ಕೃಷಿ ಮಾರುಕಟ್ಟೆ ಮತ್ತು ಆಹಾರಧಾನ್ಯ ಸಂಸ್ಕರಣಾ ಕ್ಷೇತ್ರ ಅಭಿವೃದ್ಧಿಪಡಿಸಲು ಹಾಗೂ ವ್ಯವಸಾಯದಲ್ಲಿ ಹೇರಳವಾಗಿ ಉತ್ಪಾದಕತೆಯನ್ನು ಹೆಚ್ಚಿಸಲು ಗುತ್ತಿಗೆ ಕೃಷಿ ಹೆಸರಿನಲ್ಲಿ ದೇಶೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ವ್ಯವಸಾಯವನ್ನು ವಹಿಸಿಕೊಡುವ ಪ್ರಯತ್ನ ನಡೆಸಿದೆ. ಆ ಮೂಲಕ ರೈತರು, ಕಸುಬುದಾರರು, ಕೃಷಿ ಕೂಲಿಕಾರರನ್ನು ವ್ಯವಸಾಯ ಹಾಗೂ ಗ್ರಾಮಗಳಿಂದ ಬಲವಂತವಾಗಿ ಹೊರದೂಡುವ ನೀತಿಗಳನ್ನೇ ಬಲವಾಗಿ ಜಾರಿಗೆ ತರುತ್ತಿದೆ ಎಂಬ ಆತಂಕ ರೈತರಲ್ಲಿದೆ.
ರಾಜ್ಯದಲ್ಲಿ ಲಕ್ಷಾಂತರ ಬಡರೈತ ಹಾಗೂ ಕೂಲಿಕಾರ ಮತ್ತು ದಲಿತ ಕುಟುಂಬಗಳು ಸರ್ಕಾರಿ ಮತ್ತು ಅರಣ್ಯ ಭೂಮಿಯನ್ನು ೪೦-೫೦ ವರ್ಷಗಳಿಂದ ಸಾಗುವಳಿ ಮಾಡಿ ಅಭಿವೃದ್ಧಿಪಡಿಸಿಕೊಂಡು ಜೀವನ ಸಾಗಿಸುತ್ತಿವೆ. ಈಗ ಅಂತಹ ಸರ್ಕಾರಿ ಮತ್ತು ಅರಣ್ಯ ಜಮೀನುಗಳಿಂದ ಅವರನ್ನು ಒಕ್ಕಲೆಬ್ಬಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಜಮೀನು ಒದಗಿಸುವ ಪ್ರಯತ್ನ ನಡೆದಿದೆ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ. ಈ ಬಡ ಸಾಗುವಳಿದಾರರನ್ನು ಭೂ ಕಬಳಿಕೆದಾರರೆಂದು ಹೆಸರಿಸಿ ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ತಂದು ಅವರನ್ನು ಶಿಕ್ಷಿಸಿ ಭೂಮಿಯಿಂದ ಹೊರದೂಡುವ ಪ್ರಯತ್ನ ಸಾಗಿದೆ ಎಂಬುದು ಕರ್ನಾಟಕ ಪ್ರಾಂತ ರೈತ ಸಂಘದ ಆರೋಪ.
ರೈತರ, ಕೂಲಿಕಾರ್ಮಿಕರ ಭೂಮಿ ಕಳೆದುಕೊಳ್ಳುವ ಆತಂಕವನ್ನು ಅಳಿಸಿಹಾಕುವ ಧೀಶಕ್ತಿಯನ್ನು ಆಳುವವರ್ಗ ಪ್ರದರ್ಶಿಸಬೇಕಿದೆ. ವಿವಿಧ ಹೆಸರಿನ ಸರ್ಕಾರಿ ಮತ್ತು ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿ, ಅಭಿವೃದ್ಧಿಪಡಿಸಿದ ರಾಜ್ಯದ ಎಲ್ಲಾ ಬಡ ರೈತರಿಗೆ ಹಕ್ಕುಪತ್ರ ನೀಡಲು ಅಡ್ಡಿಯಾಗಿರುವ ಭೂಕಂದಾಯ ಮತ್ತು ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯ ವಿವಿಧ ಕಲಂಗಳಿಗೆ ತಿದ್ದುಪಡಿ ಮಾಡಿ ಹಕ್ಕುಪತ್ರ ದೊರೆಯುವಂತೆ ಸೂಕ್ತ ಕ್ರಮ ವಹಿಸಬೇಕಿದೆ.
