Light
Dark

ತಪ್ಪುದಾರಿ ಹಿಡಿದಿದ್ದ ದೈತ್ಯ ಪ್ರತಿಭೆ ಸಹಾರಾ ಸ್ಥಾಪಕ

• ಪ್ರೊ.ಆರ್.ಎಂ.ಚಿಂತಾಮಣಿ

ಕೆಲವರಿರುತ್ತಾರೆ. ಅವರಿಗೆ ಬೇಗ ಶ್ರೀಮಂತರಾಗಬೇಕೆಂಬ ಆ ಮಹತ್ವಾಕಾಂಕ್ಷೆ ಇರುತ್ತದೆ. ಮಾರ್ಗ ಯಾವುದಾದರೂ ಸರಿಯೇ. ವ್ಯವಹಾರದಲ್ಲಿ ನೈತಿಕತೆ ಮತ್ತು ಕಾಯ್ದೆ ಬದ್ಧತೆಗಳ ಬಗ್ಗೆ ಅವರು ಚಿಂತಿಸುವುದೇ ಇಲ್ಲ. ಒಟ್ಟಿನಲ್ಲಿ ತಮ್ಮ ಗುರಿ ಮುಟ್ಟಬೇಕು. ಮಾರ್ಗ ಮುಖ್ಯವಲ್ಲ. ಆದರೆ ಅಂತಹವರು ಮೇಲೆ ಏರಿದಷ್ಟೇ ವೇಗವಾಗಿ ಕೆಳಗೆ ಪಾತಾಳಕ್ಕೆ ಬೀಳುತ್ತಾರೆ. ಮೇಲೇಳಲಿಕ್ಕಾಗುವುದಿಲ್ಲ. ಅಂತಹವರಲ್ಲಿ ಒಬ್ಬರು ಸಹಾರಾ ಗುಂಪಿನ ಕಂಪೆನಿಗಳ ಸ್ಥಾಪಕ, ತನ್ನನ್ನು ತಾನು ಚೇರ್ಮನ್ ಎಂದು ಕರೆದುಕೊಳ್ಳದೇ ‘ಮುಖ್ಯಕಾರ್ಯಕರ್ತ’ ಎಂದು ಕರೆದುಕೊಳ್ಳುತ್ತಿದ್ದ ಸುಬ್ರ ತಾರಾಯ್. ವಿಚಾರಣಾಧೀನ ಕೈದಿಯಾಗಿರುವಾಗಲೇ ಇವರು ಕಳೆದ ಮಂಗಳವಾರ (14 ನವೆಂಬರ್, 2023) ತಮ್ಮ 75ನೇ ವರ್ಷ ವಯಸ್ಸಿನಲ್ಲಿ ದೀರ್ಘ ಅನಾರೋಗ್ಯದಿಂದ ಮುಂಬಯಿಯ ಕೋಕಿಲಾ ಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು.

