Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಆಂದೋಲನ ಓದುಗರ ಪತ್ರ : 21 ಬುಧವಾರ 2022

ಕುಕ್ಕರಹಳ್ಳಿ ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡಿ

ಇತ್ತೀಚೆಗೆ ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ನಾಯಿಗಳಿಂದ ದಾಳಿಗೊಳಗಾಗುತ್ತಿದ್ದ ಬ್ಲಾಕ್ ಐಬಿಸ್ ಎಂಬ ಪಕ್ಷಿಯನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಗೆ ಕಳುಹಿಸಿಕೊಡಲಾಯಿತು. ಕುಕ್ಕರಹಳ್ಳಿ ಕೆರೆಯ ಆವರಣದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಅವು ಬೇಟೆಯಾಡು-ವುದು ಸಾಮಾನ್ಯವಾಗಿದೆ. ಅಲ್ಲದೆ ವಾಯು ವಿಹಾರಕ್ಕೆ ಬರುವವರು ಇಲ್ಲಿರುವ ಬೀದಿನಾಯಿಗಳ ಭಯದಿಂದಲೇ ವಿಹಾರ ಮುಗಿಸುವಂತಾಗಿದೆ. ಜೊತೆಗೆ ಪಾದಚಾರಿಗಳು ಸಂಚರಿಸುವ ಮಾರ್ಗಗಳಲ್ಲಿ ಎಲ್ಲೆಂದರಲ್ಲಿ ಬಿಸ್ಕತ್,ಚಿಪ್ಸ್ ನಂತಹ ಆಹಾರ ಪ್ಯಾಕೇಟ್‌ಗಳು, ಪ್ಲಾಸ್ಟಿಕ್ ಕವರ್‌ಗಳು, ತಂಪು ಪಾನೀಯ, ನೀರಿನ ಬಾಟಲಿಗಳು ಹಾಗೂ ಮದ್ಯದ ಬಾಟಲಿಗಳ ರಾಶಿಯೇ ಕಂಡುಬರುತ್ತಿದೆ. ಕುಕ್ಕರಹಳ್ಳಿ ಕೆರೆಯ ಹೊರಭಾಗದಿಂದ ವಿಶ್ವಮಾನವ ರಸ್ತೆಗೆ ಹೊಂದಿಕೊಂಡಂತಿರುವ ಸೇತುವೆಯ ಕೆಳಗೂ ಸಾಕಷ್ಟು ಪ್ರಮಾಣದ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಹೀಗಾಗಿ ಕೆರೆಯ ವಾತಾವರಣ ಮಲಿನವಾಗುತ್ತಿದೆ. ಸಂಬಂಧಪಟ್ಟ ಅಽಕಾರಿಗಳು ತಕ್ಷಣ ಈ ಬಗ್ಗೆ ಗಮನ ನೀಡಿ ಕೆರೆಯ ರಕ್ಷಣೆಗೆ ಕ್ರಮಕೈಗೊಳ್ಳಬೇಕಾಗಿದೆ. ಸಾರ್ವಜನಿಕರೂ ಕುವೆಂಪು ಅವರ ನೆಚ್ಚಿನ ತಾಣವಾದ ಕುಕ್ಕರಹಳ್ಳಿ ಕೆರೆಯ ಪರಿಸರವನ್ನು ಉಳಿಸಿ ಮಾಲಿನ್ಯ ಮುಕ್ತ ಮಾಡಲು ಜವಾಬ್ದಾರಿ ತೋರಬೇಕಿದೆ.

ಸಿ.ಒ.ಅರುಣ್ ಕುಮಾರ್, ಸರಸ್ವತಿ ಪುರಂ, ಮೈಸೂರು.


