಯೋಗಿ ಪದಾರ್ಥಗಳು ತುಟ್ಟಿಯಾದವು. ಆದರೆ ರಾಜ್ಯ ಸರ್ಕಾರಗಳ ಮೂಲಕ ಸಂಗ್ರಹಿಸುವ ತೆರಿಗೆಯ ಸಂಪನ್ಮೂಲದಿಂದ ಕೇಂದ್ರ ಸರ್ಕಾರದ ಹಣಕಾಸು ವ್ಯವಸ್ಥೆ ಗಟ್ಟಿಯಾಯಿತು. ಆದರೆ ಜಿಎಸ್‌ಟಿಯಿಂದ ಬರುವ ತೆರಿಗೆ ಹಂಚಿಕೆಯಲ್ಲಿನ ಸೂತ್ರದಿಂದ ಹೆಚ್ಚು ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ನೀಡುವ ಕರ್ನಾಟಕದಂತಹ ರಾಜ್ಯಗಳು ಸೇರಿದಂತೆ ವಿಶೇಷವಾಗಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತಿರುವುದು ಸತ್ಯ. ಇದಕ್ಕೆ ಹದಿನೈದನೇ ಹಣಕಾಸು ಆಯೋಗದ ಮಾನದಂಡಗಳು ಕಾರಣ ಎಂದು ಕೇಂದ್ರ ಸರ್ಕಾರ ಅನ್ಯಾಯಕ್ಕೊಳಗಾದ ರಾಜ್ಯಗಳಿಗೆ ಕಣ್ಣೀರು ಒರೆಸುವ ತಂತ್ರವನ್ನು ಬಳಸಿಕೊಂಡು ಬರುತ್ತಿದೆ.

ನಾಲ್ಕು ಹಂತದ ತೆರಿಗೆ ಸಂಗ್ರಹ ಕ್ರಮವನ್ನು ಈಗ ಶೇ. ೫ ಮತ್ತು ಶೇ.೧೮ಕ್ಕೆ ಇಳಿಸಿರುವುದರಿಂದ ಸಹಜವಾಗಿ ಜನಸಾಮಾನ್ಯರಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಸಹಾಯವಾಗಲಿದೆ. ಜನಸಾಮಾನ್ಯರ ವೈಯಕ್ತಿಕ ಬದುಕಿನಲ್ಲಿ ಗುಣಮಟ್ಟದ ಆರ್ಥಿಕ ಸುಧಾರಣೆ ಆಗಲಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಬಹುತೇಕ ಅಗತ್ಯ ವಸ್ತುಗಳ ಬೆಲೆಯು ಇಳಿಯಲಿದೆ. ಜಿಎಸ್‌ಟಿ ಸರಳೀಕರಣವನ್ನು ಪ್ರಾಮಾಣಿಕವಾಗಿ ಜಾರಿಗೆ ತರುವಂತೆ ನೋಡಿಕೊಳ್ಳುವುದು ಆಯಾ ರಾಜ್ಯ ಸರ್ಕಾರಗಳ ಹೊಣೆಗಾರಿಗೆ. ಏನೇ ಕ್ರಮಕೈಗೊಂಡರೂ ತೆರಿಗೆ ವಂಚನೆ ಮಾಡುವ ಮಂದಿ ಎಲ್ಲೆಡೆ ಇದ್ದಾರೆ.