ಬಿಹಾರ ರಾಜ್ಯದ ಅರಾರಿಯಾದಲ್ಲಿ ಜನಿಸಿದ ಸುಬ್ರತಾ ರಾಯ್ ಗೋರಖಪುರ ಕಾಲೇಜಿನಲ್ಲಿ ಅಧ್ಯಯನ ಮಾಡಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದವರು. ಸಣ್ಣ ವ್ಯಾಪಾರಿಯಾಗಿದ್ದ ತಂದೆ ಸುಧೀರ ಚಂದ್ರರಂತೆ ರಾಯ್ ಸಹಿತ ತಮ್ಮ ತಾರುಣ್ಯದಲ್ಲಿ ಹಲವು ವ್ಯಾಪಾರಗಳಲ್ಲಿ ಕೈಯಾಡಿಸಿದ್ದಾರೆ. ಬಿಹಾರದ ಗೋಪಾಲಗಂ ಜನಲ್ಲಿಯ ನೀರಾವರಿ ಇಲಾಖೆಗೆ ನಿರ್ಮಾಣಕ್ಕಾಗಿ ಕಲ್ಲುಗಳನ್ನು ಪೂರೈಸುತ್ತಿದ್ದರು. ಖಾಲಿ ಗೋಣಿಚೀಲಗಳ ಮಾರಾಟ ಮತ್ತು ಸಾಗಾಣಿಕೆ ವ್ಯವಹಾರದಲ್ಲಿ ಇದ್ದರು. ‘ಏರ್‌ಫ್ಯಾನ್ಸ್’ ಹೆಸರಿನಲ್ಲಿ ಫ್ಯಾನುಗಳನ್ನೂ ಮಾರುತ್ತಿದ್ದರು. ಪತ್ನಿ ಸ್ವಪ್ಪಾರಾಯ್ ಜೊತೆ ಸೇರಿ ‘ಜಯ್ ತಿಂಡಿಗಳು’ ಹೆಸರಿನಲ್ಲಿ ಕುರ್ಕುತಿಂಡಿಗಳನ್ನು ತಯಾರಿಸಿ ಮಾರುತ್ತಿದ್ದರು. ಇನ್ನೂ ಹಲವು ವ್ಯವಹಾರಗಳನ್ನು ಮಾಡಿದರೂ ಯಾವುದೂ ಕೈ ಹಿಡಿಯಲಿಲ್ಲ. ರಾಯ್ ಕುಟುಂಬ ಬೆಳೆಯಲಿಕ್ಕೆ ಸಾಧ್ಯವಾಗಲೇ ಇಲ್ಲ. ಹೊಸ ವ್ಯವಹಾರಗಳ ಹುಡುಕಾಟ ಮುಂದುವರಿಯಿತು. ಛಲ ಬಿಡದೆ ರಾಯ್ ಮುನ್ನಡೆದರು.

ಸಹಾರಾ ಹಣಕಾಸು ಕಂಪೆನಿ ಆರಂಭ : ರಾಯ್‌ಗೆ 30 ವರ್ಷ ವಯಸ್ಸಾಗಿದ್ದಾಗ 1978ರಲ್ಲಿ ತಂದೆಯ ಲ್ಯಾಂಬ್ರಿಟಾ ಸ್ಕೂಟರ್ ಮತ್ತು 2000 ರೂ. ಬಂಡವಾಳದೊಂದಿಗೆ ಉತ್ತರ ಪ್ರದೇಶದ ಗೋರಖಪುರದಲ್ಲಿ ‘ಸಹಾರಾ ಹಣಕಾಸು ಕಂಪೆನಿ’ಯನ್ನು ಸಣ್ಣ ಪ್ರಮಾಣದಲ್ಲಿ ಆರಂಭಿಸಿದರು. ಆಗ ಅದರಲ್ಲಿ ಇದ್ದವರು ಮೂರೇ ಜನ. ಒಬ್ಬ ಸಹಾಯಕ, ಒಬ್ಬ ಕ್ಲರ್ಕ್ ಮತ್ತು ಸುಬ್ರತಾ ರಾಯ್ ಮಾತ್ರ. ಅವಶ್ಯಕತೆ ಇದ್ದವರಿಗೆ ಬೆಳವಣಿಗೆಗೆ ಸಹಾಯ ಮಾಡುವುದೇ ಉದ್ದೇಶ ಎಂದೂ ಅದಕ್ಕಾಗಿಯೇ ಕಂಪೆನಿಗೆ ‘ಸಹಾರಾ’ (ಸಹಾಯಹಸ್ತ, ಊರುಗೋಲು) ಎಂದು ಹೆಸರಿಡಲಾಗಿದೆ ಎಂದೂ ಆಗ ಹೇಳಿಕೊಂಡಿದ್ದರು. ಠೇವಣಿ ಇಟ್ಟ ಗ್ರಾಹಕರಿಗೆ ನಿಯಮಿತವಾಗಿ ಲಾಭದಾಯಕ ಬಡ್ಡಿ ದರದಲ್ಲಿಕೊಡುವ ಭರವಸೆ ಕೊಡಲಾಗಿತ್ತು.

