Light
Dark

ಆಂದೋಲನ ಓದುಗರ ಪತ್ರ : 03 ಶನಿವಾರ 2022

ಆಂದೋಲನ ಓದುಗರ ಪತ್ರಗಳು

ಮಾದರಿ ಪ್ರತಿಭಟನೆ

ಯಳಂದೂರು ತಾಲ್ಲೂಕು ಮಾಂಬಳ್ಳಿಯಲ್ಲಿ ಗ್ರಾಮಪಂಚಾಯಿತಿ ಆವರಣದಲ್ಲೇ ಶವಸಂಸ್ಕಾರ ನಡೆಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವುದು ವಿಶೇಷವಾಗಿದೆ. ಸ್ಮಶಾನಕ್ಕೆ ತೆರಳಲು ಸೇತುವೆ ಇಲ್ಲ ಎಂಬುದು ಗ್ರಾಮಸ್ಥರ ತಕರಾರು. ಸ್ಮಶಾನಕ್ಕೆ ಸೇತುವೆ ನಿರ್ಮಿಸಿಕೊಡಬೇಕಾದದ್ದು ಗ್ರಾಮಪಂಚಾಯ್ತಿ ಅಥವಾ ಜಿಲ್ಲಾ ಪಂಚಾಯಿತಿಯ ಹೊಣೆಗಾರಿಕೆ. ಸ್ಥಳೀಯ ಸಂಸ್ಥೆಗಳು ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸದೇ ಇರುವುದನ್ನು ಸ್ಥಳೀಯರು ವಿಶೇಷ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಗ್ರಾಮ ಪಂಚಾಯಿತಿ ಶೀಘ್ರವಾಗಿ ಸೇತುವೆ ನಿರ್ಮಿಸಲೇ ಬೇಕಿದೆ. ಇಲ್ಲದಿದ್ದರೆ, ಗ್ರಾಮ ಪಂಚಾಯ್ತಿ ಆವರಣದಲ್ಲಿ ಮತ್ತಷ್ಟು ಶವಸಂಸ್ಕಾರಗಳು ನಡೆಯುವ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಗ್ರಾಮಸ್ಥರ ಪ್ರತಿಭಟನೆ ಅತಿಯಾಯಿತೇನೋ ಎನಿಸಿದರೂ, ಜಡ್ಡುಗಟ್ಟಿದ ಸ್ಥಳೀಯ ಆಡಳಿತಕ್ಕೆ ಬಿಸಿ ಮುಟ್ಟಿಸಲು ಇಂತಹ ಪ್ರತಿಭಟನೆಗಳು ಅನಿವಾರ್ಯ ಅನಿಸುತ್ತದೆ.
-ಮಂಜೇಗೌಡ, ಶಾಂತಿನಗರ, ಮೈಸೂರು.