ಯಾವುದೇ ಕಾರಣಕ್ಕೂ ಇವರನ್ನು ಭೂಕಬಳಿಕೆದಾರರೆಂದು ಪರಿಗಣಿಸಬಾರದು ಮತ್ತು ವಿಶೇಷ ಕೋರ್ಟ್ ವ್ಯಾಪ್ತಿಗೆ ತರಬಾರದು. ಗುತ್ತಿಗೆ ಬೆಳೆಯಾಧಾರದಲ್ಲಿ ಹಾಗೂ ಪಾಲು ಬೆಳೆಯ ಆಧಾರದಲ್ಲಿ ವ್ಯವಸಾಯದಲ್ಲಿ ತೊಡಗಿರುವ ಬಡ ಗೇಣಿದಾರರ ಸಂರಕ್ಷಣೆಗೆ ಅಗತ್ಯ ಕಾಯ್ದೆಯನ್ನು ರೂಪಿಸಬೇಕು. ಎಲ್ಲ ನಿವೇಶನ ರಹಿತ ಬಡವರಿಗೆ, ಅವರಿಗೆ ಬದುಕು ಕಟ್ಟಿಕೊಡುವಂತಹ ಕನಿಷ್ಟ ೧೦ ಸೆಂಟ್ಸ್ ಜಮೀನು ಉಚಿತವಾಗಿ ಒದಗಿಸಲು ಭೂ ಸ್ವಾಧೀನಕ್ಕೆ ಮುಂದಾಗಬೇಕು, ಕನಿಷ್ಠ ೫ ಲಕ್ಷ ರೂ.ಗಳ ಮನೆ ಕಟ್ಟಿಸಿಕೊಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದಲೇ ಇದೆ.
ಈ ನಡುವೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಐದು ವರ್ಷಗಳ ಬಳಿಕ ತಾಲ್ಲೂಕು ದರಖಾಸ್ತು ಸಮಿತಿ ಸಭೆ ನಡೆದು ಬಡರೈತರ ಮನದಲ್ಲಿ ಸಂತಸ ಮೂಡಿಸಿದೆ. ಕ್ಷೇತ್ರದ ಶಾಸಕರು, ರಾಜ್ಯದ ಯುವಜನ ಸೇವೆ ಮತ್ತು ಕ್ರೀಡಾಸಚಿವರಾದ ಸಿ.ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಪ್ರಪ್ರಥಮ ಬಾರಿಗೆ ಭೂಮಿಯ ದರಖಾಸ್ತು ಸಮಿತಿಯ ಸಭೆ ನಡೆದಿದೆ. ನಮೂನೆ ೫೦ರಲ್ಲಿ ೯೯, ನಮೂನೆ ೫೩, ೫೪ರಲ್ಲಿ ೬೦೬೭, ನಮೂನೆ ೫೭ರಲ್ಲಿ ಸುಮಾರು ೬೦೦೫ ಅರ್ಜಿಗಳು ಆ ಸಭೆಯಲ್ಲಿ ಸಲ್ಲಿಕೆಯಾಗಿವೆ. ಅರ್ಹ ಫಲಾನುಭವಿಗಳು ಉಳುಮೆ ಮಾಡುತ್ತಿರುವ ಭೂಮಿಯನ್ನು ಮಂಜೂರು ಮಾಡುವ ಬಗ್ಗೆ ಹಾಗೂ ಈಗಾಗಲೇ ನಡೆದಿರುವ ಸಭೆಗಳಲ್ಲಿ ಭೂಮಿಯನ್ನು ಮಂಜೂರು ಮಾಡಲು ನಿರ್ಧರಿಸುವ ಬಗ್ಗೆ ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ಸಮ್ಮತಿಸಿಸಲಾಗಿದೆ. ದರಖಾಸ್ತು ಸಮಿತಿ ಸಭೆಯು ಇತರೆ ತಾಲ್ಲೂಕುಗಳ ಆಡಳಿತಕ್ಕೂ ಸ್ಪೂರ್ತಿಯಾಗಬೇಕಿತ್ತು. ಆದರೆ ಅಂತಹ ಬೆಳವಣಿಗೆ ಕಾಣುತ್ತಿಲ್ಲ.