ಪ್ರತಿದಿನ ಒಂದು ರೂಪಾಯಿ ಠೇವಣಿಯಂತೆ ಅಂದಿನ ರಿಕ್ಷಾ ಎಳೆಯುವವರು, ಟೀ ಅಂಗಡಿಯವರು ಮುಂತಾದ ಸಣ್ಣ ವ್ಯವಹಾರಸ್ಥರಿಂದ ಇವರೇ ಅವರ ಬಾಗಿಲಿಗೆ ಹೋಗಿ ಸಂಗ್ರಹ ಮಾಡುತ್ತಿದ್ದರು. ಅಷ್ಟೇ ಸರಳವಾಗಿ ಸಾಲಗಳನ್ನೂ ಕೊಟ್ಟು ಸುಲಭ ಕಂತುಗಳಲ್ಲಿ ವಸೂಲು ಮಾಡಲಾಗುತ್ತಿತ್ತು. ಅನೇಕರಿಗೆ ಅನುಕೂಲವಾಯಿತು. ರಾಯ್ ವ್ಯವಹಾರವನ್ನು ವಿಸ್ತರಿಸಿದರು. ವಿವಿಧ ಠೇವಣಿ ಯೋಜನೆಗಳನ್ನು ಪ್ರಕಟಿಸಿ ದೇಶಾದ್ಯಂತ ಠೇವಣಿ ಸಂಗ್ರಹ ಏಜೆಂಟರನ್ನು ನೇಮಿಸಿದರು.

ಅಲ್ಲಿಂದ ತಿರುಗಿ ನೋಡಲಿಲ್ಲ ; ಬೆಳೆಯುತ್ತ ನಡೆದರು. ಸಂಪರ್ಕಗಳು ಹೆಚ್ಚಾದವು. ರಾಜಕೀಯದಲ್ಲಿರುವವರೊಡನೆ ಸ್ನೇಹ ಹೆಚ್ಚಿತು. ಮುಂದಿನ 30 ವರ್ಷಗಳಲ್ಲಿ (2008ರ ಹೊತ್ತಿಗೆ) ಸಹಾರಾ ದೇಶದ ಅತಿದೊಡ್ಡ ಬ್ಯಾಂಕೇತರ ಹಣಕಾಸು ಕಂಪೆನಿಯಾಗಿ ಬೆಳೆದಿತ್ತು. ಅದರ ಒಟ್ಟು ಠೇವಣಿಗಳು ಅಂದಿನ ಮಟ್ಟದಲ್ಲಿ 20,000 ಕೋಟಿ ರೂ.ಗಳಿಗೂ ಹೆಚ್ಚಾಗಿದ್ದು, ಒಂದು ದೊಡ್ಡ ಬ್ಯಾಂಕಿಗಿಂತ ದೊಡ್ಡದಾಗಿ ಬೆಳೆದಿತ್ತು.

ಸಾಮ್ರಾಜ್ಯದ ವಿಸ್ತರಣೆ : ಈ ಅವಧಿಯಲ್ಲಿ ಸುಬ್ರತಾ ರಾಯ್ ರಿಯಲ್ ಎಸ್ಟೇಟ್, ಹೋಟೆಲ್ ಉದ್ದಿಮೆ, ವಿಮಾನಯಾನ, ಪ್ರವಾಸೋದ್ಯಮ, ಮನರಂಜನೆ ಹೀಗೆ ವಿವಿಧ ರಂಗಗಳಲ್ಲಿ ಚಟುವಟಿಕೆಗಳನ್ನು ವಿಸ್ತರಿಸಿದರು. ಎಲ್ಲದಕ್ಕೂ ಸಹಾರಾ ಹಣಕಾಸು ಕಂಪೆನಿಯೇ ಮೂಲ. ಸಹಾರಾಹೆಸರಿನಲ್ಲಿಯೇ ನೂರಾರು ಕಂಪೆನಿಗಳು ಹುಟ್ಟಿದವು, ಬೆಳೆದವು. ದೊಡ್ಡ ಪಂಚತಾರ ಹೋಟೆಲುಗಳು ಅಸ್ತಿತ್ವಕ್ಕೆ ಬಂದವು. ಅಮೆರಿಕ ಮತ್ತು ಇಂಗ್ಲೆಂಡ್ ನಲ್ಲಿ ದೊಡ್ಡ ಹೋಟೆಲ್‌ಗಳನ್ನು ಮತ್ತು ಬಂಗ್ಲೆಗಳನ್ನು ಖರೀದಿಸಿದರು. ಸಹಾರಾ ಏರ್‌ಲೈನ್ ಹಾರಾಟ ಆರಂಭವಾಯಿತು. ಲಕ್ಷ್ಮಿ ನಗರದಲ್ಲಿ 270 ಎಕರೆ ಪ್ರದೇಶದಲ್ಲಿ ರಾಯ್ ವಾಸಸ್ಥಳ ಬೃಹತ್ ಮಹಲ್ ‘ಸಹಾರಾ ಶಹರ’ ರಾರಾಜಿಸತೊಡಗಿತು. 2004ರಲ್ಲಿ ಇಲ್ಲಿ ತಮ್ಮ ಇಬ್ಬರು ಗಂಡುಮಕ್ಕಳ ಮದುವೆ ಮಾಡಿದಾಗ ಅಂದಿನ ಪ್ರಧಾನಿ ವಾಜಪೇಯಿ ಸೇರಿ 10,500ಕ್ಕೂ ಹೆಚ್ಚು ಪ್ರಭಾವಿ ಅತಿಥಿಗಳು ಬಂದಿದ್ದರಂತೆ.

