ಮೈಸೂರು ಜಿಲ್ಲೆಯಲ್ಲಿ ಮಿತಿಮೀರಿದ ಚಿರತೆ ಹಾವಳಿ
ಸುಮಾರು ಮೂರು ತಿಂಗಳಿಂದ ಮೈಸೂರು ಜಿಲ್ಲಾದ್ಯಂತ ಚಿರತೆ ಹಾವಳಿಯು ಅತಿಯಾಗಿದೆ. ತಿ.ನರಸೀಪುರ ತಾಲ್ಲೂಕಿನಲ್ಲೇ ನಾಲ್ವರನ್ನು ಚಿರತೆ ಕೊಂದು ಹಾಕಿರುವುದು ಹೃದಯವಿದ್ರಾವಕ ಸಂಗತಿ. ಮೃತರ ಕುಟುಂಬಸ್ಥರ ನೋವಿಗೆ ಸಮಾಧಾನ ಹೇಳುವುದಾದರೂ ಹೇಗೆ? ಎಂಬ ಪ್ರಶ್ನೆ ಕಾಡುತ್ತದೆ. ಇತ್ತೀಚೆಗೆ ತಿ.ನರಸೀಪುರ ತಾಲ್ಲೂಕಿನ ಕನ್ನನಾಯಕನಹಳ್ಳಿಯ ವೃದ್ಧ ಮಹಿಳೆ ಚಿರತೆ ದಾಳಿಯಿಂದ ಅಸುನೀಗಿದರು. ಅದರ ಮರುದಿನವೇ ಹೊರಳಹಳ್ಳಿಯ ಬಾಲಕನನ್ನು ಚಿರತೆ ಕೊಂದು ಅರೆಬರೆ ತಿಂದು ಹಾಕಿರುವುದು ಎದೆ ನಡುಗಿಸುವಂತಹ ಸಂಗತಿ.
ನಂಜನಗೂಡು ತಾಲ್ಲೂಕಿನ ನಂದಿಗುಂದಪುರದಲ್ಲಿ ಕೂಡ ರೈತರೊಬ್ಬರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ ಎನ್ನಲಾಗಿದೆ. ಇಂತಹ ಘಟನೆಗಳಿಂದ ಕುಟುಂಬದವರು ಹಾಗೂ ಗ್ರಾಮಸ್ಥರ ನೋವು ಮುಗಿಲುಮುಟ್ಟಿದೆ. ಆತಂಕ ಮನೆ ಮಾಡಿದೆ. ಮುಂದಿನ ದಿನಗಳಲ್ಲಾದರೂ ಇಂತಹ ಅಮಾನುಷ ಘಟನೆಗಳು ಸಂಭವಿಸದಂತೆ ಅರಣ್ಯಇಲಾಖೆ ಅಽಕಾರಿಗಳು ಮುಂಜಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಜನರನ್ನು ಪ್ರಾಣಾಪಾಯದಿಂದ ಕಾಪಾಡಲು ಮುಂದಾಗಬೇಕು.
–ಕೆ.ಎನ್.ಅನುಶ್ರೀ, ಪತ್ರಿಕೋದ್ಯಮ ವಿಭಾಗ,
ಮಾನಸ ಗಂಗೋತ್ರಿ, ಮೈಸೂರು.
ಸರ್ಕಾರದ್ದು ಸಂವಿಧಾನ ವಿರೋಧಿ ನಡೆ
ಪ್ರಸ್ತುತ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಉಚಿತ ವಾಗಿ ಸಿಗುವಂತಹ ಆಹಾರ ಪದಾರ್ಥ ಗಳನ್ನು ರಾಜ್ಯ ಸರ್ಕಾರವು ಕಸಿದುಕೊಂಡಿರು ವುದು ದೊಡ್ಡ ವಿಪರ್ಯಾಸವೇ ಸರಿ.
ಸಾಮಾನ್ಯವಾಗಿ ರಾಜ್ಯವು ಶೇ.೬೦ ರಷ್ಟು ಬಡ ಜನರನ್ನು ಕೂಲಿ ಕಾರ್ಮಿಕರನ್ನು ಹೊಂದಿದ್ದು, ಹಿಂದುಳಿದಿದೆ. ಹೆಚ್ಚಿನ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಮತ್ತು ಜನಜೀವನ ಹಾಗೂ ಆರ್ಥಿಕ ಸ್ಥಿತಿ ಕುಂಠಿತಗೊಂಡಿದೆ.ಇಷ್ಟೆಲ್ಲ ಸಮಸ್ಯೆಗಳಿದ್ದರೂ ಬಿಪಿಎಲ್ (ಆದ್ಯತಾ ಪಡಿತರ ಚೀಟಿ) ಕಾರ್ಡುದಾರರಿಗೆ ಉಚಿತವಾಗಿ ಸಿಗಬೇಕಿದ್ದ ಆಹಾರ ಪದಾರ್ಥಗಳನ್ನು ಕಡಿತಗೊಳಿಸಿ ಅಕ್ಕಿಯನ್ನು ಮಾತ್ರ ಕೊಡುತ್ತಿರುವುದು ವಿಪರ್ಯಾಸ.
ಜೀವನಾವಶ್ಯಕ ವಸ್ತುಗಳ ಬೆಲೆ ಪ್ರತಿದಿನ ಏರಿಕೆಯಾಗುತ್ತಿದೆ. ಇದರಿಂದಾಗಿ ಸಾಮಾನ್ಯ ಜನರ ಬದುಕಿನ ಸ್ಥಿತಿಗತಿ ಹೀನಾಯವಾಗುತ್ತಿದೆ. ಭಾರತ ಸಂವಿಧಾನದ ಪ್ರಕಾರ ‘ರಾಜ್ಯ ನೀತಿ ನಿರ್ದೇಶಕ ತತ್ವಗಳಡಿ’ ನೋಡುವುದಾದರೆ ಒಂದು ರಾಜ್ಯದ ನಾಗರಿಕರಿಗೆ ಸದೃಢವಾದ ಮತ್ತು ಪೌಷ್ಟಿಕಾಂಶವಾದ ಆಹಾರವನ್ನು ದೊರಕಿಸುವುದು ರಾಜ್ಯ ಸರ್ಕಾರದ ಹೊಣೆಗಾರಿಕೆ ಆಗಿದೆ.
ಈಗಲಾದರೂ ಸಾರ್ವಜನಿಕರು ಬದಲಾವಣೆಯ ದಾರಿಯನ್ನು ಹಿಡಿಯಬೇಕು, ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಮತ ಚಲಾಯಿಸುವಾಗ ತಮ್ಮ ಮತದ ಮೌಲ್ಯವನ್ನು ಅರಿತುಕೊಳ್ಳಬೇಕು ಹಾಗೂ ತಮ್ಮ ಕುಂದುಕೊರತೆಗಳಿಗೆ ತಮ್ಮ ಜೀವನಕ್ಕೆ ಯಾವುದೇ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು. ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕತೆಯಿಂದ ಮತವನ್ನು ಹಾಕಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಜಗೃತರಾಗಬೇಕು.
– ಜಿ.ಎನ್.ಕಾರ್ತಿಕ್, ವಕೀಲರು, ಮೈಸೂರು.