ದರಖಾಸ್ತು ಸಮಿತಿ ರಚಿಸಿ ಸುಮಾರು ಎರಡು ವರ್ಷಗಳು ಕಳೆದಿತ್ತು. ಆದರೂ ಸಹ ಇದುವರೆವಿಗೂ ಸಭೆ ನಡೆಯದೇ ಇರುವ ಕಾರಣ ಸಮಿತಿ ರಚನೆ ಆಗಿದ್ದರೂ ಸದಸ್ಯರು ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಲು ಸಾಧ್ಯವಾಗಿರಲಿಲ್ಲ. ದರಖಾಸ್ತು ಸಮಿತಿ ಸಭೆ ನಡೆದಿರುವ ಕಾರಣ ಹತ್ತಾರು ವರ್ಷಗಳಿಂದ ಗೋಮಾಳದ ಜಮೀನನ್ನು ಬೇಸಾಯ ಮಾಡುತ್ತಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ತಾವು ಉಳುಮೆ ಮಾಡುತ್ತಿರುವ ಭೂಮಿಗೆ ಸಾಗುವಳಿ ಪತ್ರ ಸಿಗುವ ಆಶಾಭಾವನೆಯ ಹಿನ್ನೆಲೆಯಲ್ಲಿ ಐದು ವರ್ಷಗಳ ನಂತರವಾದರೂ ದರಖಾಸ್ತು ಕಮಿಟಿ ಸಭೆ ನಡೆಸಿದ ಸಚಿವ ನಾರಾಯಣಗೌಡರ ಕ್ರಮಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ಪ್ರಥಮ ಬಾರಿಗೆ ನಡೆದ ಬರ್ಗ ಹುಕುಂ ಅಥವಾ ದರಖಾಸ್ತು ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರನ್ನು ಅಪರ ಜಿಲ್ಲಾಧಿಕಾರಿಗಳು ಸನ್ಮಾನಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿರುವುದು ಮೆಚ್ಚಬಹುದಾದ ನಡೆ. ಸಭೆಯಲ್ಲಿ ಶಿರಸ್ತೇದಾರ್, ರಾಜಸ್ವ ನಿರೀಕ್ಷಕರು, ಉಪ ತಹಸಿಲ್ದಾರರು, ಎಲ್ಲಾ ಹೋಬಳಿಗಳ ವಿಷಯ ನಿರ್ವಾಹಕರು, ಗ್ರಾಮ ಲೆಕ್ಕಾಧಿಕಾರಿಗಳು ಭಾಗವಹಿಸಿ, ಬಗರ್‌ಹುಕುಂ ಸಾಗುವಳಿ ಚೀಟಿ ನೀಡಲು ಬಹಳ ದಿನಗಳ ನಂತರವಾದರೂ ಪ್ರಯತ್ನ ನಡೆಸಿರುವುದು ರೈತರ ಪಾಲಿಗೆ ಸಮಾಧಾನ ತಂದಿದೆ. ಆದರೆ, ಕಾನೂನುಗಳನ್ನು ಮುಂದೊಡ್ಡಿ, ಅರ್ಹ ಸಾಗುವಳಿದಾರರಿಗೆ ಅನ್ಯಾಯವಾಗದಂತೆ ಸಮಿತಿಗಳು ನಿರ್ಧಾರಕೈಗೊಳ್ಳಬೇಕು. ಕಾನೂನುಗಳನ್ನು ಪಾಲಿಸುವ ಜತೆಗೆ ಮಾನವೀಯ ನೆಲೆಯಲ್ಲೂ ಸಾಗುವಳಿದಾರರ ಅಹವಾಲು ಆಲಿಸುವಂತಾಗಬೇಕು.