ಏರುತ್ತಲೇ ಇರುವ ಕೇಂದ್ರ ಸರ್ಕಾರದ ಸಾಲ
ನಿರುದ್ಯೋಗ, ಹಣದುಬ್ಬರ, ವ್ಯಾಪಾರ ಕೊರತೆ, ವಿತ್ತೀಯ ಕೊರತೆ ಹಿಗ್ಗುತ್ತಿರುವ ಹೊತ್ತಿಗೆ ದೇಶದ ಸಾಲದ ಪ್ರಮಾಣವೂ ಗಣನೀಯವಾಗಿ ಹಿಗ್ಗಿದೆ. ದೇಶದ ಅಭಿವೃದ್ಧಿ ಶೇ.೬-೭ರ ಆಜುಬಾಜಿನಲ್ಲಿದ್ದರೆ, ದೇಶದ ಸಾಲದ ಪ್ರಮಾಣವು ಶೇ.೮.೨ರಷ್ಟು ಏರಿಕೆಯಾಗಿದೆ. ಹಣಕಾಸು ಸಚಿವಾಲಯದ ಪ್ರಕಾರ, ಮಾರ್ಚ್ ೨೦೨೨ರ ಹೊತ್ತಿಗೆ ಭಾರತದ ಬಾಹ್ಯ ಸಾಲವು ೬೨೦.೭ ಬಿಲಿಯನ್ ಡಾಲರ್‌ಗಳಿಗೆ (ರೂಪಾಯಿ ಲೆಕ್ಕದಲ್ಲಿ ೪೯,೬೫,೬೦೦ ಕೋಟಿ) ಏರಿದೆ. ಈ ಪೈಕಿ ಡಾಲರ್ ರೂಪದ ಸಾಲವು ಶೇ.೫೩.೨ರಷ್ಟಿದ್ದರೆ, ರೂಪಾಯಿ ರೂಪದಲ್ಲಿ ಪಡೆದಿರುವ ಸಾಲವು ಶೇ.೩೧.೨ರಷ್ಟಿದೆ. ವಾರ್ಷಿಕ ಸಾಲದ ಮೊತ್ತ ಶೇ.೮.೨ರಷ್ಟು ಏರಿಕೆಯಾಗಿರುವುದು ಅಪಾಯಕಾರಿ ಸೂಚನೆ. ನಮ್ಮ ಹಣದುಬ್ಬರದ ಪ್ರಮಾಣಕ್ಕಿಂತ ಸರ್ಕಾರ ಮಾಡುತ್ತಿರುವ ಸಾಲದ ಪ್ರಮಾಣ ಹೆಚ್ಚಿದೆ. ಹೀಗೆ ಸಾಲ ಹೆಚ್ಚುತ್ತಾ ಹೋದರೆ, ಸರ್ಕಾರಕ್ಕೆ ಬರುವ ಆದಾಯದ ಪೈಕಿ ಹೆಚ್ಚಿನ ಪಾಲು ಬಡ್ಡಿ ಪಾವತಿಗೆ ಮೀಸಲಾಗಲಿದೆ. ಇತ್ತೀಚೆಗೆ ನಮ್ಮ ವಿದೇಶಿ ವಿನಿಮಯ ಮೀಸಲು ನಿಧಿ ಕರಗುತ್ತಾ ಬರುತ್ತಿದೆ. ಆದರೆ, ಸಾಲದ ಮೊತ್ತವು ಏರುತ್ತಾ ಹೋಗುತ್ತಿದೆ. ಇದು ದೇಶದ ಆರ್ಥಿಕತೆಯು ಅನಾರೋಗ್ಯ ಸ್ಥಿತಿಯತ್ತ ಹೊರಳುತ್ತಿರುವುದರ ಮುನ್ಸೂಚನೆ!
