ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಟೋಲ್‌ನಲ್ಲಿ ಉಲ್ಟಾ ಅಂಕಿ
ಮೈಸೂರು-ಬೆಂಗಳೂರು ದಶಪಥ ರಸ್ತೆ ಇದೀಗ ಚಾಲ್ತಿಯಲ್ಲಿರುವ ವಿಷಯ. ಈ ರಸ್ತೆಯಲ್ಲಿ ಎರಡು ಟೋಲ್ ಸಂಗ್ರಹಗಳು ಬರುತ್ತವೆ. ಆದರೆ, ರಾಜ್ಯದ ಇತರೆ ಹೆದ್ದಾರಿಗಳ ಟೋಲ್‌ಗಳಲ್ಲಿ ಬೂತ್ ಸಂಖ್ಯೆಯನ್ನು ̧1̧23 ಎಂದು ಬಲದಿಂದ ಎಡಕ್ಕೆ ಬರೆದಿದ್ದರೆ, ದಶಪಥ ರಸ್ತೆಯಲ್ಲಿ ಮಾತ್ರ ಉಲ್ಟಾ ಆಗಿಹೋಗಿದೆ. ಅಂದರೆ ಎಡದಿಂದ ಬಲಕ್ಕೆ ̧1̧23 ಎಂದಾಗಿದೆ. ಇದು ಪ್ರಯಾಣಿಕರಿಗೆ ಕೆಲವೊಮ್ಮೆ ಗೊಂದಲವನ್ನುಂಟು ಮಾಡಬಹುದಾಗಿದೆ. ಹಾಗೆಯೇ ಮೈಸೂರು ಹೊರವಲಯದ ಕಳಸ್ತವಾಡಿಯ ಬಳಿಯೂ ಮೈಸೂರು ಪ್ರವೇಶ ಕಮಾನಿಗೆ ‘ಕಳಸ್ತವಾಡಿ’ ಬದಲಾಗಿ ‘ಕಾಲಸ್ತವಡಿ’ ಎಂದು ಬರೆಯಲಾಗಿದೆ. ಕಾಮಗಾರಿಯ ವೇಳೆ ಇವುಗಳ ಬಗ್ಗೆ ಗಮನ ನೀಡಬೇಕಿದೆ. ಹೊರಭಾಗದಿಂದ ಬಂದವರಿಗೆ ತಪ್ಪಾಗಿ ಅರ್ಥವಾಗುವುದು ಅಥವಾ ಸ್ಥಳದ ಹೆಸರೇ ಬದಲಾಗಿ ತಿಳಿಯುವ ಸಾಧ್ಯತೆ ಇದ್ದು, ಕೂಡಲೇ ಅವುಗಳನ್ನು ಸರಿಪಡಿಸಬೇಕಿದೆ.
–ವಿಜಯ್ ಹೆಮ್ಮಿಗೆ, ವಿಜಯನಗರ ರೈಲ್ವೆ ಬಡಾವಣೆ, ಮೈಸೂರು.
ಬಾಯ್ಕಾಟ್ ಅಭಿಯಾನ ತೂಕ ಕಳೆದುಕೊಂಡಿತೆ?
ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರವನ್ನು ವಿರೋಧಿಸಿ ಕೆಲವು ಸಂಘಟನೆಗಳು ನಡೆಸಿದ ಬಾಯ್ಕಾಟ್ ಅಭಿಯಾನ ತೂಕ ಕಳೆದುಕೊಂಡಂತಿದ್ದು, ಬಾಲಿವುಡ್ ಚಿತ್ರರಂಗ ನಿಟ್ಟುಸಿರು ಬಿಡುವಂತಾಗಿದೆ. ಸತತ ಸೋಲು ಮತ್ತು ಬಾಯ್ಕಾಟ್‌ಗಳಿಂದ ಕಂಗೆಟ್ಟ ಬಾಲಿವುಡ್‌ಗೆ ಮರುಭೂಮಿಯಲ್ಲಿ ಓಯಾಸಿಸ್ ದೊರಕಿದಂತಾಗಿದೆ. ಈ ಬಾಯ್ಕಾಟ್‌ಗೆ ಚಿತ್ರ ಪ್ರೇಮಿಗಳಿಂದ ನಿರೀಕ್ಷಿತ ಸ್ಪಂದನೆ ದೊರಕದಿರುವುದಕ್ಕೋ ಅಥವಾ ಇಂಥ ಬಾಯ್ಕಾಟ್ ಸಂಸ್ಕೃತಿ ವಿರುದ್ಧ ಪ್ರಧಾನಿ ಮೋದಿಯವರು ಪರೋಕ್ಷವಾಗಿ ಎಚ್ಚರಿಸಿದ್ದಕ್ಕೋ ಏನೋ, ಈ ಅಭಿಯಾನ ಮೇಲ್ಮೆಗೆ ಬರಲಿಲ್ಲ. ವಿಪರ್ಯಾಸವೆಂದರೆ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆಯವರು ಅಶ್ಲೀಲ ನೃತ್ಯ ಮಾಡಿದ್ದಾರೆಂದು ಹೇಳಲಾಗುತ್ತಿದ್ದು, ಇಂಥವುಗಳನ್ನು ವಿರೋಧಿಸುವ ಮಹಿಳಾ ಸಂಘಟನೆಗಳೇ ಇದರ ವಿರುದ್ಧ ಹೋರಾಡಲಿಲ್ಲ. ಈ ಬೆಳವಣಿಗೆ ‘ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ’ ಎನ್ನುವ ಸತ್ಯವನ್ನು ಅನಾವರಣಗೊಳಿಸಿದೆ.
–ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು
ಮಾಧ್ಯಮ ಸ್ವಾತಂತ್ರ್ಯ ಉಳಿಯುವುದು ಯಾವಾಗ?
ಸರ್ಕಾರ ಮತ್ತು ಮಾಧ್ಯಮ ಸ್ವತಂತ್ರ್ಯ ಇವೆರಡರಲ್ಲಿ ಯಾವುದು ಉಳಿಯಬೇಕು ಎಂದು ಕೇಳಿದರೆ ಮಾಧ್ಯಮ ಸ್ವಾತಂತ್ರ್ಯ ಎಂದು ನಾನು ಹೇಳಬಯಸುತ್ತೇನೆ. ಥಾಮಸ್ ಜಾಫಏರ್ಸನ್‌ರ ಮಾತು ನೆನಪಿಗೆ ಬರುತ್ತೆ. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ವಿರೋಧ ಪಕ್ಷ ಇತ್ಯಾದಿ ಹೆಸರುಗಳಿಂದ ಹೊಗಳುತ್ತೇವೆ. ಪ್ರಸ್ತುತ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತು ಪ್ರಭುತ್ವದ ಜೊತೆ ಕೈ ಜೋಡಿಸುತ್ತಿರುವುದು ಬೇಸರದ ಸಂಗತಿ. ಇವುಗಳ ಜೊತೆಯಲ್ಲೇ ಜನರಿಗಾಗಿ, ಜನರು ನೋವಿಗಾಗಿ ಮಿಡಿಯುವ ಮಾಧ್ಯಮಗಳು ಅಲ್ಲಲ್ಲಿ ಉಸಿರುಗಟ್ಟಿಸಿಕೊಂಡು ಜೀವಿಸುತ್ತಿವೆ. ಅವುಗಳನ್ನು ನಾಶ ಮಾಡುವುದೇ ಪ್ರಭುತ್ವದ ಹುನ್ನಾರವಾಗಿದೆ. ಪ್ರಭುತ್ವವನ್ನು ಪ್ರಶ್ನೆ ಮಾಡುವ ಪತ್ರಕರ್ತರ ಧ್ವನಿ ಅಡಗಿಸಲು ಭಯೋತ್ಪಾದನೆ, ದೇಶದ್ರೋಹ ಕೃತ್ಯದಂತಹ ಆರೋಪದಡಿಯಲ್ಲಿ ಪದೇ ಪದೇ ಸರ್ಕಾರ ಪತ್ರಕರ್ತರನ್ನು ಜೈಲಿಗೆ ತಳ್ಳುತ್ತಿದೆ. ಆರ್ಟ್ ಮೀಡಿಯಾದ ಜುಬೇರ್ ಮತ್ತು ಸಿದ್ಧಿಕ್ ಕಪ್ಪನ್ ನಮ್ಮ ನಡುವಿನ ಉದಾಹರಣೆಯಾಗಿದ್ದಾರೆ. ಕೆಲವು ಪತ್ರಕರ್ತರನ್ನು ಹತ್ಯೆ ಮಾಡಿರುವುದನ್ನೂ ಕಾಣಬಹುದು. ಪ್ರಭುತ್ವದ ಇಂಥ ದುಷ್ಟ ನೀತಿಗಳನ್ನು ನೋಡಿದಾಗ ಮುಂದಿನ ಪೀಳಿಗೆಯ ಮಾಧ್ಯಮದ ಸವಾಲುಗಳನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ.
