ಆಕ್ಷೇಪಾರ್ಹ ರಾಜಕೀಯ ಪೋಸ್ಟ್‌ಗಳಿಗೆ ಕಡಿವಾಣ ಅಗತ್ಯ
ರಾಜ್ಯದಲ್ಲಿ ಚುನಾವಣೆಯ ಕಾವೇರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿಯೂ ರಾಜಕೀಯ ಪಕ್ಷಗಳ ಕುರಿತು ಅಣಕ, ಟೀಕೆಗಳು ಅಧಿಕವಾಗತೊಡಗಿವೆ. ರಾಜಕಾರಣಿಗಳೆಲ್ಲ ಇಲ್ಲಿ ಟ್ರೋಲಿಂಗ್ ವಿಷಯವಾಗಿದ್ದಾರೆ. ಪಕ್ಷಗಳ ನಡುವಿನ ಕೆಸರೆರಚಾಟ ಜನಸಾಮಾನ್ಯರಿಗೆ ಮನರಂಜನೆ ನೀಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂದಿನ ರಾಜಕಾರಣ ಬೆತ್ತಲಾಗುತ್ತಿರುವ ಪರಿ ಅಷ್ಟಿಷ್ಟಲ್ಲ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಮತದಾರರು ರಾಜಕೀಯ ಪಕ್ಷಗಳ ನಿಲುವು-ಒಲವುಗಳ ಮಾಹಿತಿ ಸಂಗ್ರಹಿಸಿ ವಿವಿಧ ಪಕ್ಷಗಳನ್ನು ಟ್ರೋಲ್ ಮಾಡಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತೋರ್ಪಡಿಸುತ್ತಿದ್ದಾರೆ. ಹೀಗೆ ಅಭಿಪ್ರಾಯ ವ್ಯಕ್ತಪಡಿಸುವವರಲ್ಲಿ ಕೇವಲ ಮತದಾರರು ಮಾತ್ರವಲ್ಲದೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ದೊಡ್ಡ ಬಳಗವೇ ಇದೆ. ಸೋಷಿಯಲ್ ಮೀಡಿಯಾದಲ್ಲಿಯೇ ಸಂಘಟಿತರಾಗುತ್ತಿರುವ ಈ ಬಳಗದವರು, ತಮ್ಮ ನೆಚ್ಚಿನ ರಾಜಕಾರಣಿಯನ್ನು ಬೆಂಬಲಿಸಲು ಮತ್ತು ತಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳಲು ಪ್ರಚಾರ ಮಾಡಲು ಶ್ರಮಿಸುತ್ತಿದ್ದಾರೆ. ಕೆಲವೊಮ್ಮೆ ರಾಜಕೀಯ ಪಕ್ಷಗಳ ನಾಯಕರಿಗಿಂತ ಮೊದಲೇ ತಮ್ಮ ರಾಜಕೀಯ ವಿರೋಧಿಗಳ ಮೇಲೆ ಮುಗಿಬೀಳುವ ಸನ್ನಿವೇಶಗಳೂ ಇವೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ‘ರಾಜಕೀಯ ಸಮರ’ ಹೆಚ್ಚಾಗಿದೆ.
ಈ ರೀತಿ ರಾಜಕಾರಣಿಗಳನ್ನು ಅಪಹಾಸ್ಯ, ತೇಜೋವಧೆ ಮಾಡುವಂತಹ ಟ್ರೋಲ್ ಮಾಡುವುದು ಘನತೆಯನ್ನು ತರದು. ಇದರಿಂದ ಸಮಾಜದಲ್ಲಿ ಸಂಘರ್ಷ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಎಲ್ಲ ರಾಜಕೀಯ ಪಕ್ಷಗಳೂ ಸಾಮಾಜಿಕ ಜಾಲತಾಣವನ್ನು ತಮ್ಮಿಷ್ಟದಂತೆ ಬಳಸಿಕೊಳ್ಳುತ್ತಿರುವುದರಿಂದ ಜನರಿಗೆ ಸಾಮಾಜಿಕ ಜಾಲತಾಣಗಳ ಮೇಲೆ ವಿಶ್ವಾಸ ಕಡಿಮೆಯಾಗಲಿದೆ. ಆದ್ದರಿಂದ ಚುನಾವಣೆಯ ಸಂದರ್ಭದಲ್ಲಿ ಸರ್ಕಾರವು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಿ ಆಕ್ಷೇಪಾರ್ಹ ಹಾಗೂ ಅಸಂಬದ್ಧ ರಾಜಕೀಯ ಪೋಸ್ಟ್‌ಗಳಿಗೆ ಕಡಿವಾಣ ಹಾಕಬೇಕಿದೆ.
–ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.
ಬೀದಿ ನಾಯಿಗಳ ಹಾವಳಿಯಿಂದ ಅಪಘಾತ ಹೆಚ್ಚಳ!
ಮೈಸೂರು ತಾಲ್ಲೂಕಿನ ಬೋಗಾದಿ-ಗದ್ದಿಗೆ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳಿಂದ ಅಪಘಾತ ಪ್ರಕರಣಗಳೂ ಹೆಚ್ಚಾಗುತ್ತಿವೆ. ಈ ರಸ್ತೆಯಲ್ಲಿನ ಜಟ್ಟಿಹುಂಡಿ, ಬೀರಿಹುಂಡಿ, ಜಿ.ಬಿ.ಸರಗೂರು, ಶಿಂಡೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ಜನರು ಮೈಸೂರಿಗೆ ಕೆಲಸ ಕಾರ್ಯಗಳಿಗೆ ತಮ್ಮ ದ್ವಿಚಕ್ರ ವಾಹನಗಳ ಮೂಲಕ ಹೋಗಿಬರುತ್ತಾರೆ. ಆದರೆ, ಈ ರಸ್ತೆಯ ಅಂಚಿನಲ್ಲಿಯೇ ಮಾಂಸದಂಗಡಿಯವರು ತ್ಯಾಜ್ಯಗಳನ್ನು ತಂದು ಬೀಸಾಡುತ್ತಿದ್ದು, ಇಲ್ಲಿನ ಕಸದ ರಾಶಿಯಲ್ಲಿ ಬೀದಿ ನಾಯಿಗಳು ಆಹಾರ ಅರಸುತ್ತಿರುತ್ತವೆ. ಇದರಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ. ಸಾಕಷ್ಟು ಬಾರಿ ಬೀದಿ ನಾಯಿಗಳು ಏಕಾಏಕಿ ರಸ್ತೆಗೆ ಬಂದು ದ್ವಿಚಕ್ರ ವಾಹನಗಳಿಗೆ ಸಿಲುಕಿ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ ದೊಡ್ಡ ವಾಹನಗಳಿಗೆ ಸಿಲುಕಿ ನಾಯಿಗಳೂ ಜೀವ ಕಳೆದುಕೊಳ್ಳುತ್ತಿವೆ. ತ್ಯಾಜ್ಯವನ್ನು ಇಲ್ಲಿ ಸುರಿಯುವುದರಿಂದ ರಸ್ತೆಯಲ್ಲಿ ದುರ್ವಾಸನೆಯೂ ಬರುತ್ತಿದ್ದು, ಇದು ವಾಹನ ಸವಾರರಿಗೆ ಮತ್ತಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಆದ್ದರಿಂದ ರಸ್ತೆ ಅಂಚಿನಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಹಾಗೂ ಶುಚಿತ್ವ ಕಾಪಾಡಲು ಮೊದಲು ರಸ್ತೆಯ ಅಂಚಿನಲ್ಲಿ ಮಾಂಸದಂಗಡಿಗಳ ತ್ಯಾಜ್ಯ ತಂದು ಹಾಕುವುದಕ್ಕೆ ಕಡಿವಾಣ ಹಾಕಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಂಡು ಮುಂದಾಗಬಹುದಾದ ಅಪಘಾತಗಳನ್ನು ತಪ್ಪಿಸಬೇಕಿದೆ.