ಪಾಲಿಕೆ ಸದಸ್ಯೆ ಭಾಗ್ಯ ಮಹದೇಶ್‌ಅವರಿಂದ ಶ್ಲಾಘನೀಯ ಕಾರ್ಯ

ಮೈಸೂರು ಮಹಾನಗರಪಾಲಿಕೆಯ ಅನುದಾನದಲ್ಲಿ ವಾರ್ಡ್ ನಂ.೧೯ರ ವ್ಯಾಪ್ತಿಯ ವಿ.ವಿ.ಮೊಹಲ್ಲಾದ ವಿಸಿ ಕ್ಲಬ್ ಹಿಂಭಾಗ ಕನ್ಸರ್‌ವೆನ್ಸಿ ರಸ್ತೆಯಲ್ಲಿ ಒಂದು ಅಡಿ ಅಗಲದ ಬೃಹತ್ ಕಾಂಕ್ರೀಟ್ ಪೈಪ್ ಒಳಚರಂಡಿ ಕಾಮಗಾರಿಯು ಪಾಲಿಕೆ ಸದಸ್ಯೆ ಭಾಗ್ಯ ಮಹದೇಶ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಈ ಹಿಂದೆ ಇಲ್ಲಿ ೬ ಇಂಚು ಅಗಲದ ಪೈಪ್ ಅಳವಡಿಸಲಾಗಿತ್ತು. ಪರಿಣಾಮವಾಗಿ ಮಳೆ ಬಂದಾಗ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿ ಜನರು ಪರದಾಡುವಂತಾ-ಗಿತ್ತು. ಇದರಿಂದ ತೀರ ತೊಂದರೆ ಅನುಭವಿಸುತ್ತಿದ್ದ ಸ್ಥಳೀಯರು ಪಾಲಿಕೆ ಸದಸ್ಯರಾದ ಭಾಗ್ಯ ಮಹದೇಶ್ ಅವರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಭಾಗ್ಯ ಮಹದೇಶ್ ಸ್ಥಳ ಪರಿಶೀಲಿಸಿ ಪಾಲಿಕೆ ಅಽಕಾರಿಗಳನ್ನು ಸಂಪರ್ಕಿಸಿ, ಅನುದಾನ ತಂದು ಒಂದು ಅಡಿ ಅಗಲದ ಬೃಹತ್ ಕಾಂಕ್ರೀಟ್ ಪೈಪ್ ಅಳವಡಿಸುವ ಕಾಮಗಾರಿ ಆರಂಭಿಸಿರುವುದು ಶ್ಲಾಘನೀಯವಾಗಿದೆ. ಇದು ಪೂರ್ಣಗೊಂಡರೆ ಕನಿಷ್ಠ ಮುಂದಿನ ೨೦ ವರ್ಷಗಳು ಯಾವುದೇ ಸಮಸ್ಯೆ ಈ ಭಾಗದಲ್ಲಿ ಇರುವುದಿಲ್ಲ. ಜನರ ಸಮಸ್ಯೆಗೆ ಶೀಘ್ರವೇ ಸ್ಪಂದಿಸಿದ ಭಾಗ್ಯ ಮಹದೇಶ್ ಅವರ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿ.ಪಿ.ರಾಜೇಶ್, ವಿ.ವಿ.ಮೊಹಲ್ಲಾ, ಮೈಸೂರು


ಕುಳಿತುಕೊಳ್ಳಲು ಆಸನವೇ ಇಲ್ಲದ ಬಸ್ ನಿಲ್ದಾಣ

ಮೈಸೂರು ನಗರದ ಹೃದಯಭಾಗದಂತಿರುವ ಆರ್‌ಟಿಒ ವೃತ್ತದ ಬಳಿ ಇರುವ ಬಸ್ ತಂಗುದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯಿಲ್ಲದೆ ಪ್ರತಿನಿತ್ಯ ಪ್ರಯಾಣಿಕರು ನಿಂತೇ ಬಸ್‌ಗಾಗಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಇದರಿಂದ ಸಾರ್ವಜನಿಕರಿಗೆ ಅದರಲ್ಲೂ ವಯಸ್ಸಾದ ಹಿರಿಯ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ. ಕೆಲವು ಸಲ ಬಸ್‌ಗಳು ತಡವಾಗಿ ಬರುವುದರಿಂದ ಸಾರ್ವಜನಿಕರು ಸಾಕಷ್ಟು ಸಮಯ ನಿಂತೇ ಕಾಯಬೇಕಾದ ಅನಿವಾರ್ಯತೆ ಇದೆ. ಆ ಸಂದರ್ಭದಲ್ಲಿ ಕುಳಿತುಕೊಳ್ಳಲು ಜಾಗವಿದ್ದರೆ ಅನುಕೂಲವಾಗುತ್ತಿತ್ತು. ಆದರೆ ಈ ನಿಲ್ದಾಣದಲ್ಲಿ ಆಸನಗಳು ನಾಪತ್ತೆಯಾಗಿ ಸಾಕಷ್ಟು ತಿಂಗಳೇ ಕಳೆದಿವೆ. ಈ ಸಂಬಂಧ ಆಸನಗಳ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅಽಕಾರಿಗಳು ಮಾತ್ರ ಗಮನ ನೀಡುತ್ತಿಲ್ಲ. ಸದ್ಯ ಈ ಬಸ್ ನಿಲ್ದಾಣ ಕೇಂದ್ರ ಭಾಗದಲ್ಲಿರುವುದರಿಂದ ಇಲ್ಲಿಗೆ ವೃದ್ಧರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಅವರಿಗೆ ನಿಂತು ಬಸ್‌ಗಾಗಿ ಕಾಯುವುದು ಕಷ್ಟವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಽಕಾರಿಗಳು ಗಮನ ನೀಡಿ ಈ ತಂಗುದಾಣದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಬೇಕೆಂಬುದು ಪ್ರಯಾಣಿಕರ ಮನವಿಯಾಗಿದೆ.