ಸಹಾರಾ ಕ್ರಿಕೆಟ್, ಹಾಕಿಯಲ್ಲದೆ ವಿವಿಧ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಪ್ರಾಯೋಜಿಸಿದ್ದು, ಎಲ್ಲ ಆಟಗಾರರ ಭುಜ ಮತ್ತು ಬೆನ್ನ ಮೇಲೆ ಸಹಾರಾ ರಾರಾಜಿಸಿದ್ದು ಈಗ ಇತಿಹಾಸ. ಸುಬ್ರತಾ ರಾಯ್ ಮತ್ತು ವಿಜಯ ಮಲ್ಯ ಪಾಲುದಾರಿಕೆಯಲ್ಲಿ ಫಾರ್ಮುಲಾ ಒನ್ ಕಾರ್ ರೇಸಿಂಗ್‌ನಲ್ಲಿ ಒಂದು ಟೀಮಿನ ಮಾಲೀಕತ್ವ ಹೊಂದಿದ್ದರು. ಹೀಗೆ ಎಲ್ಲ ರಂಗಗಳಲ್ಲೂ ಪ್ರಭಾವಿಯಾಗಿ ಮೆರೆದರು.

ಸಹಾರಾ ಓಟಕ್ಕೆ ‘ಸೆಬಿ’ಯಿಂದ ತಡೆ:ಸಹಾರಾ ಕಂಪೆನಿಗಳು ಆರಂಭದಿಂದ ಕಾಯಿದೆ ಪಾಲನೆಯಲ್ಲಿ ಸ್ವಲ್ಪ ಹಿಂದೆಯೆ. ರಾಯ್ ರಾಜಕೀಯ ಸಂಪರ್ಕ ಮತ್ತು ಪ್ರಭಾವಗಳಿಂದಾಗಿ ಅಧಿಕಾರಿಗಳು ಸಣ್ಣ ಪುಟ್ಟ ತಪ್ಪುಗಳನ್ನು ಮನ್ನಿಸಿ ಎಚ್ಚರಿಕೆ ಕೊಟ್ಟಿದ್ದು ಕಂಡುಬರುತ್ತದೆ. ರಿಸರ್ವ್ ಬ್ಯಾಂಕು 2008ರ ಕೊನೆಯಲ್ಲಿಯೇ ಎಲ್ಲ ಸಹಾರಾ ಕಂಪೆನಿಗಳೂ ಇನ್ನು ಮುಂದೆ ಯಾವುದೇ ರೂಪದಲ್ಲಿ ಸಾರ್ವಜನಿಕರಿಂದ ಠೇವಣಿಗಳನ್ನು ಸ್ವೀಕರಿಸಬಾರದೆಂದು ಆದೇಶಿಸಿತ್ತು. ಆದರೆ ಸೆಬಿ ಮತ್ತು ರಿಸರ್ವ್ ಬ್ಯಾಂಕಿನ ಗಮನಕ್ಕೆ ತಾರದೆ ಎರಡು ಸಹಾರಾ ರಿಯಲ್ ಎಸ್ಟೇಟ್ ಕಂಪೆನಿಗಳು ಕನ್ವರ್ಟಿಬಲ್ ಡಿಬೆಂಚರ್ ಗಳನ್ನು ಮಾರಿ 32,000 ಕೋಟಿ ರೂ.ಗಳನ್ನು ಸಂಗ್ರಹ ಮಾಡಿದ್ದವು. ಇದು ಕಾಯಿದೆ ಬಾಹಿರ ಎಂದು ಸೆಬಿ (ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್‌ಚೇಂಜಿಸ್ ಬೋರ್ಡ್ ಆಫ್ ಇಂಡಿಯಾ) 24,000 ಕೋಟಿ ರೂ.ಗಳನ್ನು 3 ಕೋಟಿ ಹೂಡಿಕೆದಾರರಿಗೆ ಬಡ್ಡಿ ಸಮೇತ ಪಾವತಿ ಮಾಡಬೇಕೆಂದು ಆದೇಶಿಸಿತು. ಇದನ್ನು ಸಹಾರಾ ಕಂಪೆನಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ನ್ಯಾಯಾಲಯ 2012ರಲ್ಲಿ ಸೆಬಿ ಆದೇಶವನ್ನು ಎತ್ತಿ ಹಿಡಿಯಿತು.