ಜ್ವಾಲಾಮುಖಿ ಸ್ಫೋಟದ ಮುನ್ಸೂಚನೆ
ಮೇ ೨೦೨೧ ರಲ್ಲಿ ಭುಗಿಲೆದ್ದ ಕಾಂಗೋದ ಮೌಂಟ್ ನೈರಾಗೊಂಗೊ ಜ್ವಾಲಾಮುಖಿ ಪ್ರಪಂಚದ ಅತ್ಯಂತ ಅಪಾಯಕಾರಿ ಜ್ವಾಲಾಮುಖಿಗಳಲ್ಲಿ ಒಂದು. ಇದು ಯಾವುದೇ ಮುನ್ಸೂಚನೆ ನೀಡದೇ ಜೀವಂತವಾಗಿ ಸ್ಫೋಟಗೊಂಡಿತು. ಲಾವಾರಸವು ಬಿರುಕುಗಳಿಂದ ಹೊರಹೊಮ್ಮಿತ್ತು. ಪರ್ವತದಿಂದ ವೇಗವಾಗಿ ಕೆಳಗಿನ ನಗರಗಳ ಕಡೆಗೆ ಚಿಮ್ಮಿ ಹರಿಯಿತು. ತತ್ಪರಿಣಾಮ ನೂರಾರು ಜನರು ಸಾವಿಗೀಡಾದರು, ಸಾವಿರಾರು ಜನರು ಗಾಯಗೊಂಡರು. ಕಾಣೆಯಾದವರ ಪಕ್ಕಾ ಲೆಕ್ಕ ಇನ್ನೂ ಸಿಕ್ಕಿಲ್ಲ! ಜ್ವಾಲಾಮುಖಿಯ ಬಳಿ ೨೦೧೫ ರಲ್ಲಿ ಸ್ಥಾಪಿಸಲಾದ ಮೇಲ್ವಿಚಾರಣಾ ಕೇಂದ್ರಗಳ ಅಂಕಿಅಂಶಗಳನ್ನು ಬಳಸಿಕೊಂಡು, ಆ ಸ್ಫೋಟವು ಇದ್ದಕ್ಕಿದ್ದಂತೆ ಹೇಗೆ ಸಂಭವಿಸಿತು ಎಂಬುದನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಅಧ್ಯಯನದ ಪ್ರಕಾರ, ಸ್ಫೋಟವು ಇನ್ನೂ ಮಾರಕವಾಗಿರಬಹುದು ಎಂಬುದನ್ನು ಅಂಕಿಅಂಶಗಳು ಹೇಳುತ್ತಿವೆ. ಅಧ್ಯಯನವು ಮುಂದಿನ ಸ್ಫೋಟದ ಮೊದಲು ಈ ಜ್ವಾಲಾಮುಖಿಯ ನಿರ್ದಿಷ್ಟ ಅಪಾಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಜ್ವಾಲಾಮುಖಿತಜ್ಞ ಡೆಲ್ಫಿನ್ ಸ್ಮಿತ್ತರೆಲ್ಲೊ ಸೆಪ್ಟೆಂಬಂರ್ ೧ರ ‘ನೇಚರ್’ ನಿಯತಕಾಲಿಕದಲ್ಲಿ ವಿವರಿಸಿದ್ದಾರೆ.
ನೇರ ಪ್ರಸಾರದಲ್ಲಿ ನೊಣ ನುಂಗಿದ ನಿರೂಪಕಿ!
ನೊಣ ನುಂಗೋದು ಕಷ್ಟವೇನಲ್ಲ. ಆದರೆ, ಅರಗಿಸಿಕೊಳ್ಳೋದು ಕಷ್ಟ! ಅದರಲ್ಲೂ ನೇರ ಪ್ರಸಾರದಲ್ಲಿ ನುಂಗಿ ಬಿಟ್ಟಾಗ ಅರಗಿಸಿಕೊಳ್ಳೋದು ಮತ್ತೂ ಕಷ್ಟವಾಗಬಹುದು. ಸುದ್ದಿ ಓದುವಾಗ ನಿರೂಪಕಿ ನೊಣ ನುಂಗಿ ಅರಗಿಸಿಕೊಂಡ ಪ್ರಸಂಗವೀಗ ವೈರಲ್ ಆಗಿದೆ. ಆಕೆ ಸುಂದರ ನಿರೂಪಕಿ. ನೇರವಾಗಿ ಸುದ್ದಿ ವಾಚನ ಮಾಡುವಾಗ ಎಲ್ಲಿತ್ತೋ ನೊಣ ಬಂದು ಆಕೆಯ ಬಾಯಿಯೊಳಗೆ ನುಗ್ಗಿತು. ನೇರ ಪ್ರಸಾರದ ಹೊತ್ತಿನಲ್ಲಿ ಉಗಿಯಲಾದೀತೇ? ನುಂಗುವುದೇ ‘ಸೇಫ್’ ಎಂದು ತಿಳಿದಾಕೆ ನುಂಗಿಯೇ ಬಿಟ್ಟರು. ಈ ಪ್ರಸಂಗ ಮುಜುಗರ ತರುವಂತಹದ್ದು. ಆದರೆ ಹಾಸ್ಯ ಪ್ರಜ್ಞೆ ಇದ್ದರೆ ಮುಜುಗರವನ್ನು ಮೀರಿ ನಕ್ಕು ಹಗುರಾಗಬಹುದಲ್ಲವೇ? ನೊಣ ನುಂಗಿದ ಕೆನಡಾದ ಗ್ಲೋಬಲ್ ನ್ಯೂಸ್ ನಿರೂಪಕಿ ಫರಾ ನಾಸರ್ ಕೂಡ ನಕ್ಕು ಹಗುರಾಗಿದ್ದಾರೆ. ಖುದ್ದು ಅವರೇ ನೊಣ ನುಂಗಿದ ವಿಡಿಯೋ ಹಂಚಿಕೊಂಡಿದ್ದಾರೆ. ‘ನಾನು ಇಂದು ಗಾಳಿಯಲ್ಲಿ ಹಾರಿಬಂದ ನೊಣವನ್ನು ನುಂಗಿದೆ. ಈ ವಿಡಿಯೋ ಹಂಚಿಕೊಳ್ಳುವುದು ಏಕೆಂದರೆ ಈ ದಿನಗಳಲ್ಲಿ ನಮಗೆಲ್ಲರಿಗೂ ನಗು ಬೇಕು’ ಎಂದು ವಿಡಿಯೋಗೆ ಅಡಿಬರಹ ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಆ ಕ್ಷಣದ ಕ್ಲಿಪ್‌ಅನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ಲೈಕ್ ಒತ್ತಿದ್ದಾರೆ.