-ಮಾಳಿಂಗರಾಯ ಕೆಂಭಾವಿ, ಯಾದಗಿರಿ
ಚುನಾವಣೆಯಿಂದಾಗಿ ರಸ್ತೆಗಳಿಗೆ ಡಾಂಬರೀಕರಣ?
ಕಳೆದ ವರ್ಷ ಯೋಗ ದಿನಾಚರಣೆಯಂದು ಪ್ರಧಾನಿ ಮೋದಿಯವರು ಮೈಸೂರಿಗೆ ಆಗಮಿಸಿದ ಕಾರಣದಿಂದಾಗಿ ಕೆಲವು ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿತ್ತು. ಅದರಲ್ಲೂ ಪ್ರಧಾನಿ ಮೋದಿಯವರು ಹಾದು ಹೋಗುವ ರಸ್ತೆಗಳನ್ನು ಮಾತ್ರ ಆಯ್ದು ಕಾಮಗಾರಿ ಮಾಡಲಾಗಿತ್ತು. ಆದರೆ ಉಳಿದ ರಸ್ತೆಗಳಿಗೆ ಅಭಿವೃದ್ಧಿ ಭಾಗ್ಯ ಸಿಗಲಿಲ್ಲ. ಅದೇ ರೀತಿ ದಸರಾ ಹಬ್ಬದ ಸಂದರ್ಭದಲ್ಲಿಯೂ ಕೆಲ ರಸ್ತೆಗಳನ್ನು ಹೊರತುಪಡಿಸಿ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಚುನಾಯಿತ ಪ್ರತಿನಿಧಿಗಳು ಮುಂದಾಗುವುದಿಲ್ಲ. ಇತ್ತೀಚೆಗೆ ಮೈಸೂರಿನ ಅನೇಕ ರಸ್ತೆಗಳಿಗೆ ಡಾಂಬರೀಕರಣ ನಡೆಯುತ್ತಿದೆ. ಬಹುಶಃ ಈ ಅಭಿವೃದ್ಧಿ ಕೆಲಸದ ಹಿಂದೆ ಚುನಾವಣೆಯ ವೇಳೆ ಮತ ಸೆಳೆಯುವ ಉದ್ದೇಶವಿದ್ದಿರಬಹುದಾ ಎಂಬ ಅನುಮಾನ ವ್ಯಕ್ತವಾಗುವಂತಾಗಿದೆ. ಯಾವುದೇ ಒಳ್ಳೆಯ ಕೆಲಸ ಮಾಡಲು ಕಾರಣಗಳು ಬೇಕಿಲ್ಲ ಎನ್ನುತ್ತಾರೆ. ಆದರೆ, ಇಲ್ಲಿ ಚುನಾವಣೆಯನ್ನು ಗುರಿಯಾಗಿಸಿಕೊಂಡು ರಸ್ತೆಗಳಿಗೆ ಡಾಂಬರೀಕರಣ ಮಾಡುತ್ತಿರುವುದು ಜನರ ಮತಗಳಿಕೆಗಾಗಿ ಎಂದೆನಿಸುತ್ತದೆ.
-ಎಲ್.ಸಿಂಚನ, ಮಹಾಜನ ಕಾಲೇಜು, ಮೈಸೂರು