Mysore
23
overcast clouds
Light
Dark

ಆಂದೋಲನ ಓದುಗರ ಪತ್ರ: 20 ಶುಕ್ರವಾರ 2023

ನ್ಯಾಯಮೂರ್ತಿಗಳ ನೇಮಕ ನಿಷ್ಪಕ್ಷಪಾತವಾಗಿರಲಿ

ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳಿಗೆ ಅವುಗಳದೇ ಆದ ಕಾರ್ಯವ್ಯಾಪ್ತಿಗಳಿವೆ. ಕಾನೂನು ರಚಿಸುವುದು ಸರ್ಕಾರವೇ ಆದರೂ ಅದರ ಅನುಕೂಲ ಮತ್ತು ಅನನುಕೂಲಗಳನ್ನು ಪರಾಮರ್ಶೆ ಮಾಡುವುದು ನ್ಯಾಯಾಲಯದ ಕರ್ತವ್ಯ. ಅವುಗಳನ್ನು ಅರಿತು ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೇ ಹೊರತು, ಒಂದರ ಮೇಲೆ ಮತ್ತೊಂದು ಸವಾರಿ ಮಾಡಲು ಹೋಗಬಾರದು. ಇತ್ತೀಚೆಗೆ ಉಪರಾಷ್ಟ್ರಪತಿ-ಗಳು ಹಾಗೂ ಕೇಂದ್ರದ ಕಾನೂನು ಸಚಿವರೇ ಕೊಲಿಜಿಯಂ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿರುವುದು ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂ ಅನ್ನು ಸಮರ್ಥಿಸಿಕೊಳ್ಳುತ್ತಿರುವುದು ಶಾಸಕಾಂಗ ಹಾಗೂ ನ್ಯಾಯಾಂಗದ ನಡುವಿನ ಶೀತಲ ಸಮರಕ್ಕೆ ಸಾಕ್ಷಿಯಾಗಿದೆ. ಕೊಲಿಜಿಯಂ ಅಂದರೆ ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ನಡೆಸುವ ವ್ಯವಸ್ಥೆ. ಕೇಂದ್ರ ಸರ್ಕಾರ ಕೊಲಿಜಿಯಂಗೆ ಬದಲಾಗಿ ರಚಿಸಿದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗವನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ಕೊಲಿಜಿಯಂ ವ್ಯವಸ್ಥೆ ಅತ್ಯಂತ ಪಾರದರ್ಶಕ, ಅದರ ಹಳಿ ತಪ್ಪಿಸಬೇಡಿ, ಅದು ಈ ನೆಲದ ಕಾನೂನು, ಅದನ್ನು ಅನುಸರಿಸಬೇಕು ಎಂದು ತಾಕೀತು ಮಾಡಿತು. ಬಳಿಕ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು, ಕೊಲಿಜಿಯಂ ವ್ಯವಸ್ಥೆ ಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳಿಗೆ ಅವಕಾಶ ಇರಬೇಕೆಂದು ಹೇಳಿರುವುದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸರ್ಕಾರ ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಲು ಹೊರಟಿದೆ ಎಂದಿರುವುದು ಶೀತಲ ಸಮರವನ್ನು ಜಾಹೀರುಗೊಳಿಸಿದೆ. ಅದೇನೇ ಇರಲಿ ನ್ಯಾಯಮೂರ್ತಿಗಳ ನೇಮಕ ನಿಷ್ಪಕ್ಷಪಾತವಾಗಿ ನಡೆಯಬೇಕು ಮತ್ತು ಕಾನೂನಿನ ಮಾನ್ಯತೆ ಇರುವಂತಹ ಸಂಸ್ಥೆ ಕಾರ್ಯರೂಪಕ್ಕೆ ಬರಬೇಕು.

ಹೃತೀನ್ ಶೆಟ್ಟಿ, ಪತ್ರಿಕೋದ್ಯಮ ವಿಭಾಗ, ಮಾನಸ ಗಂಗೋತ್ರಿ

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