ಓದುಗರ ಪತ್ರ
ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಿ
ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳು ಸೇರಿದಂತೆ ಇದುವರೆಗೆ ವಿಶ್ವವಿದ್ಯಾನಿಲಯ ಇಲ್ಲದ ಜಿಲ್ಲೆಗಳಲ್ಲಿ ವಿಶ್ವವಿದ್ಯಾನಿಲಯ ತೆರೆಯುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಖಾಸಗಿ ವಿಶ್ವವಿದ್ಯಾನಿಲಯಗಳು ನಾಯಿಕೊಡೆಗಳಂತೆ ಬೆಳೆಯುತ್ತಿವೆ. ಅವುಗಳು ವಿದ್ಯಾದಾನ ಕೇಂದ್ರಗಳಾಗುವ ಬದಲು ವಿದ್ಯೆ ಮಾರಾಟ ಕೇಂದ್ರಗಳಾಗಿವೆ. ಇದರಿಂದಾಗಿ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಜನಸಾಮಾನ್ಯರು ಸೇರುವುದೇ ಕಷ್ಟ. ಶುಲ್ಕಗಳು ಅಷ್ಟು ದುಬಾರಿಯಾಗಿರುತ್ತವೆ. ಉನ್ನತ ಶಿಕ್ಷಣದಲ್ಲಿ ಇತ್ತೀಚೆಗೆ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿಲ್ಲ. ಉನ್ನತ ಶಿಕ್ಷಣಕ್ಕೆ ಬೇಕಾದ ಅಗತ್ಯ ಬೋಧನಾ ಸಿಬ್ಬಂದಿ ನೇಮಕ ಮಾಡುತ್ತಿಲ್ಲ. ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಕಟ್ಟಡಗಳಿವೆ, ಭೌತಿಕ ಸಂಪನ್ಮೂಲಗಳಿವೆ. ಆದರೆ, ಬೋಧನಾ ಸಿಬ್ಬಂದಿ ಸೇರಿದಂತೆ ನುರಿತ ಮಾನವ ಸಂಪನ್ಮೂಲದ ಕೊರತೆ ಇದೆ. ರಾಜ್ಯ ಸರ್ಕಾರ ಹೊಸದಾಗಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದರ ಜತೆಗೆ ಅವುಗಳಿಗೆ ಪರಿಪೂರ್ಣ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ಒದಗಿಸಲು ಆಸಕ್ತಿ ವಹಿಸಬೇಕಿದೆ.
-ವೆಂಕಟೇಶ್, ನರಸಿಂಹರಾಜ ಮೊಹಲ್ಲಾ, ಮೈಸೂರು.
ಚಾಮುಂಡಿಬೆಟ್ಟ ಮತ್ತು ಮೇಲುಕೋಟೆಯಲ್ಲಿರುವ ದೇವಸ್ಥಾನಗಳಲ್ಲಿ ಕಾಣಿಕೆಯನ್ನು ಡಿಜಿಟಲ್ ರೂಪದಲ್ಲೂ ಸಲ್ಲಿಸಲು ಇ- ಹುಂಡಿ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಇದರಿಂದ ಭಕ್ತರಿಗೆ ಅನುಕೂಲ, ದೇವರಿಗೂ ಲಾಭವೇ! ಅಂತೂ ಇಂತೂ ದೇವರುಗಳು ಕೂಡ ಹೈಟೆಕ್ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿರುವುದು ಸಂತಸದ ಸಂಗತಿ. ಕಾಣಿಕೆ ಸ್ವೀಕೃತಿಗೆ ಹೈಟೆಕ್ ತಂತ್ರಜ್ಞಾನ ಅಳವಡಿಸುವ ಸರ್ಕಾರ, ಈ ದೇವಸ್ಥಾನಗಳ ಒಳ ಮತ್ತು ಹೊರ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಹೈಟೆಕ್ ವಿಧಾನವನ್ನು ಅಳವಡಿಸಿಕೊಳ್ಳಬೇಕಿದೆ. ಯಾಂತ್ರೀಕೃತ ಸ್ವಚ್ಛತಾ ಪರಿಕರಗಳ ಮೂಲಕ ನಿಯಮಿತವಾಗಿ ಸ್ವಚ್ಛತೆ ಕೈಗೊಳ್ಳುವುದರಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಂತಸವಾಗುತ್ತದೆ. ಸದಾ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತದೆ.