ಜಿಎಸ್‌ಟಿ ಪರಿಷ್ಕೃತ ಸರಳೀಕರಣದಿಂದ ಜನಸಾಮಾನ್ಯರಿಗೆ ಅನುಕೂಲವಾಗುವುದು ನಿಜ ಎನ್ನುವುದನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದ್ದರೂ, ಈ ಹೊಸ ಕ್ರಮದಿಂದ ರಾಜ್ಯಕ್ಕೆ ೧೫ರಿಂದ ೨೦ ಸಾವಿರ ಕೋಟಿ ರೂ. ನಷ್ಟವಾಗಲಿದೆ. ಈ ನಷ್ಟವನ್ನು ಕೇಂದ್ರ ಸರ್ಕಾರವು ಕೊನೇ ಪಕ್ಷ ಐದು ವರ್ಷಗಳವರೆಗಾದರೂ ತುಂಬಿಕೊಡ ಬೇಕೆನ್ನುವುದು ಅವರ ವಾದ. ಇದೇ ವಾದ ಕೇರಳ ಮತ್ತು ತಮಿಳುನಾಡಿನದ್ದೂ ಕೂಡ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಎಲ್ಲ ನೀತಿ ಮತ್ತು ಕ್ರಮಗಳನ್ನು ಬಲವಾಗಿ ವಿರೋಧಿಸಿಕೊಂಡು ಬರುತ್ತಿರುವ ಕಾಂಗ್ರೆಸ್, ಈ ಹೊಸ ಸುಧಾರಿತ ಕ್ರಮದಿಂದ ರಾಜ್ಯಗಳ ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಕೇಂದ್ರದಿಂದ ಬರುವ ತೆರಿಗೆ ಪಾಲಿನ ಅಂಶ ಕಡಿಮೆ ಆಗಲಿದೆ. ಈ ನಷ್ಟವನ್ನು ರಾಜ್ಯಗಳಿಗೆ ಕೇಂದ್ರ ಸರ್ಕಾರ ಭರಿಸಬೇಕು ಎಂದು ಆಗ್ರಹಪಡಿಸಿರುವುದು ಬಿಜೆಪಿಯೇತರ ರಾಜ್ಯಗಳ ಬೇಡಿಕೆಗೆ ದನಿಗೂಡಿಸಿದಂತಾಗಿದೆ.

ರಾಜ್ಯಗಳು ತೆರಿಗೆ ಸಂಗ್ರಹದಲ್ಲಿ ಇಳಿಕೆಯನ್ನು ಕಂಡಂತೆ ಕೇಂದ್ರಕ್ಕೆ ಕಳುಹಿಸುವ ತೆರಿಗೆ ಪಾಲು ಕೂಡ ಕಮ್ಮಿ ಆಗಲಿದೆ. ಇದರ ಪರಿಣಾಮ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ ಸರಾಸರಿ ೪೮ ಸಾವಿರ ಕೋಟಿ ರೂ. ನಷ್ಟವಾಗಲಿದೆ ಎಂದು ಅಧಿಕೃತವಾಗಿ ಅಂದಾಜು ಮಾಡಲಾಗಿದೆ. ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ಜಿಎಸ್‌ಟಿ ಪಾಲಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಶೇ. ೪೧ರಷ್ಟು ತೆರಿಗೆ ಪಾಲನ್ನು ನೀಡುತ್ತಾ ಬಂದಿದೆ. ಆದರೆ ಭಾರತೀಯ ಸ್ಟೇಟ್ ಬ್ಯಾಂಕ್ ನಡೆಸಿರುವ ಸಂಶೋಧನೆಯ ಪ್ರಕಾರ ಹೊಸ ಜಿಎಸ್‌ಟಿ ನೀತಿಯಿಂದ ೩,೭೦೦ ಕೋಟಿ ರೂ. ನಷ್ಟವಾಗಲಿದೆ. ಇದರ ಪರಿಣಾಮ ಕೇಂದ್ರದ ಬಜೆಟ್ಟಿನಲ್ಲಿ ಸಾಕಷ್ಟು ಕೊರತೆ ಉಂಟಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ. ಜಿಎಸ್‌ಟಿ ಸರಳೀಕರಣಕ್ಕಾಗಿ ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಕೆಲವು ರಾಜ್ಯಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಬರುತ್ತಿದ್ದುದನ್ನು ಗಮನಿಸಲೇಬೇಕು. ಕೇಂದ್ರ ಸರ್ಕಾರ ತರುತ್ತಿರುವ ಈ ಸುಧಾರಣೆಯಿಂದ ಸಾಮಾನ್ಯ ಗ್ರಾಹಕರು, ಗೃಹಬಳಕೆಗೆ ಖರೀದಿಸುವ ಸಾಮಗ್ರಿಗಳ ದರ ಸಹಜವಾಗಿಯೇ ಕಡಿಮೆ ಆಗಲಿದೆ. ಕೈಗಾರಿಕೆಗಳ ಉತ್ಪನ್ನವನ್ನೂ ಪರೋಕ್ಷವಾಗಿ ಉತ್ತೇಜಿಸಿದಂತಾಗಲಿದೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ.