ತಮ್ಮ ರಾಜಕಾರಣಿ ಮಿತ್ರರು ತಮ್ಮ ಸಹಾಯಕ್ಕೆ ಬರುತ್ತಾರೆಂದು ನಂಬಿ ಸುಬ್ರತಾ ರಾಯ್ ಸೆಬಿಯೊಡನೆ ಸೆಣಸಾಟಕ್ಕೂ ಇಳಿದು ಅಯಶಸ್ವಿಯಾದರು. ಸೆಬಿಗೆ 170 ಟ್ರಕ್ ತುಂಬ ದಾಖಲೆಗಳೆಂದು ಕಾಗದ ಪತ್ರಗಳ ಗಂಟುಗಳನ್ನೇ ಕಳುಹಿಸಿ ಕಿರುಕುಳ ಕೊಟ್ಟರು. ಅದೂ ಟುಸ್ ಆಯಿತು. ಅಲ್ಲಿಗೆ ಅವರಿಗೆ ಎಲ್ಲ ಬಾಗಿಲುಗಳೂ ಮುಚ್ಚಿದವು.

ಕೋರ್ಟ್ ಆದೇಶದಂತೆ 2016ರಲ್ಲಿ ರಾಯ್ ಬಂಧನವಾಯಿತು. ಪರೋಲ್ ಮೇಲೆ ಹೊರ ಬರುವುದು ಮತ್ತೆ ಜೈಲಿಗೆ ಹೋಗುವುದು ನಡೆದೇ ಇತ್ತು. ಈಗ ರಾಯ್ ಮರಣ ಹೊಂದಿದ್ದಾರೆ. ಸಹಾರಾ ಗುಂಪಿನ ವಿರುದ್ದ ಸೆಬಿ ತನಿಖೆ ಮುಂದುವರಿಯುತ್ತದೆ.

2014ರಲ್ಲಿಯೇ ಹಿರಿಯ ಪತ್ರಕರ್ತ ತಮಲ ಬಂಡೋಪಾಧ್ಯಾಯರವರು ‘

ಸಹಾರ: ದಿ ಅನ್‌ಟೋಲ್ಡ್ ಸ್ಟೋರಿ’ ಪುಸ್ತಕ ಬರೆದಿದ್ದು, ಅವರು ಒಂದು ಮಾತನ್ನು ಹೇಳಿದ್ದಾರೆ. ‘ಸುಬ್ರತಾ ರಾಯ್‌ನಂತಹ ಪ್ರತಿಭಾವಂತ ಉದ್ಯಮಿ ನಿಯಮಗಳಿಗೆ ಗೌರವ ಕೊಟ್ಟಿದ್ದರೆ ಮತ್ತು ಕಾಯಿದೆ ಪಾಲನೆ ಮಾಡಿದ್ದರೆ ನಿಧಾನವಾಗಿಯಾದರೂ ಅತ್ಯಂತ ಉನ್ನತ ಮಟ್ಟಕ್ಕೇರಬಹುದಿತ್ತು’.

ಒಂದು ಮಾತು: ಮುಂದಿನ ಪೀಳಿಗೆಯ ಉದ್ಯಮಶೀಲರು ಒಬ್ಬ ಯಶಸ್ವಿ ಉದ್ಯಮಿ ಹೇಗಿರಬಾರದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯಾಗಿ ಸುಬ್ರ ತಾರಾಯ್ ಬಗ್ಗೆ ತಿಳಿದುಕೊಂಡಿರಬೇಕು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