-ಚಂದನ್ ತಮ್ಮಡಿಹಳ್ಳಿ, ಕುವೆಂಪುನಗರ, ಮೈಸೂರು.
ಪ್ರತಿ ವರ್ಷ ದಸರಾ ಹಬ್ಬ ಇಂತಹ ದಿನಗಳಂದೇ ನಡೆಯುತ್ತದೆ ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ. ಆದರೆ, ದಸರಾ ಹಬ್ಬಕ್ಕೆ ನಗರವನ್ನು ಸಿಂಗರಿಸುವ ಜವಾಬ್ದಾರಿ ಹೊತ್ತ ನಗರಪಾಲಿಕೆ ಮಾತ್ರ ಕೊನೆಯ ಕ್ಷಣದಲ್ಲಿ ನಗರವನ್ನು ಸಿಂಗರಿಸಲು ಮುಂದಾಗುತ್ತದೆ. ಟೆಂಡರ್ ಕರೆದು ಕಾಮಗಾರಿಗಳನ್ನು ಹಂಚಿಕೆ ಮಾಡಿದರೂ, ಗುತ್ತಿಗೆದಾರರು ತರಾತುರಿಯಲ್ಲಿ ಕಾಮಗಾರಿ ಮುಗಿಸುತ್ತಾರೆ. ಇದರಿಂದ ಗುಣಮಟ್ಟದ ಕಾಮಗಾರಿ ಸಾಧ್ಯವಾಗುವುದಿಲ್ಲ. ಪ್ರತಿ ವರ್ಷವೂ ಅದದೇ ಕಾಮಗಾರಿನ್ನು ಮಾಡಲಾಗುತ್ತದೆ. ಇದರಿಂದ ಗುತ್ತಿಗೆದಾರರು, ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಲಾಭವಾಗಬಹುದು. ಆದರೆ, ತೆರಿಗೆ ಪಾವತಿಸುವ ನಾಗರಿಕರಿಗೆ ಹೊರೆಯಾಗುತ್ತದೆ. ಈ ನಿಟ್ಟಿನಲ್ಲಿ ‘ದಸರಾ ಕಾಮಗಾರಿ, ತರಾತುರಿ ಸಲ್ಲದು’ ಕುರಿತ ‘ ಆಂದೋಲನ’ದ ಸಂಪಾದಕೀಯ ಸಕಾಲಿಕವಾಗಿದೆ.
–ಎಜಾಜ್ ಅಹ್ಮದ್, ಅಜೀಜ್ ಸೇಠ್ ನಗರ, ಮೈಸೂರು.
ಮಲಾರ ಕಾಲೋನಿಗೆ ಬಸ್ ಬೇಕು!
ಎಚ್.ಡಿ.ಕೊಟೆ ತಾಲ್ಲೂಕಿಗೆ ಸೇರಿದ ಮಲಾರ ಕಾಲೋನಿ ಗ್ರಾಮದ ಸುಮಾರು ೧೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಎಚ್ ಡಿ ಕೋಟೆಗೆ ನಿತ್ಯ ಪ್ರಯಾಣಿಸುತ್ತಾರೆ. ಆದರೆ, ಈ ಗ್ರಾಮಕ್ಕೆ ಒಂದೇ ಒಂದೂ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಸಾರಿಗೆ ಅಧಿಕಾರಿಗಳು ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.
–ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್.ಡಿ.ಕೊಟೆ ತಾಲ್ಲೂಕು.