ಈ ಆರ್ಥಿಕ ಸುಧಾರಣೆಯಿಂದ ಜನಸಾಮಾನ್ಯರಲ್ಲದೆ ರೈತರು ಮತ್ತು ಸಣ್ಣ ಪ್ರಮಾಣದ ಉದ್ದಿಮೆದಾರರಿಗೆ ಹೆಚ್ಚು ಅನುಕೂಲವಾಗಲಿದೆ. ಜನರ ತಲಾ ಆದಾಯವೂ ಹೆಚ್ಚಲಿದೆ ಎನ್ನುವುದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸ್ಪಷ್ಟ ಅಭಿಪ್ರಾಯ. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ದೇಶಕ್ಕೆ ಬರುವ ಭಾರತದ ಉತ್ಪನ್ನಗಳ ಮೇಲೆ ಶೇ. ೫೦ರಷ್ಟು ತೆರಿಗೆ ವಿಽಸಿರುವ ಕ್ರಮವನ್ನು ಕೇಂದ್ರ ಸರ್ಕಾರ ಈ ಬದಲಾವಣೆಯಲ್ಲಿ ಗಮನದಲ್ಲಿಟ್ಟುಕೊಂಡಿದೆ ಎನ್ನುವುದು ಹಲವರ ಅಭಿಪ್ರಾಯ.

ಅದೇ ರೀತಿ ಬಿಹಾರದಲ್ಲಿ ಸದ್ಯವೇ ಬರಲಿರುವ ವಿಧಾನಸಭೆ ಚುನಾವಣೆಯನ್ನೂ ಮೋದಿ ಅವರು ಗಮನದಲ್ಲಿಟ್ಟುಕೊಂಡು ಈ ಆರ್ಥಿಕ ಸುಧಾರಣೆಗೆ ಕೈಹಾಕಿದ್ದಾರೆ ಎನ್ನಲಾಗಿದೆ. ಆದರೆ ಈ ಅಭಿಪ್ರಾಯವನ್ನು ಕೇಂದ್ರ ಸರ್ಕಾರದ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಏನೇ ಆಗಲಿ ಈ ಸರಳೀಕೃತ ಮತ್ತು ಸುಧಾರಿತ ಆರ್ಥಿಕ ಕ್ರಮಗಳು ಜನರಿಗೆ ಮುಟ್ಟಿ ಅವರ ತಲಾ ಆದಾಯದಲ್ಲಿ ಹೆಚ್ಚಳಗೊಂಡಾಗ ಮಾತ್ರ ಇಂತಹ ಸುಧಾರಣೆಗಳು ನಿಜಕ್ಕೂ ಫಲಪ್ರದವಾದೀತು.

” ನಾಲ್ಕು ಹಂತದ ತೆರಿಗೆ ಸಂಗ್ರಹ ಕ್ರಮವನ್ನು ಈಗ ಶೇ.೫ ಮತ್ತು ಶೇ.೧೮ಕ್ಕೆ ಇಳಿಸಿರುವುದರಿಂದ ಸಹಜವಾಗಿ ಜನಸಾಮಾನ್ಯರಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಸಹಾಯವಾಗಲಿದೆ.ಜನಸಾಮಾನ್ಯರ ವೈಯಕ್ತಿಕ ಬದುಕಿನಲ್ಲಿ ಗುಣಮಟ್ಟದ ಆರ್ಥಿಕ ಸುಧಾರಣೆ ಆಗಲಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.”

Tags:
error: Content is protected !!