ದರಿಯಾ ದೌಲತ್
ಶ್ರೀರಂಗಪಟ್ಟಣದಲ್ಲಿ ನೋಡಲೇಬೇಕಾದ ಪ್ರವಾಸಿ ಸ್ಥಳ ದರಿಯಾ ದೌಲತ್! ಕೋಟೆಯ ಹೊರಗೆ, ಸಂಗಮಕ್ಕೆ ಹೋಗುವ ದಾರಿಯಲ್ಲಿ, ಕಾಲ್ನಡಿಗೆ ಅಂತರದಲ್ಲಿ ದರಿಯಾ ದೌಲತ್ ಬಾಗ್ ಇದೆ. ಟಿಪ್ಪುವಿನ ವಿಶ್ರಾಂತಿ- ವಿಹಾರ ತಾಣವಾಗಿತ್ತು. ಅರಮನೆಯ ಗೋಡೆಗಳನ್ನೆಲ್ಲ ವ್ಯಾಪಿಸಿರುವ ವರ್ಣಚಿತ್ರಗಳು ಶ್ರೀಮಂತ ಅಲಂಕಾರಿಕೆಗೆ ಹೆಸರಾಗಿದೆ. ಸ್ಪೈನ್‌ನ ಅರಮನೆಯೊಂದನ್ನು ಬಿಟ್ಟರೆ, ಇಂತಹ ಮತ್ತೊಂದು ನಿದರ್ಶನ ಕಾಣಸಿಗದೆಂದು ವಿದೇಶಿ ಪ್ರವಾಸಿ ರೀಸ್ ದಾಖಲಿಸಿದ್ದಾನೆ. ಇಂಡೋ- ಸಾರ್ಸೆನಿಕ್ ಶೈಲಿಯಲ್ಲಿರುವ ಬೇಸಿಗೆ ಅರಮನೆಯನ್ನು ಕೇಂದ್ರ ಪುರಾತತ್ವ ಇಲಾಖೆಯು ವಸ್ತು ಸಂಗ್ರಹಾಲಯ ವನ್ನಾಗಿ ಮಾರ್ಪಡಿಸಿ ಸಂರಕ್ಷಿಸುತ್ತಿದೆ. ಕಟ್ಟಡದ ಪೂರ್ವ- ಪಶ್ಚಿಮ ಭಿತ್ತಿಗಳ ಮೇಲೆ ಕ್ರಿ.ಶ.೧೭೮೦ರ ಕಾಂಚೀಪುರ ಯುದ್ಧ ದೃಶ್ಯ, ಹೈದರ್- ಟಿಪ್ಪು, ವಿವಿಧ ಪಾಳೇಗಾರರು ಹಾಗೂ ರಾಜರುಗಳನ್ನು ವಿವಿಧ ವರ್ಣಗಳಲ್ಲಿ ಚಿತ್ರಿಸಲಾಗಿದೆ. ಇಲ್ಲಿಯ ಭಿತ್ತಿ ವರ್ಣಚಿತ್ರ ಒಂದಲ್ಲಾ ಎರಡು ಬಾರಿ ಪುನಾರಚನೆಗೊಂಡಿದ್ದರೂ ಮೂಲವನ್ನು ಯಥಾರೀತಿ ಉಳಿಸಿಕೊಳ್ಳಲಾಗಿದೆ. ಬ್ರಿಟಿಷ್, ಫ್ರೆಂಚ್, ಮರಾಠ, ನಿಜಾಮ ಹಾಗೂ ದೇಶೀಯ ಪಾಳೇಗಾರರ ಸೈನಿಕರನ್ನು ಚಿತ್ರಿಸುವಲ್ಲಿ ಕಲಾವಿದನು ಸಾಂಸ್ಕೃತಿಕ ಅಂಶಗಳಿಗೆ ನೀಡಿರುವ ಒತ್ತು ಗಮನಾರ್ಹವಾಗಿದೆ.