ವಿಳಂಬದಿಂದ ವಿಶ್ವಾಸಕ್ಕೆ ಧಕ್ಕೆ
ಚಿತ್ರದುರ್ಗ ಮುರುಘಾ ಮಠದ ಶ್ರೀಗಳನ್ನು ಕೊನೆಗೂ ಬಂಧಿಸಲಾಗಿದೆ. ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದಾಗ ೨೪ ಗಂಟೆಯೊಳಗೆ ಆರೋಪಿಯನ್ನು ಬಂಧಿಸಬೇಕೆಂಬುದು ಕಾನೂನು. ರಾಜ್ಯ ಸರ್ಕಾರ, ವಿಶೇಷವಾಗಿ ಗೃಹ ಇಲಾಖೆ ಕಾನೂನು ಜಾರಿ ಪ್ರಕ್ರಿಯೆಯಲ್ಲಿ ಎಡವಿದೆ. ಈ ಹಿಂದೆ ಗೃಹ ಇಲಾಖೆ ನಿರ್ವಹಿಸಿದ್ದ ಮುಖ್ಯಮಂತ್ರಿಗಳಾದರೂ ಗೃಹ ಇಲಾಖೆಗೆ ಮಾರ್ಗದರ್ಶನ ನೀಡಬಹುದಿತ್ತು. ಆದರೆ, ಹಾಗಾಗಲಿಲ್ಲ. ರಾಜ್ಯ ಸರ್ಕಾರ, ಗೃಹ ಇಲಾಖೆ ಬಿಡಿ, ಆರೋಪ ಹೊತ್ತಿರುವ ಮುರುಘಾ ಶ್ರೀಗಳೇ ಖುದ್ಧು ತಾವಾಗೇ ತಮ್ಮನ್ನು ಪೊಲೀಸರ ವಶಕ್ಕೆ ಒಪ್ಪಿಸಿಕೊಳ್ಳಬಹುದಿತ್ತು. ಆ ಮೂಲಕ ಈ ನೆಲದ ಕಾನೂನನ್ನು ನಿಜವಾಗಿ ಗೌರವಿಸಿದಂತಾಗುತ್ತಿತ್ತು. ಮತ್ತು ಅವರ ಬಗ್ಗೆ ಅವರ ಅನುಯಾಯಿಗಳಿಗಷ್ಟೇ ಅಲ್ಲ, ಸಾಮಾನ್ಯ ಜನರಿಗೂ ಗೌರವ ಹೆಚ್ಚುತ್ತಿತ್ತು. ಹಾಗಾಗಲಿಲ್ಲ. ಆರು ದಿನಗಳ ಕಾಲ ವಿಳಂಬ ಮಾಡಿದ ರಾಜ್ಯ ಸರ್ಕಾರದ ನಡೆಯಿಂದಾಗಿ ರಾಜ್ಯ ಸರ್ಕಾರದ ಬಗ್ಗೆ ಇದ್ದ ವಿಶ್ವಾಸಕ್ಕೆ ಕುಂದುಂಟಾಗಿದೆ. ವಿಳಂಬ ನೀತಿಯಿಂದಾಗಿರುವ ವಿಶ್ವಾಸದ ಕೊರತೆಯನ್ನು ನೀಗಿಸಲು ಬಹಳಷ್ಟು ಕಾಲವೇ ಬೇಕಾಗಬಹುದು!
-ನಂದಕುಮಾರ್, ಸರಸ್ವತಿಪುರಂ, ಮೈಸೂರು.


ಪೋಕ್ಸೋ ಪ್ರಕರಣ; ಸರ್ಕಾರದ ನಡೆ ಸರಿಯೇ?
ಚಿತ್ರದುರ್ಗದ ಮುರುಘಾ ಮಠದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದು ಇಷ್ಟು ದಿನಗಳಾ ದರೂ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ವಾರದವರೆಗೂ ಆರೋಪಿಯನ್ನು ಏಕೆ ಬಂಧಿಸಿರಲಿಲ್ಲ? ಮೈಸೂರಿನಲ್ಲಿ ಎಫ್‌ಐಆರ್ ದಾಖಲಾಗಿ ಚಿತ್ರದುರ್ಗಕ್ಕೆ ಪ್ರಕರಣವನ್ನು ವರ್ಗಾ ವಹಿಸಲಾಗಿತ್ತು. ಚಿತ್ರದುರ್ಗದ ಪೊಲೀಸರು ಶ್ರೀಗಳನ್ನು ವಿಳಂಬವಾಗಿ ಬಂಧಿಸಿರುವುದು ಹಲವಾರು ಪ್ರಶ್ನೆಗಳಿಗೆ ಅನುವು ಮಾಡಿಕೊಟ್ಟಿದೆ. ಈ ಬಗ್ಗೆ ಗಮನ ಹರಿಸಬೇಕಾದ ಮುಖ್ಯಮಂತ್ರಿಗಳಾಗಲೀ, ಗೃಹ ಸಚಿವರಾಗಲೀ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳದಿರುವುದು ವಿಷಾದನೀಯ ಸಂಗತಿ. ಜೊತೆಗೆ ಶ್ರೀಗಳ ‘ಸಮರಕ್ಕೂ ಸಿದ್ಧ ಸಂಧಾನಕ್ಕೂ ಬದ್ಧ ’ ಎಂಬ ಹೇಳಿಕೆಯು ಸಹ ಅನುಮಾನವನ್ನು ಸೃಷ್ಟಿಸುತ್ತದೆ. ಯಾರೊಂದಿಗೆ ಸಂಧಾನ ಹಾಗೂ ಏತಕ್ಕಾಗಿ ಸಂಧಾನ? ಪೋಕ್ಸೋ ಪ್ರಕರಣದ ಅಡಿಯಲ್ಲಿ ಸಾಮಾನ್ಯ ಜನರು ಇದ್ದಿದ್ದರೆ ಪೊಲೀಸರು ಆ ಪ್ರಕರಣವನ್ನು ಹೀಗೆ ನಿಭಾಯಿಸುತ್ತಿದ್ದರು? ತಕ್ಷಣ ಅವರನ್ನು ಬಂಧಿಸುತ್ತಿರಲಿಲ್ಲವೆ? ಜನ ಸಾಮಾನ್ಯರಿಗೊಂದು ನ್ಯಾಯ, ಪ್ರಭಾವಿಗಳಿಗೊಂದು ನ್ಯಾಯವೇ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಮೂಡುತ್ತವೆ. ಈಗಲಾದರೂ ಸರ್ಕಾರ ಒಂದು ಸ್ಪಷ್ಟ ನಿಲುವನ್ನು ತೆಗೆದುಕೊಂಡು ಕಾನೂನಿನ್ವಯ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಶಿಕ್ಷಿಸಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಬೇಕಿದೆ.
-ಭರತ್, ಮೈಸೂರು..