–ಎಂ.ಯೋಗೇಶ್, ಶಿಂಡೇನಹಳ್ಳಿ
ತಾಲ್ಲೂಕು ಕೇಂದ್ರದಲ್ಲೇ ಅಧಿಕಾರಿಗಳು ವಾಸ್ತವ್ಯ ಹೂಡಲಿ
‘ವಾಸ್ತವ್ಯವಿರದ ಅಧಿಕಾರಿಗಳು; ಪಾಳು ಬಿದ್ದ ವಸತಿಗೃಹಗಳು’ ಎಂಬ ಶೀರ್ಷಿಕೆಯಡಿ ‘ಆಂದೋಲನ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ನೋಡಿ ನಿಜಕ್ಕೂ ಆಶ್ಚರ್ಯವಾಯಿತು. ಇಲ್ಲಿಯವರೆಗೂ ನಾವು ಅಧಿಕಾರಿಗಳು ನಮ್ಮ ತಾಲ್ಲೂಕಿನಲ್ಲಿ ವಾಸ್ತವ್ಯ ಹೂಡಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಭಾವಿಸಿದ್ದೆವು. ಆದರೆ ವರದಿ ಗಮನಿಸಿದ ಬಳಿಕ ಆಶ್ಚರ್ಯದ ಜೊತೆಗೆ ಬೇಸರವೂ ಆಯಿತು. ಎಚ್.ಡಿ.ಕೋಟೆ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ಹೊಂದಿದ್ದು, ಇನ್ನೂ ಸಾಕಷ್ಟು ಭಾಗಗಳಲ್ಲಿ ಜನರಿಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ. ಇಂತಹ ಜನರ ಸಮಸ್ಯೆಗಳನ್ನು ಗಮನಿಸಿ ಪರಿಹರಿಸಬೇಕಾದ ಅಧಿಕಾರಿಗಳು ಇಲ್ಲಿ ವಾಸ್ತವ್ಯ ಹೂಡದೆ ನಗರಭಾಗಗಳಲ್ಲಿ ಇದ್ದರೆ ಇಲ್ಲಿನ ಸಮಸ್ಯೆಗಳ ಮನವರಿಕೆಯಾಗುವುದಾದರೂ ಹೇಗೆ? ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ಅವರು ಸಮಯಕ್ಕೆ ಸರಿಯಾಗಿ ಸಿಗುವುದಾದರೂ ಹೇಗೆ? ಇನ್ನೂ ಕೆಲ ಅಧಿಕಾರಿಗಳು ಮನೆ ಮತ್ತು ಕಚೇರಿಯ ಪ್ರಯಾಣಕ್ಕೆ ಸರ್ಕಾರಿ ವಾಹನವನ್ನೇ ಬಳಸುತ್ತಿರುವ ಅನುಮಾನಗಳು ವ್ಯಕ್ತವಾಗುತ್ತಿದ್ದು, ಇದು ಸರ್ಕಾರಕ್ಕೆ ಒಂದು ರೀತಿಯ ನಷ್ಟವನ್ನು ಉಂಟು ಮಾಡುತ್ತಿದೆ. ಅಲ್ಲದೆ ಅಧಿಕಾರಿಗಳಿಗಾಗಿ ನಿರ್ಮಿಸಿರುವ ವಸತಿ ಗೃಹಗಳೂ ಪಾಳುಬಿದ್ದು ನಾಶವಾಗುತ್ತಿವೆ. ಆದ್ದರಿಂದ ಉನ್ನತ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತಾಲ್ಲೂಕಿನ ಅಧಿಕಾರಿಗಳು ತಾಲ್ಲೂಕು ಕೇಂದ್ರದಲ್ಲೇ ನೆಲೆಸುವಂತೆ ನೋಡಿಕೊಳ್ಳಬೇಕಿದೆ.
–ವಿನೋದ್ ಕುಮಾರ್, ಕೊಡಸೀಗೆ, ಎಚ್.ಡಿ.ಕೋಟೆ ತಾ.
ಮೋದಿ ಮೋಹ !
‘ಮೋದಿಯಿಲ್ಲದಿದ್ದರೆ ನನಗೆ ಈ ಪ್ರಶಸ್ತಿ ಬರುತ್ತಿರಲಿಲ್ಲ’ ಎಂಬ ಎಸ್.ಎಲ್. ಭೈರಪ್ಪನವರ ಹೇಳಿಕೆ ಅನುಚಿತ ! ಅವರ ಮೌಲಿಕ, ಸಮೃದ್ಧ ಸಾಹಿತ್ಯ ಕೃಷಿಗೆ, ಈ ಇಳಿವಯಸ್ಸಿನಲ್ಲಿ , ಯಾರಿದ್ದರೂ ಪುರಸ್ಕಾರ ಸಿಗುತ್ತಿತ್ತು. ಸರಸ್ವತೀ ಸಮ್ಮಾನ್, ಯಾರ ಮೂಲಕ ಬಂತು ? ಅವರಂಥ ಶೃಂಗ ಸಾಹಿತಿಗಳು ಹೀಗೆ ಆತ್ಮಾಭಿಮಾನ ಕಳೆದುಕೊಂಡರೆ ಹೇಗೆ ? ಒಂದು ವೇಳೆ ಪ್ರಶಸ್ತಿ ಬರದಿದ್ದರೆ, ಪ್ರಪಂಚ ಮುಳುಗಿ ಹೋಗುತ್ತಿತ್ತೆ? ಅಂತೂ ಭೈರಪ್ಪನವರ ಮೋದಿ ಮೋಹ ಅತಿಯಾಯಿತು !
– ಸಿಪಿಕೆ, ಮೈಸೂರು.