ವಿ.ಪವಿತ್ರ, ಪತ್ರಿಕೋದ್ಯಮ ವಿಭಾಗ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು.


ರಸ್ತೆ ಬದಿಯಲ್ಲಿ ಅನೈರ್ಮಲ್ಯ

ಮೈಸೂರನ್ನು ಸ್ವಚ್ಛ ನಗರವನ್ನಾಗಿಸುವಲ್ಲಿ ನಗರಪಾಲಿಕೆಯೂ ಬಹಳಷ್ಟು ಶ್ರಮಿಸುತ್ತಿರುವುದು ಸಂತಸದ ವಿಷಯ. ಅದಕ್ಕೆ ನಗರವಾಸಿಗಳೂ ಸಹಕರಿಸಬೇಕಾದದ್ದು ಆದ್ಯ ಕರ್ತವ್ಯವಾಗಿದೆ. ಆದರೆ ಜೆ.ಪಿ.ನಗರದ ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಂ-ತಿರುವ ರಸ್ತೆಗಳಲ್ಲಿ ಅನೈರ್ಮಲ್ಯದ ವಾತಾವರಣ ಸೃಷ್ಟಿಯಾಗುತ್ತಿದ್ದು, ಹೊಸ ಮನೆ ನಿರ್ಮಾಣ ಮಾಡುತ್ತಿರುವವರು ತಮ್ಮ ಮನೆಗೆ ನೇಮಿಸಿಕೊಂಡಿರುವ ಕಾವಲುಗಾರರಿಗೆ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸದ ಪರಿಣಾಮ ಅವರೆಲ್ಲ ರಸ್ತೆ ಬದಿಯಲ್ಲೇ ಶೌಚ ಮಾಡುತ್ತಿದ್ದು, ಈ ಭಾಗದಲ್ಲಿ ಅನೈರ್ಮಲ್ಯ ಉಂಟಾಗಲು ಕಾರಣವಾಗಿದೆ. ಅಲ್ಲದೆ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸದ ಪರಿಣಾಮ ಇಲ್ಲಿನ ವಾತಾವರಣವೇ ಹಾಳಾಗಿದೆ. ಅಲ್ಲದೆ ಮನೆ ಕಸದ ಜೊತೆಗೆ ಕೋಳಿ, ಮೀನು ವ್ಯಾಪಾರಿಗಳು ಅದರ ತ್ಯಾಜ್ಯವನ್ನು ಈ ಭಾಗದಲ್ಲೇ ಬೀಸಾಡಿರುವುದು ಪರಿಸರ ಹಾಳಾಗಲು ಮತ್ತೊಂದು ಕಾರಣವಾಗಿದೆ. ಪಾಲಿಕೆಯ ಆಯುಕ್ತರು ಈ ಬಗ್ಗೆ ಪರಿಶೀಲಿಸಿ ಸ್ವಚ್ಛತೆಯನ್ನು ಕಾಪಾಡಲು ಕ್ರಮಕೈಗೊಳ್ಳಬೇಕು ಎಂಬುದು ನಮ್ಮ ಮನವಿಯಾಗಿದೆ.

ಡಾ.ಅಮೃತಿರಾಜೇಶ್, ಜೆ.ಪಿ.ನಗರ, ಮೈಸೂರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