ಹಾರ್ಡ್ವಿಕ್ ಶಾಲೆಗೆ ದೀಪಾಲಂಕಾರ ಮಾಡಿ

ಮೈಸೂರಿನ ಹಲವಾರು ಪಾರಂಪರಿಕ ಕಟ್ಟಡಗಳಲ್ಲಿ ಝಾನ್ಸಿ ಲಕ್ಷ್ಮೀಬಾಯಿ ರಸ್ತೆಯಲ್ಲಿರುವ ಒಂದೂವರೆ ಶತಮಾನ (೧೬೮ ವರ್ಷ) ಕಂಡಿರುವ ಸುಪ್ರಸಿದ್ಧ ಹಾರ್ಡ್ವಿಕ್ ಪ್ರೌಢ ಶಾಲೆಯೂ ಒಂದು. ಚೌಕಾಕಾರ ಆವರಣದ ಈ ಕಟ್ಟಡ ನಿರಾಭರಣ ಸುಂದರ. ಪಾರಂಪರಿಕತೆಯ ಪ್ರತೀಕ. ಮದ್ರಾಸ್ ತಾರಸಿಯ ಮೂರು ಅಂತಸ್ತುಗಳ ಈ ಕಟ್ಟಡಕ್ಕೆ ಕಮಾನಿನ ಸ್ವಾಗತದ ದ್ವಾರವಿದೆ. ಅಪ್ರತಿಮ ವಾಸ್ತುಶಿಲ್ಪ ವೈಭವದ ಪ್ರತೀಕವಾಗಿದೆ. ಈ ಬಾರಿಯ ದಸರಾ ಹಬ್ಬದ ಹೊತ್ತಿಗೆ ದೀಪಾಲಂಕಾರದಿಂದ ನಗರವನ್ನು ಸಿಂಗರಿಸುವಾಗ ಈ ಶಾಲೆ ಕಟ್ಟಡಕ್ಕೂ ದೀಪಾಲಂಕಾರ ಮಾಡಬೇಕು. ಆ ಮೂಲಕ ಈ ವೈಭವದ ಪಾರಂಪರಿಕ ಕಟ್ಟಡದ ಸೊಬಗನ್ನು ಹೆಚ್ಚಿಸಬೇಕು. ಇದು ಲಕ್ಷಾಂತರ ಹಳೆಯ ವಿದ್ಯಾರ್ಥಿಗಳ ಮನವಿ.
– ಅಹಲ್ಯ ಸಿ. ನಾ.ಚಂದ್ರ, ಜನತಾ ನಗರ, ಮೈಸೂರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